Vijayapura Smaraka Darshan: ಸ್ಮಾರಕ ದರ್ಶನ 4; ಐತಿಹಾಸಿಕ ಉಪಲಿ ಗೋಪುರದಲ್ಲಿ ವಿಜಯಪುರ ನೋಟ ಬಲು ಚೆಂದ
ಕನ್ನಡ ಸುದ್ದಿ  /  ಕರ್ನಾಟಕ  /  Vijayapura Smaraka Darshan: ಸ್ಮಾರಕ ದರ್ಶನ 4; ಐತಿಹಾಸಿಕ ಉಪಲಿ ಗೋಪುರದಲ್ಲಿ ವಿಜಯಪುರ ನೋಟ ಬಲು ಚೆಂದ

Vijayapura Smaraka Darshan: ಸ್ಮಾರಕ ದರ್ಶನ 4; ಐತಿಹಾಸಿಕ ಉಪಲಿ ಗೋಪುರದಲ್ಲಿ ವಿಜಯಪುರ ನೋಟ ಬಲು ಚೆಂದ

ವಿಜಯಪುರದ ಐತಿಹಾಸಿಕ ಉಪಲಿ ಬುರುಜ್ ಕಟ್ಟಡ ತಲುಪಲು ದೊಡ್ಡ ದೊಡ್ಡ ಮೆಟ್ಟಿಲುಗಳಿವೆ. ಹತ್ತಾರು ಜನರು ಏಕಕಾಲಕ್ಕೆ ಹತ್ತಬಹುದಾದಷ್ಟು ಬೃಹತ್ ಮೆಟ್ಟಿಲುಗಳನ್ನು ನೋಡುವುದು ಸಹ ಒಂದು ವಿಶಿಷ್ಟ ಅನುಭವವೇ ಸರಿ.

ಸ್ಮಾರಕ ದರ್ಶನ 4; ಐತಿಹಾಸಿಕ ಉಪಲಿ ಗೋಪುರದಲ್ಲಿ ವಿಜಯಪುರ ನೋಟ ಬಲು ಚೆಂದ
ಸ್ಮಾರಕ ದರ್ಶನ 4; ಐತಿಹಾಸಿಕ ಉಪಲಿ ಗೋಪುರದಲ್ಲಿ ವಿಜಯಪುರ ನೋಟ ಬಲು ಚೆಂದ

Vijayapura News: ವಿಜಯಪುರದಲ್ಲಿ ಐತಿಹಾಸಿಕ ಉಪಲಿ ಬುರ್ಜ್‌ ಒಂದು ವಿಭಿನ್ನ ಹಾಗೂ ವಿಶಿಷ್ಟ ಸ್ಮಾರಕ. ವೀಕ್ಷಣಾ ಗೋಪುರದಲ್ಲಿ ಇರುವ ತೋಪು ಸಹ ಅಷ್ಟೇ ವೈಶಿಷ್ಟ್ಯತೆಯಿಂದ ಕೂಡಿದೆ. ಹರಸಾಹಸ ಮಾಡಿ ದೊಡ್ಡ ದೊಡ್ಡ ಮೆಟ್ಟಿಲುಗಳನ್ನು ಹತ್ತಿ ವೀಕ್ಷಣಾ ಗೋಪುರ ತಲುಪಿದರೆ ವಿಜಯಪುರ ವಿಹಂಗಮ ನೋಟ ದರ್ಶನವಾಗುತ್ತದೆ.

ವಿಜಯಪುರ ನಗರದ ಸ್ಪಷ್ಟವಾದ ನೋಟ ಈ ಉಪಲಿ ಬುರುಜ್‌ನಿಂದ ಕಣ್ಣಿಗೆ ಬೀಳುತ್ತದೆ. ಬೃಹತ್ ವೀಕ್ಷಣಾ ಗೋಪುರದಲ್ಲಿ ವಿಜಯಪುರ ನೋಡುವುದೇ ಒಂದು ಹಬ್ಬ. ಒಂದೆಡೆ ಇಬ್ರಾಹಿಂ ರೋಜಾ, ಇನ್ನೊಂದೆಡೆ ಗೋಳಗುಮ್ಮಟ, ಜಾಮೀಯಾ ಮಸೀದಿ ಈಗ ಅತ್ಯಾಧುನಿಕ ಕಟ್ಟಡಗಳು ಹಾಗೂ ಮೊಬೈಲ್ ಟವರ್‌ಗಳು ಗೋಚರಿಸುವುದುಂಟು. ಒಂದೇ ಕಡೆ ನಿಂತು ಸ್ಮಾರಕಗಳನ್ನು ನೋಡುವ ಅವಕಾಶವನ್ನು ಉಪಲಿ ಬುರುಜ್ ಒದಗಿಸುತ್ತದೆ.

ಐತಿಹಾಸಿಕ ಉಪಲಿ ಬುರುಜ್ ಕಟ್ಟಡ ತಲುಪಲು ದೊಡ್ಡ ದೊಡ್ಡ ಮೆಟ್ಟಿಲುಗಳಿವೆ. ಹತ್ತಾರು ಜನರು ಏಕಕಾಲಕ್ಕೆ ಹತ್ತಬಹುದಾದಷ್ಟು ಬೃಹತ್ ಮೆಟ್ಟಿಲುಗಳನ್ನು ನೋಡುವುದು ಸಹ ಒಂದು ವಿಶಿಷ್ಟ ಅನುಭವವೇ ಸರಿ.

ಉಪಲಿ ಬುರುಜ್ ಎಂಬ ಹೆಸರು ಸಹ ರೋಚಕ. ಉಪರಿ ಬುರುಜ್ ಆಗಿದ್ದು, ಎತ್ತರ (ಉಪರಿ) ಇರುವ ಕಾರಣಕ್ಕೆ ಈ ಹೆಸರು ಬಂದಿತು ಎಂದು ಅನೇಕರು ವಾದಿಸಿದರೆ, ಇನ್ನೂ ಅನೇಕರು ಅಲ್ಲಿ ಮೊದಲು ಬೆರಣಿಗಳನ್ನು ಅಂಟಿಸುತ್ತಿದ್ದರು. ಬೆರಣಿ ಎಂದರೆ ಉಪಲಿ, ಹೀಗಾಗಿ ಉಪಲಿ ಬುರುಜ್ ಆಯಿತು ಎಂದು ಹೇಳುತ್ತಾರೆ. ಐತಿಹಾಸಿಕವಾಗಿ ಇದರ ಹೆಸರು ಹೈದರ್ ಬುರುಜ್. ಹೈದರ್ ಖಾನ್ ಎಂಬುವವರು ಈ ವೀಕ್ಷಣಾ ಗೋಪುರದ ನಿರ್ಮಾತೃ.

ಐತಿಹಾಸಿಕ ಹಿನ್ನೆಲೆ

ಬುರುಜ್‌ನ ಗೋಡೆಯಲ್ಲಿ ಸ್ಥಿರವಾಗಿರುವ ಶಾಸನದಲ್ಲಿ ಹೇಳಿರುವಂತೆ, ಇಬ್ರಾಹಿಂ ಆದಿಲ್ ಷಾ (II) ಅಡಿಯಲ್ಲಿ ಕಮಾಂಡರ್- ಇನ್- ಚೀಫ್ ಆಗಿದ್ದ ಹೈದರ್ ಖಾನ್ ಇದನ್ನು 1584 ರಲ್ಲಿ ನಿರ್ಮಿಸಿದರು. ಸುಮಾರು 80 ಅಡಿಗೂ ಹೆಚ್ಚು (24 ಮೀ.) ಎತ್ತರದ ಈ ಭವ್ಯವಾದ ಗೋಪುರಕ್ಕೆ ಮೇಲಕ್ಕೆ ಹೋಗಲು ಸುರುಳಿಯಾಕಾರದ ಮೆಟ್ಟಿಲನ್ನು ಒದಗಿಸಲಾಗಿದೆ. ಮೇಲಿನಿಂದ ನಗರದ ಸುಂದರ ನೋಟವನ್ನು ಪಡೆಯಬಹುದು ಮತ್ತು ಪಶ್ಚಿಮ ಮತ್ತು ಉತ್ತರದ ಭೂಮಿಯನ್ನು ದೂರದವರೆಗೆ ವೀಕ್ಷಿಸಬಹುದು.

ಇದು ಒಂದು ಶ್ರೇಷ್ಠತೆಯ ಮೇಲೆ ನೆಲೆಗೊಂಡಿರುವುದರಿಂದ, ಗೋಲ್ ಗುಂಬಜ್ ಜೊತೆಗೆ ಯಾವುದೇ ಬಿಂದುವಿನಿಂದ ದೂರದಿಂದ ಇದನ್ನು ನೋಡಬಹುದು. ಮೇಲ್ಭಾಗದಲ್ಲಿ, ಯುದ್ಧ ಶಸ್ತ್ರಾಸ್ತ್ರಗಳನ್ನು ಇರಿಸಲು ಸಾಕಷ್ಟು ಸ್ಥಳಾವಕಾಶವೂ ಇದೆ. ಬೃಹತ್ ತೋಪುಗಳ ದರ್ಶನವೂ ಸಾಧ್ಯವಾಗಲಿದ್ದು, 22 ಟನ್ ಭಾರದ ಬೃಹತ್ ತೋಪು ಸಹ ಇಲ್ಲಿ ನೋಡಬಹುದಾಗಿದೆ. ಇಷ್ಟೊಂದು ದೊಡ್ಡ ತೋಪುಗಳನ್ನು ಈ ದೊಡ್ಡ ಕಟ್ಟಡದಲ್ಲಿ ಹೇಗೆ ಪ್ರತಿಷ್ಠಾಪಿಸಲಾಯಿತು ಎನ್ನುವುದೇ ಒಂದು ಅದ್ಭುತ ಹಾಗೂ ಕೌತುಕ.

ವೀಕ್ಷಣಾ ಗೋಪುರುಗಳನ್ನು ರಾಜರು ನಿರ್ಮಿಸುವುದು ಸಹಜ, ಆದರೆ ಈ ವೀಕ್ಷಣಾ ಗೋಪುರ ವೈಶಿಷ್ಟ್ಯತೆಯಿಂದ ಕೂಡಿದೆ. ಕೇವಲ ವೀಕ್ಷಣಾ ಗೋಪುರವಾಗದೇ ವಿಜಯಪುರದ ಭವ್ಯ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ. ಇಲ್ಲಿ ಇರಿಸಲಾಗಿರುವ ಬೃಹತ್ ತೋಪುಗಳು ಇತಿಹಾಸದ ಕಥೆಯನ್ನು ಹೇಳುತ್ತಿವೆ. ಈ ಸ್ಮಾರಕದ ವೈಭವವನ್ನು ಇನ್ನಷ್ಟೂ ಪ್ರಸಾರಪಡಿಸುವ ಅಗತ್ಯವಿದೆ ಎನ್ನುತ್ತಾರೆ ಸಂಶೋಧಕ ಡಾ.ಎ.ಎಲ್. ನಾಗೂರ.

ವರದಿ; ಸಮೀವುಲ್ಲ ಉಸ್ತಾದ, ವಿಜಯಪುರ

Whats_app_banner