ವಾಂತಿ, ಭೇದಿಯಿಂದ ಬಳಲಿದ ಮನೆಗಳ ಸದಸ್ಯರ ತಪಾಸಣೆ, ಉಪ್ಪುಂದ ಗ್ರಾಮದಲ್ಲಿ ಆಗಿದ್ದೇನು? 1000 ಮಂದಿ ಅಸ್ವಸ್ಥರಾಗಿದ್ರಾ?
ಕನ್ನಡ ಸುದ್ದಿ  /  ಕರ್ನಾಟಕ  /  ವಾಂತಿ, ಭೇದಿಯಿಂದ ಬಳಲಿದ ಮನೆಗಳ ಸದಸ್ಯರ ತಪಾಸಣೆ, ಉಪ್ಪುಂದ ಗ್ರಾಮದಲ್ಲಿ ಆಗಿದ್ದೇನು? 1000 ಮಂದಿ ಅಸ್ವಸ್ಥರಾಗಿದ್ರಾ?

ವಾಂತಿ, ಭೇದಿಯಿಂದ ಬಳಲಿದ ಮನೆಗಳ ಸದಸ್ಯರ ತಪಾಸಣೆ, ಉಪ್ಪುಂದ ಗ್ರಾಮದಲ್ಲಿ ಆಗಿದ್ದೇನು? 1000 ಮಂದಿ ಅಸ್ವಸ್ಥರಾಗಿದ್ರಾ?

Udupi News: ಉಡುಪಿ ಜಿಲ್ಲೆಯ ಉಪ್ಪುಂದದಲ್ಲಿ ಸ್ಥಳೀಯ ಓವರ್‌ಹೆಡ್ ನೀರಿನ ಟ್ಯಾಂಕ್‌ನ ಕಲುಷಿತ ನೀರು ಕುಡಿದು ಹಲವರು ಅಸ್ವಸ್ಥರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಾಂತಿ, ಭೇದಿಯಿಂದ ಬಳಲಿದ ಮನೆಗಳ ಸದಸ್ಯರ ತಪಾಸಣೆ, ಉಪ್ಪುಂದ ಗ್ರಾಮದಲ್ಲಿ ಆಗಿದ್ದೇನು
ವಾಂತಿ, ಭೇದಿಯಿಂದ ಬಳಲಿದ ಮನೆಗಳ ಸದಸ್ಯರ ತಪಾಸಣೆ, ಉಪ್ಪುಂದ ಗ್ರಾಮದಲ್ಲಿ ಆಗಿದ್ದೇನು

ಉಡುಪಿ: ಇಂದು ಪ್ರಬಲವಾಗಿರುವ ಸಾಮಾಜಿಕ ಜಾಲತಾಣವಷ್ಟೇ ಅಲ್ಲ, ಕೆಲವೊಂದು ಸುದ್ದಿ ಮಾಧ್ಯಮಗಳೂ ಉಡುಪಿ ಜಿಲ್ಲೆಯ ಉಪ್ಪುಂದದ ಎರಡು ಪ್ರದೇಶಗಳ ಸಾವಿರಕ್ಕೂ ಅಧಿಕ ಜನರು ವಾಂತಿಭೇದಿಯಿಂದ ನರಳುತ್ತಿದ್ದಾರೆ ಎಂದು ವರದಿ ಮಾಡಿದ್ದವು. ಆದರೆ ಈ ವಿಷಯದ ಕುರಿತು ಸ್ಥಳೀಯರ ಬಳಿ ಹಾಗೂ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಗಡದ್ ಅವರನ್ನು HTಕನ್ನಡ ಸಂಪರ್ಕಿಸಿದ ವೇಳೆ ಘಟನೆ ನಡೆದದ್ದು ಹೌದು, ಆದರೆ ಸಾವಿರದಷ್ಟು ಮಂದಿ ಬಾಧಿತರಾಗಿಲ್ಲ, ಸುಮಾರು 130ಕ್ಕೂ ಅಧಿಕ ಮಂದಿ ರೋಗಲಕ್ಷಣ ಉಳ್ಳವರಿಗೆ ಚಿಕಿತ್ಸೆ ನೀಡಲಾಗಿದೆ. ಗ್ರಾಮಗಳ ಮನೆಗಳ ಎಲ್ಲ ಸದಸ್ಯರನ್ನೂ ತಪಾಸಣೆ ಮಾಡಲಾಗಿದೆ. ಈಗ ಎಲ್ಲರೂ ಸ್ವಸ್ಥರಾಗಿದ್ದಾರೆ, ಆಮಶಂಕೆಯಿಂದ ಹೀಗಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಕಲ್ ಮತ್ತು ಕರ್ಕಿಕಳಿ ಭಾಗದಲ್ಲಿ ಕಳೆದ 3 ದಿನಗಳ ಹಿಂದೆ ನೂರಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾಗಿ ಹೇಳಲಾಗಿತ್ತು. ಗ್ರಾಮ ಪಂಚಾಯಿತಿಯಿಂದ ಸರಬರಾಜಾಗುತ್ತಿರುವ ಕುಡಿಯುವ ನೀರಿನಿಂದಾಗಿ ಈ ಸಮಸ್ಯೆ ತಲೆದೋರಿದೆ ಎಂದು ಸ್ಥಳೀಯರು ಅನುಮಾನಪಟ್ಟರು. ಆ ನೀರಿನ ಮಾದರಿಯನ್ನೀಗ ಪರೀಕ್ಷೆಗೆ ಕಳುಹಿಸಲಾಗಿದೆ.

ಹೊಟ್ಟೆನೋವು, ಜ್ವರ ಪೀಡಿತರು

ಈ ಕುರಿತು HTಕನ್ನಡ ಜೊತೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ, ನಾವು ಈ ಕುರಿತು ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಬೇಕಾದ ಕ್ರಮ ಕೈಗೊಂಡಿದ್ದೇವೆ. 375 ಮನೆಗಳನ್ನು ಸಂಪರ್ಕಿಸಿ ಅಲ್ಲಿನ ಸದಸ್ಯರನ್ನೆಲ್ಲಾ ತಪಾಸಣೆಗೆ ಒಳಪಡಿಸಿದ್ದೇವೆ. ಆ ಸಂದರ್ಭ ಸುಮಾರು 134 ಮಂದಿಗೆ ಆಮಶಂಕೆ ಇರುವುದು ಕಂಡುಬಂದಿದೆ. ಆದರೆ, ಅವರೆಲ್ಲರೂ ಗುಣಮುಖರಾಗಿದ್ದಾರೆ. ತಂಡವಾಗಿ ಸಮೀಕ್ಷೆಗಳನ್ನು ನಡೆಸಲಾಗಿದೆ. ಸೆಪ್ಟೆಂಬರ್​ 30ರಂದು 5 ತಂಡಗಳಲ್ಲಿ 225 ಮನೆ ಭೇಟಿ ನೀಡಿದ್ದೆವು. ಈ ಸಂದರ್ಭ 78 ಪ್ರಕರಣಗಳು ವರದಿಯಾಗಿದ್ದವು. ಆ ಸಂದರ್ಭ 3 ಕಡೆಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿದ್ದೇವೆ. 52 ಮಂದಿಗೆ ಓಆರ್​ಎಸ್ ವಿತರಿಸಲಾಗಿದೆ. ಮರುದಿನ ಅಕ್ಟೋಬರ್ 1ರಂದು 8 ತಂಡಗಳಲ್ಲಿ ಸಮೀಕ್ಷೆ ಆರಂಭಿಸಿ ಆ ದಿನ 375 ಮನೆಗಳ ಸಮೀಕ್ಷೆ ಮಾಡಿದ್ದೇವೆ. ಈ ಸಂದರ್ಭ 24 ಪ್ರಕರಣಗಳು ಕಂಡುಬಂದಿದ್ದು, 3 ಕಡೆಗಳಲ್ಲಿ ನೀರಿನ ಮಾದರಿ ಸಂಗ್ರಹಿಸಲಾಗಿದೆ. 40 ಮಂದಿಗೆ ಓಆರ್ ಎಸ್ ವಿತರಿಸಲಾಗಿದೆ ಎಂದರು.

ಅಕ್ಟೋಬರ್ 2ರಂದು 375 ಹಾಗೂ ಅ.3ರಂದು 375 ಮನೆಗಳ ಭೇಟಿ ಮಾಡಲಾಗಿದ್ದು, ಈ ಸಂದರ್ಭ ಒಟ್ಟು 38 ಪ್ರಕರಣಗಳು ಪತ್ತೆಯಾಗಿದೆ. ಅಕ್ಟೋಬರ್​ 4ರಂದು 3 ಪ್ರಕರಣಷ್ಟೇ ದೊರಕಿವೆ. ಸೆಪ್ಟೆಂಬರ್​ 30ರಿಂದ ಅಕ್ಟೋಬರ್ 4ರವರೆಗೆ ಒಟ್ಟು 143 ಪ್ರಕರಣಗಳು ವರದಿಯಾಗಿವೆ ಎಂದಿದ್ದಾರೆ. ಗಮನಾರ್ಹ ಅಂಶವೆಂದರೆ, ಅವರೆಲ್ಲರೂ ಆಮಶಂಕೆಯಿಂದ ಬಳಲಿದ್ದು, ಪರೀಕ್ಷೆ ವೇಳೆ ದೃಢಪಟ್ಟಿದೆ. ಯಾವುದೇ ಗಂಭೀರ ಪ್ರಕರಣ ಇಲ್ಲವೆಂದು ಕಂಡುಬಂದಿದೆ. ಕೆಲವರು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ, ಬೈಂದೂರಿನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರೆ, ಹೆಚ್ಚಿನವರು ಮನೆಯಲ್ಲೇ ಸ್ವಯಂ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಯಾರಲ್ಲೂ ಗಂಭೀರ ಸಮಸ್ಯೆ ಕಂಡುಬಂದಿಲ್ಲ. ಚಿಕಿತ್ಸೆ ಬಳಿಕ ಚೇತರಿಕೆ ಉಂಟಾಗಿದ್ದು, ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದಿದ್ದಾರೆ.

ಕಲುಷಿತ ನೀರು ಸೇವಿಸಿ ಹಲವರು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರೆಕಟ್ಟೆ ಮತ್ತು ಮಡಿಕಲ್ ಎಂಬ ಎರಡು ಪ್ರದೇಶಗಳ ಜನರು ತೊಂದರೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ ನೀರು ಪೂರೈಕೆ ಆಗುತ್ತಿರುವ ಪ್ರದೇಶದಿಂದ ನೀರಿನ ಮಾದರಿ ಸಂಗ್ರಹಿಸಿ ಕ್ಲೋರಿನೇಶನ್ ಮಾಡಲಾಗಿದೆ. ಬಳಿಕ ಸೂಪರ್ ಕ್ಲೋರಿನೇಶನ್ ಮಾಡಲಾಗಿದ್ದು, ಯಾವುದೇ ಸಮಸ್ಯೆ ಇಲ್ಲವೆಂದು ಆಡಳಿತ ತಿಳಿಸಿದೆ.

ಆಮಶಂಕೆ ಇರಲಿ ಎಚ್ಚರ

ಕಲುಷಿತ ನೀರು ಸೇವನೆ ಶಂಕೆಯಿಂದ ಬೈಂದೂರು ಸಮೀಪ ಉಪ್ಪುಂದ ಗ್ರಾಮದ ಕೆರೆಕಟ್ಟೆ ಮತ್ತು ಮೆಡಿಕಲ್​ನಲ್ಲಿ ಹೊಟ್ಟೆನೋವು, ವಾಂತಿ, ಭೇದಿಯಿಂದ ಸಮಸ್ಯೆ ಉಂಟಾಗಿದ್ದು, ಆಮಶಂಕೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಯಾವುದಕ್ಕೂ ಎಚ್ಚರವಹಿಸುವುದು ಸೂಕ್ತ ಎಂದು ವೈದ್ಯರು ಜಾಗ್ರತೆ ಹೇಳಿದ್ದಾರೆ. ಈ ವೈರಾಣು ನೀರಿನಿಂದ ಮಾತ್ರವಲ್ಲದೆ, ಬಾಧಿತ ವ್ಯಕ್ತಿಯಿಂದಲೂ ಇನ್ನೊಬ್ಬರಿಗೆ ಹರಡುತ್ತದೆ. ಜನರು ಆತಂಕಪಡುವ ಅಗತ್ಯವಿಲ್ಲವಾದರೂ, ಬಿಸಿ ನೀರು ಕುಡಿಯುವುದು, ಕೈತೊಳೆದು ಆಹಾರ ಸೇವಿಸುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಅಗಿ ಅಗತ್ಯವಾಗಿದೆ ಎಂದಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner