ವಯಸ್ಸಿಗೆ ಅನುಗುಣವಾಗಿ ನಾವು ಎಷ್ಟು ಉಪ್ಪು ತಿನ್ನಬೇಕು, ರುಚಿ ಬೇಕು ಅಂತ ಹೆಚ್ಚು ತಿಂದ್ರೆ ಆರೋಗ್ಯಕ್ಕೆ ತಪ್ಪಿದ್ದಲ್ಲ ತೊಂದರೆ
ಕನ್ನಡ ಸುದ್ದಿ  /  ಜೀವನಶೈಲಿ  /  ವಯಸ್ಸಿಗೆ ಅನುಗುಣವಾಗಿ ನಾವು ಎಷ್ಟು ಉಪ್ಪು ತಿನ್ನಬೇಕು, ರುಚಿ ಬೇಕು ಅಂತ ಹೆಚ್ಚು ತಿಂದ್ರೆ ಆರೋಗ್ಯಕ್ಕೆ ತಪ್ಪಿದ್ದಲ್ಲ ತೊಂದರೆ

ವಯಸ್ಸಿಗೆ ಅನುಗುಣವಾಗಿ ನಾವು ಎಷ್ಟು ಉಪ್ಪು ತಿನ್ನಬೇಕು, ರುಚಿ ಬೇಕು ಅಂತ ಹೆಚ್ಚು ತಿಂದ್ರೆ ಆರೋಗ್ಯಕ್ಕೆ ತಪ್ಪಿದ್ದಲ್ಲ ತೊಂದರೆ

ಉಪ್ಪಿಗಿಂತ ರುಚಿ ಬೇರಿಲ್ಲ ಎಂಬ ಗಾದೆ ಮಾತಿದೆ. ಕೊಂಚ ಉಪ್ಪು ಕಡಿಮೆಯಾದ್ರೂ ಆಹಾರದ ರುಚಿ ಕೆಡುತ್ತೆ, ಉಪ್ಪು ಆರೋಗ್ಯಕ್ಕೂ ಉತ್ತಮ ಹೌದು. ಆದರೆ ನಮ್ಮ ದೇಹಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚು ಉಪ್ಪು ಸೇವಿಸಿದರೆ ಅಪಾಯ ಖಚಿತ. ಹಾಗಾದರೆ ನಮ್ಮ ವಯಸ್ಸಿಗೆ ಅನುಗುಣವಾಗಿ ನಾವೆಷ್ಟು ಉ‍ಪ್ಪು ತಿನ್ನಬೇಕು ನೋಡಿ.

ವಯಸ್ಸಿಗೆ ಅನುಗುಣವಾಗಿ ನಾವು ಎಷ್ಟು ಉಪ್ಪು ತಿನ್ನಬೇಕು
ವಯಸ್ಸಿಗೆ ಅನುಗುಣವಾಗಿ ನಾವು ಎಷ್ಟು ಉಪ್ಪು ತಿನ್ನಬೇಕು (PC: Canva)

ಉಪ್ಪಿಲ್ಲದ ಆಹಾರವನ್ನು ತಿನ್ನುವುದು ಬಿಡಿ, ನೆನೆಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ನಮ್ಮ ನಾಲಿಗೆ ಉಪ್ಪಿಗೆ ಹೊಂದಿಕೊಂಡಿದೆ. ರುಚಿಗೆ ಜೊತೆಗೆ ಆರೋಗ್ಯಕ್ಕೂ ಅವಶ್ಯವಾಗಿರುವ ಉಪ್ಪನ್ನು ಅತಿಯಾಗಿ ಸೇವಿಸಿದ್ರೆ ಆರೋಗ್ಯ ಕೆಡೋದು ಖಂಡಿತ. ಹೆಚ್ಚು ಉಪ್ಪು ತಿನ್ನುವುದರಿಂದ ಅಧಿಕರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ನಮ್ಮ ವಯಸ್ಸು, ಜೀವನಶೈಲಿ ಹಾಗೂ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ನಮ್ಮ ದೇಹಕ್ಕೆ ಇಂತಿಷ್ಟು ಮಟ್ಟದ ಉಪ್ಪಿನಾಂಶಶ ಬೇಕಿರುತ್ತದೆ. ದ್ರವಾಂಶ ಸಮತೋಲನ, ನರಗಳ ಕಾರ್ಯನಿರ್ವಹಣೆ, ಸ್ನಾಯುಗಳ ಆರೋಗ್ಯಕ್ಕೆ ಉಪ್ಪು ಬಹಳ ಮುಖ್ಯ. ರುಚಿಯಾಗುತ್ತದೆ ಎನ್ನುವ ಕಾರಣಕ್ಕೆ ಹೆಚ್ಚು ಉಪ್ಪು ತಿಂದರೆ ಅಧಿಕರಕ್ತದೊತ್ತಡ. ಹೃದ್ರೋಗ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಈ ಸಂದರ್ಭದ‌ಲ್ಲಿ ವಿವಿಧ ವಯೋಮಾನದವರಿಗೆ ಶಿಫಾರಸು ಮಾಡಲಾದ ಉಪ್ಪು ಸೇವನೆಯ ಪ್ರಮಾಣ ಹೀಗಿದೆ. ನಿಮ್ಮ ವಯಸ್ಸಿಗೆ ನೀವೆಷ್ಟು ಉಪ್ಪು ತಿನ್ನಬೇಕು ಎಂಬುದನ್ನು ಕಂಡುಕೊಳ್ಳಿ.

ಶಿಶುಗಳು (0–12 ತಿಂಗಳು)

ಶಿಶುಗಳಿಗೆ ಉಪ್ಪು ತುಂಬಾ ಕಡಿಮೆ ಇರಬೇಕು. ಹೆಚ್ಚುವರಿ ಸೋಡಿಯಂ ಅನ್ನು ಸಂಗ್ರಹಿಸಲು ಅವರ ಮೂತ್ರಪಿಂಡಗಳು ಸಾಕಷ್ಟು ಅಭಿವೃದ್ಧಿ ಹೊಂದಿಲ್ಲ. ಈ ಕಂದಮ್ಮಗಳಿಗೆ ದಿನಕ್ಕೆ 1 ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಉಪ್ಪು ಸೇವಿಸಬೇಕು. ಎದೆಹಾಲು ಅವರಿಗೆ ಅಗತ್ಯವಿರುವ ಉಪ್ಪಿನಾಂಶವನ್ನು ಒದಗಿಸುತ್ತದೆ.

ಮಕ್ಕಳು (1 ರಿಂದ 3 ವರ್ಷ)

ಈ ವಯಸ್ಸಿನಲ್ಲಿ ಮಕ್ಕಳ ದೇಹ ಚಿಕ್ಕದಾಗಿರುತ್ತದೆ, ಆ ಕಾರಣಕ್ಕೆ ಅವರಿಗೆ ಕಡಿಮೆ ಉಪ್ಪಿನ ಪ್ರಮಾಣ ಸಾಕಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಮಕ್ಕಳಿಗೆ ಶಿಫಾರಸು ಮಾಡಲಾದ ಉಪ್ಪಿನಾಂಶವು 2 ಗ್ರಾಂನಷ್ಟು. ಇದು 0.8 ಗ್ರಾಂ ಸೋಡಿಯಂಗೆ ಸಮನಾಗಿರುತ್ತದೆ.

ಮಕ್ಕಳು (4ರಿಂದ 8 ವರ್ಷ)

ಮಕ್ಕಳು ಬೆಳೆದಂತೆ ಅವರಿಗೆ ಉಪ್ಪಿನ ಅವಶ್ಯಕತೆಯ ಪ್ರಮಾಣವೂ ಕೊಂಚ ಹೆಚ್ಚಾಗುತ್ತದೆ. ಈ ವಯಸ್ಸಿನ ಮಕ್ಕಳಿಗೆ ದಿನಕ್ಕೆ 3 ಗ್ರಾಂ ನಷ್ಟು ಉ‌ಪ್ಪು ಬೇಕಾಗುತ್ತದೆ. ಈ ವಯಸ್ಸಿನ ಮಕ್ಕಳು ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಇದರಿಂದ ಅವರು ಸೇವಿಸುವ ಉಪ್ಪಿನ ಪ್ರಮಾಣ ಹೆಚ್ಚಾಗಬಹುದು. ಈ ಬಗ್ಗೆ ಪೋಷಕರು ಗಮನ ಹರಿಸಬೇಕು.

ಮಕ್ಕಳು, ಹದಿಹರೆಯದವರು (9 ರಿಂದ 18 ವರ್ಷ)

ಮಕ್ಕಳು ಹಾಗೂ ಹದಿವಯಸ್ಸಿನವರಿಗೆ ಉಪ್ಪಿನ ಪ್ರಮಾಣ ಕೊಂಚ ಹೆಚ್ಚು ಬೇಕಾಗುತ್ತದೆ. ಆದರೆ ಉಪ‍್ಪಿನ ಸೇವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಶಿಫಾರಸು ದಿನಕ್ಕೆ 5 ಗ್ರಾಂ ಉಪ್ಪು ಸೇವಿಸಬಹುದು. ಇದು 2ಗ್ರಾಂ ಸೋಡಿಯಂಗೆ ಸಮ.

ವಯಸ್ಕರು (19 ವರ್ಷದಿಂದ ಮೇಲ್ಪಟ್ಟವರು)

ಸಾಮಾನ್ಯವಾಗಿ ವಯಸ್ಕರಿಗೆ ಉ‍ಪ್ಪಿನ ಸೇವನೆಯ ಪ್ರಮಾಣವು ದಿನಕ್ಕೆ 5 ಗ್ರಾಂನಷ್ಟು, ಇಂದು ಒಂದು ಟೀ ಚಮಚದ ಪ್ರಮಾಣವಾಗಿದೆ. ಆದಾಗ್ಯೂ, ಅತ್ಯುತ್ತಮವಾದ ಹೃದಯದ ಆರೋಗ್ಯಕ್ಕಾಗಿ 3 ಗ್ರಾಂಗಿಂತ ಕಡಿಮೆ ಸೋಡಿಯಂ ಅನ್ನು ಗುರಿಯಾಗಿರಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. 19 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು 2.4 ಗ್ರಾಂಗಳಷ್ಟು ಸೋಡಿಯಂ ಅನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಹೆಚ್ಚಿನ ವಯಸ್ಕರು ಸಾಮಾನ್ಯವಾಗಿ ತಮ್ಮ ಹೃದಯದ ಆರೋಗ್ಯವನ್ನು ಸಕ್ರಿಯಗೊಳಿಸಲು ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಈ ಪ್ರಮಾಣವನ್ನು ಹೊಂದಿರುತ್ತಾರೆ. ಅಧಿಕ ರಕ್ತದೊತ್ತಡ ಅಥವಾ ಮೂತ್ರಪಿಂಡದ ಕಾಯಿಲೆಯಂತಹ ನಿರ್ದಿಷ್ಟ ಪರಿಸ್ಥಿತಿಗಳನ್ನು ಹೊಂದಿರುವ ಜನರು ಉಪ್ಪಿನ ಸೇವನೆಯನ್ನು ಮತ್ತಷ್ಟು ಕಡಿಮೆ ಮಾಡಲು ಸಲಹೆ ನೀಡಲಾಗುತ್ತದೆ.

ಹಿರಿಯ ವಯಸ್ಕರು (65 ವರ್ಷಕ್ಕಿಂದ ಮೇಲ್ಪಟ್ಟವರು)

ನಮಗೆ ವಯಸ್ಸಾದಂತೆ ನಮ್ಮ ಮೂತ್ರಪಿಂಡಗಳಿಗೆ ಹೆಚ್ಚು ಸೋಡಿಯಂ ಸಂಸ್ಕರಿಸಲು ಸಾಧ್ಯವಾಗುವುದಿಲ್ಲ. 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ದಿನಕ್ಕೆ 5 ಗ್ರಾಂ ಗಿಂತ ಕಡಿಮೆ ಉಪ್ಪನ್ನು ಸೇವಿಸಬೇಕು, ಹೆಚ್ಚಿನ ಆರೋಗ್ಯ ತಜ್ಞರು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಲು ಇನ್ನೂ ಕಡಿಮೆ ಸೇವನೆಗೆ ಶಿಫಾರಸು ಮಾಡುತ್ತಾರೆ. ವಯಸ್ಸಾದವರು ತಾವು ಸೇವಿಸುವ ಉಪ್ಪಿನ ಪ್ರಮಾಣದ ಮೇಲೆ ಗಮನ ಹರಿಸಬೇಕು.

ಈ ಎಲ್ಲದರ ಜೊತೆಗೆ ಉಪ್ಪನ್ನು ಮಿತವಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಉಪ್ಪಿನ ಅತಿಯಾದ ಸೇವನೆ ಖಂಡಿತ ಅಪಾಯ. ಹಾಗಾಗಿ ನಮ್ಮ ವಯಸ್ಸಿಗೆ ಅನುಗುಣವಾಗಿ ಎಷ್ಟು ಉಪ್ಪು ಬೇಕೋ ಅಷ್ಟೇ ಸೇವಿಸುವುದು ಉತ್ತಮ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner