ಚಾಮರಾಜಪೇಟೆಯಲ್ಲಿ ಸಚಿವ ಜಮೀರ್ ಅಹ್ಮದ್ ಎದುರೇ ಸಂಸ್ಕೃತಿಯ ಅಣಕ; ತುಳುನಾಡ ದೈವಗಳನ್ನು ಅವಮಾನಿಸಿದ ಪಂಜುರ್ಲಿ ದೈವ ವೇಷಧಾರಿಗಳು, ವೈರಲ್ ವಿಡಿಯೋ
Viral Video: ಚಾಮರಾಜಪೇಟೆಯಲ್ಲಿ ಸಚಿವ ಜಮೀರ್ ಅಹ್ಮದ್ ಎದುರೇ ಸಂಸ್ಕೃತಿಯ ಅಣಕ ನಡೆದಿರುವ ಘಟನೆ ಈಗ ಟೀಕೆಗೆ ಒಳಗಾಗಿದೆ. ತುಳುನಾಡ ದೈವಗಳನ್ನು ಅವಮಾನಿಸಿದ ಪಂಜುರ್ಲಿ ದೈವ ವೇಷಧಾರಿಗಳ ವೈರಲ್ ವಿಡಿಯೋಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ತುಳುನಾಡ ಸಂಸ್ಕೃತಿ, ಪರಂಪರೆ ಉಳಿಸುವಂತಹ ತುರ್ತು ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
ಬೆಂಗಳೂರು: ಚಾಮರಾಜಪೇಟೆಯಲ್ಲಿ ಇತ್ತೀಛೆಗೆ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಅವರನ್ನು ದೈವ ವೇಷಧಾರಿಗಳು ವೇದಿಕೆ ಕರೆತರುವ ಸನ್ನಿವೇಶದ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಒಳಗಾಗಿದೆ. ಪಂಜುರ್ಲಿ ದೈವ ವೇಷಧಾರಿಗಳು ತುಳುನಾಡಿನ ದೈವಗಳಿಗೆ, ದೈವಾರಾಧನೆಗೆ ಅವಮಾನ ಮಾಡಿದ್ದಾರೆ. ಕನ್ನಡ ನಾಡಿನ ಸಂಸ್ಕೃತಿ, ಪರಂಪರೆಯನ್ನು ಎತ್ತಿಕೊಂಡಾಡಬೇಕಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ, ಭಕ್ತಿ ಪರಂಪರೆಯನ್ನು ಅಣಕಿಸುವಂತಹ ಪ್ರದರ್ಶನ ನೀಡುವ ಮೂಲಕ ಕಲಾವಿದರು ಮತ್ತು ಕಾರ್ಯಕ್ರಮ ಆಯೋಜಕರು ಕೆಟ್ಟದಾರಿ ನಡೆದುಕೊಂಡಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಸಚಿವ ಜಮೀರ್ ಅಹ್ಮದ್ ಅವರು ನವೆಂಬರ್ 30 ರಂದೇ ಈ ವಿಡಿಯೋ ಶೇರ್ ಮಾಡಿದ್ದಾರೆ.
ಸಚಿವ ಜಮೀರ್ ಅಹ್ಮದ್ ಅವರನ್ನು ವೇದಿಕೆ ಕರೆತಂದ ದೈವ ವೇಷಧಾರಿಗಳು- ವಿಡಿಯೋ
ಸಚಿವ ಜಮೀರ್ ಅಹ್ಮದ್ ಅವರು ನವೆಂಬರ್ 30 ರಂದು ತಮ್ಮ ಕ್ಷೇತ್ರ ಚಾಮರಾಜಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ವಿಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಅವರನ್ನು ಹೀರೋ ರೀತಿ ಬಿಂಬಿಸಲಾಗಿದೆ. ದೈವ ವೇಷಧಾರಿಯೊಬ್ಬರು ಜಮೀರ್ ಅಹ್ಮದ್ ಅವರು ಇರುವಲ್ಲಿಗೆ ಹೋಗಿ ಅವರ ಕೈ ಹಿಡಿದು ವೇದಿಕೆ ಕರೆ ತಂದ ಬಳಿಕ ವೇದಿಕೆ ಮೇಲೆ ಇದ್ದ ಇನ್ನೊಬ್ಬ ದೈವ ವೇಷಧಾರಿ ಅವರ ಜತೆಯಾಗಿರುವ ದೃಶ್ಯವಿದೆ. ಇಬ್ಬರು ದೈವ ವೇಷಧಾರಿಗಳ ನಡುವೆ ಜಮೀರ್ ಅಹ್ಮದ್ ಇದ್ದು, ಅವರ ಎರಡೂ ಕೈಗಳನ್ನು ಹಿಡಿದು ಮೇಲೆತ್ತುವ ದೃಶ್ಯ ಗಮನಸೆಳೆದಿದೆ. ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾ ಹಾಡು ಕೂಡ ಕೇಳಿಸುತ್ತಿದ್ದು, ಕಾಂತಾರ ಸಿನಿಮಾದ ದೃಶ್ಯಗಳನ್ನು ನೆನಪಿಸುವಂತೆ ಇತ್ತು.
ತುಳುನಾಡ ದೈವಗಳನ್ನು ಅವಮಾನಿಸಿದ ಪಂಜುರ್ಲಿ ದೈವ ವೇಷಧಾರಿಗಳು; ಟೀಕೆ
ಕಾಂತಾರ ಸಿನಿಮಾ ಹಾಡು ಬಳಸಿಕೊಂಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಣಕವಾಡುವಂತೆ ದೈವ ವೇಷಧಾರಿಗಳು ನರ್ತಿಸಿರುವುದು ತುಳುನಾಡಿನ ಸಂಸ್ಕೃತಿಗೆ ಅಪಚಾರವೆಸಗಿದಂತೆ ಎಂಬ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ತುಳು ಹಿಸ್ಟರಿ ಖಾತೆಯಲ್ಲಿ ಕಿರುಟಿಪ್ಪಣಿ ಸಹಿತ ಟೀಕೆ ವ್ಯಕ್ತವಾಗಿದೆ.
“ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ತುರ್ತು ಕ್ರಮಕ್ಕೆ ಆಗ್ರಹ”
ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ದೈವ ನಂಬಿಕೆಗಳ ಅಗೌರವ ಮತ್ತು ಅಪಹಾಸ್ಯವನ್ನು ನೋಡುತ್ತಿರುವುದು ಅತ್ಯಂತ ನಿರಾಶಾದಾಯಕ ಬೆಳವಣಿಗೆ. ಸಚಿವ ಜಮೀರ್ ಅಹ್ಮದ್ ಅವರ ಇತ್ತೀಚಿನ ನಡೆಗಳು ನಮಗೆ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ತುರ್ತು ಅಗತ್ಯವನ್ನು ನೆನಪಿಸುತ್ತದೆ. ದೈವಾರಾಧನೆಯು ತುಳುನಾಡಿನ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಪವಿತ್ರ ಸಂಪ್ರದಾಯವಾಗಿದೆ. ಇದು ನಮ್ಮ ಶ್ರೀಮಂತ ಪರಂಪರೆಯ ಸಂಕೇತವೂ ಹೌದು. ನಮ್ಮ ಸಮುದಾಯದ ಮೌಲ್ಯಗಳು ಮತ್ತು ನಂಬಿಕೆಗಳ ಪ್ರತಿಬಿಂಬವಾಗಿದೆ. ಆದಾಗ್ಯೂ, ಈ ಸಂಪ್ರದಾಯದ ಬಗ್ಗೆ ತಿಳಿವಳಿಕೆ ಮತ್ತು ಗೌರವದ ಕೊರತೆಯ ಕಾರಣ, ಈ ರೀತಿಯ ಅನುಕರಣೆ ಮತ್ತು ಅಪಹಾಸ್ಯಕ್ಕೆ ಕಾರಣವಾಗಿದೆ ಎಂದು ತುಳು ಹಿಸ್ಟರಿ ಖಾತೆಯಲ್ಲಿ ಹೇಳಲಾಗಿದೆ.
ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಮತ್ತು ಉತ್ತೇಜಿಸಲು ನಾವು ತಕ್ಷಣದ ಕ್ರಮವನ್ನು ತೆಗೆದುಕೊಳ್ಳಬೇಕು. ತುಳುನಾಡಿನ ಸಾಂಸ್ಕೃತಿಕ ಸಂಪ್ರದಾಯಗಳನ್ನು ಉಳಿಸಲು ಮತ್ತು ಉತ್ತೇಜಿಸಲು ಸರ್ಕಾರ ತುಳು ಬುಡಕಟ್ಟು ಸಾಂಸ್ಕೃತಿಕ ಮಂಡಳಿಯನ್ನು (ಟಿಟಿಸಿಬಿ) ಸ್ಥಾಪಿಸಬೇಕೆಂದು ಒತ್ತಾಯಿಸುತ್ತೇವೆ. ಈ ಮಂಡಳಿಯು ಸಮುದಾಯವು ಒಗ್ಗೂಡಲು ಮತ್ತು ನಮ್ಮ ಸಂಸ್ಕೃತಿಯ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ಇದಲ್ಲದೆ, ತುಳು ಜನರ ನಂಬಿಕೆ ಮತ್ತು ಆಚರಣೆಗಳನ್ನು ಕಾಪಾಡಲು "ದೈವರಾಧನೆ ಸಂರಕ್ಷಣಾ ಕಾಯಿದೆ" ಜಾರಿಗೊಳಿಸಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ. ಈ ಕಾಯಿದೆಯು ನಮ್ಮ ಸಂಸ್ಕೃತಿ ಸಂಪ್ರದಾಯಗಳ ರಕ್ಷಣೆಗಾಗಿ ಕಾನೂನು ಚೌಕಟ್ಟನ್ನು ಒದಗಿಸುತ್ತದೆ ಮತ್ತು ಅವರಿಗೆ ಅರ್ಹವಾದ ಗೌರವ ಮತ್ತು ಘನತೆಯಿಂದ ಅವರನ್ನು ನಡೆಸಿಕೊಳ್ಳುವುದನ್ನು ಖಚಿತಪಡಿಸುತ್ತದೆ ಎಂದು ತುಳು ಹಿಸ್ಟರಿ ಖಾತೆಯಲ್ಲಿ ಹೇಳಲಾಗಿದ್ದು, ಸರ್ಕಾರವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಗಿದೆ.
1) ತುಳುನಾಡಿನ ಸಂಸ್ಕೃತಿ ಸಂಪ್ರದಾಯಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ತುಳು ಬುಡಕಟ್ಟು ಸಾಂಸ್ಕೃತಿಕ ಮಂಡಳಿ (ಟಿಟಿಸಿಬಿ) ಸ್ಥಾಪಿಸಬೇಕು.
2) ತುಳು ಜನರ ನಂಬಿಕೆ ಮತ್ತು ಆಚರಣೆಗಳನ್ನು ಕಾಪಾಡಲು "ದೈವರಾಧನೆ ಸಂರಕ್ಷಣಾ ಕಾಯಿದೆ"ಯನ್ನು ಜಾರಿಗೊಳಿಸಬೇಕು.
3) ತುಳು ಸಂಸ್ಕೃತಿಯ ಪ್ರಚಾರ ಮತ್ತು ಸಂರಕ್ಷಣೆಗಾಗಿ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸಬೇಕು.