Deepavali 2023: ದೀಪಾವಳಿ ನೀರು ತುಂಬುವ ಹಬ್ಬ, ಅಭ್ಯಂಗ ಸ್ನಾನ ಮಾಡುವಾಗ ಆಚರಿಸಬೇಕಾದ ಶಾಸ್ತ್ರ ಸಂಪ್ರದಾಯಗಳಿವು
Deepavali 2023: ಸ್ನಾನ ಮಾಡುವ ನೀರಿನಲ್ಲಿ ಗಂಗಾದೇವಿ ನೆಲೆಸಿರುತ್ತಾಳೆ. ಇದೇ ಕಾರಣದಿಂದ ನೀರು ತುಂಬಿರುವ ಲೋಟಕ್ಕೆ ಕೂಡಾ ಕಾಲನ್ನು ತಾಕಿಸಬಾರದು. ಪುರುಷರಾಗಲಿ ಸ್ತ್ರೀಯರಾಗಲಿ ಪೂರ್ವ ದಿಕ್ಕಿಗೆ ಮುಖ ಮಾಡಿ ಮೊದಲು ಹಣೆಗೆ ಕುಂಕುಮ ಹಚ್ಚಿ ನಂತರ ಹರಳೆಣ್ಣೆಯನ್ನು ಹಚ್ಚಬೇಕು. ಯಾವುದೇ ಬೇಧ ಭಾವ ತೋರದೆ ಮನೆಯಲ್ಲಿರುವ ಹಿರಿಯರು ಮೊದಲ ಬಾರಿ ತಲೆಗೆ ನೀರನ್ನು ಹಾಕಬೇಕು.
Deepavali 2023: ದೇಶಾದ್ಯಂತ ಜನರು ಬೆಳಕಿನ ಹಬ್ಬಕ್ಕಾಗಿ ಎದುರು ನೋಡುತ್ತಿದ್ದಾರೆ. ಈ 5 ದಿನಗಳ ಹಬ್ಬವನ್ನು ಆಚರಿಸಲು ಸಡಗರ ಸಂಭ್ರಮದಿಂದ ಸಕಲ ತಯಾರಿ ಮಾಡಿಕೊಂಡು ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ದೀಪಾವಳಿ ಮೊದಲ ದಿನವನನ್ನು ನೀರು ತುಂಬುವ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಹಬ್ಬದ ಬಗ್ಗೆ ತಿಳಿದುಕೊಳ್ಳೋಣ.
ಪಾತ್ರೆ ಪರಕರಗಳನ್ನು ಶುಚಿಗೊಳಿಸಿ ನೀರು ತುಂಬುವುದು
ಮನುಷ್ಯನೂ ಸೇರಿದಂತೆ ಪ್ರತಿ ಪ್ರಾಣಿಯೂ ಪಂಚಭೂತವನ್ನು ಅವಲಂಬಿಸಿರುತ್ತದೆ. ದೀಪಾವಳಿ ಸಮಯದಲ್ಲಿ ನೀರಿಗೆ ಮುಖ್ಯವಾದ ಪ್ರಾಮುಖ್ಯತೆ ನೀಡಲಾಗಲಿದೆ. ದೀಪಾವಳಿ ಆರಂಭವಾಗುವುದೇ ನೀರು ತುಂಬುವ ಹಬ್ಬದಿಂದ. ನೀರನ್ನು ಸಂಗ್ರಹಿಸುವ ಪ್ರತಿಯೊಂದು ಪಾತ್ರೆ ಪರಿಕರಗಳನ್ನು ಶುಚಿಮಾಡಿ, ನೀರು ತುಂಬಿ, ಅದಕ್ಕೆ ಅರಿಶಿನ ಕುಂಕುಮ ಹಚ್ಚಿ, ಹೂನಿಂದ ಅಲಂಕರಿಸಿ ರಂಗೋಲಿ ಇಡುತ್ತಾರೆ. ಹಬ್ಬದಂದು ಲಕ್ಷ್ಮೀದೇವಿಯ ಪೂಜೆ ಮಾಡುವುದರಿಂದ ದೇವಿಯ ಪ್ರತೀಕವಾದ ಹೆಣ್ಣುಮಕ್ಕಳನ್ನು ಹಬ್ಬದಂದು ಯಾವುದೇ ಕಾರಣಕ್ಕೂ ನೋಯಿಸಬಾರದು. ಈ ದಿನ ಲಕ್ಷೀದೇವಿಯ ಜೊತೆ ಸೋದರರು, ಯಕ್ಷ, ಕಾಮಧೇನು ಸೇರಿದಂತೆ ಇನ್ನೂ ಅನೇಕ ಮುಖ್ಯಜೀವಿಗಳ ಉಗಮ ಆಯಿತೆಂದು ಹೇಳಲಾಗಿದೆ.
ಅಭ್ಯಂಗ ಸ್ನಾನ
ಅಲಂಕರಿಸಿ, ನೀರು ತುಂಬುವ ಪಾತ್ರೆಗಳಿಗೆ 2ನೇ ದಿನ ಮತ್ತೆ ಅರಿಶಿನ, ಕುಂಕುಮ ಹಚ್ಚಿ ಹೂಗಳಿಂದ ಪೂಜಿಸಬೆಕು. ದೇವರ ಮುಂದೆ ಹರಳೆಣ್ಣೆ, ಸೀಗೆಪುಡಿಯನ್ನು ಇಟ್ಟು ಪೂಜಿಸಬೇಕು. ಸ್ನಾನ ಮಾಡುವ ನೀರಿನಲ್ಲಿ ಸ್ವಯಂ ಗಂಗಾದೇವಿಯೇ ನೆಲೆಸಿರುತ್ತಾಳೆ. ಇದೇ ಕಾರಣದಿಂದ ನೀರು ತುಂಬಿರುವ ಲೋಟಕ್ಕೆ ಕೂಡಾ ಕಾಲನ್ನು ತಾಕಿಸಬಾರದು. ಪುರುಷರಾಗಲಿ ಸ್ತ್ರೀಯರಾಗಲಿ ಪೂರ್ವ ದಿಕ್ಕಿಗೆ ಮುಖ ಮಾಡಿ ಮೊದಲು ಹಣೆಗೆ ಕುಂಕುಮ ಹಚ್ಚಿ ನಂತರ ಹರಳೆಣ್ಣೆಯನ್ನು ಹಚ್ಚಬೇಕು. ಯಾವುದೇ ಬೇಧ ಭಾವ ತೋರದೆ ಮನೆಯಲ್ಲಿರುವ ಹಿರಿಯರು ಮೊದಲ ಬಾರಿ ತಲೆಗೆ ನೀರನ್ನು ಹಾಕಬೇಕು. ಇದರಿಂದ ಆಯುಷ್ಯಾಭಿವೃದ್ಧಿ ಆಗುತ್ತದೆ ಎಂದು ಹೇಳಲಾಗಿದೆ. ಆನಂತರ ಹಿರಿಯರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ಅವರು ನೀಡುವ ಹೊಸ ಬಟ್ಟೆಯನ್ನು ಧರಿಸಿ ಪಟಾಕಿ ಸಿಡಿಸಿ ಹಬ್ಬವನ್ನು ಸಂಭ್ರಮಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ದೀಪಾವಳಿಯನ್ನು 7 ದಿನಗಳ ಕಾಲ ಆಚರಿಸುತ್ತಿದ್ದರು.
ಹೊಸ್ತಿಲ ಮೇಲೆ ದೀಪ ಹಚ್ಚುವುದು
ಹಬ್ಬದಂದು ಕೇವಲ ದೇವರ ಕೋಣೆ ಅಲ್ಲದೆ ಮನೆಯ ಹೊಸ್ತಿಲ ಮೇಲೂ ದೀಪ ಹಚ್ಚಬೇಕು. ದೀಪವನ್ನು ಹಚ್ಚಲು ಊದಿನ ಕಡ್ಡಿಯನ್ನು ಬಳಸಬೇಕು. ಯಾವುದೇ ಕಾರಣಕ್ಕೂ ಪೊರಕೆಯ ಕಡ್ಡಿ ಬಳಸಬಾರದು. ದೀಪ ಹಚ್ಚುವ ವೇಳೆ ಬಾಯಿಯಿಂದ ಗಾಳಿ ಊದಬಾರದು. ವಿದ್ಯುತ್ ದೀಪಗಳಿದ್ದರೂ ಕನಿಷ್ಠಪಕ್ಷ ಶಾಸ್ತ್ರಕ್ಕಾದರೂ ಮನೆಯ ಹೊರ ಬಾಗಿಲಿನಲ್ಲಿ ಎಣ್ಣೆ ದೀಪವನ್ನು ಹಚ್ಚಬೇಕು. ಮನೆಯನ್ನು ಅಲಂಕರಿಸುವ ವೇಳೆ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಬಟ್ಟೆಯನ್ನು ಬಳಸಬಾರದು. ಮನೆಯ ಹೊರ ಭಾಗಕ್ಕೆ ಕಾವಿ ಬಟ್ಟೆಯನ್ನು ಬಳಸಬಾರದು.
ಹಿರಿಯರ ಆಶೀರ್ವಾದ ಪಡೆಯುವುದು
ನಾವು ಧರಿಸುವ ಬಟ್ಟೆಯನ್ನು ಗಮನ ವಹಿಸಬೇಕು. ಜೋಡಿ ಬಟ್ಟೆಯನ್ನೇ ಧರಿಸಬೇಕು. ಯಾವುದೇ ಕಾರಣಕ್ಕೂ ಹರಿದ ಒಳ ಉಡುಪುಗಳನ್ನು ಸಹ ಧರಿಸಬಾರದು. ಕಪ್ಪು ಬಟ್ಟೆಗಳನ್ನೂ ಧರಿಸುವುದು ತಪ್ಪು. ಹೊಸ ಬಟ್ಟೆ ಧರಿಸುವ ಮುನ್ನ ಹೊಸ ಬಟ್ಟೆಗೆ ಸ್ವಲ್ಪ ಅರಿಶಿನ ಹಚ್ಚಬೇಕು. ಹೊಸ ಬಟ್ಟೆ ಧರಿಸಿ ನಂತರ ಕುಲ ದೇವರಿಗೆ ನಮಿಸಬೇಕು. ನಂತರ ಕುಟುಂಬದ ಹಿರಿಯರಿಗೆ ನಮಿಸಿ ಆಶೀರ್ವಾದ ಪಡೆಯಬೇಕು. ಹೆತ್ತವರ ಆಶೀರ್ವಾದ ಬೇಡುವುದನ್ನು ಮರೆಯಬಾರದು. ದೇವರ ಮುಂದೆ ಬೆಳಗುವ ದೀಪಕ್ಕೆ ಎಲ್ಲರ ಜೀವನ ಬೆಳಗುವ ಶಕ್ತಿ ಇರುತ್ತದೆ. ದೀಪಗಳಿಗೆ ತುಪ್ಪದ ಬದಲು ಎಣ್ಣೆಯನ್ನೆಉಪಯೋಗಿಸಬೇಕು. ಶಾಸ್ತ್ರ ಸಂಪ್ರದಾಯಗಳ ಪ್ರಕಾರ ದೀಪದ ಎಣ್ಣೆಯಲ್ಲಿ ಮಹಾಲಕ್ಷ್ಮಿಯೇ ನೆಲೆಸಿರುತ್ತಾಳೆ. ದೀಪಾವಳಿಯಂದು ಮನೆಯ ಮುಂದೆ ದೀಪವನ್ನು ಹಚ್ಚಿದಲ್ಲಿ ಮನೆ ಮೇಲಿನ ದೃಷ್ಠಿಯೂ ಪರಿಹಾರವಾಗುವುದು ಎಂದು ಹೇಳಲಾಗುತ್ತದೆ.
.