ಕನ್ನಡ ಸುದ್ದಿ  /  Karnataka  /  Tumkur News Somanath Serving Free Meals In Gubbi Anjanadri Charitable Trust Gubbi Latest News In Kannada Jra

Tumkur News: ಆಸ್ಪತ್ರೆ ರೋಗಿಗಳು, ಸಾರ್ವಜನಿಕರಿಗೆ ನಿತ್ಯ ಅನ್ನದಾಸೋಹ; ಹಸಿದವರಿಗೆ ಊಟ ಬಡಿಸುವ ನಿವೃತ್ತ ಯೋಧ ಸೋಮನಾಥ್

Gubbi Latest News: ಕೆಲಸ ಮಾಡುವ ಸಂದರ್ಭದಲ್ಲಿ ಬ್ಲಡ್ ಕ್ಯಾಂಪ್, ಆರೋಗ್ಯ ಶಿಬಿರ ನಡೆಸಿ ಸರ್ಕಾರಿ ಶಾಲೆಗಳ ಆಧುನಿಕರಣಕ್ಕೂ ಸೋಮನಾಥ್ ಕೈ ಜೋಡಿಸಿದ್ದರು.

ಮಧ್ಯಾಹ್ನದ ಅನ್ನದಾಸೋಹ
ಮಧ್ಯಾಹ್ನದ ಅನ್ನದಾಸೋಹ

ತುಮಕೂರು: ಸಾಮಾಜ ಸೇವೆ ಮಾಡಬೇಕು ಎಂದರೆ ರಾಜಕೀಯದಿಂದ ಮಾತ್ರ ಸಾಧ್ಯ ಎನ್ನುವ ಜನರಿದ್ದಾರೆ. ಅಂಥವರ ನಡುವೆ ಎಲೆಮರೆ ಕಾಯಿಯಂತೆ ಗುಬ್ಬಿ ತಾಲೂಕಿನ ಚನ್ನಶೆಟ್ಟಿಹಳ್ಳಿಯ ನಿವೃತ್ತ ಯೋಧ ಹಾಗೂ ನಿವೃತ್ತಿ ಪಡೆದಿರುವ ಬ್ಯಾಂಕ್‌ನ ಸಿಬ್ಬಂದಿ ಸೋಮನಾಥ್ ಭಿನ್ನವಾಗಿ ಕಾಣುತ್ತಾರೆ. ಮಧ್ಯಾಹ್ನದ ಹೊತ್ತು ಸರ್ಕಾರಿ ಆಸ್ಪತ್ರೆಗಳಿಗೆ ಬರುವಂತಹ ಹಸಿದ ರೋಗಿಗಳಿಗೆ ಅವರ ಜೊತೆಯಲ್ಲಿ ಬರುವ ಸಹಾಯಕರಿಗೆ ಮತ್ತು ಸಾರ್ವಜನಿಕರಿಗೆ ಅನ್ನ ಬಡಿಸುವ ಮೂಲಕ ವಿಶೇಷ ವ್ಯಕ್ತಿಯಾಗಿ ಕಂಡು ಬರುತ್ತಿದ್ದಾರೆ. (ತುಮಕೂರಿನ ಇತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ)

ಕಳೆದ 6 ತಿಂಗಳಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಸೇರಿದಂತೆ ಪ್ರತಿದಿನ 250ಕ್ಕೂ ಹೆಚ್ಚು ಜನರಿಗೆ ಮಧ್ಯಾಹ್ನದ ಊಟ ನೀಡುವ ಮೂಲಕ ಸಾಮಾಜಿಕ ಕಾರ್ಯ ನಡೆಸುತ್ತಿದ್ದಾರೆ. ಪ್ರತಿದಿನ ಅವರ ಕುಟುಂಬದ ನಾಲ್ಕು ಜನರು ಸೇರಿ ಮನೆಯಲ್ಲಿಯೇ ಅಡುಗೆ ಸಿದ್ಧ ಮಾಡುತ್ತಾರೆ. ಮನೆಯಿಂದ ಅಡುಗೆ ಹೊತ್ತು ತಂದು ಆಸ್ಪತ್ರೆಯ ಮುಂಭಾಗದಲ್ಲಿ ಮಧ್ಯಾಹ್ನದ ಭೋಜನ ಬಡಿಸುತ್ತಾರೆ. ಹಸಿದು ಬಂದ ನೂರಾರು ಜನರು ಇದನ್ನು ಸವಿಯುತ್ತಿದ್ದಾರೆ.

ಪ್ರತಿದಿನ 5,000 ರೂಪಾಯಿ ಖರ್ಚು ಬರುತ್ತಿದ್ದು, ತಮ್ಮ ಪಿಂಚಣಿ ಹಣದಿಂದ ಮತ್ತು ಸ್ನೇಹಿತರ ತಂಡದ ಸಹಕಾರ ಪಡೆದುಕೊಂಡು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಗೆಳೆಯನೇ ಮಾದರಿ

ಸೋಮನಾಥ್ ಮೂಲತಃ ಮಂಗಳೂರಿನವರಾಗಿದ್ದು, ವಾಯು ಸೇನೆಯಲ್ಲಿ ಕಾರ್ಯ ನಿರ್ವಹಿಸಿ 1994ರಲ್ಲಿ ಎಸ್‌ಬಿಎಂ ಉದ್ಯೋಗ ಪಡೆದು ವ್ಯವಸ್ಥಾಪಕರಾಗಿ 2020ರಲ್ಲಿ ನಿವೃತ್ತಿಯಾಗಿದ್ದಾರೆ. ಕೆಲಸ ಮಾಡುವ ಸಂದರ್ಭದಲ್ಲಿಯೇ ಹಲವು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸೋಮನಾಥ್, ಬ್ಲಡ್ ಕ್ಯಾಂಪ್, ಆರೋಗ್ಯ ಶಿಬಿರ ನಡೆಸಿ ಸರ್ಕಾರಿ ಶಾಲೆಗಳ ಆಧುನಿಕರಣಕ್ಕೂ ಕೈ ಜೋಡಿಸಿದ್ದರು. ನಿವೃತ್ತಿಯ ನಂತರ ತಮ್ಮ ಕೈಲಾದ ಸೇವೆ ಮಾಡಬೇಕೆಂದು ನಿಶ್ಚಯಿಸಿದ್ದ ಇವರಿಗೆ ಇವರ ಸ್ನೇಹಿತ ಮಾದರಿಯಾದರು. ಕಾರವಾರದ ಆಸ್ಪತ್ರೆಯೊಂದರಲ್ಲಿ ಮಧ್ಯಾಹ್ನದ ಊಟ ನೀಡುತ್ತಿದ್ದ ಸ್ನೇಹಿತನನ್ನು ಕಂಡು ಈ ರೀತಿಯ ಸೇವೆಯನ್ನು ತಾನೇಕೆ ಮಾಡಬಾರದು ಎಂದು ನಿಶ್ಚಯಿಸಿ, ಅವರೂ ಕೂಡಾ ಅದೇ ಕಾರ್ಯವನ್ನು ಶುರು ಮಾಡಿದ್ದಾರೆ.

ಅನ್ನದಾನಿ ಕುಟುಂಬ

ತಮ್ಮದೇ ಆದ ಅಂಜನಾದ್ರಿ ಟ್ರಸ್ಟ್ ಮೂಲಕ ಪತ್ನಿ, ಮಗಳು ಹಾಗೂ ಅಳಿಯನ ಸಹಕಾರ ಪಡೆದು ಈ ಸೇವೆ ಮಾಡುತ್ತಿದ್ದಾರೆ. ತಿಂಗಳಲ್ಲಿ ನಾಲ್ಕರಿಂದ ಐದು ಜನ ಇವರ ಸ್ನೇಹಿತರು ಅವರ ಹುಟ್ಟುಹಬ್ಬ ಅಥವಾ ವಿಶೇಷ ದಿನಗಳಲ್ಲಿ ಸಹಕಾರ ಮಾಡುತ್ತಾರೆ. ಮಿಕ್ಕ ದಿನಗಳಲ್ಲಿ ಇವರ ಕುಟುಂಬವೇ ಅದನ್ನು ಭರ್ತಿ ಮಾಡಿ ಇದುವರೆಗೂ ಸುಮಾರು 26 ಸಾವಿರ ಜನರಿಗೆ ಮಧ್ಯಾಹ್ನದ ಊಟ ನೀಡುವ ಮೂಲಕ ಅನ್ನಪೂರ್ಣೇಶ್ವರಿಯ ಕುಟುಂಬ ಎಂಬ ಪ್ರಶಂಸೆಗೂ ಕಾರಣವಾಗಿದೆ.

ನಾನು ಬದುಕಿರುವವರೆಗೂ ಈ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತೇನೆ. ನಂತರವೂ ಸಹ ಟ್ರಸ್ಟ್ ಮೂಲಕ ಈ ಸೇವೆ ಮುಂದುವರೆಯಲು ಎಲ್ಲಾ ರೀತಿಯ ಯೋಜನೆ ರೂಪಿಸಲಾಗಿದೆ. ಇದಕ್ಕೆ ನನ್ನ ಕುಟುಂಬ ಸಹಕಾರ ನೀಡಿದೆ ಎನ್ನುತ್ತಾರೆ ನಿವೃತ್ತ ಬ್ಯಾಂಕ್ ಅಧಿಕಾರಿ ಸೋಮನಾಥ್.

ತಮ್ಮ ಪತಿಯ ಕಾರ್ಯದ ಬಗ್ಗೆ ಪತ್ನಿ ಚಂದ್ರಕಲಾ ಪ್ರತಿಕ್ರಿಯಿಸಿ, ಮನೆಯಲ್ಲಿಯೇ ಅಡುಗೆ ಮಾಡಿಕೊಂಡು ಬಂದು ಮಧ್ಯಾಹ್ನದ ಊಟ ನೀಡುತ್ತಿದ್ದೇವೆ. ಆಸ್ಪತ್ರೆಯ ಒಳಭಾಗದಲ್ಲಿ ನಮಗೆ ಸ್ಥಳಾವಕಾಶ ನೀಡಿದರೆ ಇಲ್ಲಿಯೇ ಅಡುಗೆ ಮಾಡಿ ಊಟ ನೀಡಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ಸೋಮನಾಥ್ ಕಾರ್ಯಕ್ಕೆ ಮೆಚ್ಚುಗೆ

ಸಾಮಾಜಿಕ ಚಿಂತಕ ರಾಜೇಶ್ ಗುಬ್ಬಿ ಕೂಡ ಸೋಮನಾಥ್ ಅವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮಾರು ಆರು ತಿಂಗಳಿನಿಂದ ಪ್ರತಿನಿತ್ಯ ಮಧ್ಯಾಹ್ನದ ಊಟ ನೀಡುತ್ತಿರುವ ಈ ಕುಟುಂಬ ನೋಡಿದಾಗ ಸಂತೋಷವಾಗುತ್ತದೆ. ಸ್ವಾರ್ಥದ ಜನರ ಮಧ್ಯದಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.

ಯಾವುದೇ ಫಲಾಪೇಕ್ಷೆ ಇಟ್ಟುಕೊಳ್ಳದೆ ತಮ್ಮ ಸ್ವಂತ ಹಣ ಖರ್ಚು ಮಾಡಿ ಊಟ ನೀಡುವ ಕಾರ್ಯ ಮಾಡುತ್ತಿರುವ ಸೋಮನಾಥ್ ಅವರ ಕಾರ್ಯವನ್ನು ಕ್ಷೇತ್ರದ ಶಾಸಕರಿಂದ ಹಿಡಿದು ಗಣ್ಯರು, ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮುಂದೆ ಇವರ ಕಾರ್ಯಕ್ಕೆ ನಾವು ಕೈ ಜೋಡಿಸುವುದಾಗಿ ಹಲವರು ಭರವಸೆ ನೀಡಿದ್ದಾರೆ. ಅನ್ನದಾತ ಸುಖೀಭವ ಎಂಬ ಮಾತಿದೆ. ನಿತ್ಯ ಉಚಿತವಾಗಿ ಊಟ ನೀಡುತ್ತಿರುವ ಸೋಮನಾಥ್ ಕೂಡ ಸುಖವಾಗಿರಲಿ ಎಂಬ ಹಾರೈಕೆಯೂ ವ್ಯಕ್ತವಾಗಿದೆ.

ವರದಿ: ಈಶ್ವರ್‌, ತುಮಕೂರು

IPL_Entry_Point