Vijayapura News: ಏರುತ್ತಿರುವ ಬೆಲೆ, ಏರುಪೇರಾಗುತ್ತಿರುವ ಮನೆ ಬಜೆಟ್; ಜೀವನ ಸಾಗಿಸಲು ಹೋರಾಡುತ್ತಿರುವ ಜನಸಾಮಾನ್ಯರು
ದಿನಬಳಕೆ ವಸ್ತುಗಳ ಗಗನಮುಖಿಯಾಗುತ್ತಿದೆ. ಹಾಲು, ತರಕಾರಿ ದಿನಸಿ ವಸ್ತುಗಳಿಗೆ ಬಜೆಟ್ ಹೊಂದಿಸುವಲ್ಲಿ ಬಡಜನತೆ ಹೈರಾಣವಾಗುತ್ತಿದೆ. ಬೆಲೆ ಏರಿಕೆಯ ಸುಳಿಯಲ್ಲಿ ಸಿಲುಕಿರುವ ಜನಸಾಮಾನ್ಯರ ಬದುಕು.
ವಿಜಯಪುರ: ಹಾಲು ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿದೆ, ತಿಂಗಳ ಸಂಬಳ ಆಧರಿಸಿ ಮನೆಯಲ್ಲಿ ಪ್ರತಿ ತಿಂಗಳು ಪದಾರ್ಥಗಳ ಖರೀದಿಯ ಮನೆ ಬಜೆಟ್ ಏರು ಪೇರಾಗಿದ್ದು ಜನ ಸಾಮಾನ್ಯರು ತತ್ತರಿಸುವಂತಾಗಿದೆ.
ಮಧ್ಯಮ ಹಾಗೂ ಬಡ ವರ್ಗದ ಜನತೆ ತಿಂಗಳಿಗೆ ಹಾಲು, ತರಕಾರಿ, ಕಿರಾಣಿ ಮೊದಲಾದವುಗಳಿಗಾಗಿ ಬಜೆಟ್ ಹೊಂದಿಸುವುದು ರೂಡಿ, ಬರುವ ಸಂಬಳದಲ್ಲಿ ಈ ಬಜೆಟ್ ಹಣ ಮೀಸಲಿಟ್ಟು ಉಳಿದ ಹಣ ಉಳಿದ ಕಾರ್ಯಗಳಿಗೆ ಮೀಸಲು.
ಆದರೆ ಈ ಬಜೆಟ್ ಏರುಪೇರಾಗಿದ್ದು, ಸಾವಿರಾರು ರೂ. ಏರಿಕೆ ಆಗಿರುವುದರಿಂದ ಮಧ್ಯಮ ಹಾಗೂ ಬಡ ಜನತೆ ತೊಂದರೆ ಸುಳಿಯಲ್ಲಿ ಸಿಲುಕುವಂತಾಗಿದೆ. ಒಂದೊಂದು ಪದಾರ್ಥಗಳ ಬೆಲೆ ಒಂದೇ ಒಂದು ರೂ. ಏರಿಕೆಯಾದರೂ ಸಹ ಬಜೆಟ್ ಸರಿದೂಗಿಸುವುದು ಕಷ್ಟ, ಈಗ ಹಾಲು ಮೊದಲಾದ ಪದಾರ್ಥಗಳ ಬೆಲೆ ನಾಗಾಲೋಟದಿಂದ ಸಾಗಿದ್ದು ಜನತೆ ಬೆಲೆ ಏರಿಕೆ ಬಿಸಿ ಅನುಭವಿಸುವಂತಾಗಿದೆ.
ಹಾಲಿನ ಬೆಲೆ ಏರಿಕೆ
ಹಾಲಿನ ಬೆಲೆ ಏರಿಕೆ ಜನಸಾಮಾನ್ಯರಿಗೆ ದೊಡ್ಡ ಹೊರೆ ಸೃಷ್ಟಿಸಿದ್ದು ಮನೆ ಬಜೆಟ್ ದೊಡ್ಡ ಏರುಪೇರಾಗುವಂತೆ ಮಾಡಿದೆ. ಈ ಹಿಂದೆ ನಂದಿನಿ ಹಾಲಿನ ಬೆಲೆ ಪ್ರತಿ ಲೀಟರ್ ಗೆ 39 ರೂ. ಇದ್ದ ನಂದಿನಿ ಹಾಲು ಈಗ 3 ರೂ. ಏರಿಕೆಯಾಗಿ 41 ರೂ.ಗೆ ತಲುಪಿದೆ, ಅಂದರೆ ಈ ಹಿಂದೆ ತಿಂಗಳಿಗೆ ಹಾಲಿಗೆ 1209 ಖರ್ಚಾಗುತ್ತಿತ್ತು, ಆದರೆ ಈಗ ಅದಕ್ಕೆ 1302 ರೂ. ಬೇಕು, ಅಂದರೆ ಬರೀ ಹಾಲಿಗೆ ತಿಂಗಳಿಗೆ ನೂರು ರೂ. ಹೆಚ್ಚಾಗಿರುವುದರಿಂದ ತಿಂಗಳ ಬಜೆಟ್ ಗೆ 100 ರೂ. ಹೆಚ್ಚುವರಿ ಹೊರೆ. ಇದು ಕೇವಲ ಹಾಲಿನ ಉದಾಹರಣೆ ಮಾತ್ರ.
ತರಕಾರಿಯೂ ದುಬಾರಿ
ಏತನ್ಮಧ್ಯೆ ಪ್ರತಿ ದಿನವೂ ಬೇಕಾಗುವ ತರಕಾರಿ ಬೆಲೆ ಸಹ ಏರಿಕೆಯಾಗಿದೆ. ಈ ಹಿಂದೆ ಕಾಲು ಕೆಜಿ ಆಲೂಗೆಡ್ಡೆ 10 ರಿಂದ 15 ರೂ.ಗೆ ಸಿಗುತ್ತಿತ್ತು, ಆದರೆ ಈಗ ಅದರ ಬೆಲೆ 25 ರಿಂದ 30 ತಲುಪಿದೆ, ಟಮಾಟಿಯಂತೂ ಕೆಜಿ ಗೆ 150 ರೂ. ಗಡಿ ದಾಟಿದೆ, ಅನೇಕರು ಟಮಾಟಿ ಬದಲಿಗೆ ಹುಣಸೆ ಹಣ್ಣು ಬಳಕೆಗೆ ಮುಂದಾಗಿದ್ದಾರೆ. ಕೋತ್ತಂಬರಿ ಐದು ರೂ., ಮೆಂತೆಪಲ್ಲೆ ಒಂದು ಕಟ್ಟಿಗೆ 10 ರೂ. ತಲುಪಿದ್ದು ಬಡಜನತೆ ತರಕಾರಿ ಖರೀದಿಗೆ ಸಾವಿರಾರು ರೂ. ಹೊಂದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗ ಬೆಲೆಗಳು ಹೆಚ್ಚಾಗಿವೆ, ಮೊದಲು ಒಂದು 200 ರೂ. ಇಟ್ಕೊಂಡು ಹೋದರ ಎಲ್ಲಾ ತರಕಾರಿ ಸಿಗ್ತತ್ರಿ, ಈಗ 500 ರೂ. ನೋಟ ಇಟ್ಕೊಂಡು ಹೋದರೂ ಪೂರ್ತಿ ತರಕಾರಿ ಸಿಗಲ್ಲ, ವಾರಕ್ಕೆ ಸಾವಿರ ರೂ. ಬೇಕರಿ, ತರಕಾರಿಗೆ ಸಾವಿರ ರೂ. ಕೊಡಬೇಕು ಅಂದರ ತಿಂಗಳಿಗೆ ಐದು ಸಾವಿರ ತರಕಾರಿಗೆ ಬೇಕಾಗ್ತದರೀ ಬಡವರು ಎಲ್ಲಿಂದ ತರಬೇಕ್ರೀ... ಪಗಾರ ಇರೋದೆ ೧೦ ಸಾವಿರ ರೀ... ಎಂದು ಅನೇಕರು ಅಳಲು ತೋಡಿಕೊಳ್ಳುವುದು ಸಾಮಾನ್ಯವಾಗಿದೆ.
(ವರದಿ: ಸಮೀವುಲ್ಲಾ ಉಸ್ತಾದ)