ಅಶ್ವಿನ್ ಅವರಂತೆಯೇ ಪಾಕಿಸ್ತಾನ ವಿರುದ್ಧ ಟೆಸ್ಟ್ ಕ್ರಿಕೆಟ್ ಆಡದೇ ವೃತ್ತಿಜೀವನ ಮುಗಿಸಬಹುದು ಈ ಆಧುನಿಕ ಕಾಲದ ದಿಗ್ಗಜರು!
Indian Cricketers: ಆಧುನಿಕ ಕಾಲದ ದಂತಕಥೆಗಳೆಂದು ಹೆಸರಿಸಲ್ಪಟ್ಟ ಭಾರತದ ಕೆಲ ಕ್ರಿಕೆಟಿಗರು ಪಾಕಿಸ್ತಾನದ ವಿರುದ್ಧ ಒಂದೇ ಒಂದು ಟೆಸ್ಟ್ ಕ್ರಿಕೆಟ್ ಪಂದ್ಯವನ್ನಾಡದೆ ತಮ್ಮ ವೃತ್ತಿಜೀವನ ಕೊನೆಗೊಳಿಸುವ ಸಾಧ್ಯತೆಯಿದೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ನಡುವೆಯೇ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಕೇರಂ ಸ್ಪಿನ್ನರ್ ಅಶ್ವಿನ್ ಅವರು ದೇಶ-ವಿದೇಶದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ನಂತಹ ಘಟಾನುಘಟಿ ತಂಡಗಳ ವಿರುದ್ಧವೇ ಅಬ್ಬರಿಸಿ ವಿಕೆಟ್ ಬೇಟೆಯಾಡುವ ಪಾರಮ್ಯ ಮೆರೆದಿದ್ದಾರೆ. ತಮ್ಮ ಸ್ಪಿನ್ ಚಮತ್ಕಾರದಿಂದ ಟೀಮ್ ಇಂಡಿಯಾಗೆ ಅದೆಷ್ಟೋ ಗೆಲುವುಗಳ ಕಾರಣಕರ್ತರಾಗಿದ್ದಾರೆ. ಒಂದು ಕಾಲದಲ್ಲಿ ಭಾರತ ಟೆಸ್ಟ್ ಕ್ರಿಕೆಟ್ನ ಕಿರೀಟದ ರತ್ನವಾಗಿದ್ದ ಅಶ್ವಿನ್ ಅವರು ಇಷ್ಟೆಲ್ಲಾ ಸಾಧನೆ ಮಾಡಿದರೂ ಅವರಿಗೆ ಒಂದು ಕೊರಗು ಹಾಗೆಯೇ ಉಳಿದಿದೆ. ಅದೇ ಪಾಕಿಸ್ತಾನ ವಿರುದ್ಧ ಒಂದೂ ಟೆಸ್ಟ್ ಪಂದ್ಯವನ್ನಾಡದೆ ವೃತ್ತಿಜೀವನ ಅಂತ್ಯಗೊಳಿಸಿದ್ದು.
ಪಾಕಿಸ್ತಾನ ಮತ್ತು ಭಾರತ ನಡುವೆ ಕೊನೆಯ ಬಾರಿಗೆ 2007ರಲ್ಲಿ ಟೆಸ್ಟ್ ಸರಣಿ ನಡೆದಿತ್ತು. ಅಂದಿನಿಂದ ಇಲ್ಲಿಯವರೆಗೂ ಉಭಯ ದೇಶಗಳು ಟೆಸ್ಟ್ ಕ್ರಿಕೆಟ್ನಲ್ಲಿ ಮುಖಾಮುಖಿ ಆಗಿಲ್ಲ. ಎರಡೂ ದೇಶಗಳ ನಡುವಿನ ರಾಜಕೀಯ ಕಾರಣಗಳಿಂದ 18 ವರ್ಷಗಳಲ್ಲಿ ಈ ಸ್ವರೂಪದಲ್ಲಿ ಯಾವುದೇ ಪಂದ್ಯ ಆಡಿಲ್ಲ. ಪ್ರಸ್ತುತ ಅಶ್ವಿನ್ ಅವರು ಪಾಕ್ ವಿರುದ್ಧ ಆಡದೆಯೇ ತನ್ನ ಕ್ರಿಕೆಟ್ ಬದುಕನ್ನು ಅಂತ್ಯಗೊಳಿಸಿದ್ದಾರೆ. ಆದರೆ ಆಧುನಿಕ ಕಾಲದ ದಂತಕಥೆಗಳೆಂದು ಹೆಸರಿಸಲ್ಪಟ್ಟ ಭಾರತದ ಕೆಲ ಕ್ರಿಕೆಟಿಗರು ಪಾಕಿಸ್ತಾನದ ವಿರುದ್ಧ ಎಂದಿಗೂ ಟೆಸ್ಟ್ ಆಡದೆ ತಮ್ಮ ವೃತ್ತಿಜೀವನ ಕೊನೆಗೊಳಿಸುವ ಸಾಧ್ಯತೆಯಿದೆ. ಅಂತಹ ಭಾರತದ ಶ್ರೇಷ್ಠ ಕ್ರಿಕೆಟಿಗರ ಪಟ್ಟಿ ಇಂತಿದೆ ನೋಡಿ.
ರವಿಚಂದ್ರನ್ ಅಶ್ವಿನ್
537 ಟೆಸ್ಟ್ ವಿಕೆಟ್ಗಳೊಂದಿಗೆ ನಿವೃತ್ತಿ ಘೋಷಿಸಿದ ಅಶ್ವಿನ್ಗೆ ಪಾಕಿಸ್ತಾನ ವಿರುದ್ಧ ಟೆಸ್ಟ್ ಆಡಿಲ್ಲವೆಂಬ ಕೊರಗು ಕಾಡುತ್ತಿದೆ. ಟಿ20 ಮತ್ತು ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದರೂ ದೀರ್ಘ ಸ್ವರೂಪದಲ್ಲಿ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ. 2022ರ ಟಿ20 ವಿಶ್ವಕಪ್ನಲ್ಲಿ ಎಂಸಿಜಿಯಲ್ಲಿ ಭಾರತದ ಐತಿಹಾಸಿಕ ಗೆಲುವಿಗೆ ಕಾರಣಕರ್ತರಾಗಿದ್ದ ಅಶ್ವಿನ್, ಪಾಕಿಸ್ತಾನ ವಿರುದ್ಧ ಅಪ್ರತಿಮ ಕ್ಷಣವನ್ನು ಹೊಂದಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಪಾಕ್ ವಿರುದ್ಧ ಆಡಲು ಸಾಧ್ಯವಾಗಲಿಲ್ಲ.
ವಿರಾಟ್ ಕೊಹ್ಲಿ
ಪಾಕಿಸ್ತಾನ ವಿರುದ್ಧ ಟಿ20, ಏಕದಿನ ಕ್ರಿಕೆಟ್ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿರುವ ವಿರಾಟ್ ಕೊಹ್ಲಿ, ತಮ್ಮ ವೃತ್ತಿಜೀವನದಲ್ಲಿ ಪಾಕಿಸ್ತಾನ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿಲ್ಲ. ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಗಳಿಸಿದ ಅಜೇಯ 183* ರನ್ ಅವರ ಅತ್ಯಧಿಕ ಏಕದಿನ ಸ್ಕೋರ್ ಆಗಿದೆ. ವಿಶ್ವಕಪ್ ಥ್ರಿಲ್ಲರ್ನಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟುವ ಮೂಲಕ ಸ್ಮರಣೀಯ ಗೆಲುವು ತಂದುಕೊಟ್ಟಿದ್ದ ಕೊಹ್ಲಿ, ಪಾಕ್ ಎದುರು ಟೆಸ್ಟ್ ಪಂದ್ಯವನ್ನಾಡದೆ ತನ್ನ ವೃತ್ತಿಜೀವನ ಅಂತ್ಯಗೊಳಿಸುವ ಸಾಧ್ಯತೆ ಇದೆ.
ರೋಹಿತ್ ಶರ್ಮಾ
ಪಾಕಿಸ್ತಾನ ವಿರುದ್ಧ ವೈಟ್ ಬಾಲ್ ಕ್ರಿಕೆಟ್ನಲ್ಲಿ ಆನಂದಿಸಿದ ಭಾರತೀಯ ನಾಯಕ ರೋಹಿತ್ ಶರ್ಮಾ ಅವರು ಅದೇ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್ ಆಡಿಯೇ ಇಲ್ಲ. ಅವರು 2007 ರಲ್ಲಿ ವೈಟ್ ಬಾಲ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರೂ, ಟೆಸ್ಟ್ ಕ್ಯಾಪ್ ಪಡೆಯಲು ಹಲವು ವರ್ಷಗಳೇ ಬೇಕಾಯಿತು. ಪ್ರಸ್ತುತ ಪಾಕಿಸ್ತಾನ ವಿರುದ್ಧ ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ನಿಖರವಾಗಿ 1000 ರನ್ ಗಳಿಸಿರುವ ರೋಹಿತ್, ಈ ತಂಡದ ಎದುರು ಟೆಸ್ಟ್ ಕ್ರಿಕೆಟ್ ಆಡದೆಯೇ ತಮ್ಮ ಕರಿಯರ್ ಮುಗಿಸುವ ಸಾಧ್ಯತೆ ಇದೆ.
ಚೇತೇಶ್ವರ್ ಪೂಜಾರ
ಪ್ರಸ್ತುತ ಭಾರತ ತಂಡಕ್ಕೆ ದೂರವಾಗಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ವಿರುದ್ಧ ಸ್ಪರ್ಧಿಸಲು ಎಂದಿಗೂ ಅವಕಾಶ ಸಿಕ್ಕಿಲ್ಲ. ಭಾರತದ ಕ್ರಿಕೆಟ್ನ 2ನೇ ಗೋಡೆ ಎಂದು ಕರೆಸಿಕೊಳ್ಳುತ್ತಿದ್ದ ಪೂಜಾರ ಸದ್ಯ ತಂಡದಲ್ಲಿ ತಮ್ಮ ಸ್ಥಾನ ಕಳೆದುಕೊಂಡಿರುವ ಕಾರಣ ಪಾಕ್ ವಿರುದ್ಧ ಟೆಸ್ಟ್ ಆಡುವುದು ಅಸಾಧ್ಯವೆಂದೇ ಹೇಳಬಹುದು.
ಅಜಿಂಕ್ಯ ರಹಾನೆ
ಭಾರತ ಕ್ರಿಕೆಟ್ ತಂಡಕ್ಕೆ ದೂರವಾಗಿರುವ ಮತ್ತೊಬ್ಬ ಆಧುನಿಕ ಕ್ರಿಕೆಟ್ನ ದಿಗ್ಗಜ ಅಜಿಂಕ್ಯ ರಹಾನೆಗೂ ಪಾಕಿಸ್ತಾನ ವಿರುದ್ಧ ಟೆಸ್ಟ್ ಆಡುವ ಸುವರ್ಣಾವಕಾಶ ಒದಗಿ ಬಂದಿಲ್ಲ. ಪೂಜಾರ ಅವರಂತೆಯೇ ರಹಾನೆಗೂ ಇನ್ನು ಆ ಅವಕಾಶ ಇಲ್ಲವಾಗಿದೆ. 5ನೇ ಕ್ರಮಾಂಕದಲ್ಲಿ ಭಾರತ ತಂಡದ ಆಧಾರ ಸ್ಥಂಭವಾಗಿದ್ದ ರಹಾನೆ, ಪಾಕಿಸ್ತಾನದ ವಿರುದ್ಧ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಸಾಧ್ಯವಾಗಲಿಲ್ಲ. ಇವರಲ್ಲದೆ, ರವೀಂದ್ರ ಜಡೇಜಾ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್.. ಹೀಗೆ ಹಲವರು ಪಾಕಿಸ್ತಾನ ವಿರುದ್ಧ ಒಂದೂ ಟೆಸ್ಟ್ ಆಡದೆ ತಮ್ಮ ವೃತ್ತಿಜೀವನ ಮುಗಿಸುವ ಸಾಧ್ಯತೆ ಇದೆ. ಉಭಯ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯದ ಹೊರತು ಟೆಸ್ಟ್ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇಲ್ಲ.