Korean Fried Rice: ಡಿಫ್ರೆಂಟ್ ರುಚಿಯ ಫ್ರೈಡ್ ರೈಸ್ ತಿನ್ನಬೇಕು ಅಂತಿದ್ರೆ, ಕೊರಿಯನ್ ಎಗ್ ಫ್ರೈಡ್ ರೈಸ್ ಟ್ರೈ ಮಾಡಿ, ರೆಸಿಪಿ ಇಲ್ಲಿದೆ
Korean Egg Fried Rice: ಕೊರಿಯನ್ನರ ಸೌಂದರ್ಯವಷ್ಟೇ ಅಲ್ಲ, ಆಹಾರವೂ ಸಖತ್ ಟೇಸ್ಟಿ ಆಗಿರುತ್ತೆ. ಇವರು ಹೆಚ್ಚು ತಿನ್ನುವುದು ಫ್ರೈಡ್ ರೈಸ್, ಅದರಲ್ಲೂ ಎಗ್ ಫ್ರೈಡ್ ರೈಸ್ ತುಂಬಾನೇ ಫೇಮಸ್. ಕಡಿಮೆ ಮಸಾಲೆ ಬಳಸಿದ್ರೂ ಸಖತ್ ಟೇಸ್ಟಿ ಆಗಿರುತ್ತೆ ಈ ಖಾದ್ಯ. ಮಕ್ಕಳಿಗೂ ಕೂಡ ಇಷ್ಟವಾಗುವ ಕೊರಿಯನ್ ಶೈಲಿಯ ಎಗ್ ಫ್ರೈಡ್ ರೈಸ್ ಮಾಡುವುದು ಹೇಗೆ ನೋಡಿ.
ಕೊರಿಯನ್ನರು ಎಂದಾಗ ನೆನಪಾಗುವುದು ಅವರ ಸಿಗ್ಧ ಸೌಂದರ್ಯ, ಹಾಳು ಬಿಳುಪಿನ ತ್ವಚೆ. ಆದರೆ ಅವರ ಸೌಂದರ್ಯವಷ್ಟೇ ಅಲ್ಲ, ಆಹಾರ ಖಾದ್ಯಗಳು ರುಚಿಯೂ ತುಂಬಾನೇ ಭಿನ್ನವಾಗಿರುತ್ತೆ. ಎಗ್ ಫ್ರೈಡ್ ರೈಸ್ ಕೊರಿಯನ್ನರ ಆಹಾರಕ್ರಮದಲ್ಲಿ ಬಹಳ ಪ್ರಸಿದ್ಧ ಪಡೆದಿದೆ. ಅನ್ನದ ಜೊತೆ ಮೊಟ್ಟೆ, ಸ್ಪ್ರಿಂಗ್ ಆನಿಯನ್, ಸೋಯಾ ಸಾಸ್ ಮತ್ತು ಹಸಿಮೆಣಸು ಸೇರಿಸಿ ಇದನ್ನು ಮಾಡಲಾಗುತ್ತದೆ. ಇದನ್ನ ಒಮ್ಮೆ ತಿಂದರೆ ನಿಮಗೂ ಇಷ್ಟವಾಗುತ್ತೆ. ಇದನ್ನು ಸುಲಭವಾಗಿ ಮನೆಯಲ್ಲೂ ಮಾಡಿಕೊಳ್ಳಬಹುದು. ಮಕ್ಕಳೂ ಕೂಡ ಇಷ್ಟಪಟ್ಟು ತಿನ್ನುವ ರೆಸಿಪಿ ಇದು. ಹಾಗಾದರೆ ಕೊರಿಯನ್ ಎಗ್ ಫ್ರೈಡ್ ಮಾಡೋದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ನೋಡಿ.
ಕೊರಿಯನ್ ಎಗ್ ಫ್ರೈಡ್ ರೈಸ್ ರೆಸಿಪಿಗೆ ಬೇಕಾಗುವ ಪದಾರ್ಥಗಳು
ಅನ್ನ - ಒಂದು ಕಪ್, ಮೊಟ್ಟೆ - ಎರಡು, ಸ್ಪ್ರಿಂಗ್ ಆನಿಯನ್ - ಕಾಲು ಕಪ್, ಸೋಯಾ ಸಾಸ್ - ಅರ್ಧ ಚಮಚ, ಕಾಳುಮೆಣಸಿನ ಪುಡಿ - ಕಾಲು ಚಮಚ, ಬಿಳಿಎಳ್ಳು - ಅರ್ಧ, ಚಮಚ, ಎಳ್ಳೆಣ್ಣೆ - ಅರ್ಧ ಚಮಚ, ಉಪ್ಪು - ರುಚಿಗೆ
ಕೊರಿಯನ್ ಎಗ್ ಫ್ರೈಡ್ ರೈಸ್ ಮಾಡುವ ವಿಧಾನ
ಮೊದಲು ಉದುರುದುರಾಗಿ ಅನ್ನ ಮಾಡಿಕೊಂಡು ಬದಿಗೆ ಇಟ್ಟುಕೊಳ್ಳಿ. ಅದನ್ನು ಪ್ಲೇಟ್‌ನಲ್ಲಿ ಹರಡಿ ಇಡಿ. ಒಂದು ಅಗಲ ಪಾತ್ರೆಗೆ ಮೊಟ್ಟೆ ಒಡೆದು ಹಾಕಿ. ಅದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಬಾಣಲಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಕತ್ತರಿಸಿದ ಈರುಳ್ಳಿಯನ್ನು ಎಣ್ಣೆಯಲ್ಲಿ ಹಾಕಿ ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿ. ನಂತರ ಮೊದಲೇ ಒಡೆದು ಉಪ್ಪು ಸೇರಿಸಿ ಇರಿಸಿಕೊಂಡ ಮೊಟ್ಟೆಯನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಜೊತೆಗೆ ಸೋಯಾ ಸಾಸ್ ಮತ್ತು ಪೆಪ್ಪರ್ ಪುಡಿ ಕೂಡ ಹಾಕಿ ಫ್ರೈ ಮಾಡಿ. ಮೊದಲೇ ಬೇಯಿಸಿಟ್ಟುಕೊಂಡ ಅನ್ನವನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಸ್ಟವ್ ಆಫ್ ಮಾಡಿ ಮತ್ತು ಮೇಲೆ ಹುರಿದ ಎಳ್ಳನ್ನು ಹಾಕಿ. ಅಷ್ಟೇ ಟೇಸ್ಟಿ ಕೊರಿಯನ್ ಎಗ್ ಫ್ರೈಡ್ ರೈಸ್ ರೆಡಿ. ಇದು ತುಂಬಾ ಸುಲಭವಾಗಿ ಮಾಡಬಹುದಾದ ಟೇಸ್ಟಿ ರೆಸಿಪಿ. ಈ ಫ್ರೈಡ್ ರೈಸ್‌ಗೆ ಬಳಸುವ ವಸ್ತುಗಳು ಕೂಡ ಆರೋಗ್ಯಕ್ಕೆ ಒಳ್ಳೆಯದು. ಎಳ್ಳೆಣ್ಣೆಯಿಂದ ಮಾಡಿದರೆ ರುಚಿ ಹೆಚ್ಚು. ಎಳ್ಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಕಡಿಮೆ ಉರಿಯಲ್ಲಿ ಮಾಡಬೇಕು. ಇಲ್ಲದಿದ್ದರೆ ಬೇಗ ಸೀದು ಹೋಗುವ ಸಾಧ್ಯತೆ ಇದೆ.
ಕೊರಿಯನ್ ಎಗ್ ಫ್ರೈಡ್ ರೈಸ್ ಅನ್ನು ಮಕ್ಕಳಿಗೆ ತಿನ್ನಿಸಲು ಪ್ರಯತ್ನಿಸಿ. ಅವರಿಗೆ ಈ ಹೊಸ ರುಚಿ ತುಂಬಾ ಇಷ್ಟವಾಗಬಹುದು. ಇದು ದೊಡ್ಡವರಿಗೂ ಇಷ್ಟವಾಗುತ್ತದೆ. ಕಾಳುಮೆಣಸು ಮಾತ್ರ ಸೇರಿಸಿದ್ದೇವೆ. ಕಾಳುಮೆಣಸಿನ ಖಾರ ಮಾತ್ರ ನಾಲಿಗೆಗೆ ತಟ್ಟುತ್ತದೆ. ಮೆಣಸಿನಕಾಯಿ ಇಲ್ಲ. ಆ ಕಾರಣಕ್ಕೆ ಮಕ್ಕಳು ಇದನ್ನು ತಿನ್ನಲು ಇಷ್ಟಪಡುತ್ತಾರೆ.