ಕ್ರಿಸ್‌ಮಸ್ ಟ್ರೀ ಇತಿಹಾಸವೇನು, ಮೊದಲ ಕ್ರಿಸ್‌ಮಸ್‌ ಟ್ರೀ ಎಲ್ಲಿತ್ತು, ಹಬ್ಬದ ಸಮಯ ಸಿಂಗರಿಸುವ ಉದ್ದೇಶವೇನು? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕ್ರಿಸ್‌ಮಸ್ ಟ್ರೀ ಇತಿಹಾಸವೇನು, ಮೊದಲ ಕ್ರಿಸ್‌ಮಸ್‌ ಟ್ರೀ ಎಲ್ಲಿತ್ತು, ಹಬ್ಬದ ಸಮಯ ಸಿಂಗರಿಸುವ ಉದ್ದೇಶವೇನು? ಇಲ್ಲಿದೆ ಮಾಹಿತಿ

ಕ್ರಿಸ್‌ಮಸ್ ಟ್ರೀ ಇತಿಹಾಸವೇನು, ಮೊದಲ ಕ್ರಿಸ್‌ಮಸ್‌ ಟ್ರೀ ಎಲ್ಲಿತ್ತು, ಹಬ್ಬದ ಸಮಯ ಸಿಂಗರಿಸುವ ಉದ್ದೇಶವೇನು? ಇಲ್ಲಿದೆ ಮಾಹಿತಿ

ಯೇಸುಕ್ರಿಸ್ತನ ಜನ್ಮದಿನವನ್ನು ಕ್ರಿಸ್‌ಮಸ್ ಎಂದು ಆಚರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಕ್ರೈಸ್ತರು ತಮ್ಮ ಮನೆಯ ಒಳಗೆ-ಹೊರಗೆ, ಕಚೇರಿಯಲ್ಲಿ ಕ್ರಿಸ್‌ಮಸ್ ಟ್ರೀ ತಂದು ಅಲಂಕರಿಸುತ್ತಾರೆ. ಕ್ರಿಸ್‌ಮಸ್ ಟ್ರೀ ಸಿಂಗರಿಸುವ ಉದ್ದೇಶವೇನು, ಕ್ರಿಸ್‌ಮಸ್ ಟ್ರೀ ಇತಿಹಾಸವೇನು, ಮೊದಲ ಟ್ರೀ ಎಲ್ಲಿತ್ತು ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. (ಬರಹ: ಐಜಿ ಕಿರಣ್‌)

ಕ್ರಿಸ್‌ಮಸ್ ಟ್ರೀ
ಕ್ರಿಸ್‌ಮಸ್ ಟ್ರೀ (PC: Canva)

ಕ್ರಿಸ್‌ಮಸ್ ಎಂದರೆ ಕ್ರೈಸ್ತರಿಗೆ ಬಹಳ ಸಂಭ್ರಮ, ಸಡಗರ. ಕ್ರಿಸ್‌ಮಸ್‌ಗಾಗಿ ಕ್ರೈಸ್ತರು ವರ್ಷಪೂರ್ತಿ ಕಾಯುತ್ತಾರೆ. ಕ್ರಿಸ್‌ಮಸ್ ಟ್ರೀಯನ್ನು ತಂದು ಸಿಂಗರಿಸುವುದು, ಮನೆಯಲ್ಲಿ ಮತ್ತು ಚರ್ಚ್‌ನಲ್ಲಿ ಗೋದಲಿ ನಿರ್ಮಿಸಿ, ಯೇಸುಕ್ರಿಸ್ತನ ಹುಟ್ಟುಹಬ್ಬವನ್ನು ಸಂಭ್ರಮಿಸಲಾಗುತ್ತದೆ. ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಮುನ್ನಾದಿನ ರಾತ್ರಿ ವಿಶೇಷ ಪೂಜೆ, ಪ್ರಾರ್ಥನೆ ಇರುತ್ತದೆ. ಕ್ರೈಸ್ತರು ಕೇಕ್ ಹಂಚುವ ಮೂಲಕ ಕ್ರಿಸ್‌ಮಸ್ ಆಚರಿಸುತ್ತಾರೆ. ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ರೂಪದಲ್ಲಿ, ಹಲವು ಪದ್ಧತಿ ಮತ್ತು ಪ್ರಕಾರಗಳ ಮೂಲಕ ಕ್ರಿಸ್‌ಮಸ್ ಆಚರಿಸಲಾಗುತ್ತದೆ.

ಕ್ರಿಸ್‌ಮಸ್ ಟ್ರೀ ಸಿಂಗಾರ

ಕ್ರಿಸ್‌ಮಸ್ ಹಬ್ಬದ ಪ್ರಮುಖ ಆಕರ್ಷಣೆ ಎಂದರೆ ಕ್ರಿಸ್‌ಮಸ್ ಟ್ರೀ. ಈಗ ಮಾಲ್‌ಗಳಲ್ಲಿ, ಮಳಿಗೆಗಳಲ್ಲಿ ಸುಂದರ ಮತ್ತು ಆಕರ್ಷಕ ರೂಪದ ಬೃಹತ್ ಕ್ರಿಸ್‌ಮಸ್ ಟ್ರೀಯನ್ನು ಸಿಂಗರಿಸಿ ಇರಿಸುತ್ತಾರೆ. ಮನೆ ಮತ್ತು ಚರ್ಚ್‌ಗಳಲ್ಲಿ ಕೂಡ ವಿಶೇಷ ವಿದ್ಯುತ್ ದೀಪಾಲಂಕಾರ ಇರುತ್ತದೆ. ಹಬ್ಬದ ಆಚರಣೆಯಲ್ಲಿ ಸಂಬಂಧಿಕರು ಮತ್ತು ಸ್ನೇಹಿತರಿಗೆ ಕ್ರಿಸ್‌ಮಸ್ ವಿಶೇಷ ಉಡುಗೊರೆಯನ್ನು ಕೂಡ ಹಂಚುತ್ತಾರೆ.

ಕ್ರಿಸ್‌ಮಸ್ ಟ್ರೀ ಇತಿಹಾಸ ಗೊತ್ತಾ?

ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಕ್ರಿಸ್‌ಮಸ್ ಟ್ರೀ ಸಿಂಗರಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಗ್ರೀಕರು ಮತ್ತು ರೋಮನ್ನರು ಮೊದಲು ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಕ್ರಿಸ್‌ಮಸ್ ಟ್ರೀಯನ್ನು ತಂದಿರಿಸಿ ಸಿಂಗರಿಸುವುದನ್ನು ಆರಂಭಿಸಿದರು. ಡಿಸೆಂಬರ್ 21ರಂದು ಚಳಿಗಾಲದ ಮಧ್ಯದಲ್ಲಿ ಹಬ್ಬವನ್ನು ಅವರು ಆಚರಿಸುತ್ತಿದ್ದರು. ನಂತರದಲ್ಲಿ ಯುರೋಪಿಯನ್ನರು ಕೂಡ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲು ಆರಂಭಿಸಿದರು. ಮನೆಯಲ್ಲಿ ಸದಾ ಹಸಿರಿನಿಂದ ಕೂಡಿರುವ ಮರಗಳನ್ನು ಅಲಂಕರಿಸಿ ಅವರು ಸಂಭ್ರಮಿಸುತ್ತಿದ್ದರು.

ಕ್ರಿಸ್‌ಮಸ್ ಹಬ್ಬದ ವಿಶೇಷತೆ

ಕ್ರಿಸ್‌ಮಸ್ ಹಬ್ಬದಲ್ಲಿ ಮನೆಯಲ್ಲಿ ಮತ್ತು ಕಚೇರಿಗಳಲ್ಲಿ ಕ್ರಿಸ್‌ಮಸ್ ಮರವನ್ನು ತಂದಿರಿಸಿ ಸಿಂಗರಿಸಲಾಗುತ್ತದೆ. ಮನೆಯ ಹೊರಗೆ ಮರ ಇದ್ದರೆ ಅದನ್ನೇ ಸಿಂಗರಿಸುತ್ತಾರೆ. ಇಲ್ಲವೇ ಹೊಸದಾಗಿ ತಂದು ನೆಡಲಾಗುತ್ತದೆ. ಅದರ ಬದಲಿಗೆ ಇಂದು ಹಲವು ಗಾತ್ರಗಳ ಕೃತಕ ಕ್ರಿಸ್‌ಮಸ್ ಟ್ರೀ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸುಲಭದಲ್ಲಿ ಇಂದು ಕ್ರಿಸ್‌ಮಸ್ ಟ್ರೀ ಅಲಂಕಾರಕ್ಕೆ ಬೇಕಾದ ಎಲ್ಲ ವಸ್ತುಗಳು ಮಾರುಕಟ್ಟೆಯಲ್ಲಿ, ಆನ್‌ಲೈನ್‌ನಲ್ಲಿ ದೊರೆಯುತ್ತದೆ. ಕ್ರಿಸ್‌ಮಸ್ ಮರವನ್ನು ಬಣ್ಣಬಣ್ಣದ ಎಲ್‌ಇಡಿ ದೀಪಗಳು, ವಿವಿಧ ಆಟಿಕೆಗಳು, ಮಿಠಾಯಿ, ತಿನಿಸು, ರಿಬ್ಬನ್ ಬಳಸಿ ಅಲಂಕರಿಸಲಾಗುತ್ತದೆ. ಕ್ರೈಸ್ತ ಧರ್ಮದ ನಂಬಿಕೆ ಮತ್ತು ಆಚರಣೆಗಳ ಪ್ರಕಾರ, 16ನೇ ಶತಮಾನದಲ್ಲಿ ಕ್ರೈಸ್ತ ಸಮಾಜ ಸುಧಾರಕ ಮಾರ್ಟಿನ್ ಲೂಥರ್ ಕ್ರಿಸ್‌ಮಸ್ ಮರವನ್ನು ಅಲಂಕರಿಸಲು ಆರಂಭಿಸಿದರು ಎನ್ನಲಾಗುತ್ತದೆ.

ಕಥೆಯೊಂದರ ಪ್ರಕಾರ, ಡಿಸೆಂಬರ್ 24ರ ಸಂಜೆ ಮಾರ್ಟಿನ್ ಲೂಥರ್ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಿಮದಿಂದ ಆವೃತ್ತವಾದ ಕಾಡಿನಲ್ಲಿ ಮಾರ್ಟಿನ್ ಲೂಥರ್ ನಿತ್ಯಹರಿದ್ವರ್ಣದ ಗಿಡವೊಂದನ್ನು ನೋಡಿದರು. ಅದರ ಕೊಂಬೆಗಳ ಮೇಲೆ ಚಂದ್ರನ ಬೆಳಕು ಬಿದ್ದು, ಮರ ಆಕರ್ಷಕವಾಗಿ ಹೊಳೆಯುತ್ತಿತ್ತು. ಅದರಲ್ಲೇನೋ ವಿಶೇಷತೆಯಿದೆ ಎಂದ ಮಾರ್ಟಿನ್ ಲೂಥರ್, ಗಿಡವನ್ನು ಬೇರುಸಹಿತ ಕಿತ್ತುಕೊಂಡು ಹೋಗಿ ಮನೆಯಲ್ಲಿ ದೊಡ್ಡ ಮಡಿಕೆಯಲ್ಲಿ ನೆಟ್ಟರು. ನಂತರ ಮರವನ್ನು ಕ್ರಿಸ್‌ಮಸ್ ಹಬ್ಬಕ್ಕಾಗಿ ಅಲಂಕರಿಸಿದರು. ಅವರ ನೆರೆಮನೆಯವರು ಕೂಡ ಇದನ್ನು ಗಮನಿಸಿ, ತಾವೂ ಅನುಸರಿಸಿದರು. ಮುಂದೆ ಇದೊಂದು ಸಂಪ್ರದಾಯದಂತೆ ಬದಲಾಯಿತು. ಪ್ರತಿ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಹಸಿರು ಮರವನ್ನು ಸಿಂಗರಿಸಿ, ಕ್ರೈಸ್ತರು ಯೇಸುವಿನ ಜನ್ಮದಿನವನ್ನು ಸಂಭ್ರಮಿಸಲು ಆರಂಭಿಸಿದರು. ಈ ಪದ್ಧತಿ ಹೀಗೆ ಆರಂಭವಾಯಿತು.

ಪವಾಡದ ಮರ

ಕ್ರಿಸ್‌ಮಸ್ ಮರದ ಕುರಿತು ಇನ್ನೊಂದು ಪ್ರಸಿದ್ಧ ಕಥೆಯಿದೆ. ಕ್ರಿ. ಶ 722ರಲ್ಲಿ ಜರ್ಮನಿಯಲ್ಲಿ ಕ್ರಿಸ್‌ಮಸ್ ಮರ ಅಲಂಕರಿಸುವ ಸಂಪ್ರದಾಯ ಆರಂಭವಾಯಿತು ಎನ್ನಲಾಗಿದೆ. ಸಂತ ಬೋನಿಫೇಸ್‌ಗೆ ಜರ್ಮನಿಯಲ್ಲಿ ಒಮ್ಮೆ ದೊಡ್ಡ ಓಕ್ ಮರದ ಕೆಳಗೆ ಮಕ್ಕಳನ್ನು ಬಲಿ ನೀಡಲಾಯಿತು. ಈ ವಿಚಾರ ತಿಳಿದ ಸಂತ ಬೋನಿಫೇಸ್, ಓಕ್ ಮರವನ್ನು ಕತ್ತರಿಸಲು ಆದೇಶಿಸಿದರು. ಮಕ್ಕಳನ್ನು ಉಳಿಸುವುದು ಅವರ ಉದ್ದೇಶವಾಗಿತ್ತು. ಆದರೆ ಕತ್ತರಿಸಿದ ಮರದ ಜಾಗದಲ್ಲಿ ಸುಂದರವಾದ ಮರವೊಂದು ಬೆಳೆಯಲಾರಂಭಿಸಿತು. ಜನರು ಇದನ್ನು ಕಂಡು ಪವಾಡವೆಂದು ಕರೆದರು. ಸಂತ ಬೋನಿಫೇಸ್ ಅವರು ಇದನ್ನು ವಿಶೇಷ ದೈವಿಕ ಮರವೆಂದು ಕರೆದರು. ಜತೆಗೆ ಅದರ ಕೊಂಬೆಗಳು ಸ್ವರ್ಗದ ಸಂಕೇತವಾಗಿದೆ ಎಂದು ಜನರಿಗೆ ತಿಳಿಸಿದರು. ಅದಾದ ನಂತರ ಜನರು ಅದೇ ನಂಬಿಕೆಯಲ್ಲಿ, ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಯೇಸುವಿನ ಜನ್ಮದಿನವನ್ನು ಸಂಭ್ರಮಿಸಲು ಮರವನ್ನು ಸಿಂಗರಿಸಲು ಆರಂಭಿಸಿದರು ಎಂಬ ಕಥೆಯಿದೆ. ಕ್ರಿಸ್‌ಮಸ್ ಮರದ ಬಗ್ಗೆ ಹೀಗೆ ಹಲವು ಕಥೆಗಳು ಏನೇ ಇದ್ದರೂ, ಹಬ್ಬದ ಸಂದರ್ಭದಲ್ಲಿ ಕ್ರಿಸ್‌ಮಸ್ ಟ್ರೀಯನ್ನು ಆಕರ್ಷಕವಾಗಿ ಜಗಮಗಿಸುವಂತೆ ಸಿಂಗರಿಸುವುದು, ಅದರ ಬುಡದಲ್ಲಿ ಉಡುಗೊರೆ, ಮಿಠಾಯಿ ಇರಿಸುವುದು ಇಂದಿಗೂ ವಿಭಿನ್ನವಾಗಿ ಆಚರಿಸುವುದು ನಡೆಯುತ್ತದೆ.

Whats_app_banner