ನೀವು ಖರೀದಿಸುವ ಒಣ ಹಣ್ಣುಗಳು ಅಸಲಿಯೋ, ನಕಲಿಯೋ: ಗುರುತಿಸುವುದು ಹೇಗೆ? ಇಲ್ಲಿದೆ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಖರೀದಿಸುವ ಒಣ ಹಣ್ಣುಗಳು ಅಸಲಿಯೋ, ನಕಲಿಯೋ: ಗುರುತಿಸುವುದು ಹೇಗೆ? ಇಲ್ಲಿದೆ ಟಿಪ್ಸ್

ನೀವು ಖರೀದಿಸುವ ಒಣ ಹಣ್ಣುಗಳು ಅಸಲಿಯೋ, ನಕಲಿಯೋ: ಗುರುತಿಸುವುದು ಹೇಗೆ? ಇಲ್ಲಿದೆ ಟಿಪ್ಸ್

ಇತ್ತೀಚಿಗೆ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥದಿಂದ ಹಿಡಿದು ಎಲ್ಲಾ ವಸ್ತುವೂ ಕಲಬೆರಕೆಯಾಗಿದೆ. ಇವುಗಳಲ್ಲಿ ಒಣಹಣ್ಣುಗಳು ಕೂಡ ಒಂದು. ಹಾಗಂತ ಅಸಲಿಯೂ ಇಲ್ಲವೆಂದಲ್ಲ. ಆದರೆ, ನೀವು ಖರೀದಿಸುವ ಒಣಹಣ್ಣುಗಳು ಅಸಲಿಯೇ, ನಕಲಿಯೇ ಎಂದು ತಿಳಿಯುವುದು ಹೇಗೆ ಎಂದು ಗೊಂದಲವಾಗಬಹುದು. ಇದಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್.

ನೀವು ಖರೀದಿಸುವ ಒಣಹಣ್ಣುಗಳು ಅಸಲಿಯೇ, ನಕಲಿಯೇ ಎಂದು ತಿಳಿಯುವುದು ಹೇಗೆ, ಇಲ್ಲಿದೆ ಟಿಪ್ಸ್.
ನೀವು ಖರೀದಿಸುವ ಒಣಹಣ್ಣುಗಳು ಅಸಲಿಯೇ, ನಕಲಿಯೇ ಎಂದು ತಿಳಿಯುವುದು ಹೇಗೆ, ಇಲ್ಲಿದೆ ಟಿಪ್ಸ್. (freepik)

ಇಂದಿನ ದಿನಗಳಲ್ಲಿ ಲಾಭದ ಆಸೆಯಿಂದ ಎಲ್ಲವನ್ನೂ ಕಲಬೆರಕೆ ಮಾಡಲಾಗುತ್ತಿದೆ. ಮಸಾಲೆ ಪದಾರ್ಥಗಳಿಂದ ಹಿಡಿದು, ಒಣ ಹಣ್ಣುಗಳು, ಹಣ್ಣುಗಳು, ಬಣ್ಣಗಳು ಸೇರಿದಂತೆ ಎಲ್ಲವಕ್ಕೂ ಇತರ ಅಗ್ಗದ ಮತ್ತು ಹಾನಿಕಾರಕ ವಸ್ತುಗಳನ್ನು ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಈ ರೀತಿ ಮಾಡಿ ದುಷ್ಟರು ಲಾಭಗಳಿಸುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಯಾವುದನ್ನೂ ಖರೀದಿಸಲು ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಬಂದಿದೆ. ದೀಪಾವಳಿ ಹಾಗೂ ಇತರ ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಒಣಹಣ್ಣುಗಳಿಗೆ ಬೇಡಿಕೆ ಹೆಚ್ಚುತ್ತದೆ. ನೀವು ಉತ್ತಮ ಗುಣಮಟ್ಟದ, ಪೌಷ್ಟಿಕಾಂಶ ಭರಿತ ಒಣಹಣ್ಣುಗಳನ್ನು ಸೇವಿಸುವವರಾದರೆ ಒಣ ಹಣ್ಣುಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ಕಲಬೆರಕೆ ಅಥವಾ ಕೃತಕವಾಗಿ ಸಂಸ್ಕರಿಸಿರುವ ಒಣಹಣ್ಣುಗಳು ಸುವಾಸನೆ ಮತ್ತು ವಿನ್ಯಾಸದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ಆರೋಗ್ಯದ ಮೇಲೆ ಅಪಾಯವನ್ನುಂಟುಮಾಡಬಹುದು. ಒಣ ಹಣ್ಣುಗಳು ಅಸಲಿಯೇ ಅಥವಾ ನಕಲಿಯೇ ಎಂದು ಹೇಗೆ ತಿಳಿಯುವುದು, ಇಲ್ಲಿದೆ ಟಿಪ್ಸ್.

ನಕಲಿ ಒಣ ಹಣ್ಣುಗಳನ್ನು ಗುರುತಿಸುವುದು ಹೇಗೆ?

ಬಾದಾಮಿ ಖರೀದಿಸಲು ಸಲಹೆಗಳು: ಇತ್ತೀಚಿನ ದಿನಗಳಲ್ಲಿ ಬಾದಾಮಿ ಬಣ್ಣದಲ್ಲಿ ಕಲಬೆರಕೆಯಾಗಿದೆ. ಬಾದಾಮಿಯನ್ನು ಉತ್ತಮ ಗುಣಮಟ್ಟದಿಂದ ಕಾಣುವಂತೆ ಮಾಡಲು ಕೃತಕ ಬಣ್ಣವನ್ನು ಸೇರಿಸಲಾಗುತ್ತದೆ. ಈ ಮೂಲಕ ಅವುಗಳನ್ನು ಗಾಢ ಮತ್ತು ಹೊಳೆಯುವಂತೆ ಮಾಡಲಾಗುತ್ತದೆ. ಹೀಗಾಗಿ ಬಾದಾಮಿ ಖರೀದಿಸುವಾಗ, ಅವುಗಳನ್ನು ನಿಮ್ಮ ಕೈಗೆ ಉಜ್ಜಿಕೊಂಡು ಪರೀಕ್ಷಿಸಿ. ಹಾಗೆಯೇ ಬಾದಾಮಿ ತುಂಬಾ ದಪ್ಪವಾಗಿರಬಾರದು ಅಥವಾ ತುಂಬಾ ಚಿಕ್ಕದಾಗಿರಬಾರದು. ಮಧ್ಯಮ ಗಾತ್ರದ ಬಾದಾಮಿಯನ್ನು ಮಾತ್ರ ಖರೀದಿಸಿ.

ಗೋಡಂಬಿ ಖರೀದಿಗೆ ಸಲಹೆಗಳು: ಇತ್ತೀಚಿನ ದಿನಗಳಲ್ಲಿ ನಕಲಿ ಗೋಡಂಬಿಯೂ ಮಾರಾಟವಾಗುತ್ತಿದೆ. ನೀವು ನಿಜವಾದ ಗೋಡಂಬಿಯನ್ನು ಅವುಗಳ ಬಣ್ಣ ಮತ್ತು ವಾಸನೆಯಿಂದ ಗುರುತಿಸಬಹುದು. ಬಿಳಿ ಅಥವಾ ಮಂದ ಬಣ್ಣದ ಗೋಡಂಬಿಯಿದ್ದರೆ ಅದು ಅಸಲಿ. ಆದರೆ, ಗೋಡಂಬಿ ಎಣ್ಣೆಯ ವಾಸನೆ ಅಥವಾ ಅದರ ಬಣ್ಣ ಹಳದಿ ಬಣ್ಣದಲ್ಲಿ ಕಂಡುಬಂದರೆ, ಅವು ಕಲಬೆರಕೆ ಅಥವಾ ತುಂಬಾ ಹಳೆಯದಾಗಿರಬಹುದು.

ವಾಲ್‌ನಟ್‌ಗಳನ್ನು ಖರೀದಿಸಲು ಸಲಹೆಗಳು: ನಕಲಿ ವಾಲ್‌ನಟ್‌ಗಳು ತುಂಬಾ ಗಾಢವಾದ ಬಣ್ಣವನ್ನು ಹೊಂದಿರುತ್ತವೆ. ಕೆಲವೊಮ್ಮೆ ವಾಲ್ನಟ್ಸ್ ಕೆಟ್ಟ ವಾಸನೆಯನ್ನು ಹೊಂದಿರುತ್ತದೆ. ಇದು ಹಾಳಾಗುವಿಕೆಯ ಸಂಕೇತವಾಗಿದೆ. ಕಲಬೆರಕೆಯಿಂದ ಮುಕ್ತವಾಗಿರುವ ವಾಲ್‌ನಟ್ಸ್ ಅನ್ನು ಯಾವಾಗಲೂ ಚಿಪ್ಪು ಸಹಿತ ಖರೀದಿಸಿ. ಅಸಲಿ ವಾಲ್‌ನಟ್‌ಗಳು ತಿಳಿ ಕಂದು ಬಣ್ಣದ್ದಾಗಿರುತ್ತವೆ.

ಒಣದ್ರಾಕ್ಷಿ ಖರೀದಿಗೆ ಸಲಹೆಗಳು: ನಕಲಿ ಒಣದ್ರಾಕ್ಷಿಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಒಣದ್ರಾಕ್ಷಿಗಳನ್ನು ಸಿಹಿಗೊಳಿಸಲು ಸಕ್ಕರೆಯನ್ನು ಸೇರಿಸಲಾಗುತ್ತದೆ. ತೇವಾಂಶವಿರುವ ಒಣದ್ರಾಕ್ಷಿಗಳನ್ನು ಖರೀದಿಸದಿರಿ. ಇವು ನಕಲಿ ಒಣದ್ರಾಕ್ಷಿಯಾಗಿರಬಹುದು. ಕೈಗೆ ಉಜ್ಜಿದಾಗ ಯಾವುದೇ ಬಣ್ಣ ಕಾಣಿಸಿದರೆ ಅಂತಹ ಒಣದ್ರಾಕ್ಷಿಗಳನ್ನು ಖರೀದಿಸಬೇಡಿ.

ಬಣ್ಣ ಮತ್ತು ರುಚಿಯಿಂದ ಪರೀಕ್ಷೆ: ನಿಜವಾದ ಮತ್ತು ನಕಲಿ ಒಣ ಹಣ್ಣುಗಳನ್ನು ಬಣ್ಣ ಮತ್ತು ರುಚಿಯಿಂದ ಗುರುತಿಸಬಹುದು. ಅವುಗಳ ವಾಸನೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ನಕಲಿ ಡ್ರೈ ಫ್ರೂಟ್ಸ್‌ಗಳು ಸ್ವಲ್ಪ ಗಾಢ ಬಣ್ಣದಲ್ಲಿರುತ್ತವೆ. ನಕಲಿ ಒಣ ದ್ರಾಕ್ಷಿ ಕಹಿಯಾಗಿರಬಹುದು ಅಥವಾ ತಿನ್ನಲು ತುಂಬಾ ಸಿಹಿಯಾಗಿರಬಹುದು.

Whats_app_banner