Nag Panchami: ನಾಗರಪಂಚಮಿಯಂದು ಈ 5 ಕ್ರಮ ಪಾಲಿಸಿದರೆ ಶ್ರೇಯಸ್ಸು, ಈ 5 ರಿಂದ ಮಾತ್ರ ಕಡ್ಡಾಯವಾಗಿ ದೂರ ಇರಿ
ಹಿಂದೂ ಧರ್ಮದಲ್ಲಿ ನಾಗರಪಂಚಮಿ ಆಚರಣೆ ವಿಶೇಷ. ದೇಶದಾದ್ಯಂತ ಈ ದಿನವನ್ನು ಬಹಳ ಭಕ್ತಿಭಾವದಿಂದ ಆಚರಿಸುತ್ತಾರೆ. ಇಂದು ಕೆಲವೊಂದು ಕ್ರಮಗಳನ್ನು ಪಾಲಿಸಬಹುದು, ಇನ್ನೂ ಕೆಲವು ನಿಷಿದ್ಧ. ಹಾಗಾದರೆ ಆ ಕ್ರಮಗಳು ಯಾವುವು? ಅವುಗಳ ಉದ್ದೇಶವೇನು ತಿಳಿಯಿರಿ.
ಹಿಂದೂ ಧರ್ಮದಲ್ಲಿ ನಾಗರಪಂಚಮಿ ಆಚರಣೆ ವಿಶೇಷ. ದೇಶದಾದ್ಯಂತ ಈ ದಿನವನ್ನು ಬಹಳ ಭಕ್ತಿಭಾವದಿಂದ ಆಚರಿಸುತ್ತಾರೆ. ಇಂದು ಕೆಲವೊಂದು ಕ್ರಮಗಳನ್ನು ಪಾಲಿಸಬಹುದು, ಇನ್ನೂ ಕೆಲವು ನಿಷಿದ್ಧ. ಹಾಗಾದರೆ ಆ ಕ್ರಮಗಳು ಯಾವುವು? ಅವುಗಳ ಉದ್ದೇಶವೇನು ತಿಳಿಯಿರಿ.
ಶ್ರಾವಣಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ನಾಗರಪಂಚಮಿ ಕೂಡ ಒಂದು. ಇದನ್ನು ದೇಶದಾದ್ಯಂತ ಭಕ್ತಿಭಾವದಿಂದ ಆಚರಿಸುತ್ತಾರೆ. ಹಿಂದೂಧರ್ಮದಲ್ಲಿ ನಾಗಪಂಚಮಿಗೆ ವಿಶೇಷ ಪ್ರಾಧಾನ್ಯವಿದೆ. ಶ್ರಾವಣ ಮಾಸ ಶುಕ್ಲ ಪಕ್ಷದ 5ನೇ ದಿನದಂದು ನಾಗರಪಂಚಮಿ ಆಚರಿಸಲಾಗುವುದು. ಇಂದು ನಾಗರಾಜನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಾಗದೇವರನ್ನು ಪೂಜಿಸುವ ಮೂಲಕ ಸುಖ, ಶಾಂತಿ, ನೆಮ್ಮದಿಯ ಜೊತೆಗೆ ರಕ್ಷಣೆಗಾಗಿ ಬೇಡಿಕೊಳ್ಳಲಾಗುತ್ತದೆ. ಬಹುತೇಕ ಹಿಂದೂಗಳು ಸರ್ಪಗಳನ್ನು ದೇವರಂತೆ ಪೂಜಿಸುತ್ತಾರೆ
ಇಂದು ನಾಗಪಂಚಮಿ ಆಚರಣೆ ಇದೆ. ನಾಗಪಂಚಮಿಯಂದು ಅನುಸರಿಸಬಹುದಾದ ಹಾಗೂ ಅನುಸರಿಸಬಾರದಂತಹ ಕೆಲವೊಂದು ಕೆಲವು ಆಚಾರ, ವಿಚಾರಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಈ 5 ಕೆಲಸ ಮರೆಯದೇ ಮಾಡಿ
1) ನಾಗಪಂಚಮಿಯನ್ನು ಒಂದೊಂದು ಕಡೆ ಒಂದೊಂದು ರೀತಿ ಆಚರಿಸುತ್ತಾರೆ. ಈ ಆಚರಣೆಗಳ ಜೊತೆಗೆ ನಾಗದೇವರನ್ನು ಮೆಚ್ಚಿಸಲು ನಾಗಪಂಚಮಿ ಮಂತ್ರಗಳನ್ನು ಪಠಿಸಬಹುದು. ಆ ಮೂಲಕ ದೇವರ ಕೃಪೆಗೆ ಪಾತ್ರರಾಗಬಹುದು.
2) ಈ ದಿನ ಜನರು ತಮ್ಮ ಧಾರ್ಮಿಕ ಆಚರಣೆಯ ಭಾಗವಾಗಿ ಉಪವಾಸ ಮಾಡುವುದು ಹಾಗೂ ಮಾಂಸಾಹಾರ ತ್ಯಜಿಸುವುದು ಮಾಡುತ್ತಾರೆ. ಇದು ಮಾನವರ ದೇಹ ಶುದ್ಧೀಕರಣ ಮಾಡಲು ಸಹಾಯ ಮಾಡುತ್ತದೆ. ಉಪವಾಸ ಮಾಡುವುದು ಹಾಗೂ ಮಾಂಸಾಹಾರ ತ್ಯಜಿಸುವ ಮೂಲಕ ದಿನದ ಪ್ರಾಮುಖ್ಯತೆಯನ್ನು ಗೌರವಿಸಬಹುದು. ಇದರಿಂದ ದೇವರು ಸಂಪ್ರೀತನಾಗುತ್ತಾನೆ.
3) ನಾಗರಪಂಚಮಿಯಂದು ಹಾವಿನ ವಿಗ್ರಹಗಳು ಹಾಗೂ ಹುತ್ತಕ್ಕೆ ಹಾಲು ಎರೆಯುವ ಸಂಪ್ರದಾಯವಿದೆ. ಇದರಿಂದ ನಾಗದೇವತೆಗಳು ಸಂತೃಪ್ತರಾಗುತ್ತಾರೆ ಎನ್ನುವುದು ನಂಬಿಕೆ. ಜೊತೆಗೆ ಇದರಿಂದ ದೇವರ ಆಶೀರ್ವಾದ ಸಿಗುತ್ತದೆ ಎನ್ನಲಾಗುತ್ತದೆ. ಅಲ್ಲದೆ ಉತ್ತಮ ಆರೋಗ್ಯ, ಸಂತೋಷ ಮತ್ತು ಯಶಸ್ಸು ಸಿಗುತ್ತದೆ ಎಂಬುದು ನಂಬಿಕೆ.
4) ನಾಗಪಂಚಮಿಯಂದು ನಾಗದೇವತೆಯ ದೇವಸ್ಥಾನಗಳಿಗೆ ಭೇಟಿ ನೀಡುವುದು, ನಾಗದೇವರನ್ನು ಪೂಜಿಸುವುದು ಇಂತಹ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸಬಹುದು. ಇದು ಮೊದಲಿನಿಂದಲೂ ರೂಢಿಸಿಕೊಂಡು ಬಂದ ಪದ್ಧತಿಯಾಗಿದೆ. ಇದು ಭೂಮಿಯನ್ನು ಕಾಯುವ ನಾಗದೇವತೆಗೆ ಕೃತಜ್ಞತೆ ಸಲ್ಲಿಸುವ ಮಾರ್ಗವೂ ಆಗಿದೆ.
5) ನಾಗಪಂಚಮಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಈ ದಿನ ಮಾಡಬೇಕು. ಈ ಹಬ್ಬದ ಮಹತ್ವ, ಸಂಪ್ರದಾಯಗಳು ಮತ್ತು ಉರಗ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು.
ಈ 5 ಕೆಲಸಗಳಿಂದ ದೂರ ಇರಿ
1) ನಾಗಪಂಚಮಿಯಂದು ಭೂಮಿಯನ್ನು ಉಳುಮೆ ಮಾಡಬಾರದು. ಇದರಿಂದ ಭೂಮಿಯಲ್ಲಿ ವಾಸಿಸುವ ಹಾವುಗಳಿಗೆ ತೊಂದರೆಯಾಗುತ್ತದೆ. ಅವುಗಳ ಪ್ರಾಣಿ ಹಾನಿಯೂ ಆಗಬಹುದು. ಆ ಕಾರಣಕ್ಕೆ ಹಿಂದಿನಿಂದಲೂ ಈ ದಿನ ಉಳುಮೆ ಮಾಡುವುದನ್ನು ತಪ್ಪಿಸುತ್ತಾರೆ.
2) ನಾಗಪಂಚಮಿಯ ಸಮಯದಲ್ಲಿ ಮರ, ಗಿಡಗಳನ್ನು ಕಡಿಯಬಾರದು. ಹಾವುಗಳು ಸಾಮಾನ್ಯವಾಗಿ ಮರ, ಗಿಡಗಳಲ್ಲಿ ಅವುಗಳಲ್ಲಿನ ಪೊಟರೆಗಳಲ್ಲಿ ವಾಸಿಸುತ್ತವೆ. ಮರ ಕಡಿಯುವುದರಿಂದ ಅವುಗಳ ಅವಾಸಸ್ಥಾನಕ್ಕೆ ಅಡ್ಡಿಯಾಗಬಹುದು ಎಂಬ ಉದ್ದೇಶದಿಂದ ಹೀಗೆ ಹೇಳಲಾಗುತ್ತದೆ.
3) ಈ ದಿನ ಹಾವುಗಳಿಗೆ ಹಾನಿ ಮಾಡುವುದು, ತೊಂದರೆ ನೀಡುವುದು, ನೋವು ನೀಡುವುದು ಮಾಡಬಾರದು. ಹಾವು ಸೇರಿದಂತೆ ಭೂಮಿಯ ಮೇಲೆ ವಾಸಿಸುತ್ತಿರುವ ಸಕಲ ಪ್ರಾಣಿಗಳಿಗೂ ದಯೆ ತೋರಿಸುವುದು ನಾಗಪಂಚಮಿಯ ಪ್ರಮುಖ ನಂಬಿಕೆಯಾಗಿದೆ.
4) ಹುತ್ತ ಅಥವಾ ನಾಗರ ಪ್ರತಿಮೆಗಳಿಗೆ ಹಾಲು ಎರೆಯುವುದು ಸಂಪ್ರದಾಯವಾಗಿದ್ದರೂ ಈ ವಿಚಾರದಲ್ಲಿ ಕೆಲವೊಂದು ಗೊಂದಲಗಳಿವೆ. ಹುತ್ತಕ್ಕೆ ಹಾಲು ಎರೆಯುವುದರಿಂದ ಹಾವುಗಳಿಗೆ ಪ್ರಾಣಿಹಾನಿಯಾಗುವ ಸಾಧ್ಯತೆಯೂ ಇದೆ. ಅಲ್ಲದೆ ಅತಿಯಾದ ಹಾಲು ಏರೆಯುವುದರಿಂದ ಹಾಲು ಪೋಲು ಮಾಡುವುದನ್ನು ತಪ್ಪಿಸಬಹುದು.
5) ನಾಗರಪಂಚಮಿಯ ಸಮಯದಲ್ಲಿ ಕಾಡು ಹಾವುಗಳನ್ನು ಹಿಡಿಯುವ ಸಂಪ್ರದಾಯ ಕೆಲವು ಭಾಗದಲ್ಲಿದೆ. ಇದು ತಪ್ಪು. ಹಾವುಗಳನ್ನು ಹಿಡಿಯುವುದರಿಂದ ಪ್ರಕೃತಿಯ ಸಮತೋಲನ ತಪ್ಪುತ್ತದೆ. ಹಾವಿನ ಸಂಖ್ಯೆಯಲ್ಲೂ ಇಳಿಮುಖ ಕಾಣಬಹುದು. ಇದರಿಂದ ಪರಿಸರ ವ್ಯವಸ್ಥೆಯ ಜೀವ ವೈವಿಧ್ಯತೆಯ ಮೇಲೆ ಪರಿಣಾಮ ಬೀರುತ್ತದೆ.
ನಾಗಪಂಚಮಿಯಂದು ಭಕ್ತಿಭಾವದಿಂದ ದೇವರನ್ನು ಪೂಜಿಸಿ. ಆದರೆ ಹಾವುಗಳಿಗೆ ಹಾನಿಯಾಗುವ ಕೆಲಸಗಳನ್ನು ಮಾಡದಿರಿ. ಇದರಿಂದ ಪರಿಸರದ ಅಸಮತೋಲನವೂ ಸಾಧ್ಯ ಎಂಬುದನ್ನು ಮರೆಯದಿರಿ.
(ಗಮನಿಸಿ: ಇದು ಜನಪ್ರಿಯ ನಂಬಿಕೆಗಳನ್ನು ಆಧರಿಸಿದ ಬರಹ. ಅನುಸರಿಸುವ ಮೊದಲು ನಿಮ್ಮ ಸಂಪ್ರದಾಯ ಏನು ಸರಿಯಾಗಿ ತಿಳಿದುಕೊಳ್ಳಿ)