ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಮಳೆಯಿಂದ ತುಂಬಿದ್ದ ಗುಂಡಿಗೆ ಬಿದ್ದು ಬಾಲಕಿ ಸಹಿತ ಮೂವರ ಸಾವು

Vijayapura News: ಮಳೆಯಿಂದ ತುಂಬಿದ್ದ ಗುಂಡಿಗೆ ಬಿದ್ದು ಬಾಲಕಿ ಸಹಿತ ಮೂವರ ಸಾವು

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಎಮ್ಮೆ ಮೇಯಿಸಲು ಹೋಗಿದ್ದಾಗ ಹಳ್ಳದಲ್ಲಿ ಬಿದ್ದು ಮೂವರು ಮೃತಪಟ್ಟಿದ್ಧಾರೆ.

ದುರ್ಘಟನೆ ನಡೆದ ಹಳ್ಳ.
ದುರ್ಘಟನೆ ನಡೆದ ಹಳ್ಳ.

ವಿಜಯಪುರ: ಕೆಲ ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಅದರಲ್ಲೂ ಕೆಲವು ಭಾಗಗಳಲ್ಲಿ ಈಗಲೇ ಮಳೆಯಿಂದ ಹಳ್ಳಗಳು ತುಂಬಿಕೊಂಡಿವೆ. ಹೀಗೆ ತುಂಬಿಕೊಂಡ ಹಳ್ಳದ ಬಳಿ ಎಮ್ಮೆ ಮೇಯಿಸಲು ಹೋದಾಗ ಬಾಲಕಿ ಸೇರಿ ಮೂವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮಂಗಳವಾರ ಸಂಜೆ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹಡಲಗೇರಿ ಗ್ರಾಮದ ಹೊಲವೊಂದರಲ್ಲಿ ನಡೆದಿದೆ. ಒಬ್ಬರನ್ನು ಉಳಿಸಲು ಇನ್ನೊಬ್ಬರು ಹೋಗಿ ಮೂವರು ನೀರು ಪಾಲಾದ ಘಟನೆಯಿದು ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.

ಹಡಲಗೇರಿ ಗ್ರಾಮದ ಚಿನ್ನಪ್ಪ ತಳವಾರ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಎಮ್ಮೆ ಮೇಯಿಸಲು ಹೋಗಿದ್ದ ನೀಲಮ್ಮ ಖಿಲಾರಹಟ್ಟಿ (16), ಆಕೆಯ ಸಂಬಂಧಿ ಮುತ್ತಪ್ಪ ಖಿಲಾರಹಟ್ಟಿ (24) ಹಾಗೂ ಶಿವು ಯಾಳವಾರ (25) ಸಾವಿಗೀಡಾದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇತ್ತೀಚಿಗೆ ಮಳೆಯಾಗಿರುವುದರಿಂದ ಅಲ್ಲಲ್ಲಿ ನೀರು ತುಂಬಿದೆ. ಅದರಲ್ಲೂ ಹಳ್ಳ ಕೊಳ್ಳಗಳೂ ತುಂಬಿಕೊಂಡಿವೆ. ಮಧ್ಯಾಹ್ನದವರೆಗೂ ಎಮ್ಮೆಮೇಯಿಸಿಕೊಂಡಿದ್ದ ನೀಲಮ್ಮ ಸಮೀಪದಲ್ಲೇ ಇದ್ದ ಗುಂಡಿ ಬಳಿ ತೆರಳಿದ್ದಾರೆ.

ಎಮ್ಮೆ ನೀರು ಕುಡಿಯಲು ಗುಂಡಿಯಲ್ಲಿ ಇಳಿದಾಗ ಪಕ್ಕದಲ್ಲಿ ತಾನೂ ನಿಂತುಕೊಳ್ಳಲು ಹೋಗಿದ್ದು ಆಗ ಕಾಲು ಜಾರಿದೆ. ನೀರಿಗೆ ಬಿದ್ದಿದ್ದು. ರಕ್ಷಣೆಗೆ ಕೂಗಿದ್ದಾಳೆ.

ಸಮೀಪದಲ್ಲಿಯೇ ಇದ್ದ ಮುತ್ತಪ್ಪ ಓಡಿ ಬಂದಿದ್ದು, ಆತನೂ ನೀರಲ್ಲಿ ಮುಳುಗಿದ್ದಾನೆ. ಶಿವು ಯಾಳವಾರ ಎಂಬಾತನೂ ರಕ್ಷಣೆಗೆ ಆಗಮಿಸಿ ನೀರು ಪಾಲಾಗಿದ್ದಾನೆ.

ಮೂವರೂ ನೀರು ಪಾಲಾಗಿದ್ದು,ವಿಷಯ ತಿಳಿದ ಸ್ಥಳೀಯರು ಮುದ್ದೇಬಿಹಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಪೊಲೀಸ್‌ ಹಾಗೂ ಅಗ್ನಿ ಶಾಮಕ ದಳದವರು ಸ್ಥಳೀಯರ ಸಹಕಾರದೊಂದಿಗೆ ಶವಗಳನ್ನು ಮೇಲೆ ತೆಗೆದರು. ಕುಟುಂಬದವರಿಗೆ ಸಂಜೆ ನಂತರ ಶವಗಳನ್ನು ಹಸ್ತಾಂತರಿಸಲಾಗಿದ್ದು, ಕುಟುಂಬದವರ ಆಕ್ರಂದನ ಕರುಳು ಕಿವುಚುವಂತಿತ್ತು.ಈ ಕುರಿತು ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.