ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವ ಅಭ್ಯಾಸ ಇದ್ರೆ ಇಂದೇ ಸ್ಟಾಪ್ ಮಾಡಿ, ಇದರಿಂದ ಸಮಸ್ಯೆ ತಪ್ಪಿದ್ದಲ್ಲ
ಬೇಸಿಗೆಯಲ್ಲಿ ತಣ್ಣನೆಯ ಜ್ಯೂಸ್ ಸಿಕ್ಕರೆ ಮಧ್ಯರಾತ್ರಿಯಾದ್ರೂ ಎದ್ದು ಕುಡಿಯೋಣ ಅನ್ನಿಸೋದು ಸಹಜ. ಆದ್ರೆ ತಜ್ಞರ ಪ್ರಕಾರ ಎಲ್ಲಾ ಸಮಯದಲ್ಲೂ ಜ್ಯೂಸ್ ಕುಡಿಬಾರ್ದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ತಪ್ಪಿಯೂ ಜ್ಯೂಸ್ ಕುಡಿಯಬಾರದು, ಇದರಿಂದ ಆರೋಗ್ಯಕ್ಕೆ ಸಾಕಷ್ಟು ತೊಂದರೆಗಳಿವೆ.
ಬೇಸಿಗೆಯ ದಿನಗಳಲ್ಲಿ ದೇಹ ತಂಪಾಗಿಸುವ ಪಾನೀಯಗಳಿದ್ದರೆ ಆಹಾ ಎನ್ನಿಸುತ್ತದೆ. ಬಿಸಿಲಿನ ತಾಪ ಹೆಚ್ಚಿರುವಾಗ ನಿರ್ಜಲೀಕರಣವಾಗದಂತೆ ಹಣ್ಣಿನ ರಸವನ್ನು ಹೆಚ್ಚು ಹೆಚ್ಚು ಕುಡಿಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ತಪ್ಪಿಯೂ ಹಣ್ಣಿನ ರಸವನ್ನು ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ಪೌಷ್ಟಿಕ ತಜ್ಞರು. ಇದರಿಂದ ಹಲವು ರೀತಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ನಿಮಗೂ ಖಾಲಿಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವ ಅಭ್ಯಾಸ ಇದ್ರೆ ಇದರಿಂದ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ನೋಡಿ.
ಖಾಲಿ ಹೊಟ್ಟೆಯಲ್ಲಿ ಹಣ್ಣಿನ ರಸ ಕುಡಿಯಬಾರದು ಏಕೆ?
ಖಾಲಿ ಹೊಟ್ಟೆಯಲ್ಲಿ ಹಣ್ಣಿನ ರಸವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗಬಹುದು. ಏಕೆಂದರೆ ಹಣ್ಣುಗಳು ನಾರಿನಾಂಶ ಹೊಂದಿರುತ್ತವೆ. ಆದರೆ ಹಣ್ಣಿನ ರಸದಲ್ಲಿ ನಾರಿನಂಶ ಇರುವುದಿಲ್ಲ. ಈ ಕಾರಣದಿಂದಾಗಿ, ಹಣ್ಣುಗಳನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಧಾನವಾಗಿ ಹೆಚ್ಚಿಸುತ್ತದೆ. ಅದನ್ನೇ ಜ್ಯೂಸ್ ರೂಪದಲ್ಲಿ ಕುಡಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಬೇಗನೆ ಏರಿಕೆಯಾಗುತ್ತದೆ. ಆದ್ದರಿಂದ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು, ಆದರೆ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು.
ಖಾಲಿ ಹೊಟ್ಟೆಯಲ್ಲಿ ಹಣ್ಣಿನ ರಸವನ್ನು ಕುಡಿಯುವುದರಿಂದ ಬಾಯಾರಿಕೆ ಹೆಚ್ಚಾಗುತ್ತದೆ. ಏಕೆಂದರೆ ಹಣ್ಣಿನ ರಸವನ್ನು ಸೇವಿಸಿದ ನಂತರ ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾಗುತ್ತದೆ. ಇದು ವಿಪರೀತ ಆಯಾಸಕ್ಕೆ ಕಾರಣವಾಗುತ್ತದೆ. ಆಗ ದೇಹವು ಶಕ್ತಿಗಾಗಿ ಹೆಚ್ಚಿನ ಕ್ಯಾಲೊರಿಗಳನ್ನು ಬೇಡುತ್ತದೆ. ಇದು ಬಾಯಾರಿಕೆ ಮತ್ತು ಹಸಿವನ್ನು ಉಂಟುಮಾಡುತ್ತದೆ.
ಹಣ್ಣುಗಳು ಒಳ್ಳೆಯದು ಆದರೆ ...
ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವುದು ನಿಮ್ಮ ಹಲ್ಲುಗಳ ಆರೋಗ್ಯವನ್ನು ಹಾಳುಮಾಡುತ್ತದೆ. ಹಣ್ಣಿನ ರಸವು ಆಮ್ಲೀಯವಾಗಿದೆ. ಇದರಿಂದ ಹಲ್ಲಿನ ಮೇಲಿನ ದಂತಕವಚ ಸವೆಯುತ್ತದೆ. ಇದು ದಂತಕ್ಷಯಕ್ಕೆ ಕಾರಣವಾಗುತ್ತದೆ. ಜೀರ್ಣಕ್ರಿಯೆಗೆ ನಾರಿನಾಂಶ ಅತ್ಯಗತ್ಯ. ಹಣ್ಣುಗಳು ಫೈಬರ್ ಅನ್ನು ಹೊಂದಿರುತ್ತವೆ, ಆದರೆ ಹಣ್ಣಿನ ರಸದಲ್ಲಿ ಇರುವುದಿಲ್ಲ. ಆದ್ದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ. ಅದರಲ್ಲೂ ಅಸಿಡಿಟಿಯಂತಹ ಸಮಸ್ಯೆಗಳು ಬರಬಹುದು. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.
ಏನಾದರು ತಿಂದ ನಂತರ ಹಣ್ಣಿನ ರಸ ಕುಡಿದರೆ ಎಲ್ಲವೂ ಸರಿಹೋಗುತ್ತದೆ. ಅಲ್ಲದೆ, ಇತರ ಆಹಾರಗಳನ್ನು ಸೇವಿಸಿದ ನಂತರ ಹಣ್ಣಿನ ರಸವನ್ನು ಸೇವಿಸುವುದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆ ಸುಧಾರಿಸುತ್ತದೆ. ಅಪೌಷ್ಟಿಕತೆಯನ್ನು ತಡೆಯಬಹುದು. ಹಾಗಾಗಿ ಯಾರೂ ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯಬಾರದು. ನಿಜ ಹೇಳಬೇಕೆಂದರೆ, ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಕಾಫಿ ಕುಡಿಯಬಾರದು. ಆದರೆ, ಕೋಟಿಗಟ್ಟಲೆ ಜನ ಅವರಿಗೆ ಒಗ್ಗಿಕೊಂಡಿದ್ದಾರೆ. ಈಗ ಅವರು ಇದ್ದಕ್ಕಿದ್ದಂತೆ ನಿಲ್ಲಿಸಲು ಸಾಧ್ಯವಿಲ್ಲ. ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರನ್ನು ಕುಡಿಯುವುದು ಅತ್ಯಗತ್ಯ. ಹಾಗೆಯೇ ಆ ಬೆಚ್ಚನೆಯ ನೀರಿಗೆ ಒಂದು ಚಮಚ ಜೇನು ತುಪ್ಪ ಸೇರಿಸಿ ಕುಡಿದರೆ ಒಳ್ಳೆಯದು ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿದರೆ ಅನೇಕ ಸಮಸ್ಯೆಗಳು ಬರುವುದಿಲ್ಲ.