ಪರ್ಸನಲ್ ಲೋನ್‌ಗೆ ಅಪ್ಲೈ ಮಾಡ್ತೀರಾ; ತಿಂಗಳ ಸಾಲದ ಕಂತು ಎಷ್ಟು ಎಂದು ಮೊದಲೇ ತಿಳಿಯಲು ಇಎಂಐ ಕ್ಯಾಲ್ಕುಲೇಟರ್‌ ಬಳಸಿ-business personal finance personal loan planning use an emi calculator to check your monthly installment uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪರ್ಸನಲ್ ಲೋನ್‌ಗೆ ಅಪ್ಲೈ ಮಾಡ್ತೀರಾ; ತಿಂಗಳ ಸಾಲದ ಕಂತು ಎಷ್ಟು ಎಂದು ಮೊದಲೇ ತಿಳಿಯಲು ಇಎಂಐ ಕ್ಯಾಲ್ಕುಲೇಟರ್‌ ಬಳಸಿ

ಪರ್ಸನಲ್ ಲೋನ್‌ಗೆ ಅಪ್ಲೈ ಮಾಡ್ತೀರಾ; ತಿಂಗಳ ಸಾಲದ ಕಂತು ಎಷ್ಟು ಎಂದು ಮೊದಲೇ ತಿಳಿಯಲು ಇಎಂಐ ಕ್ಯಾಲ್ಕುಲೇಟರ್‌ ಬಳಸಿ

ಪರ್ಸನಲ್ ಲೋನ್ ತಗೊಳ್ಳುವ ಆಲೋಚನೆಯಲ್ಲಿದ್ದೀರಾ? ಹಾಗಾದರೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲೇ ಮಾಡಬೇಕಾದ ಕೆಲಸಗಳಿವೆ. ಅದರ ಕಡೆಗೆ ಗಮನಕೊಡಿ. ವಿಶೇಷವಾಗಿ, ತಿಂಗಳ ಸಾಲದ ಕಂತು ಎಷ್ಟು ಎಂದು ಮೊದಲೇ ತಿಳಿಯಲು ಇಎಂಐ ಕ್ಯಾಲ್ಕುಲೇಟರ್‌ ಬಳಸಿ. ಅದನ್ನು ಬಳಸೋದು ಹೇಗೆ ಎಂಬುದರ ವಿವರ ಇಲ್ಲಿದೆ.

ಪರ್ಸನಲ್ ಲೋನ್‌ಗೆ ಅಪ್ಲೈ ಮಾಡ್ತೀರಾದರೆ ತಿಂಗಳ ಸಾಲದ ಕಂತು ಎಷ್ಟು ಎಂದು ಮೊದಲೇ ತಿಳಿಯಲು ಇಎಂಐ ಕ್ಯಾಲ್ಕುಲೇಟರ್‌ ಬಳಸಿ. (ಸಾಂಕೇತಿಕ ಚಿತ್ರ)
ಪರ್ಸನಲ್ ಲೋನ್‌ಗೆ ಅಪ್ಲೈ ಮಾಡ್ತೀರಾದರೆ ತಿಂಗಳ ಸಾಲದ ಕಂತು ಎಷ್ಟು ಎಂದು ಮೊದಲೇ ತಿಳಿಯಲು ಇಎಂಐ ಕ್ಯಾಲ್ಕುಲೇಟರ್‌ ಬಳಸಿ. (ಸಾಂಕೇತಿಕ ಚಿತ್ರ) (LM)

ದುಡ್ಡಿನ ಕೊರತೆ ಎದುರಾದಾಗ ಸಹಜವಾಗಿಯೇ ಒಂದೋ ಗೋಲ್ಡ್‌ ಲೋನ್‌ ಇಲ್ಲಾಂದ್ರೆ ಪರ್ಸನಲ್ ಲೋನ್‌ ತಗೊಳ್ತಾರೆ ಜನ. ಬಹುತೇಕರು ಪರ್ಸನಲ್ ಲೋನ್‌ ತಗೊಳ್ಳುವ ಕಾರಣ ಹಾಗೆ ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ಅಂಶಗಳು ಮತ್ತು ಮಾಡಬೇಕಾದ ಕಾರ್ಯಗಳಿವೆ. ಈ ಪೈಕಿ ವಿವಿಧ ಬ್ಯಾಂಕ್‌ಗಳ ವೈಯಕ್ತಿಕ ಸಾಲಕ್ಕೆ ವಿವಿಧ ಬಡ್ಡಿ ದರಗಳು ಮತ್ತು ಸಂಸ್ಕರಣಾ ಶುಲ್ಕಗಳನ್ನು ತುಲನೆ ಮಾಡಬೇಕಾಗುತ್ತದೆ. ಸಾಲದ ಮೊತ್ತ, ಮರುಪಾವತಿ ಅವಧಿ, ಇಎಂಐ ಕಂತು ಹೀಗೆ ಇನ್ನೂ ಕೆಲವು ವಿಷಯಗಳಿವೆ. ಇದಲ್ಲದೇ, ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವ ಮೊದಲು ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ತಿಂಗಳಿಗೆ ಎಷ್ಟು ಕಂತು ಎಂದು ಮೊದಲೇ ಲೆಕ್ಕಹಾಕಿ ತಿಳಿದುಕೊಂಡಿರುವುದು ಮುಖ್ಯ. ಉದಾಹರಣೆಗೆ, ನೀವು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸುವಾಗ, ಮೊದಲೇ ನಿರ್ಧರಿಸಿದ ಸಮಯದ ಚೌಕಟ್ಟಿನಲ್ಲಿ ಸಾಲವನ್ನು ಮರುಪಾವತಿಸಲು ಯಾವ ಬಡ್ಡಿ ದರದಲ್ಲಿ ನೀವು ಎಷ್ಟು ಮಾಸಿಕ ಕಂತು ಅಥವಾ ಇಎಂಐ ಪಾವತಿಸಬೇಕಾಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಎಂದರೇನು

ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮಗೆ ಮೊದಲೇ ನಿರ್ಧರಿಸಿದ ಸಮಯದಲ್ಲಿ ನಿಗದಿತ ಬಡ್ಡಿದರದಲ್ಲಿ ವೈಯಕ್ತಿಕ ಸಾಲವನ್ನು ಮರುಪಾವತಿಸಲು ನಿಖರ ಇಎಂಐ (ಸಮಾನ ಮಾಸಿಕ ಕಂತು) ಅನ್ನು ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಇಎಂಐ ಕ್ಯಾಲ್ಕುಲೇಟರ್‌ನಲ್ಲಿ ಲೆಕ್ಕ ಹಾಕಲು ಮೂರು ಅಂಶಗಳು ಗೊತ್ತಿರಬೇಕು. ಮೊದಲನೆಯದು ಸಾಲದ ಅವಧಿ ಅಂದರೆ ಸಾಲವನ್ನು ಎಷ್ಟು ವರ್ಷದಲ್ಲಿ ಮುಗಿಸಬೇಕು ಎಂಬುದು. ಎರಡನೆಯದು ಬಡ್ಡಿದರ ಮತ್ತು ಮೂರನೆಯದು ಸಾಲದ ಮೊತ್ತ. ಬಡ್ಡಿ ದರ ಮತ್ತು ಸಾಲದ ಮೊತ್ತವು ಇಎಂಐ ಮೇಲೆ ನೇರ ಪರಿಣಾಮ ಬೀರುವಂಥದ್ದು. ಅಂದರೆ ಹೆಚ್ಚಿನ ಬಡ್ಡಿ ದರ ಅಥವಾ ಸಾಲದ ಮೊತ್ತ ಇದ್ದರೆ ಇಎಂಐ ಕೂಡ ಹೆಚ್ಚಾಗುತ್ತದೆ. ಮತ್ತೊಂದೆಡೆ, ಸಾಲದ ಅವಧಿಯು ಹೆಚ್ಚಿದ್ದರೆ, ಇಎಂಐ ಕಡಿಮೆ ಇರುತ್ತದೆ. ಕಡಿಮೆ ಅವಧಿಯಲ್ಲಿ ಸಾಲ ಮುಗಿಸುವಿರಾದರೆ ಇಎಂಐ ಮೊತ್ತ ದೊಡ್ಡದಿರುತ್ತದೆ.

ಪರ್ಸನಲ್ ಲೋನ್‌ ಇಎಂಐ ಲೆಕ್ಕ ಹಾಕುವುದು ಹೇಗೆ? ಇದಕ್ಕಾಗಿ, ಸಾಲದ ಮೊತ್ತ, ಬಡ್ಡಿ ದರ ಮತ್ತು ಸಾಲದ ಅವಧಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಸಾಲದ ಮೊತ್ತ: ಇದು ಸಾಲಗಾರನು ತೆಗೆದುಕೊಂಡ ಸಾಲದ ಒಟ್ಟು ಮೊತ್ತವನ್ನು ಸೂಚಿಸುತ್ತದೆ. ನೀವು ಬ್ಯಾಂಕ್‌ ಗ್ರಾಹಕರಾಗಿ, 5 ಲಕ್ಷ ರೂಪಾಯಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೀರಿ ಎಂದು ಭಾವಿಸೋಣ. ಆಗ ಸಾಲದ ಮೊತ್ತವು 5 ಲಕ್ಷ ರೂಪಾಯಿ ಆಗಿರುತ್ತದೆ.

ಬಡ್ಡಿ ದರ: ಇದು ವೈಯಕ್ತಿಕ ಸಾಲದ ಮೇಲೆ ಬ್ಯಾಂಕ್ ವಿಧಿಸುವ ಬಡ್ಡಿ ದರವಾಗಿದೆ. ಇದು ಸಾಮಾನ್ಯವಾಗಿ ವಾರ್ಷಿಕವಾಗಿ 10 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿರುತ್ತದೆ. ಇಲ್ಲಿ ಲೆಕ್ಕಾಚಾರ ಮಾಡುವುದಕ್ಕಾಗಿ ಶೇಕಡ 10 ಎಂದು ಇಟ್ಟುಕೊಳ್ಳೋಣ.

ಸಾಲದ ಅವಧಿ: ಸಾಲವನ್ನು ಮರುಪಾವತಿಸಲು ನೀವು ತೆಗೆದುಕೊಳ್ಳುವ ಸಮಯ ಇದು. ಸಾಲವನ್ನು ಮರುಪಾವತಿಸಲು ನೀವು 36 ತಿಂಗಳು ತೆಗೆದುಕೊಂಡಿದ್ದೀರಿ ಎಂದು ಭಾವಿಸೋಣ. ಆದ್ದರಿಂದ ಅವಧಿ 36 ತಿಂಗಳು ಇರುತ್ತದೆ.

ಈಗ ನೀವು ಈ ಮೂರು ಅಂಶಗಳನ್ನು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನಲ್ಲಿ ನಮೂದಿಸುತ್ತೀರಿ. ಇಷ್ಟು ಮಾಡಿದರೆ ನೀವು ನಿಖರ ಇಎಂಐ ವಿವರ ಪಡೆಯುತ್ತೀರಿ. ಈ ಲೆಕ್ಕಾಚಾರ ಪ್ರಕಾರ, ಇಎಂಐ ಮೊತ್ತ 16,133 ರೂ.

ಇಎಂಐ ಕ್ಯಾಲ್ಕುಲೇಟರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣವಾಗಿರುವ ಲೈವ್‌ಮಿಂಟ್‌ನ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಅತ್ಯಂತ ಸುಲಭವಾಗಿ ಬಳಸಬಹುದು. ಹೆಚ್ಚುವರಿಯಾಗಿ, ನೀವು ಆಯಾ ಬ್ಯಾಂಕ್‌ಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಹಂಚಿಕೊಂಡಿರುವ ವಿವಿಧ ವೈಯಕ್ತಿಕ ಸಾಲ ಇಎಂಐ ಕ್ಯಾಲ್ಕುಲೇಟರ್‌ಗಳನ್ನು ಸಹ ಬಳಸಬಹುದು. ಉದಾಹರಣೆಗೆ, ನೀವು ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಏಕ್ಸಿಸ್‌ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ನೀಡುವ ಇಎಂಐ ಕ್ಯಾಲ್ಕುಲೇಟರ್‌ಗಳನ್ನು ಕೂಡ ಇಂತಹ ಲೆಕ್ಕಾಚಾರಕ್ಕೆ ಬಳಸಬಹುದು.

mysore-dasara_Entry_Point