ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ, ಹಾರ್ದಿಕ್ ಪಾಂಡ್ಯ ವಾಪಸ್; ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ಸಂಭಾವ್ಯ ತಂಡ
Indias Likely Squad: ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಗೆ ಭಾರತ ತಂಡದ ಸಂಭಾವ್ಯ ತಂಡ ಹೇಗಿರಲಿದೆ ಎಂಬುದನ್ನು ನೋಡೋಣ. ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಆಡಲಿದ್ದಾರೆಯೇ?
ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ, ಈ ಸರಣಿಯ ಬೆನ್ನಲ್ಲೇ ಬಹು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ಆರಂಭಿಸಲಿದೆ. ಈ ಮೆಗಾ ಟೂರ್ನಿಗೂ ಮುನ್ನ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಆಡುವ ಮೂಲಕ ತಯಾರಿ ಆರಂಭಿಸಲಿದೆ. ಇದಕ್ಕಾಗಿ ಭಾರತ ಪೂರ್ಣ ಸಾಮರ್ಥ್ಯದ ತಂಡವನ್ನು ಆಯ್ಕೆ ಮಾಡುವ ಅಗತ್ಯ ಇದೆ. ಬಿಜಿಟಿ ಸರಣಿಯ ನಂತರ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಅಗತ್ಯವಿದ್ದರೂ ಅವರಿಗೆ ರೆಸ್ಟ್ ಕೊಡುವುದು ಅಸಾಧ್ಯ ಎಂದು ವರದಿಯಾಗಿದೆ. ಇದರ ನಡುವೆಯೂ ಒಂದಿಬ್ಬರಿಗೆ ಈ ವಿಶ್ರಾತಿ ಸಿಗಬಹುದು ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಪ್ರಕಟವಾಗುವ ಭಾರತ ತಂಡವೇ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಆಗಿರುತ್ತದೆ. ಆದರೆ ಒಂದೆರಡು ಬದಲಾವಣೆಗಳನ್ನು ನಾವು ಕಾಣಬಹುದಷ್ಟೆ. ತಂಡದಲ್ಲಿ ಪ್ರಸ್ತುತ ಆಟಗಾರರ ಪೈಪೋಟಿ ಹೆಚ್ಚಾಗಿದೆ. ಒಂದೊಂದು ಸ್ಲಾಟ್ಗೂ ಇಬ್ಬರು ಮೂವರ ನಡುವೆ ಪೈಪೋಟಿ ನಡೆಯುತ್ತಿದೆ. ಒಂದು ವೇಳೆ ಇಂಗ್ಲೆಂಡ್ ಸರಣಿಗೆ ಅಚ್ಚರಿ ಆಯ್ಕೆಯಾದವರು ಅದ್ಭುತ ಪ್ರದರ್ಶನ ನೀಡಿದರೆ ಚಾಂಪಿಯನ್ಸ್ ಟ್ರೋಫಿಗೂ ಸ್ಥಾನ ಭದ್ರಪಡಿಸಿಕೊಳ್ಳಲಿದ್ದಾರೆ. ಕಳಪೆ ಪ್ರದರ್ಶನ ನೀಡಿದರೆ, ಸ್ಥಾನ ಕಳೆದುಕೊಳ್ಳಬಹುದು. ಪ್ರಸ್ತುತ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಇಂಗ್ಲೆಂಡ್ ಸರಣಿಗೆ ವಿಶ್ರಾಂತಿ ನೀಡಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ. ಏಕೆಂದರೆ ಚಾಂಪಿಯನ್ಸ್ ಟ್ರೋಫಿಗೆ ಅವರೇ ಪ್ರಮುಖ ಪಿಲ್ಲರ್ ಆಗಿದ್ದು, ಇಂಗ್ಲೆಂಡ್ ವಿರುದ್ಧ ಗಾಯಗೊಂಡರೆ ತಂಡಕ್ಕೆ ಹಿನ್ನಡೆಯಾಗಲಿದೆ ಎನ್ನುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಗೆ ಯಾರಿಗೆಲ್ಲ ಸಿಗಬಹುದು ಅವಕಾಶ?
ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಕಣಕ್ಕಿಳಿಯುವುದು ಖಚಿತವಾಗಿದೆ. ಇವರಿಗೆ ಬ್ಯಾಕಪ್ ಓಪನರ್ ಆಗಿ ಯಶಸ್ವಿ ಜೈಸ್ವಾಲ್ಗೆ ಅವಕಾಶ ಸಿಗಬಹುದು. ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸೈಯದ್ ಮುಷ್ತಾಕ್ ಅಲಿ, ವಿಜಯ್ ಹಜಾರೆಯಲ್ಲಿ ಉತ್ತಮ ಲಯದಲ್ಲಿರುವ ಶ್ರೇಯಸ್ ಅಯ್ಯರ್ ಶ್ರೀಲಂಕಾ ಸರಣಿಯ ನಂತರ ಅವರು ವೈಟ್ ಬಾಲ್ ಕ್ರಿಕೆಟ್ಗೆ ಮರಳಬಹುದು. 5ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಇವರೇ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸಬೇಕಿದೆ. ರಿಷಭ್ ಪಂತ್ ತಂಡಕ್ಕೆ ಆಯ್ಕೆಯಾದರೂ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಬಹುದು. ಇನ್ನು ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಇವರಿಗೆ ವೇಗದ ಬ್ಯಾಕಪ್ ಆಲ್ರೌಂಡರ್ ಆಗಿ ನಿತೀಶ್ ಕುಮಾರ್ ರೆಡ್ಡಿ ಅವಕಾಶ ಒಲಿದು ಬರಬಹುದು.
ಆಲ್ರೌಂಡರ್ಗಳು, ಬೌಲರ್ಗಳ ವಿಚಾರಕ್ಕೆ ಬರುವುದಾದರೆ, ಸ್ಪಿನ್ ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ ಸ್ಥಾನ ಖಚಿತವಾಗಿದೆ. ಇವರಿಗೆ ಬ್ಯಾಕಪ್ ಆಗಿ ಅಕ್ಷರ್ ಪಟೇಲ್ ಅಥವಾ ವಾಷಿಂಗ್ಟನ್ ಸುಂದರ್ ಸ್ಥಾನ ಪಡೆಯಬಹುದು. ಕುಲ್ದೀಪ್ ಯಾದವ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಸ್ಥಾನ ಗಿಟ್ಟಿಸಿಕೊಳ್ಳಬಹುದು. ವೇಗಿಗಳ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ. ಇಂಜುರಿಯಿಂದ ದೂರವಿರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಬದಲಿಗೆ ಮೊಹಮ್ಮದ್ ಶಮಿ ತಂಡಕ್ಕೆ ಮರಳಬಹುದು. ಇವರಿಗೆ ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಸಾಥ್ ನೀಡಲಿದ್ದಾರೆ. ಆದರೆ ಈ ಪೈಕಿ ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಅವಕಾಶ ಸಿಗಬಹುದು ಎಂಬುದು ಕಾದುನೋಡೋಣ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತದ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.