SSLC Exam: ಇಂದಿನಿಂದ ಎಸ್ಎಸ್ಎಲ್ ಸಿ ಪರೀಕ್ಷೆ; ಆಲ್ ದಿ ಬೆಸ್ಟ್ ಮಕ್ಕಳೇ..
ಎಸ್ಎಸ್ಎಲ್ ಸಿ ಪರೀಕ್ಷೆಗಳು ಇಂದಿನಿಂದ ಆರಂಭವಾಗಿ ಏಪ್ರಿಲ್ 15ರ ವರೆಗೆ ನಡೆಯುತ್ತವೆ. ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳ ಮಾಹಿತಿ ಇಲ್ಲಿದೆ.
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ (ಮಾರ್ಚ್ 31, ಶುಕ್ರವಾರ) ಎಸ್ಎಸ್ಎಲ್ ಸಿ ಪರೀಕ್ಷೆ (SSLC Exam) ಆರಂಭವಾಗುತ್ತಿದ್ದು, 8, 42, 811 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.
3,305 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸಿಸಿಕ್ಯಾಮರಾ ಕಣ್ಗಾವಲು ಸೇರಿದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ವಿದ್ಯಾರ್ಥಿಗಳೇ ಗಮನಿಸಿ
ಶಾಲೆಯ ಸಮವಸ್ತ್ರ ಹೊರತುಪಡಿಸಿ ಹಿಜಾಬ್ ಸೇರಿದಂತೆ ಇತರೆ ಯಾವುದೇ ರೀತಿಯ ಧರ್ಮಾಧಾರಿತ ಉಡುಪು ತೊಟ್ಟು ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ. ವಾಚ್, ಮೊಬೈಲ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೊಠಡಿಗೆ ಕೊಂಡೊಯ್ಯುವಂತಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರಿಯ ವ್ಯವಸ್ಥೆಯನ್ನ ಮಾಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿದ್ಯಾರ್ಥಿಗಳಿಗೆ ಶುಭ ಕೋರಿದ ಸಚಿವ ನಾಗೇಶ್
ಪ್ರಾಥಮಿ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳು. ಆತ್ಮವಿಶ್ವಾಸ, ಧೈರ್ಯದಿಂದ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಎಂದು ಹೇಳಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ
ಮಾರ್ಚ್ 31 ಶುಕ್ರವಾರದಂದು ಅಂದರೆ ಇಂದು ಬೆಳಗ್ಗೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ) , ಸಂಸ್ಕೃತ ಪ್ರಥಮ ಭಾಷಾ ಪರೀಕ್ಷೆ ನಡೆಯಲಿದೆ.
ಏಪ್ರಿಲ್ 1 ಮತ್ತು 2 ಕ್ರಮವಾಗಿ ಶನಿವಾರ ಮತ್ತು ಭಾನುವಾರವಾಗಿದ್ದು, ಪರೀಕ್ಷೆ ಇರುವುದಿಲ್ಲ. ಸೋಮವಾರ ಏಪ್ರಿಲ್ 4ರಂದು ಕೋರ್ ಸಬ್ಜೆಕ್ಟ್ ಗಣಿತ, ಸಮಾಜಶಾಸ್ತ್ರ ಪರೀಕ್ಷೆ ಇರುತ್ತದೆ. ಮಂಗಳವಾರ ಮಹಾವೀರ ಜಯಂತಿ ಸಾರ್ವತ್ರಿಕ ರಜೆ ಇರುತ್ತದೆ. ಬುಧವಾರ ಪರೀಕ್ಷೆ ಇರುವುದಿಲ್ಲ. ಗುರುವಾರ ಅಂದರೆ, ಏಪ್ರಿಲ್ 6 ರಂದು ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ಪರೀಕ್ಷೆಗಳು ಇರುತ್ತವೆ.
ಶುಕ್ರವಾರ ರಜೆ ಇರುತ್ತದೆ. ಶನಿವಾರ ಅಂದರೆ, ಏಪ್ರಿಲ್ 8ರಂದು ಕೋರ್ ಸಬ್ಜೆಕ್ಟ್‌ಗಳಾದ ಎಲಿಮೆಂಟ್ ಆಫ್ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಪ್ರೋಗ್ರಾಮಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ ಇತ್ಯಾದಿ ಪರೀಕ್ಷೆಗಳು ನಡೆಯಲಿವೆ.
ಏಪ್ರಿಲ್ ಹತ್ತರಂದು ಕೋರ್ ಸಬ್ಜೆಕ್ಟ್ ಸೈನ್ಸ್ ಪರೀಕ್ಷೆ ನಡೆಯಲಿದೆ. ಅದೇ ದಿನ ಪೊಲಿಟಿಕಲ್ ಸೈನ್ಸ್/ ಹಿಂದೂಸ್ತಾನ್ ಮ್ಯೂಸಿಕ್/ ಕರ್ನಾಟಕ ಮ್ಯೂಸಿಕ್ ಪರೀಕ್ಷೆಗಳೂ ನಡೆಯಲಿವೆ.
ಏಪ್ರಿಲ್ ಹನ್ನೆರಡರಂದು ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಂಡವರಿಗೆ ಹಿಂದಿ/ ಕನ್ನಡ/ ಇಂಗ್ಲಿಷ್/ ಅರಾಬಿಕ್/ ಪರ್ಷಿನ್/ ಉರ್ದು/ ಸಂಸ್ಕೃತ/ ಕೊಂಕಣಿ/ ತುಳು ಪರೀಕ್ಷೆಗಳು ನಡೆಯಲಿವೆ. ಅದೇ ದಿನ ಎನ್‌ಎಸ್‌ಒಎಫ್ ಎಗ್ಸಾಂಗಳಾದ ಇನ್‌ಫಾರ್ಮೆಷನ್ ಟೆಕ್ನಾಲಜಿ/ ರಿಟೇಲ್/ಆಟೋಮೊಬೈಲ್/ ಹೆಲ್ತ್‌ಕೇರ್ / ಬ್ಯೂಟಿ ಆಂಡ್ ವೆಲ್‌ನೆಸ್ ಪರೀಕ್ಷೆಗಳೂ ನಡೆಯಲಿವೆ. ಏಪ್ರಿಲ್ 15ರಂದು ಕೋರ್ ಸಬ್ಜೆಕ್ಟ್ ಸೋಷಿಯಲ್ ಸೈನ್ಸ್ ಪರೀಕ್ಷೆ ನಡೆಯಲಿದೆ.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಕೂಡ ಎಸ್ಎಸ್ಎಲ್ಸಿ ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಕರ್ಯ ಒದಗಿಸಿದೆ. ಇಂದಿನಿಂದ ಏಪ್ರಿಲ್ 15 ರವರೆಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗಲು ಮತ್ತು ಹಿಂದಿರುಗಲು ಬಿಎಂಟಿಸಿ ಸಾಮಾನ್ಯ ಸೇವೆಗಳ ಬಸ್ ಗಳಲ್ಲಿ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.
ಹಾಲ್ ಟಿಕೆಟ್ ಇಲ್ಲದಿದ್ದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಪರೀಕ್ಷಾ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಎಲ್ಲಾ ಮಾರ್ಗಗಳನ್ನು, ಟ್ರಿಪ್ ಕಾರ್ಯಾಚರಣೆ ಇರಲಿದೆ. ಹೆಚ್ಚುವರಿ ಟ್ರಿಪ್ ಅಗತ್ಯತೆ ಕಂಡುಬಂದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಭಾಗ