silver jubilee celebration: ನಿರತ ಸಾಹಿತ್ಯ ಸಂಪದಕ್ಕೆ ಬೆಳ್ಳಿ ಹಬ್ಬದ ಸಡಗರ; ನ.6ಕ್ಕೆ ಸಂಭ್ರಮಾಚರಣೆ
Silver jubilee: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ಕಡೆಗೋಳಿಯ ನಿರತ ಸಾಹಿತ್ಯ ಸಂಪದ ಬಳಗಕ್ಕೆ ಈಗ ಬೆಳ್ಳಿಹಬ್ಬದ ಸಡಗರ. ನ.6ರಂದು ಇದರ ಸಂಭ್ರಮಾಚರಣೆ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಗುರುವಾರ ಸಂಜೆ ನಡೆಯಿತು.
ಬಂಟ್ವಾಳ: ತುಂಬೆ ಕಡೆಗೋಳಿಯ ನಿರತ ಸಾಹಿತ್ಯ ಸಂಪದಕ್ಕೆ ಈಗ ರಜತ ಸಂಭ್ರಮ. ನ.6ರಂದು ಮಧ್ಯಾಹ್ನದಿಂದ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಲಿವೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಿ.ಸಿ.ರೋಡಿನ ಕೈಕುಂಜೆ ಕನ್ನಡ ಭವನದಲ್ಲಿ ಗುರುವಾರ ಸಂಜೆ ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಹಿರಿಯ ಪತ್ರಕರ್ತ ಹರೀಶ ಮಾಂಬಾಡಿ, ಕಳೆದ 25 ವರ್ಷಗಳಿಂದ ಸಾಮಾನ್ಯ ಬರೆಹಗಾರರು, ಉದಯೋನ್ಮುಖ ಕವಿಗಳಿಗೆ ವೇದಿಕೆ ದೊರಕಿಸಿಕೊಟ್ಟ ನಿರತ ಸಾಹಿತ್ಯ ಸಂಪದದಲ್ಲಿ ಪ್ರಥಮ ಕವನವಾಚನ ಮಾಡಿದವರಿಂದು ನಾಡಿನ ಶ್ರೇಷ್ಠ ಕವಿಗಳಾಗಿ ಮೆರೆದಿದ್ದು, ಇದು ನಿರತದ ಹೆಗ್ಗಳಿಕೆ ಎಂದು ಹೇಳಿದರು.
ನಿರತ ಸಾಹಿತ್ಯ ಸಂಪದ ಬಳಗದ ಗೌರವಾಧ್ಯಕ್ಷ ವಿ.ಸು.ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ಸಾಹಿ ಯುವಕರು ಆರಂಭಿಸಿದ ಸಾಹಿತ್ಯ ಸಂಪದ ಇಂದು ಬೆಳ್ಳಿ ಹೆಜ್ಜೆಯನ್ನಿಡುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ಹಿರಿಯ ಕವಯತ್ರಿ ಗೀತಾ ಎಸ್.ಕೋಂಕೋಡಿ ಮುಖ್ಯ ಅತಿಥಿಗಳಾಗಿದ್ದರು. ನಿರತ ಸಾಹಿತ್ಯ ಸಂಪದ ಬೆಳೆದುಬಂದ ದಾರಿಯನ್ನು ಅಬ್ದುಲ್ ಮಜೀದ್ ಎಸ್ ವಿವರಿಸಿದರು. ನಿರತ ಸಾಹಿತ್ಯ ಸಂಪದದ ಅಧ್ಯಕ್ಷ ಬೃಜೇಶ್ ಅಂಚನ್ ವಂದಿಸಿದರು. ಸಮಾರಂಭದಲ್ಲಿ ಜಯರಾಮ ಪಡ್ರೆ, ದಿನೇಶ್ ಎಂ.ತುಂಬೆ, ವಿನೋದ್ ಪುದು, ಸಾಹುಲ್ ಹಮೀದ್ ಉಪಸ್ಥಿತರಿದ್ದರು.
ಬೆಳ್ಳಿ ಹೆಜ್ಜೆ ಕಾರ್ಯಕ್ರಮ ಎಲ್ಲಿ? ಏನೇನು?
ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ನವೆಂಬರ್ 6ರಂದು ಮಧ್ಯಾಹ್ನ 2ರಿಂದ ಬೆಳ್ಳಿಹೆಜ್ಜೆ ಕಾರ್ಯಕ್ರಮ ನಡೆಯಲಿದೆ. ಪ್ರೊ.ತುಕಾರಾಮ ಪೂಜಾರಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲೇ ನಿರತ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಪ್ರೊ.ಚಂದ್ರಕಲಾ ನಂದಾವರ ಅವರಿಗೆ ನೀಡಲಾಗುವುದು. ಅದೇ ರೀತಿ, ನಿರತ ಅನಿಯತಕಾಲಿಕ ಕೈಬರೆಹ ಪತ್ರಿಕೆ ಅನಾವರಣ, ಸಾಹಿತ್ಯದಿಂಚರ ಎಂಬ ಇಪ್ಪತ್ತೈದು ಕವಿಗಳ ಸಮ್ಮಿಲನ ಇರಲಿದ್ದು, ಸಂಜೆ 6ರಿಂದ ಭಾವತರಂಗ, ಯಕ್ಷ ಸಂವಾದ ಕೂಡ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.