Eid ul Adha: ಚಂದ್ರ ದರ್ಶನದ ಮೂಲಕ ಬಕ್ರೀದ್‌ ದಿನ ನಿಶ್ಚಯಿಸುವ ಪ್ರಕ್ರಿಯೆ ಹೀಗಿರುತ್ತದೆ
ಕನ್ನಡ ಸುದ್ದಿ  /  ಜೀವನಶೈಲಿ  /  Eid Ul Adha: ಚಂದ್ರ ದರ್ಶನದ ಮೂಲಕ ಬಕ್ರೀದ್‌ ದಿನ ನಿಶ್ಚಯಿಸುವ ಪ್ರಕ್ರಿಯೆ ಹೀಗಿರುತ್ತದೆ

Eid ul Adha: ಚಂದ್ರ ದರ್ಶನದ ಮೂಲಕ ಬಕ್ರೀದ್‌ ದಿನ ನಿಶ್ಚಯಿಸುವ ಪ್ರಕ್ರಿಯೆ ಹೀಗಿರುತ್ತದೆ

Eid ul Adha: ತಂತ್ರಜ್ಞಾನ ಬೆಳೆದ ಹಾಗೆ ಚಂದ್ರ ದರ್ಶನದ ಪ್ರಕ್ರಿಯೆ ಸ್ವಲ್ಪ ಸುಲಭವಾಗಿದೆ. ಪ್ರಸ್ತುತ ದಿನಗಳಲ್ಲಿ ವೈಜ್ಞಾನಿಕ ಟೆಲಿಸ್ಕೋಪ್ ಬಳಸಿ ಚಂದ್ರನ ವೀಕ್ಷಣೆ ಮಾಡಲಾಗುತ್ತದೆ. ದಕ್ಷಿಣ ಭಾರತದಲ್ಲಿ ಕೇರಳದ ಕೋಝಿಕ್ಕೋಡ್ ನ ಕಡಲ ಕಿನಾರೆ ಚಂದ್ರ ಗೋಚರವಾಗಿರುವುದನ್ನು ನೋಡಿ ಖಚಿತಪಡಿಸುವ ಒಂದು ಪ್ರಮುಖ ಜಾಗವಾಗಿದೆ.

ಬಕ್ರೀದ್‌ನ ದಿನ ನಿಶ್ಚಯಿಸುವ ಪ್ರಕ್ರಿಯೆ ಹೀಗಿರುತ್ತದೆ
ಬಕ್ರೀದ್‌ನ ದಿನ ನಿಶ್ಚಯಿಸುವ ಪ್ರಕ್ರಿಯೆ ಹೀಗಿರುತ್ತದೆ (PTI)

ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್‌ (Bakrid) ಅಥವಾ ಈದುಲ್ ಅದ್ಹಾ (Eid-ul-Adha) ವನ್ನು ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ ಈ ತಿಂಗಳ 29ರಂದು ಆಚರಿಸುವುದು ಬಹುತೇಕ ಖಚಿತವಾಗಿದೆ. ಬಕ್ರೀದ್‌ ಹಬ್ಬವನ್ನು ಸಾಂಪ್ರದಾಯಿಕ ಚಂದ್ರ ದರ್ಶನ ವಿಧಾನದಲ್ಲಿ ದಿನ ಖಚಿತವಾದ ಬಳಿಕವೇ ಆಚರಿಸಲಾಗುತ್ತದೆ. ಹಾಗಿದ್ದರೆ, ಚಂದ್ರ ದರ್ಶನದ ಮೂಲಕ ಬಕ್ರೀದ್‌ನ ದಿನ ನಿರ್ಧರಿಸುವ ಪ್ರಕ್ರಿಯೆ ಹೇಗಿರುತ್ತದೆ ಎಂಬುವುದನ್ನು ತಿಳಿದುಕೊಳ್ಳೋಣ.

ಸಾಂಪ್ರದಾಯಿಕ ವಿಧಾನದ ಪ್ರಕಾರ, ಮುಸ್ಲಿಂ ಸಮುದಾಯದ ಜನರು ಬಕ್ರೀದ್‌ನ ಚಂದ್ರದರ್ಶನ ಖಚಿತಪಡಿಸಲು, ವಿಶ್ವಾಸಾರ್ಹ ಮೂಲಗಳನ್ನೇ ಅವಲಂಬಿಸುತ್ತಾರೆ. ಸ್ಥಳೀಯ ಧಾರ್ಮಿಕ ಮುಖಂಡರು (ಖಾಝಿಗಳು) ಅಥವಾ ಸಮಿತಿಗಳು ಈ ಚಂದ್ರ ದರ್ಶನದ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಅರೇಬಿಕ್ ಕ್ಯಾಲೆಂಡರ್‌ನ ಧುಲ್ ಹಿಜ್ಜಾ ತಿಂಗಳ 9ನೇ ತಾರೀಕಿನಂದು ಸೂರ್ಯಾಸ್ತವಾದ ಸ್ವಲ್ಪ ಸಮಯದ ನಂತರ ಚಂದ್ರ ದರ್ಶನ ಆಗಿರುವುದರ ಬಗ್ಗೆ ಖಚಿತಪಡಿಸಲು ನುರಿತ ವೀಕ್ಷಕರನ್ನು ನೇಮಿಸಲಾಗುತ್ತದೆ.

ಈ ಅನುಭವಿ ವೀಕ್ಷಕರು ಚಂದ್ರ ಕಂಡಿರುವುದನ್ನು ದೃಢೀಕರಿಸಿ, ಧಾರ್ಮಿಕ ಮುಖಂಡರು ಅಥವಾ ಸಮಿತಿಗಳಿಗೆ ತಿಳಿಸುತ್ತಾರೆ. ಈ ಮೂಲಕ ಬಕ್ರೀದ್ ಹಬ್ಬವನ್ನು ಘೋಷಿಸಲಾಗುತ್ತದೆ. ಒಂದು ವೇಳೆ ನಿಶ್ಚಿತ ದಿನದಂದು ಚಂದ್ರ ಕಾಣಿಸದಿದ್ದರೆ, ಬಕ್ರೀದ್ ಹಬ್ಬ ಖಚಿತವಾಗಿಲ್ಲ ಎಂದರ್ಥ. ಹಾಗಾಗಿ, ಮರುದಿನ ಸಂಜೆಯ ಪ್ರಾರ್ಥನೆ (ಮಗ್ರಿಬ್ ನಮಾಜ್‌) ಬಳಿಕ ಮತ್ತೆ ಚಂದ್ರನ ದರ್ಶನ ಪ್ರಕ್ರಿಯೆ ಪುನರಾವರ್ತಿಸಲಾಗುತ್ತದೆ. ಹಿಂದಿನ ದಿನದ ವೀಕ್ಷಣೆಯಲ್ಲಿ ಚಂದ್ರ ಕಂಡು ಬರದಿದ್ದರೆ ಎರಡನೇ ದಿನ ಕಾಣುವುದು ಖಚಿತ.

ಚಂದ್ರ ದರ್ಶನವಾದರೆ, ಈ ಬಗ್ಗೆ ಪ್ರತಿಯೊಂದು ಭಾಗದ ಮಸೀದಿಗಳಿಗೆ ಮಾಹಿತಿ ವರ್ಗಾವಣೆಯಾಗುತ್ತದೆ. ಅಲ್ಲಿಂದ ಪ್ರತಿ ಮನೆಗಳಿಗೆ ಮಾಹಿತಿ ತಲುಪುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಸಕ್ರಿಯವಾಗಿರುವುದರಿಂದ ವಾಟ್ಸಾಪ್‌ ಅಥವಾ ಫೋನ್‌ ಮೂಲಕ ಇನ್ನೂ ವೇಗವಾಗಿ ಪ್ರತಿ ಮುಸ್ಲಿಂ ಕುಟುಂಬದ ಮನೆಗಳಿಗೆ ಹಬ್ಬದ ಬಗ್ಗೆ ಮಾಹಿತಿ ದೊರೆಯುತ್ತದೆ.

ಕೇರಳದ ಕೋಝಿಕ್ಕೋಡ್‌ನಲ್ಲಿದೆ ಚಂದ್ರದರ್ಶನದ ಸ್ಥಳ

ತಂತ್ರಜ್ಞಾನ ಬೆಳೆದ ಹಾಗೆ ಚಂದ್ರ ದರ್ಶನದ ಪ್ರಕ್ರಿಯೆ ಸ್ವಲ್ಪ ಸುಲಭವಾಗಿದೆ. ಪ್ರಸ್ತುತ ದಿನಗಳಲ್ಲಿ ವೈಜ್ಞಾನಿಕ ಟೆಲಿಸ್ಕೋಪ್ ಬಳಸಿ ಚಂದ್ರನ ವೀಕ್ಷಣೆ ಮಾಡಲಾಗುತ್ತದೆ. ದಕ್ಷಿಣ ಭಾರತದಲ್ಲಿ ಕೇರಳದ ಕೋಝಿಕ್ಕೋಡ್‌ನ ಕಡಲ ಕಿನಾರೆ ಚಂದ್ರ ಗೋಚರವಾಗಿರುವುದನ್ನು ನೋಡಿ ಖಚಿತಪಡಿಸುವ ಒಂದು ಪ್ರಮುಖ ಜಾಗವಾಗಿದೆ. ಚಂದ್ರನ ಗೋಚರತೆಯನ್ನು ನಿಖರವಾಗಿ ಊಹಿಸಲು ಖಗೋಳಶಾಸ್ತ್ರದ ಪ್ರಕಾರವಾಗಿ ಲೆಕ್ಕಾಚಾರ ಮತ್ತು ವೈಜ್ಞಾನಿಕ ಮಾಹಿತಿಯನ್ನು ಇತ್ತೀಚಿನ ದಿನಗಳಲ್ಲಿ ಅವಲಂಬಿಸಿದರೂ, ಅಂತಿಮವಾಗಿ ಸಾಂಪ್ರದಾಯಿಕ ಕ್ರಮಗಳೊಂದಿಗೆ ವೈಜ್ಞಾನಿಕ ಜ್ಞಾನವನ್ನು ಸಂಯೋಜಿಸಿ ಮುಂದುವರೆಯುವುದೇ ವಾಡಿಕೆ.

ಸಾಂಪ್ರದಾಯಿಕ ವಿಧಾನಕ್ಕೆ ಮಹತ್ವ

ಧಾರ್ಮಿಕ ಗುರುಗಳು ವೈಜ್ಞಾನಿಕ ವಿಧಾನ ಅನುಸರಿಸಿದರೂ, ಸಾಂಪ್ರದಾಯಿಕ ವೀಕ್ಷಣ ಪ್ರಕ್ರಿಯೆಗೆ ಆದ್ಯತೆ ಕೊಟ್ಟೇ ಕೊಡುತ್ತಾರೆ. ಆದರೆ ಭಿನ್ನ ಪ್ರದೇಶಗಳು ಅಥವಾ ಸಮುದಾಯಗಳು ಚಂದ್ರನ ವೀಕ್ಷಣೆಗೆ ವಿಭಿನ್ನ ವಿಧಾನಗಳು ಮತ್ತು ಮಾನದಂಡಗಳನ್ನು ಅನುಸರಿಸುತ್ತಾರೆ. ಮಾನದಂಡಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ.

ಜನರ ಇಚ್ಛೆ ಹಾಗೂ ಸ್ಥಳೀಯ ಧಾರ್ಮಿಕ ನಂಬಿಕೆ ಹಾಗೂ ಪದ್ಧತಿಯ ಅನುಸಾರವಾಗಿ ಕೆಲವು ಮುಸ್ಲಿಮರು ಚಂದ್ರ ದರ್ಶನಕ್ಕೆ ಸ್ಥಳೀಯ ಧಾರ್ಮಿಕ ಮುಖಂಡರನ್ನು ಅಥವಾ ಸಮಿತಿಗಳನ್ನು ಅವಲಂಬಿಸಿರುತ್ತಾರೆ. ಕೆಲವು ಕಡೆ ಜಾಗತಿಕ ಮಾನದಂಡವನ್ನೇ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಕೇರಳ, ತಮಿಳುನಾಡು, ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳ ಕೆಲ ಕಡೆಗಳಲ್ಲಿ ಒಂದು ರೀತಿಯ ಮಾನದಂಡ ಅನುಸರಿಸಿದರೆ, ಇನ್ನುಳಿದ ಪ್ರದೇಶಗಳಲ್ಲಿ ಮತ್ತೊಂದು ರೀತಿಯ ಮಾನದಂಡ ಅನುಸರಿಸಲಾಗುತ್ತದೆ. ಅಂತಿಮವಾಗಿ ಎಲ್ಲರೂ ಹಬ್ಬವನ್ನು ಖಚಿತ ಪಡಿಸುವುದು ಚಂದ್ರ ದರ್ಶನದ ಮೂಲಕವೇ ಆಗಿದೆ.

ಬಕ್ರೀದ್ ಅಥವಾ ಈದುಲ್ ಅದ್ಹಾ (Eid-ul-Adha) ಚಂದ್ರ ದರ್ಶನದ ಮಹತ್ವ

ಬಕ್ರೀದ್‌ ಅಥವಾ ಈದುಲ್ ಅದ್ಹಾದ ಚಂದ್ರನ ದರ್ಶನವು ಮುಸ್ಲಿಮರ ಪಾಲಿಗೆ ಅತ್ಯಂತ ಮಹತ್ವದ್ದು. ಬಕ್ರೀದ್ ಮಾತ್ರವಲ್ಲದೆ ರಂಜಾನ್ ಹಬ್ಬ (ಈದುಲ್ ಫಿತರ್) ಕೂಡ ಚಂದ್ರ ದರ್ಶನದ ಮೂಲಕವೇ ನಿಶ್ಚಯಿಸಲಾಗುತ್ತದೆ. ಈ ಪ್ರಕ್ರಿಯೆ ಪ್ರವಾದಿ ಮುಹಮ್ಮದರ ಕಾಲ (1,500 ವರ್ಷಗಳಿಂದ) ಅಥವಾ ಅದಕ್ಕಿಂತ ಮೊದಲು, ಇಸ್ಲಾಮಿನ ಆರಂಭದಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಹಿಂದಿನ ಕಾಲದಲ್ಲಿ ಕ್ಯಾಲೆಂಡರ್, ಗಡಿಯಾರ ಇಲ್ಲದ ಸಂದರ್ಭಗಳಲ್ಲಿ ಚಂದ್ರ, ಸೂರ್ಯನ ದರ್ಶನದ ಮೂಲಕವೇ ದಿನಾಂಕ ಮತ್ತು ಸಮಯ ನಿಶ್ಚಯ ಮಾಡುತ್ತಿದ್ದರು. ಈ ಹಿನ್ನೆಲೆಯಿಂದ ಚಂದ್ರ ದರ್ಶನದ ಸಂಪ್ರದಾಯ ಬಂದಿದೆ .

Whats_app_banner