Christmas 2024: ಕ್ರಿಸ್‌ಮಸ್‌ಗೆ ಮನೆಯಲ್ಲೇ ಮಾಡ್ಕೊಳ್ಳಿ ಸಖತ್ ಟೇಸ್ಟಿ ಆಗಿರೋ ಪ್ಲಮ್ ಕೇಕ್, ಇಲ್ಲಿದೆ ಕೇಕ್ ಮಾಡುವ 2 ವಿಧಾನ
ಕ್ರಿಸ್‌ಮಸ್‌ಗೆ ಎರಡು ದಿನಗಳು ಬಾಕಿಯಿವೆ. ಎಲ್ಲೆಡೆ ಕ್ರಿಸ್‌ಮಸ್ ಸಂಭ್ರಮ ಜೋರಾಗಿದೆ. ಕ್ರಿಸ್‌ಮಸ್ ಎಂದರೆ ಕ್ರಿಸ್‌ಮಸ್ ಟೀ, ಸಾಂತಾಕ್ಲಾಸ್, ದೀಪಗಳು, ಕ್ರಿಸ್‌ಮಸ್ ಬೆಲ್ಲ ಇಷ್ಟೇ ಅಲ್ಲ. ಬಗೆ ಬಗೆ ಕೇಕ್‌ಗಳನ್ನು ತಯಾರಿಸುವ ಸಂಭ್ರಮದ ದಿನಗಳು ಹೌದು. ನಿಮಗೆ ಪ್ಲಮ್ ಕೇಕ್ ಇಷ್ಟ ಅಂದ್ರೆ ಮನೆಯಲ್ಲಿ ತಯಾರಿಸಿಕೊಳ್ಳಿ, ಇಲ್ಲಿದೆ ರೆಸಿಪಿ.
ಜಗತ್ತಿನಾದ್ಯಂತ ಕ್ರಿಸ್‌ಮಸ್ ಸಂಭ್ರಮ ಶುರುವಾಗಿದೆ. ಎಲ್ಲೆಲ್ಲೂ ಕ್ರಿಸ್‌ಮಸ್ ಟ್ರೀಗಳು, ಸಾಂತಾಕ್ಲಾಸ್, ಕ್ರಿಸ್‌ಮಸ್ ಬೆಲ್ ಕಣ್ಣಿಗೆ ಬೀಳುತ್ತಿದೆ. ಇನ್ನೊಂದೆಡೆ ಬಗೆ ಬಗೆಯ ಕೇಕ್‌ಗಳು ಬಾಯಲ್ಲಿ ನೀರು ತರಿಸುತ್ತಿವೆ. ಕ್ರಿಸ್‌ಮಸ್ ಎಂದರೆ ರಜಾದಿನಗಳು ಕೂಡ ಹೌದು. ಈ ಸಮಯದಲ್ಲಿ ಮನೆಮಂದಿಯೆಲ್ಲಾ ಒಂದೆಡೆ ಸೇರಿರುತ್ತಾರೆ. ಸಂಭ್ರಮವೂ ಹೆಚ್ಚಾಗುತ್ತದೆ. ಕ್ರಿಸ್‌ಮಸ್‌ನಲ್ಲಿ ಪ್ಲಮ್ ಕೇಕ್ ವಿಶೇಷ.
ತಾಜಾ ಪ್ಲಮ್ ಕೇಕ್ ಇಲ್ಲದೇ ಕ್ರಿಸ್‌ಮಸ್ ಪರಿಪೂರ್ಣವಾಗುವುದಿಲ್ಲ. ಪ್ರತಿಬಾರಿ ಕ್ರಿಸ್‌ಮಸ್‌ಗೂ ಪ್ಲಮ್ ಕೇಕ್ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ಮನೆಯಲ್ಲೇ ಕೇಕ್ ಮಾಡಿದಾಗ ಅದು ಪರಿಪೂರ್ಣವಾಗಿ ಬರುವುದಿಲ್ಲ. ಹಣ್ಣುಗಳು, ಒಣಹಣ್ಣುಗಳು, ಮೈದಾಹಿಟ್ಟಿನಿಂದ ತಯಾರಿಸುವ ಪ್ಲಮ್ ಕೇಕ್ ಸಖತ್ ಟೇಸ್ಟಿಯಾಗಿ, ಪರಿಪೂರ್ಣವಾಗಿ ಬರಲು ಕೆಲವು ಟಿಪ್ಸ್ ಅನುಸರಿಸಬೇಕು. ಮನೆಯಲ್ಲಿ ಸುಲಭವಾಗಿ ಪ್ಲಮ್ ಕೇಕ್ ತಯಾರಿಸುವುದು ಹೇಗೆ, ಇಲ್ಲಿದೆ ರೆಸಿಪಿ.
ಪ್ಲಮ್ ಕೇಕ್ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – 400 ಗ್ರಾಂ, ಕ್ಯಾಂಡಿಡ್ ಆರೆಂಜ್ – 100 ಗ್ರಾಂ, ಚೆರ್ರಿ – 100 ಗ್ರಾಂ, ಬೆಣ್ಣೆ – 400 ಗ್ರಾಂ, ಮಸಾಲೆ ಪುಡಿಗಳ ಮಿಶ್ರಣ – 5 ಗ್ರಾಂ, ರಮ್ – 150 ಎಂಎಲ್, ದ್ರಾಕ್ಷಿ – 100 ಗ್ರಾಂ, ಬ್ಲ್ಯಾಕ್ ಕರೆಂಟ್ – 100 ಗ್ರಾಂ, ಸಕ್ಕರೆ – 300 ಗ್ರಾಂ, ಮೊಟ್ಟೆ – 5, ಕೋಕಾ ಪೌಡರ್ – 50 ಗ್ರಾಂ
ಪ್ಲಮ್ ಕೇಕ್ ತಯಾರಿಸುವ ವಿಧಾನ
ಎಲ್ಲಾ ಒಣಹಣ್ಣುಗಳನ್ನು ರಮ್‌ನಲ್ಲಿ ಮಿಶ್ರಣ ಮಾಡಿ, ಅದಕ್ಕೆ ಮಸಾಲೆ ಮಿಶ್ರಣದ ಪುಡಿ ಸೇರಿಸಿ ರಾತ್ರಿಯಿಡಿ ನೆನೆಸಿ ಇಡಬೇಕು. ನಂತರ ಬೆಣ್ಣೆಗೆ ಸಕ್ಕರೆ ಸೇರಿಸಿ ಮಿಶ್ರಣ ಮಾಡಿ ಕೆನೆ ತಯಾರಿಸಬೇಕು. ನಂತರ ಮೊಟ್ಟೆ ಒಡೆದು ಹಾಕಿ ಪುನಃ ಮಿಶ್ರಣ ಮಾಡಬೇಕು. ನಂತರ ಕೋಕಾ ಪೌಡರ್ ಹಾಗೂ ನೆನೆಸಿದ ಒಣಹಣ್ಣುಗಳನ್ನು ಈ ಹಿಟ್ಟಿಗೆ ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೇಕ್ ಮೌಲ್ಡ್ ಮೇಲೆ ಪೇಪರ್ ಇಟ್ಟು ಈ ಹಿಟ್ಟನ್ನು ಸುರಿಯಿರಿ. 170 ಡಿಗ್ರಿ ಸೆಲ್ಸಿಯಸ್‌ನಲ್ಲಿ ಫ್ರಿ ಹೀಟ್ ಮಾಡಿರುವ ಓವನ್ ಅಲ್ಲಿ ಕೇಕ್ ಮೌಲ್ಡ್ ಇಟ್ಟು 40 ರಿಂದ 45 ನಿಮಿಷಗಳ ಕಾಲ ಬೇಯಿಸಿ. ನಂತರ ತೆಗೆದು ತಣ್ಣಗಾಗಿಸಿ. ನಂತರ ಅದನ್ನು ಪ್ಲೇಟ್ ಮೇಲೆ ಇಟ್ಟು ಬೇಕಾದ ಆಕಾರಕ್ಕೆ ಕತ್ತರಿಸಿ.
(ರೆಸಿಪಿ: ಕುನಾಲ್ ಕಪೂರ್, ಬಾಣಸಿಗ)
ಪ್ಲಮ್ ಕೇಕ್ ಮಾಡುವ ಇನ್ನೊಂದು ವಿಧಾನ
ಬೇಕಾಗುವ ಸಾಮಗ್ರಿಗಳು: ಮೈದಾ – ಒಂದು ಮುಕ್ಕಾಲು ಕಪ್, ಬ್ರೌನ್ ಶುಗರ್ – ಮುಕ್ಕಾಲು ಕಪ್, ಕಿತ್ತಳೆ ರಸ – 1ಕಪ್, ಒಣ ಅಂಜೂರ – 3 ಚಮಚ (ಚಿಕ್ಕದಾಗಿ ಹೆಚ್ಚಿದ್ದು), ಒಣ ಏಪ್ರಿಕಾಟ್ – 3 ಚಮಚ, ಒಣದ್ರಾಕ್ಷಿ – 3 ಚಮಚ, ಗೋಡಂಬಿ – 2 ಚಮಚ, ವಾಲ್‌ನಟ್ – 2 ಚಮಚ, ಒಣ ಕಾನ್‌ಬೆರಿ – 3 ಚಮಚ, ಬೆಣ್ಣೆ – ಮುಕ್ಕಾಲು ಕಪ್, ಅಡುಗೆ ಸೋಡಾ – ಒಂದು ಕಾಲು ಚಮಚ, ಕಿತ್ತಳೆ – 1, ಮಸಾಲೆ ಮಿಶ್ರಣ ಪುಡಿ – ಅರ್ಧ ಚಮಚ, ವೆನಿಲ್ಲಾ ಎಸೆನ್ಸ್ – 1 ಟೇಬಲ್ ಚಮಚ, ಕೋಕಾ ಪೌಡರ್ – ಕಾಲು ಕಪ್, ಬೇಕಿಂಗ್ ಪೌಡರ್ – ಒಂದೂವರೆ ಚಮಚ, ಮೊಸರು – 2 ಚಮಚ, ಗೋಡಂಬಿ – ಚಿಕ್ಕದಾಗಿ ಹೆಚ್ಚಿದ್ದು, ವಾಲ್‌ನಟ್ – ಚಿಕ್ಕದಾಗಿ ಹೆಚ್ಚಿದ್ದು
ಪ್ಲಮ್ ಕೇಕ್ ತಯಾರಿಸುವ ವಿಧಾನ
ಪ್ಯಾನ್ ಒಂದರಲ್ಲಿ ಕಂದು ಸಕ್ಕರೆ, ಕಿತ್ತಳೆ ರಸ, ಅಂಜೂರದ ಹಣ್ಣುಗಳು, ಏಪ್ರಿಕಾಟ್, ಒಣದ್ರಾಕ್ಷಿ, ಗೋಡಂಬಿ, ವಾಲ್‌ನಟ್, ಕ್ಯಾನ್‌ಬೆರ್ರಿ, ಬೆಣ್ಣೆ, ಅರ್ಧ ಚಮಚ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಣಹಣ್ಣುಗಳು ಮೃದುವಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಕಿತ್ತಳೆ ಹಣ್ಣುವನ್ನು ನೇರವಾಗಿ ಈ ಮಿಶ್ರಣಕ್ಕೆ ಸೇರಿಸಿ. 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಓವೆನ್ ಅನ್ನು ಫ್ರಿ ಹೀಟ್ ಮಾಡಿಕೊಳ್ಳಿ. ಮೇಲಿನ ಮಿಶ್ರಣಕ್ಕೆ ಮಸಾಲೆ ಪುಡಿ, ವೆನಿಲ್ಲಾ ಎಸೆನ್ಸ್ ಸೇರಿಸಿ. ಕೋಕಾ ಪೌಡರ್, ಮೈದಾಹಿಟ್ಟು, ಬೇಕಿಂಗ್ ಪೌಡರ್, ಚಾಕೊ ಸ್ಪ್ರೆಡ್ ಮತ್ತು ಮೊಸರು ಸೇರಿಸಿ. ಈ ಮಿಶ್ರಣವನ್ನು ಗ್ರೀಸ್ ಹಚ್ಚಿರುವ ಬೇಕಿಂಗ್ ಟಿನ್‌ಗೆ ಸುರಿಯಿರಿ. ಇದರ ಮೇಲೆ ಗೋಡಂಬಿ, ವಾಲ್‌ನಟ್ ಸಿಂಪಡಿಸಿ. ಇದನ್ನು 90 ನಿಮಿಷಗಳ ಕಾಲ ಬೇಯಿಸಿ. ಇದನ್ನು ತಣ್ಣಗಾಗಲು ಬಿಡಿ. ನಂತರ ತಟ್ಟೆ ಮೇಲೆ ಸುರಿಯಿರಿ. ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ತಿನ್ನಲು ಕೊಡಿ.
(ರೆಸಿಪಿ: ಸಂಜೀವ್ ಕಪೂರ್, ಬಾಣಸಿಗ)