ತಿಂಗಳಿಗೆ 1000 ರೂ ಉಳಿಸಿದ್ರೆ ಅದು 1 ಕೋಟಿ ರೂಪಾಯಿ ಆಗಲು ಎಷ್ಟು ವರ್ಷ ಬೇಕು, ಇದು ಮ್ಯೂಚುವಲ್ ಫಂಡ್ ಲೆಕ್ಕಾಚಾರ
ಕೋಟ್ಯಧಿಪತಿ ಆಗಬೇಕು ಎಂಬ ಕನಸು ಹಲವರದ್ದು. ದಶಕೋಟ್ಯಧಿಪತಿ, ಶತಕೋಟ್ಯಧಿಪತಿ ಅವೆಲ್ಲವೂ ಮುಂದಿನ ಹಂತಗಳು. ಒಮ್ಮೆಗೆ ಕೋಟಿ ರೂಪಾಯಿ ಉಳಿಸಿ ಬೆಳೆಸೋದು ಹೇಗೆ? ತಿಂಗಳಿಗೆ 1,000 ರೂಪಾಯಿ ಉಳಿಸಿದ್ರೆ ಅದು 1 ಕೋಟಿ ರೂಪಾಯಿ ಅಗಬೇಕು ಎಂದರೆ ಎಷ್ಟು ವರ್ಷ ಬೇಕಾಗಬಹುದು- ಹೀಗಿದೆ ಮ್ಯೂಚುವಲ್ ಫಂಡ್ ಲೆಕ್ಕಾಚಾರ ನೋಡಿ.
ಬ್ಯಾಂಕ್ ಬ್ಯಾಲೆನ್ಸ್ ಆಗಿ 1 ಕೋಟಿ ರೂಪಾಯಿ ಇರಬೇಕು ಎಂದು ಕನಸು ಕಾಣದವರು ಯಾರಿದ್ದಾರೆ ಹೇಳಿ. ಆದರೆ ಈ ಕನಸು ನನಸು ಮಾಡಬೇಕು ಅನ್ನೋದಾದರೆ ಉಳಿತಾಯ ಮಾಡಬೇಕು. ಉಳಿತಾಯ ಅಂತ ಬಂದಾಗ ಅದು ತನ್ನಿಂತಾನೇ ಆಗೋದಲ್ಲ ಎಂಬುದನ್ನು ಮನಗಾಣಬೇಕು. ಅದಕ್ಕೊಂದು ಮನಸ್ಸು ಬೇಕು. ಸ್ಥಿರ ಭಾವ ಬೇಕು. ಸಿಂಪಲ್ ಆಗಿ ಹೇಳಬೇಕು ಅಂದ್ರೆ ಉಳಿತಾಯ ಮನೋಭಾವನೆ ರೂಢಿಸಿಕೊಳ್ಳಬೇಕಾದ್ದು
ಎರಡು ಮೂರು ದಶಕ ಹಿಂದಕ್ಕೆ ಹೋದರೆ ಆಗ ನಮ್ಮ ಹಿರಿಯರು ಬ್ಯಾಂಕ್ ಠೇವಣಿ ರೂಪದಲ್ಲಿ ಉಳಿತಾಯ ಮಾಡುತ್ತಿದ್ದರು. ಕೆಲವರು ಇನ್ಶೂರೆನ್ಸ್ ಅಂತಿದ್ರು. ಆದರೆ ಈಗ ಕಾಲ ಬದಲಾಗಿದೆ. ಹತ್ತಾರು ಹಣಕಾಸು ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ.
ನೋಟು ನಿಷೇಧ, ಕೋವಿಡ್ ಸಂಕಷ್ಟದ ಬಳಿಕ ವಂತೂ ಕಡಿಮೆ ಹಣದಲ್ಲಿ ಬದುಕು ಸಾಗಿಸುವುದನ್ನು ಬಹುತೇಕರು ರೂಢಿಸಿಕೊಂಡಿದ್ದಾರೆ. ಉಳಿತಾಯದ ಮನೋಭಾವವೂ ಹೆಚ್ಚಾಗಿದೆ. ಆದರೂ, ಕೋಟಿ ರೂಪಾಯಿ ಉಳಿಸಬೇಕು ಎಂಬ ಆಸೆ ಈಡೇರಿಸೋದಕ್ಕೆ ಸ್ವಲ್ಪ ಕಷ್ಟವೇ. ಲೆಕ್ಕಾಚಾರ ಬಹಳ ಸುಲಭ ಇದೆ.
ಜನಪ್ರಿಯವಾಗ್ತಿದೆ ಮ್ಯೂಚುವಲ್ ಫಂಡ್ ಎಸ್‌ಐಪಿ
ಉಳಿತಾಯ ಅಂತ ಬಂದಾಗ ಬಹುತೇಕ ಯುವಜನರ ಮೊದಲ ಆಯ್ಕೆ ಈಗ ಮ್ಯೂಚುವಲ್ ಫಂಡ್. ಇದು ಷೇರುಪೇಟೆ ವಹಿವಾಟಿನೊಂದಿಗೆ ಮಿಳಿತವಾಗಿರುವ ಕಾರಣ ಸ್ವಲ್ಪ ರಿಸ್ಕ್ ಇದೆ. ಆದಾಗ್ಯೂ, ಮ್ಯೂಚುವಲ್ ಫಂಡ್ ಬಗ್ಗೆ ಸರಿಯಾಗಿ ತಿಳಿದುಕೊಂಡು ಉತ್ತಮ ರಿಟರ್ನ್ಸ್ ಪಡೆದುಕೊಳ್ಳುವವರಿದ್ದಾರೆ.
ಮ್ಯೂಚುವಲ್ ಫಂಡ್‌ನಲ್ಲಿ ಎಸ್‌ಐಪಿ (ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್) ಕಡೆಗೆ ಹೆಚ್ಚಿನವರ ಒಲವು. ಎಸ್‌ಐಪಿ ಮೂಲಕ ಆಗಸ್ಟ್ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ 23,547 ಕೋಟಿ ರೂಪಾಯಿ ಹೂಡಿಕೆ ಆಗಿದ್ದು, ಇದರ ಜನಪ್ರಿಯತೆಯನ್ನು ತೋರಿಸಿಕೊಟ್ಟಿದೆ. ಎಸ್‌ಐಪಿ ಖಾತೆಗಳ ಸಂಖ್ಯೆ 9.61ಕ್ಕೇರಿದೆ. ಫೋಲಿಯೋ ಕೌಂಟ್ 20 ಕೋಟಿಗೂ ಅಧಿಕ.
1,000 ರೂಪಾಯಿ ಎಸ್‌ಐಪಿ ಮತ್ತು 1 ಕೋಟಿ ರೂಪಾಯಿ ಗಳಿಕೆ
ಎಸ್‌ಐಪಿ ಅಂದ್ರೆ ಬೇರೇನೂ ಅಲ್ಲ. ಸಾಲ ತಗೊಂಡು ತಿಂಗಳು ತಿಂಗಳು ಮಾಸಿಕ ಕಂತು (ಇಎಂಐ) ಕಟ್ಟುತ್ತೇವಲ್ಲ ಅದೇ ಮಾದರಿಯದ್ದು. ಇಲ್ಲಿ ನಾವು ಒಂದೇ ಮೊತ್ತವನ್ನು ಕಂತುಗಳಲ್ಲಿ ಪ್ರತಿ ತಿಂಗಳು ಒಂದು ನಿರ್ದಿಷ್ಟ ಅವಧಿ ತನಕ ಹೂಡಿಕೆ ಮಾಡುತ್ತೇವೆ ಅಷ್ಟೆ.
ನಂಗೆ 1 ಕೋಟಿ ರೂಪಾಯಿ ಉಳಿಸಬೇಕು. ಸದ್ಯ ನನಗೆ ತಿಂಗಳಿಗೆ 1,000 ರೂಪಾಯಿ ಉಳಿತಾಯ ಮಾಡಬಹುದು. ಎಷ್ಟು ವರ್ಷ ಬೇಕು 1 ಕೋಟಿ ರೂಪಾಯಿ ಆಗೋದಕ್ಕೆ?
ಈ ಲೆಕ್ಕಾಚಾರವನ್ನೇ ತೆಗೆದುಕೊಂಡರೆ, ವಾರ್ಷಿಕ ಶೇಕಡ 12 ಬಡ್ಡಿದರ ಮತ್ತು ಶೇಕಡ 10 ಹೂಡಿಕೆ ಹೆಚ್ಚಳ ಮಾಡುತ್ತ ಹೂಡಿಕೆ ಮಾಡುವ ಲೆಕ್ಕಾಚಾರ ಗಮನಿಸೋಣ.
ನೀವು ತಿಂಗಳಿಗೆ 1,000 ರೂಪಾಯಿಯಂತೆ ಎಸ್‌ಐಪಿ ಮಾಡಲಾರಂಭಿಸಿದರೆ ಮತ್ತು ಪ್ರತಿ ವರ್ಷ ಹೂಡಿಕೆಯಲ್ಲಿ ಶೇಕಡ 10 ಏರಿಕೆ ಮಾಡುತ್ತ ಹೋಗುತ್ತೀರಿ ಎಂದಿಟ್ಟುಕೊಳ್ಳೋಣ. ವಾರ್ಷಿಕ ಶೇಕಡ 12ರ ಬಡ್ಡಿದರ ಪರಿಗಣಿಸಿ ಹೇಳುವುದಾದರೆ, 31 ವರ್ಷ ಹಣ ಕಟ್ಟಬೇಕು. ಹೂಡಿಕೆಯ ಒಟ್ಟು ಮೊತ್ತ 21.82 ಲಕ್ಷ ರೂಪಾಯಿ ಆಗುತತೆ. ಬಡ್ಡಿ ಮೊತ್ತ 80 ಲಕ್ಷ ರೂಪಾಯಿ ಆಸುಪಾಸಿನಲ್ಲಿರುತ್ತದೆ. ಹಾಗೆ, 1.02 ಕೋಟಿ ರೂಪಾಯಿ ನಿಮ್ಮ ಖಾತೆಯಲ್ಲಿರುತ್ತದೆ.
ಕೇವಲ 1000 ರೂಪಾಯಿ ಎಸ್‌ಐಪಿ ಮೂಲಕ 1 ಕೋಟಿ ರೂಪಾಯಿ ಹೇಗೆ ಮಾಡಬಹುದು ಎಂಬುದರ ಲೆಕ್ಕಾಚಾರಕ್ಕೆ ತೋರಿಸಿದ್ದು ಇದು. ನಿಮ್ಮ ಹಣಕಾಸಿನ ಅಗತ್ಯಕ್ಕೆ ತಕ್ಕಂತೆ ಇಂತಹ ಯೋಜನೆಗಳನ್ನು ನೀವು ರೂಪಿಸಿಕೊಳ್ಳಬಹುದು.
ಗಮನಿಸಿ: ಮೇಲಿನ ವಿಷಯವು ತಿಳಿವಳಿಕೆ ನೀಡುವ ಉದ್ದೇಶಕ್ಕಾಗಿ ನೀಡಿರುವ ಮಾಹಿತಿಯೇ ಹೊರತು, ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಎಂಬ ಶಿಫಾರಸು ಅಲ್ಲ. ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ದಯವಿಟ್ಟು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ನೀವು ಅದರ ಸಾಧಕ ಬಾಧಕಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ.