ವಿಶ್ವಪರ್ಯಟನೆ ಮೂಲಕ ಜಗತ್ತಿಗೆ ಗೀತಾಸಂದೇಶ ಪಸರಿಸಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು
ಕನ್ನಡ ಸುದ್ದಿ  /  ಕರ್ನಾಟಕ  /  ವಿಶ್ವಪರ್ಯಟನೆ ಮೂಲಕ ಜಗತ್ತಿಗೆ ಗೀತಾಸಂದೇಶ ಪಸರಿಸಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು

ವಿಶ್ವಪರ್ಯಟನೆ ಮೂಲಕ ಜಗತ್ತಿಗೆ ಗೀತಾಸಂದೇಶ ಪಸರಿಸಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು

ಆಸ್ಪ್ರೇಲಿಯಾದಲ್ಲಿ ಎರಡು, ಲಂಡನ್‌ ಮತ್ತು ಕೆನಡಾದಲ್ಲಿ ತಲಾ ಒಂದು, ಅಮೆರಿಕದಲ್ಲಿ ಎಂಟು ಸೇರಿ ಒಟ್ಟು 12 ಶ್ರೀಕೃಷ್ಣ ಮಂದಿರವನ್ನು ನಿರ್ಮಿಸಿ ಭಾರತೀಯತೆಯ ಪ್ರಸಾರ ಹಾಗೂ ಆಧ್ಯಾತ್ಮದ ಸಂದೇಶವನ್ನು ಸಾರುತ್ತಿದ್ದಾರೆ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ. (ವರದಿ- ಹರೀಶ ಮಾಂಬಾಡಿ, ಮಂಗಳೂರು)

ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ
ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಉಡುಪಿ: ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಸಾಕಷ್ಟು ಬಾರಿ ವಿದೇಶಯಾತ್ರೆ ಮಾಡಿದವರು. ವಿಶ್ವಪರ್ಯಟನೆ ಮೂಲಕ ಜಗತ್ತಿಗೆ ಶ್ರೀಕೃಷ್ಣನ ಭಗವದ್ಗೀತಾ ಸಂದೇಶವನ್ನು ಸಾರಿದವರು.

ಆಸ್ಪ್ರೇಲಿಯಾದಲ್ಲಿ ಎರಡು, ಲಂಡನ್‌ ಮತ್ತು ಕೆನಡಾದಲ್ಲಿ ತಲಾ ಒಂದು, ಅಮೆರಿಕದಲ್ಲಿ ಎಂಟು ಸೇರಿ ಒಟ್ಟು 12 ಶ್ರೀಕೃಷ್ಣ ಮಂದಿರವನ್ನು ನಿರ್ಮಿಸಿ ಭಾರತೀಯತೆಯ ಪ್ರಸಾರ ಹಾಗೂ ಆಧ್ಯಾತ್ಮದ ಸಂದೇಶವನ್ನು ಸಾರುತ್ತಿದ್ದಾರೆ. ಭಾರತೀಯ ಪರಂಪರೆಯ ಮಹತ್ವವನ್ನು ಹೇಳುತ್ತಿದ್ದಾರೆ.

ಅಮೆರಿಕಾದಲ್ಲಿರುವ ಭಕ್ತರಿಗೆ ಧಾರ್ಮಿಕ ವಿಧಿ ವಿಧಾನ, ವಾಸ್ತು ಹೋಮ ಸಹಿತವಾಗಿ ಭಾರತದಿಂದ ಒಯ್ದ ಶ್ರೀಕೃಷ್ಣನನ್ನೇ ವಿದೇಶದಲ್ಲಿರುವ ಶ್ರೀಕೃಷ್ಣ ವೃಂದಾವನ/ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಮೆರಿಕದ ಭಾರತೀಯರಿಗೆ ನಿತ್ಯ ಜಪ, ತಪಾನುಷ್ಠಾನ, ಮಕ್ಕಳಿಗೆ ಪಾಠ ಪ್ರವಚನ, ಭಗವದ್ಗೀತೆ ತರಗತಿ ಸಹಿತ ಜ್ಞಾನ ಯಜ್ಞ, ಸತ್ಯನಾರಾಯಣ ಪೂಜೆ, ಅವರು ಸ್ಥಾಪಿಸಿದ ಮಂದಿರಗಳಲ್ಲಿ ಮದುವೆಗೂ ಅವಕಾಶ ಕಲ್ಪಿಸಲಾಗಿದೆ.

ಶ್ರೀಕೃಷ್ಣನ ಭಕ್ತಿ, ಮಧ್ವರ ತತ್ವ ಸಿದ್ಧಾಂತ ಪ್ರಚಾರ ಪ್ರಸಾರ ಜಗದಗಲವಾಗಿ ಜನರ ಮನೆ ಮನ ಮುಟ್ಟಬೇಕು, ತಟ್ಟಬೇಕು. ವಸುದೈವ ಕುಟುಂಬಕಂ ನೆಲೆಯಲ್ಲಿ ಭಯೋತ್ಪಾದನೆ ಅಳಿದು ಶಾಂತಿ, ಸೌಹಾರ್ದ, ಭ್ರಾತೃತ್ವ ನೆಲೆಸಬೇಕು ಎಂಬುದು ಶ್ರೀಗಳ ಕನಸು.

ಹಿಂದು ಅಮೆರಿಕ, ಸೈಬರ್ ಮಾಧ್ವ ಸಂಘ:

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಪುತ್ತಿಗೆ ಶ್ರೀಗಳು ಅಮೆರಿಕಾ ಪ್ರವಾಸ ಮಾಡಿದ ಸಂದರ್ಭ, ಸಾಗರೋಲ್ಲಂಘನ ಭಾರಿ ಸಂಚಲನ ಮೂಡಿಸಿತ್ತು. ಸ್ವಾಮೀಜಿ ಸಾಗರೋಲ್ಲಂಘನ ಮಾಡಬಹುದೇ ಎಂಬ ಚರ್ಚೆಗಳ ಜತೆಗೆ ಜಾಗತಿಕವಾಗಿ ಕೃಷ್ಣತತ್ವ ಪ್ರಸಾರವಾಗುತ್ತಿದೆ ಎಂಬ ಖುಷಿಯೂ ಹಲವರಲ್ಲಿತ್ತು. ಪುತ್ತಿಗೆ ಶ್ರೀಗಳನ್ನು ಬರಮಾಡಿಕೊಂಡದ್ದು, ಅಂದಿನ ಸೈಬರ್ ಮಾಧ್ವ ಸಂಘ. ಮಧ್ವ ತತ್ವಗಳ ಕುರಿತು ಆಂಗ್ಲ ಭಾಷೆಯಲ್ಲಿ ಮಾಹಿತಿ ನೀಡಬಲ್ಲ ಸ್ವಾಮೀಜಿಯನ್ನು ಹುಡುಕಿಕೊಂಡು ಬಂದ ಅವರಿಗೆ ಪುತ್ತಿಗೆ ಶ್ರೀಗಳು ಸೂಕ್ತವೆನಿಸಿತು. ಬಳಿಕ ಅಮೆರಿಕದಲ್ಲಿನ ತಮ್ಮ ಸಂಘದ ಸದಸ್ಯರಿಗೆ, ಧರ್ಮಜಿಜ್ಞಾಸುಗಳಿಗೆ ತತ್ವಜ್ಞಾನದ ಕುರಿತು ಮಾರ್ಗದರ್ಶನ ನೀಡಲು ಶ್ರೀಗಳು ಸಮರ್ಥರು ಎಂದು ತೀರ್ಮಾನಿಸಿ ಅವರ ಸಂಘದ ಪ್ರಥಮ ಸಮ್ಮೇಳನದ ಉದ್ಘಾಟನೆಯನ್ನು ಮಾಡಲು ಆಹ್ವಾನಿಸಿದರು.

ಈಗ ಇಂಟರ್ನೆಟ್ ಎಂಬುದು ಎಲ್ಲರಿಗೂ ಗೊತ್ತು. ನೀವು ಈ ಲೇಖನವನ್ನೂ ಅಂತರ್ಜಾಲದಲ್ಲೇ ಓದುತ್ತಿದ್ದೀರಿ. ಆದರೆ ಎರಡೂವರೆ ದಶಕಗಳ ಹಿಂದೆ ಹೀಗಿರಲಿಲ್ಲ. ಆದರೂ ಅಂತರ್ಜಾಲವನ್ನು ಬಳಸಿಕೊಂಡು ಮಾಧ್ವ ತತ್ವಜ್ಞಾನವನ್ನು ಅರಿತುಕೊಳ್ಳಲು ಆಸಕ್ತರು ಗುಂಪು ಕಟ್ಟಿಕೊಂಡದ್ದು ವಿಶೇಷ. ಹೀಗೆ ಆಹ್ವಾನ ಬಂದ ಸಂದರ್ಭ ಪುತ್ತಿಗೆ ಶ್ರೀಗಳು ಶ್ರೀಕೃಷ್ಣನನ್ನು ಧ್ಯಾನಿಸಿಕೊಂಡರು. ಶ್ರೀಕೃಷ್ಣನ ಪ್ರೇರಣೆಯಾಯಿತು. ಧರ್ಮಪ್ರಚಾರದ ದೃಷ್ಟಿಯಿಂದ ಮಾರ್ಗದರ್ಶನ ಮಾಡುವುದು ನಮ್ಮ ಕರ್ತವ್ಯ ಎಂದುಕೊಂಡು ಒಪ್ಪಿಕೊಂಡೆವು ಎಂದು ಮಾಧ್ಯಮವೊಂದಕ್ಕೆ ಶ್ರೀಗಳು ಸಂದರ್ಶನದಲ್ಲಿ ಅಂದು ತಿಳಿಸಿದ್ದರು.

ಶ್ರೀಗಳು ವಿದೇಶದಲ್ಲಿ ಧರ್ಮಪ್ರಸಾರ ಮಾಡುವ ಕುರಿತು ಅಂದು ಪರ, ವಿರೋಧ ಚರ್ಚೆಗಳೆದ್ದವು. ಆದರೆ ವಿದೇಶದಲ್ಲಿ ಧರ್ಮಪ್ರಚಾರ ಅಗತ್ಯವಾದುದು ಎಂದು ಶ್ರೀಗಳು ಬಲವಾಗಿ ಮನಗಂಡರು. ಹೊಸ ತಲೆಮಾರಿಗೆ ಆಧ್ಯಾತ್ಮಿಕ ರುಚಿ, ಚಿಂತನೆಯ ಪ್ರಚೋದಕ ವಾತಾವರಣ ಅಗತ್ಯವಾಗಿದ್ದು, ನಾವು ಅಮೆರಿಕಾಕ್ಕೆ ಧರ್ಮಪ್ರಚಾರಕ್ಕೆ ಹೋಗಿಬಂದದ್ದು ಔಚಿತ್ಯಪೂರ್ಣ ಎಂದು ಶ್ರೀಗಳು ಅಂದು ಮಾಧ್ಯಮಗಳಿಗೆ ಹೇಳಿದ್ದರು. ಇದಕ್ಕೆಲ್ಲಾ ಶ್ರೀಕೃಷ್ಣನ ಪ್ರೇರಣೆಯೇ ಕಾರಣ ಎಂಬುದು ಶ್ರೀಗಳ ಬಲವಾದ ನಂಬಿಕೆ.

ವಿಶ್ವಶಾಂತಿಗಾಗಿ ಆಧ್ಯಾತ್ಮ ಪ್ರಸಾರ

ವಿಶ್ವಶಾಂತಿಯನ್ನು ಬಲವಾಗಿ ಪ್ರತಿಪಾದಿಸುವ ಪುತ್ತಿಗೆ ಶ್ರೀಗಳು ಹಲವೆಡೆ ಆಧ್ಯಾತ್ಮ ಪ್ರಸಾರವನ್ನು ಕಳೆದೊಂದು ದಶಕಗಳಿಂದ ಸತತವಾಗಿ ಮಾಡುತ್ತಿದ್ದಾರೆ. ಅವರನ್ನು ವಿಶ್ವಶಾಂತಿಯ ಭಾರತೀಯ ರಾಯಭಾರಿ ಎಂದು ಗುರುತಿಸಲಾಗುತ್ತದೆ. ಮಧ್ವಸಿದ್ಧಾಂತದ ಮೂಲಕ ಶಾಂತಿಯ ಬೋಧನೆಯನ್ನು ವಿಶ್ವಸಂಸ್ಥೆಯ ಮೂಲಕವೂ ಮಾಡಿದ್ದಾರೆ. ಕಝಾಕಿಸ್ತಾನ್, ಕೀನ್ಯಾ, ಟರ್ಕಿ, ಫಿಲಿಪೀನ್ಸ್, ಜಪಾನ್, ತೈವಾನ್, ಅಮ್ಮಾನ್, ವ್ಯಾಟಿಕನ್ ಸಿಟಿ, ಸಾಲ್ಟ್ ಲೇಕ್ ಸಿಟಿ, ಮ್ಯಾಡ್ರಿಡ್, ಅಬುಧಾಬಿ, ಸಿಂಗಾಪುರ, ಮೋಸ್ಕೊ, ಹಿರೊಶಿಮಾಗಳಿಗೂ ಅವರು ಭೇಟಿ ನೀಡಿದ್ದಾರೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಪುತ್ತಿಗೆ ಶ್ರೀಗಳು ಜಾಗತಿಕ ಭಯೋತ್ಪಾದನೆಯ ಕುರಿತು ಕಳವಳ ವ್ಯಕ್ತಪಡಿಸಿ, ಶಾಂತಿಯ ಅಗತ್ಯವನ್ನು ವಿವರಿಸಿದ್ದಾರೆ. ಉಡುಪಿಯ ಶ್ರೀಗಳೊಬ್ಬರು ಜಗತ್ತಿನ ಗಮನ ಸೆಳೆದದ್ದು ಹೀಗೆ.

ವರದಿ- ಹರೀಶ ಮಾಂಬಾಡಿ, ಮಂಗಳೂರು

Whats_app_banner