Naga Panchami: 16 ಅಡಿ 7 ಹೆಡೆಯುಳ್ಳ ವಿಶಾಲ ನಾಗಮೂರ್ತಿಯಿರುವ ಬೆಂಗಳೂರಿನ ಮುಕ್ತಿನಾಗ ಕ್ಷೇತ್ರ
ಕನ್ನಡ ಸುದ್ದಿ  /  ಜೀವನಶೈಲಿ  /  Naga Panchami: 16 ಅಡಿ 7 ಹೆಡೆಯುಳ್ಳ ವಿಶಾಲ ನಾಗಮೂರ್ತಿಯಿರುವ ಬೆಂಗಳೂರಿನ ಮುಕ್ತಿನಾಗ ಕ್ಷೇತ್ರ

Naga Panchami: 16 ಅಡಿ 7 ಹೆಡೆಯುಳ್ಳ ವಿಶಾಲ ನಾಗಮೂರ್ತಿಯಿರುವ ಬೆಂಗಳೂರಿನ ಮುಕ್ತಿನಾಗ ಕ್ಷೇತ್ರ

Karnataka naga khestra ಕರ್ನಾಟಕದಲ್ಲಿ ಹಲವು ನಾಗ ಕ್ಷೇತ್ರಗಳಿದ್ದು, ಅದರಲ್ಲಿ ಬೆಂಗಳೂರು( Bengaluru) ಮುಕ್ತಿನಾಗ ಕ್ಷೇತ್ರವೂ ಪ್ರಮುಖವಾದದ್ದು. ಕೆಂಗೇರಿ ಬಳಿಯ ರಾಮೋಹಳ್ಳಿಯಲ್ಲಿರುವ ಈ ದೇವಸ್ಥಾನದ ವಿಶೇಷತೆ ಕುರಿತು ಮಾಹಿತಿ ಇಲ್ಲಿದೆ

ಬೆಂಗಳೂರಿನ ರಾಮೋಹಳ್ಳಿಯ ಮುಕ್ತಿ ನಾಗ ದೇಗುಲ
ಬೆಂಗಳೂರಿನ ರಾಮೋಹಳ್ಳಿಯ ಮುಕ್ತಿ ನಾಗ ದೇಗುಲ

ಮುಕ್ತಿನಾಗ ಕ್ಷೇತ್ರ. ಬೆಂಗಳೂರಿನ ಕೆಂಗೇರಿ ಮಾರ್ಗದಿಂದ ರಾಮೋಹಳ್ಳಿಯಲ್ಲಿರುವ ಈ ಕ್ಷೇತ್ರವು ನವಸುಬ್ರಹ್ಮಣ್ಯ ದೇವಸ್ಥಾನವೆಂದು ಪ್ರಸಿದ್ಧಿ. 16 ಅಡಿಯ ಏಳು ಹೆಡೆಯುಳ್ಳ ನಾಗಮೂರ್ತಿಯೇ ಇಲ್ಲಿನ ವಿಶೇಷ.

ಮುಕ್ತಿನಾಗ ಕ್ಷೇತ್ರ, ಹೆಸರಿಗೆ ತಕ್ಕಂತೆ ನಾಗ ದೇವರಿಗೆ ಸಂಬಂಧಿಸಿದ ಎಲ್ಲಾ ದೋಷಗಳಿಗೆ ಮುಕ್ತಿ ಸಿಗುವ ತಾಣ ಎಂಬುದು ಭಕ್ತರ ನಂಬಿಕೆ.

ಈ ದೇವಾಲಯ ಗರ್ಭ ಗೃಹದಲ್ಲಿ ಭವ್ಯವಾದ ಸಪ್ತಫಣಾವಳಿಯುಳ್ಳ ಆದಿಶೇಷನು ಮಂಡಲಾಕಾರವಾಗಿ ಹೆಡೆ ಬಿಚ್ಚಿ ಕುಳಿತಿರುವಂತೆ ಬಿಡಿಸಿರುವ ಶಿಲ್ಪವಿದೆ. ನಾಗ ದೇವರಿಗೆ ಸಂಬಂಧಪಟ್ಟ ಎಲ್ಲಾ ಪೂಜಾ ಕೈಂಕರ್ಯಗಳು ಇಲ್ಲಿ ನಡೆಯುತ್ತದೆ. ನಿತ್ಯವೂ ಸಾವಿರಾರು ಮಂದಿ ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ.

ನಂಬಿಕೆಯ ಕ್ಷೇತ್ರ

ನಾಗದೋಷಕ್ಕೆ ತುತ್ತಾದವರು ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ. ಹೀಗಾಗಿ, ನಾಗ ದೇವತೆಗಳು ನೆಲೆಸಿರುವ ಪುಣ್ಯಕ್ಷೇತ್ರಕ್ಕೆ ತೆರಳಿ ಪೂಜೆ, ಶಾಂತಿಗಳನ್ನು ಮಾಡಿಸುತ್ತಾರೆ. ರಾಜ್ಯದಲ್ಲಿರುವ ನಾಗರ ಕ್ಷೇತ್ರಗಳ ಪೈಕಿ ಮುಕ್ತಿನಾಗವೂ ಒಂದು. ಮುಕ್ತಿನಾಗ ಪವಾಡಗಳ ಕ್ಷೇತ್ರ ಎನ್ನಲಾಗುತ್ತದೆ. ಇಲ್ಲಿ ಕಷ್ಟವಿರಲಿ, ಸಮಸ್ಯೆಯೇ ಇರಲಿ. ಮುಕ್ತಿನಾಗನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಅದು ಪರಿಹಾರವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಒಂಬತ್ತರ ನಂಬಿಕೆ

ಷಷ್ಠಿಪೂಜೆ ಹಾಗೂ ಇನ್ನಿತರ ವಿಶೇಷ ಸೇವಾ ಕೈಂಕರ್ಯಗಳು ಇಲ್ಲಿ ನಡೆಯುತ್ತವೆ. 9 ಮಂಗಳವಾರ ಅಥವಾ 9 ಭಾನುವಾರ ಭಕ್ತರು ಇಲ್ಲಿಗೆ ಬಂದು 9 ಪ್ರದಕ್ಷಿಣೆ ಹಾಕಿದರೆ ಮನೋಸಂಕಲ್ಪಗಳು ಈಡೇರಲಿದೆ. ಹಾಗೆಯೇ, ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಲಿವೆ ಎಂಬ ನಂಬಿಕೆಯಿದೆ.

ಸರ್ಪಸಂಸ್ಕಾರ, ಕಾಳಸರ್ಪ ಶಾಂತಿ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ನಾಗಬಲಿ, ಕುಜ ಮತ್ತು ಶನಿ ಶಾಂತಿ, ನಾಗದೋಷ ಸಂಬಂಧಿತ ಹಲವಾರು ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಪಡೆದುಕೊಳ್ಳುತ್ತಾರೆ.

ಎರಡೂವರೆ ದಶಕ ಹಿಂದೆ

ವಿಜಯಾ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ಎಂಬುವರು ಈ ಕ್ಷೇತ್ರವನ್ನು 1999ರಲ್ಲಿ ಸ್ಥಾಪಿಸಿದರು. ಶಾಸ್ತ್ರಿಗಳ ನಿಧನದ ಬಳಿಕ ಅವರ ಪತ್ನಿ ಡಾ ಗೌರಿ ಸುಬ್ರಹ್ಮಣ್ಯ ಮುಕ್ತಿನಾಗ ದೇವಸ್ಥಾನವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಜ್ಯೇಷ್ಠ ಮಾಸದ ಶುದ್ಧ ತ್ರಯೋದಶಿಯಲ್ಲಿ ಬ್ರಹ್ಮರಥೋತ್ಸವ ಹಾಗೂ ಪ್ರತಿ ಮಾಘ ಮಾಸದ ಶುದ್ಧ ಷಷ್ಠಿಯಲ್ಲಿ ರಥೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ನಾಗರಪಂಚಮಿ, ಷಷ್ಠಿ, ಋಷಿ ಪಂಚಮಿಗಳಂದು ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ನಾಗದೇವರ ದರ್ಶನ ಪಡೆಯಲಿದ್ದಾರೆ.

ಹಲವಾರು ವರ್ಷಗಳಿಂದ ನಾನು ಮುಕ್ತಿ ನಾಗ ಕ್ಷೇತ್ರಕ್ಕೆ ಬರುತ್ತಿದ್ದೇನೆ. ಇಲ್ಲಿಗೆ ಬಂದು ಹೋದರೆ ಏನೋ ಸಮಾಧಾನ. ಕುಟುಂಬದವರು ಸಂಪೂರ್ಣವಾಗಿ ಇದನ್ನು ನಂಬಿದ್ದೇವೆ. ಒಳ್ಳೆಯದಂತೂ ಆಗಿದೆ ಎಂದು ಭಕ್ತರೊಬ್ಬರು ಕ್ಷೇತ್ರದೊಂದಿಗೆ ಹೊಂದಿರುವ ನಂಟಿನ ಕುರಿತು ಹೇಳುತ್ತಾರೆ.

(ವರದಿ: ಎಂ.ಕೆ.ಅಕ್ಷರಾ ಬೆಂಗಳೂರು)

(ನಾಗರ ಪಂಚಮಿ ಕುರಿತ ಮತ್ತಷ್ಟು ಬರಹಗಳಿಗೆ kannada.hindustantimes.com/topic/culture ಲಿಂಕ್ ಕ್ಲಿಕ್ ಮಾಡಿ)

Whats_app_banner