Child Health: ಶಿಶುಗಳನ್ನು ಕಾಡುವ ಪ್ರೇಡರ್-ವಿಲ್ಲಿ ಸಿಂಡ್ರೋಮ್; ಇದರ ಲಕ್ಷಣಗಳಿವು
Prader Willi Syndrome: ಶೈಶವಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಪ್ರೇಡರ್-ವಿಲ್ಲಿ ಸಿಂಡ್ರೋಮ್, ಮಕ್ಕಳು ದೊಡ್ಡವರಾದ ಮೇಲೆ ಅನೇಕ ರೀತಿಯಲ್ಲಿ ಗಂಭೀರ ಪರಿಣಾಮ ಬೀರುತ್ತದೆ. ಪ್ರೇಡರ್-ವಿಲ್ಲಿ ಸಿಂಡ್ರೋಮ್ನ ಲಕ್ಷಣಗಳು ಇಲ್ಲಿವೆ.
ಪ್ರೇಡರ್-ವಿಲ್ಲಿ ಸಿಂಡ್ರೋಮ್ (PWS), ಇದೊಂದು ಅಪರೂಪದ ಅನುವಂಶಿಕ ಸಮಸ್ಯೆಯಾಗಿದ್ದು, ಅದು ಮಗುವಿನ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಲವಾರು ರೀತಿಯ ದೈಹಿಕ ಸಮಸ್ಯೆಗಳು, ಕಲಿಕೆಯಲ್ಲಿ ತೊಂದರೆಗಳು ಮತ್ತು ನಡವಳಿಕೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
15,000 ಶಿಶುಗಳಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಡುತ್ತದೆ. ಇದು ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಸಮಾನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಪ್ರೇಡರ್-ವಿಲ್ಲಿ ಸಿಂಡ್ರೋಮ್ ಅನ್ನು ವಿಶೇಷ ಅನುವಂಶಿಕ ರಕ್ತ ಪರೀಕ್ಷೆಯೊಂದಿಗೆ ದೃಢಪಡಿಸಬಹುದು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಜೆನೆಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಮಿತೇಶ್ ಶೆಟ್ಟಿ ಅವರು ಪ್ರೇಡರ್-ವಿಲ್ಲಿ ಸಿಂಡ್ರೋಮ್ ಲಕ್ಷಣಗಳನ್ನು ತಿಳಿಸಿದ್ದಾರೆ.
ಪ್ರೇಡರ್-ವಿಲ್ಲಿ ಸಿಂಡ್ರೋಮ್ ಲಕ್ಷಣಗಳೇನು? ಅದನ್ನು ಗುರುತಿಸುವುದು ಹೇಗೆ?
ಪ್ರೇಡರ್-ವಿಲ್ಲಿ ಸಿಂಡ್ರೋಮ್ ಅನ್ನು ಸಾಮಾನ್ಯವಾಗಿ ಶಿಶುಗಳ ಜನನದ ಸ್ವಲ್ಪ ಸಮಯದ ನಂತರ ಗಮನಿಸಬಹುದು. ಶೈಶವಾವಸ್ಥೆಯಲ್ಲಿ, ಇದು ಅಶಕ್ತ ಸ್ವರದಲ್ಲಿ ಅಳುವುದು, ಸ್ನಾಯು ದೌರ್ಬಲ್ಯ, ಆಲಸ್ಯ, ಕಡಿಮೆ ಹಾಲು ಹೀರುವ ಕ್ರಿಯೆ, ಮತ್ತು ಕಳಪೆ ಮಟ್ಟದ ಬೆಳವಣಿಗೆಯಿಂದ ಗೊತ್ತಾಗುತ್ತದೆ. ಅಂತಹ ಮಕ್ಕಳು ಸಾಮಾನ್ಯವಾಗಿ ಬೆಳವಣಿಗೆಯ ಹಂತಗಳಾದ ಕುಳಿತುಕೊಳ್ಳುವುದು ಅಥವಾ ನಡೆಯುವುದನ್ನು ಇತರ ಮಕ್ಕಳಿಗಿಂತ ತಡವಾಗಿ ತಲುಪುತ್ತಾರೆ. ಮಾತು ಕೂಡ ಸ್ವಲ್ಪ ತಡವಾಗುತ್ತದೆ. ಪದಗಳ ಕಳಪೆ ಉಚ್ಚಾರಣೆಯು ಪ್ರೌಢಾವಸ್ಥೆಯಲ್ಲಿ ಕೂಡ ಮುಂದುವರೆಯಬಹುದು.
ಸುಮಾರು 2 ವರ್ಷ ವಯಸ್ಸಿನಲ್ಲಿ, ಒಂದು ಪ್ರಮುಖ ಲಕ್ಷಣವೆಂದರೆ, ಬಾಧಿತ ಮಗುವಿಗೆ ಹಸಿವು ನಿರಂತರವಾಗಿ ಇರುತ್ತದೆ. ಆಹಾರವನ್ನು ಸೇವಿಸಿದ ನಂತರ ಕೂಡ ಹೊಟ್ಟೆ ತುಂಬುವುದಿಲ್ಲ. ಹೀಗಾಗಿ ಅತಿಯಾಗಿ ತಿನ್ನುವುದರಿಂದ ಮುಂದೆ ಸ್ಥೂಲಕಾಯಕ್ಕೆ ಕಾರಣವಾಗಬಹುದು. ಅತಿಯಾದ ಸ್ಥೂಲಕಾಯತೆ ಹೊಂದಿದರೆ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಉಸಿರಾಟದ ತೊಂದರೆಗಳು ಮತ್ತು ಮಾರಣಾಂತಿಕ ತೊಡಕುಗಳನ್ನು ಉಂಟುಮಾಡುವ ಇತರ ಗಂಭೀರ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸಬಹುದು.
PWS ಹೊಂದಿರುವ ಎಲ್ಲರೂ ಅರಿವಿನ ದುರ್ಬಲತೆಯನ್ನು ಹೊಂದಿರುತ್ತಾರೆ. ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ. ಬೌದ್ಧಿಕ ಸಾಮರ್ಥ್ಯ ಕಡಿಮೆ ಇರುತ್ತದೆ. ನಡವಳಿಕೆಯಲ್ಲಿ ಕೂಡ ಸಮಸ್ಯೆಗಳು ಇರುತ್ತದೆ. ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ. ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಹೀಗಾಗಿ ಹಗಲು ಜಾಸ್ತಿ ನಿದ್ದೆ ಬರಲು ಇದು ಕಾರಣವಾಗುತ್ತದೆ. ನಿದ್ದೆಯ ಕೊರತೆಯು ಅವರ ನಡವಳಿಕೆಯ ಮೇಲೆ ಇನ್ನಷ್ಟು ಪರಿಣಾಮ ಬೀರುತ್ತದೆ.
ಪ್ರೇಡರ್-ವಿಲ್ಲಿ ಸಿಂಡ್ರೋಮ್ ಹೊಂದಿರುವ ಕೆಲವರು ಭವಿಷ್ಯದಲ್ಲಿ ಕಣ್ಣಿನ ದೃಷ್ಟಿಯ ಸಮಸ್ಯೆಗಳನ್ನು ಕೂಡ ಹೊಂದುತ್ತಾರೆ. ಅಸಾಮಾನ್ಯವಾದ ಬಿಳಿ ಬಣ್ಣದ ಚರ್ಮ ಕೂಡ ಹೊಂದುತ್ತಾರೆ. ಕೂದಲ ಬಣ್ಣ ಕೂಡ ಬಿಳಿಯಾಗಬಹುದು. ಮಕ್ಕಳ ಎತ್ತರ ಕಡಿಮೆ ಆಗುತ್ತದೆ. ಇತರ ಅಂಗಗಳ ಜೊತೆ ಲೈಂಗಿಕ ಅಂಗಗಳ ಮೇಲೆಯೂ ಪರಿಣಾಮ ಬೀರಬಹುದು. ಪ್ರೌಢಾವಸ್ಥೆ ತಡವಾಗುವುದು ಹಾಗೂ ಸ್ತ್ರೀಯರಲ್ಲಿ ಬಂಜೆತನ ಸಮಸ್ಯೆ ಉಂಟಾಗಬಹುದು. ಪ್ರೇಡರ್-ವಿಲ್ಲಿ ಸಿಂಡ್ರೋಮ್ಗೆ ವಿಶೇಷ ರೀತಿಯ ಚಿಕಿತ್ಸಾ ವಿಧಾನಗಳಿದ್ದು, ವೈದ್ಯರು ಅದನ್ನು ಸೂಚಿಸುತ್ತಾರೆ.