New Year Resolutions: ಹೊಸ ವರ್ಷದ ನಿರ್ಣಯಗಳನ್ನು ಪಾಲಿಸುವಲ್ಲಿ ನಾವು ಸೋಲುವುದೇಕೆ, ಮನಃಶಾಸ್ತ್ರ ನೀಡುವ ಕಾರಣವಿದು
2024ನೇ ವರ್ಷ ಮುಗಿದು 2025ಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದೇವೆ. ಪ್ರತಿ ವರ್ಷ ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಮುಂದಿನ ವರ್ಷಕ್ಕೆಂದು ಒಂದಿಷ್ಟು ನಿರ್ಣಯಗಳನ್ನು ಮಾಡಿಕೊಳ್ಳುತ್ತೇವೆ. ಆದರೆ ಈ ನಿರ್ಣಯಗಳನ್ನು ಪಾಲಿಸುವಲ್ಲಿ ಶೇ 90ರಷ್ಟು ಮಂದಿ ಸೋಲುತ್ತಾರೆ. ನ್ಯೂ ಇಯರ್ ರೆಸಲ್ಯೂಷನ್ ಪಾಲಿಸುವಲ್ಲಿ ನಾವು ಸೋಲುವುದೇಕೆ, ಮನ:ಶಾಸ್ತ್ರ ನೀಡುವ ಉತ್ತರ ಹೀಗಿದೆ.
ಪ್ರತಿ ವರ್ಷ ಆ ವರ್ಷ ಮುಗಿಯುತ್ತಾ ಬಂದಾಗ ಮುಂದಿನ ವರ್ಷದ ಬಗ್ಗೆ ನಾವು ಒಂದಿಷ್ಟು ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ. ಈ ವರ್ಷ ಮಾಡಲಾಗದ್ದನ್ನು ಮುಂದಿನ ವರ್ಷ ಮಾಡಲೇಬೇಕು ಎಂದು ಪಣ ತೊಡುತ್ತೇವೆ. ಹೊಸ ವರ್ಷ ಬಂದಾಗ ನ್ಯೂ ಇಯರ್ ರೆಸಲ್ಯೂಷನ್ ಬಗ್ಗೆ ಚರ್ಚೆಯಾಗುವುದು ಸಹಜ. ಈ ವರ್ಷ ಈ ಎಲ್ಲಾ ನಿರ್ಣಯಗಳನ್ನು ಪಾಲಿಸಲೇಬೇಕು ಎಂದು ಪಣ ತೊಡುತ್ತೇವೆ.
ಮುಂದಿನ ವರ್ಷ ಈ ಎಲ್ಲಾ ರೆಸಲ್ಯೂಷನ್‌ಗಳನ್ನು ಪಾಲಿಸಬೇಕು ಎಂದುಕೊಂಡು ದೃಢ ಮನಸ್ಸು ಮಾಡುತ್ತೇವೆ. ಅದಕ್ಕಾಗಿ ಒಂದಿಷ್ಟು ನಿರ್ಣಯಗಳನ್ನು ಮಾಡುತ್ತೇವೆ. ಆದರೆ ವರ್ಷದ ಆರಂಭದಲ್ಲಿದ್ದ ಜೋಶ್ ನಿಧಾನಕ್ಕೆ ಕಡಿಮೆಯಾಗುತ್ತದೆ. ಎರಡು ಮೂರು ತಿಂಗಳು ಕಳೆಯುವುದರಲ್ಲಿ ನಾವು ಮಾಡಿದ್ದ ನಿರ್ಣಯ ಯಾವುದು ಎಂಬುದನ್ನು ಮರೆತೆ ಹೋಗುತ್ತೇವೆ. ಹಾಗಾದರೆ ಹೊಸ ವರ್ಷದ ನಿರ್ಣಯಗಳನ್ನು ಪಾಲಿಸುವಲ್ಲಿ ನಾವು ಸೋಲುತ್ತಿರುವುದೇಕೆ, ಈ ಬಗ್ಗೆ ಮನಃಶಾಸ್ತ್ರ ನೀಡುವ ಉತ್ತರ ಹೀಗಿದೆ.
ಅಸಾಧ್ಯವಾಗಿರುವುದನ್ನು ಸಾಧಿಸುವ ಯೋಚನೆ
ಹೊಸ ವರ್ಷದ ನಿರ್ಣಯ ಎಂದಾಗ ಹೊಸ ಹುಮ್ಮಸ್ಸಿನಲ್ಲಿ ಅಸಾಧ್ಯವಾಗಿರುವುದನ್ನು ಸಾಧಿಸಲು ಹೊರಡುತ್ತೇವೆ. ಈ ವರ್ಷ ಇದನ್ನು ಮಾಡಿಯೇ ಮಾಡುತ್ತೇನೆ ಎಂಬ ಛಲ ಇರಿಸಿಕೊಳ್ಳುತ್ತೇವೆ. ಆದರೆ ನಮ್ಮಿಂದ ಅಸಾಧ್ಯವಾಗಿರುವುದು ಆರಂಭದಲ್ಲೇ ನಮಗೆ ಕಷ್ಟ ಎನ್ನಿಸುತ್ತದೆ. ಇದರಿಂದ ಮುಂದೆ ಹೋಗಲು ಮನಸ್ಸು ಒಪ್ಪುವುದಿಲ್ಲ. ಇದು ನನ್ನಿಂದ ಸಾಧ್ಯವಿಲ್ಲ ಎಂಬ ಯೋಚನೆ ಮನಸ್ಸಿನಲ್ಲಿ ಬಂದಾಗ ನಾವು ಖಂಡಿತ ಪ್ರಯತ್ನ ಮುಂದುವರಿಸುವುದಿಲ್ಲ. ಇದು ನಮ್ಮ ಹೊಸ ವರ್ಷದ ಸೋಲಾಗಲು ಪ್ರಮುಖ ಕಾರಣ ಎಂದು ಮನಶಾಸ್ತ್ರ ಹೇಳುತ್ತದೆ.
ಬದಲಾವಣೆಗೆ ನಾವು ಸಿದ್ಧರಿಲ್ಲದೇ ಇರುವುದು
ಹೊಸ ವರ್ಷದ ನಿರ್ಣಯಗಳು ನಾವು ಬದಲಾಗುವಂತೆ ಇರುತ್ತದೆ. ಈ ನಿರ್ಣಯಗಳು ನಮ್ಮ ಬದುಕನ್ನು ಬದಲಿಸುವಂತೆ ಇರುವುದು ಸುಳ್ಳಲ್ಲ. ಆದರೆ ಬದಲಾವಣೆಗೆ ನಾವು ಸಿದ್ಧರಿರುವುದಿಲ್ಲ. ಬದಲಾವಣೆ ನಮಗೆ ಖುಷಿ ಕೊಡುವುದಿಲ್ಲ. ಬದಲಾವಣೆಗೆ ಹೊಂದಿಕೊಳ್ಳಲು ಸಿದ್ಧರಿಲ್ಲದ ನಾವು ಬಹಳ ದಿನಗಳವರೆಗೆ ಹೊಸ ವರ್ಷದ ನಿರ್ಣಯಗಳಿಗೆ ಅಂಟಿಕೊಳ್ಳುವುದಿಲ್ಲ. ಇದರಿಂದ ಕೂಡ ನ್ಯೂ ಇಯರ್ ರೆಸಲ್ಯೂಷನ್ ಪಾಲಿಸಲು ಸೋಲುತ್ತೇವೆ.
ಬದ್ಧತೆ ಇಲ್ಲದೇ ಇರುವುದು
ಕನಸು ಕಾಣುವುದು ಸುಲಭ ಅಂತೆಯೇ ಕಂಡ ಕನಸನ್ನು ನನಸು ಮಾಡಿಕೊಳ್ಳುವುದು ಕಷ್ಟ. ಹಾಗೆಯೇ ಹೊಸ ವರ್ಷಕ್ಕೆ ಒಂದಿಷ್ಟು ನಿರ್ಣಯಗಳನ್ನು ಹಾಕಿಕೊಳ್ಳುವುದು ಸುಲಭ, ಆದರೆ ಅದನ್ನು ಬದ್ಧತೆಯಿಂದ ಪಾಲಿಸುವುದು ಕಷ್ಟ. ಬಹುತೇಕರು ಹೊಸ ವರ್ಷದ ರೆಸಲ್ಯೂಷನ್ ಪಾಲಿಸುವಲ್ಲಿ ವಿಫಲರಾಗುತ್ತಿರುವುದು ಇದೇ ಕಾರಣಕ್ಕೆ. ಬದ್ಧತೆ ಇಲ್ಲದೇ ಇರುವುದು ಹೊಸ ವರ್ಷದ ನಿರ್ಣಯದಲ್ಲಿ ಸೋಲಲು ಪ್ರಮುಖ ಕಾರಣವಾಗಿದೆ.
ಸರಿಯಾದ ಪ್ಲಾನಿಂಗ್ ಇಲ್ಲದೇ ಇರುವುದು
ಹೊಸ ವರ್ಷಕ್ಕೆ ರೆಸಲ್ಯೂಷನ್‌ಗಳನ್ನು ಮಾಡಿದಂತೆ ಅದಕ್ಕೆ ತಕ್ಕಂತೆ ಪ್ಲಾನಿಂಗ್ ಕೂಡ ಮಾಡಬೇಕಾಗುತ್ತದೆ. ಆದರೆ ಬಹುತೇಕರು ಸರಿಯಾಗಿ ಪ್ಲಾನಿಂಗ್ ಮಾಡಲು ಸಾಧ್ಯವಾಗದೆ ಹೊಸ ವರ್ಷದ ನಿರ್ಣಯಗಳನ್ನು ಪಾಲಿಸುವಲ್ಲಿ ವಿಫಲರಾಗುತ್ತಾರೆ.
ಸ್ವ ಅನುಮಾನ
ನಮ್ಮ ಮೇಲೆ ನಮಗೆ ಅನುಮಾನ ಇರುವುದು ಕೂಡ ಹೊಸ ವರ್ಷದ ನಿರ್ಣಯಗಳನ್ನು ಪಾಲಿಸಲು ಸೋಲುವಲ್ಲಿ ಪ್ರಮುಖ ಕಾರಣವಾಗಿದೆ. ನಿರ್ಣಯಗಳನ್ನು ಮಾಡುವ ಇದ್ದ ಹುಮಸ್ಸು ನಂತರದಲ್ಲಿ ಇರುವುದಿಲ್ಲ. ಆ ಕಾರಣಕ್ಕೆ ಇದು ನನ್ನಿಂದ ಸಾಧ್ಯವೇ, ಯಾಕೋ ಇದು ನನ್ನದಲ್ಲ ಎನ್ನಿಸುತ್ತಿದೆ ಎಂಬೆಲ್ಲಾ ಸ್ವ ಅನುಮಾನ ಮೂಡಿಸಿಕೊಂಡು ಹೊಸ ವರ್ಷದ ನಿರ್ಣಯ ಪಾಲಿಸುವಲ್ಲಿ ನಾವು ಸೋಲುತ್ತಿದ್ದೇವೆ. ಮೊದಲು ನಾನು ಮಾಡಿಯೇ ಮಾಡುತ್ತೇನೆ ಎಂಬ ಛಲ ಇರಬೇಕು. ನಂತರವಷ್ಟೇ ಸಾಧಿಸಲು ಸಾಧ್ಯ.
ಸ್ವಷ್ಟತೆ ಇಲ್ಲದೇ ಇರುವುದು
ಬಹುತೇಕರಿಗೆ ತಾವು ಹೊಸ ವರ್ಷದ ಬಗ್ಗೆ ಮಾಡಿರುವ ನಿರ್ಣಯಗಳ ಬಗ್ಗೆ ಸ್ವಷ್ಟತೆ ಇರುವುದಿಲ್ಲ. ಇದರಿಂದ ಅವರು ನಿರ್ಣಯಗಳನ್ನು ಪಾಲಿಸುವಲ್ಲಿ ಸೋಲುತ್ತಾರೆ. ಯಾವ ಕಾರಣಕ್ಕೆ ನಾನು ಈ ನಿರ್ಣಯವನ್ನು ಪಾಲಿಸಬೇಕು ಎಂಬ ಸ್ವಷ್ಟತೆ ನಿಮ್ಮಲ್ಲಿದ್ದರೆ ಖಂಡಿತ ನೀವು ತೆಗೆದುಕೊಂಡ ನಿರ್ಣಯವನ್ನು ಪಾಲಿಸುವಲ್ಲಿ ನೀವು ಸೋಲುವುದಿಲ್ಲ.