ನಲ್ಲಿ ಕ್ಲೀನ್ ಮಾಡೋಕೆ ಆಗದಷ್ಟು ಗಟ್ಟಿಯಾಗಿ ಬಿಳಿ ಪದರ ಕೂತ್ಕೊಂಡಿದೆಯಾ, ಈ 3 ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ ನೋಡಿ
ಅಡುಗೆ ಮನೆ, ಬಚ್ಚಲು ಮನೆ ಕ್ಲೀನಿಂಗ್ ದೊಡ್ಡ ಸಾಹಸ. ಸಣ್ಣ ಕ್ಲೀನ್ ಮಾಡುವಾಗ ಸಣ್ಣ ವಿಷಯಗಳು ಮರೆತು ಹೋಗುವುದು, ಯಾರೋ ಬಂದು ಗಮನಿಸಿದರೆ ಏನಪ್ಪಾ ಮಾಡೋದು ಅಂತ ಕಳವಳ. ಅಂತಹ ಒಂದು ವಿಷಯ ನಲ್ಲಿ ಕ್ಲೀನಾಗಿ ಇಟ್ಟುಕೊಳ್ಳೋದು. ನಲ್ಲಿ ಕ್ಲೀನ್ ಮಾಡೋಕೆ ಆಗದಷ್ಟು ಗಟ್ಟಿಯಾಗಿ ಬಿಳಿ ಪದರ ಕೂತ್ಕೊಂಡಿದೆಯಾ ಒಮ್ಮೆ ಹೋಗಿ ನೋಡಿ. ಚಿಂತೆ ಬೇಡ ಈ 3 ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ.
ಮನೆ, ಪರಿಸರ ಸ್ವಚ್ಛವಾಗಿದ್ದರೆ ಮನೆಯ ಮಂದಿಯ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬ ಆಡುಮಾತು ಪದೇಪದೆ ಕಿವಿಗೆ ಬೀಳುತ್ತಿರುತ್ತದೆ. ವಾಡಿಕೆಯಂತೆ ಸ್ವಚ್ಛಗೊಳಿಸುವಾಗ ಎಲ್ಲವನ್ನೂ ಸ್ವಚ್ಛಗೊಳಿಸುವ ಪರಿಪಾಠ ಎಲ್ಲ ಮನೆಯಲ್ಲೂ ಇದ್ದೇ ಇದೆ. ಆದರೆ, ನಲ್ಲಿಗಳನ್ನು ಸ್ವಚ್ಛಗೊಳಿಸುವುದಿಲ್ಲ. ಅದು ನಿರ್ಲಕ್ಷಿಸಲ್ಪಟ್ಟಿರುತ್ತದೆ.
ವಾಸ್ತವವಾಗಿ, ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ನಲ್ಲಿಗಳನ್ನು ಸ್ವಚ್ಛಗೊಳಿಸಿದರೆ ಆಗ ಇಂತಹ ಬಿಳಿ ಪದರ ಗಟ್ಟಿಯಾಗಿ ಕೂರುವುದಿಲ್ಲ. ಸ್ನಾನದ ಮನೆಗಳಲ್ಲಿ, ಅಡುಗೆ ಮನೆಗಳಲ್ಲಿರುವ ನಲ್ಲಿಗಳನ್ನು ಗಮನಿಸಿದರೆ ಇದು ಮನವರಿಕೆಯಾಗುತ್ತದೆ. ತುಂಬಾ ಬಿಳಿ ಪದರ ಇದ್ದರೆ ಅಥವಾ ಅದರ ತಿರುಗಣಿ ಹಾಳಾದಾಗ ಒಮ್ಮೆ ಅದನ್ನು ಬದಲಾಯಿಸುತ್ತಾರೆ.
ನಲ್ಲಿಗಳಲ್ಲೇಕೆ ಬಿಳಿಪದರ ಗಟ್ಟಿಯಾಗಿ ಕೂರುತ್ತೆ
ಸಾಮಾನ್ಯವಾಗಿ ಉಪ್ಪುಮಿಶ್ರಿತ ಅಥವಾ ಫ್ಲೋರೈಡ್ ಅಂಶ ಹೆಚ್ಚಾಗಿರುವ ನೀರು ಇರುವಲ್ಲಿ ಈ ರೀತಿ ಸಮಸ್ಯೆ ಕಾಡುತ್ತೆ. ಅದು ನಲ್ಲಿಗಳ ಮೇಲೆ ಬಿರುಸು ಕಲೆಗಳನ್ನು ಉಂಟುಮಾಡುತ್ತದೆ. ಬಿಳಿ ಪದರವನ್ನು ಉಪ್ಪು ನೀರಿನ ಕಲೆ ಎಂದು ಕೂಡ ಹೇಳುತ್ತಾರೆ. ಇವು ಸುಲಭವಾಗಿ ಹೋಗುವುದಿಲ್ಲ. ರಾಸಾಯನಿಕ ದ್ರವ ಬಳಸಿಯೇ ತೆಗೆಯಬೇಕಷ್ಟೆ ಎಂದು ಹೇಳುವುದನ್ನೂ ಕೇಳಿರುತ್ತೇವೆ. ಇಲ್ಲದೇ ಇದ್ದರೆ ಅದನ್ನು ತೆಗೆದು ಹೊಸ ನಲ್ಲಿ ಅಳವಡಿಸುವುದನ್ನೂ ಗಮನಿಸಿರುತ್ತೇವೆ.
ಹಬ್ಬ ಹರಿದಿನಗಳಲ್ಲಿ ಮನೆಯನ್ನು ಸ್ವಚ್ಛಗೊಳಿಸುವಾಗ ನಲ್ಲಿಗಳನ್ನು ಸ್ವಚ್ಛಗೊಳಿಸುವುದು ಬಹಳ ಸುಲಭ. ಅದಕ್ಕೆ ಹಳೆಯ ಮೂರು ಉಪಾಯಗಳಿವೆ. ನೀವು ಕೂಡ ಈ 3 ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ ನೋಡಿ
ನಲ್ಲಿ ಪಳ ಪಳ ಹೊಳೆಯುವಂತೆ ಮಾಡುವ 3 ಸಿಂಪಲ್ ಟ್ರಿಕ್ಸ್
1) ನಿಂಬೆ ಅಥವಾ ವಿನಿಗರ್
ನಲ್ಲಿಗಳ ಮೇಲಿನ ಮೊಂಡುತನದ ಉಪ್ಪು ನೀರಿನ ಕಲೆಗಳನ್ನು ನಿವಾರಿಸಲು ವಿನಿಗರ್ ಮತ್ತು ನಿಂಬೆ ಬಳಸಬಹುದು. ಇದಕ್ಕಾಗಿ ನೀವು ನಲ್ಲಿಯ ಮೇಲೆ ನಿಂಬೆ ರಸ ಅಥವಾ ವಿನಿಗರ್ ಅನ್ನು ಸಿಂಪಡಿಸಬೇಕು. ಸುಮಾರು 20 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ಅದಾಗಿ, ಬ್ರಷ್ ಹಿಡಿದು ಆ ನಲ್ಲಿಯನ್ನು ಸ್ಕ್ರಬ್ ಮಾಡಿ. ಹಾಗೆ ನಲ್ಲಿಯನ್ನು ಸ್ವಚ್ಛಗೊಳಿಸಿ. ಬಳಿಕ ಅದನ್ನು ನೀರಿನಿಂದ ತೊಳೆಯಿರಿ. ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಹೀಗೆ ಒರೆಸುವಾಗ ಬಟ್ಟೆಗೆ ಸ್ವಲ್ಪ ನಿಂಬೆ ಮತ್ತು ವಿನಿಗರ್ ಚಿಮುಕಿಸಬಹುದು. ಇದು ನಲ್ಲಿಗೆ ಹೊಳಪು ನೀಡುತ್ತದೆ.
2) ಟೊಮೆಟೊ ಸಾಸ್
ಟೊಮೆಟೊ ಕೆಚಪ್ ಇಲ್ಲದ ಅಡುಗೆ ಮನೆ ಇರಲಾರದು. ಟೊಮೆಟೊ ಕೆಚಪ್‌ನಲ್ಲಿರುವ ಹುಳಿ ಗುಣ ಕಲೆಗಳನ್ನು ತೆಗೆದುಹಾಕುತ್ತದೆ. ನಲ್ಲಿಯಲ್ಲಿನ ನೀರಿನ ಕಲೆಗಳನ್ನು ಸ್ವಚ್ಛಗೊಳಿಸಲು ಟೊಮೆಟೊ ಸಾಸ್ ಕೂಡ ತುಂಬಾ ಪರಿಣಾಮಕಾರಿ. ಇದಕ್ಕಾಗಿ, ಮೂರು ಚಮಚ ಟೊಮೆಟೊ ಸಾಸ್ ಅನ್ನು ತೆಗೆದುಕೊಂಡು ಅದನ್ನು ಎರಡು ಅಥವಾ ಮೂರು ಬಾರಿ ಟ್ಯಾಪ್‌ಗೆ ಒರೆಸಿ. ಅದರ ನಂತರ ಬ್ರಷ್ ತೆಗೆದುಕೊಂಡು ಚೆನ್ನಾಗಿ ಉಜ್ಜಿಕೊಳ್ಳಿ. ನಂತರ ಆ ನಲ್ಲಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ.
3) ಬೇಕಿಂಗ್ ಸೋಡಾ
ಬೇಕಿಂಗ್ ಸೋಡಾ ಕೂಡ ಉತ್ತಮ ಶುಚಿಗೊಳಿಸುವ ಗುಣವನ್ನು ಹೊಂದಿದೆ. ಟ್ಯಾಪ್‌ನಲ್ಲಿನ ಕಲೆಗಳನ್ನು ಸ್ವಚ್ಛಗೊಳಿಸಲು ನೀವು ಅಡುಗೆ ಸೋಡಾವನ್ನು ಕೂಡ ಬಳಸಬಹುದು.
ಇದಕ್ಕಾಗಿ ಎರಡು ಚಮಚ ಅಡುಗೆ ಸೋಡಾದ ಜೊತೆಗೆ ಅರ್ಧ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ಈಗ ಈ ಪೇಸ್ಟ್ ಅನ್ನು ಟ್ಯಾಪ್ ಮೇಲೆ ಉಜ್ಜಿ ಮತ್ತು ಇಪ್ಪತ್ತು ನಿಮಿಷಗಳ ಕಾಲ ಇರಿಸಿ. ಅದರ ನಂತರ ನಲ್ಲಿಯನ್ನು ಸ್ಕ್ರಬ್ ಸಹಾಯದಿಂದ ಉಜ್ಜಬೇಕು. ನಂತರ ನಲ್ಲಿಯನ್ನು ನೀರಿನಿಂದ ತೊಳೆಯಿರಿ ಮತ್ತು ಒಣ ಹತ್ತಿ ಬಟ್ಟೆಯಿಂದ ಒರೆಸಿ. ಅದು ಪಳಪಳ ಹೊಳೆಯುವುದನ್ನು ಗಮನಿಸಬಹುದು.
ಇವೆಲ್ಲವೂ ಅಡುಗೆ ಮನೆಯಲ್ಲೇ ಲಭ್ಯ ಉತ್ಪನ್ನಗಳನ್ನು ಬಳಸಿ ಮಾಡಬಹುದಾದ ಸಿಂಪಲ್ ಕ್ಲೀನಿಂಗ್ ಟೆಕ್ನಿಕ್ ಅರ್ಥಾತ್ ಕಿಚನ್ ಟಿಪ್ಸ್. ಇದೇ ತಂತ್ರ ಅನುಸರಿಸಿ ಸಿಂಕ್ ಮತ್ತು ಅಡುಗೆ ಮನೆ ಪ್ಲಾಟ್‌ಫಾರಂ ಕೂಡ ಕ್ಲೀನ್ ಮಾಡಬಹುದು.
ವಿಭಾಗ