ಗಂಡ ನನ್ನ ಮಾತೇ ಕೇಳ್ತಿಲ್ಲ ಅಂತ ದೂರಬೇಡಿ, ಹಟಮಾರಿ ಗಂಡ ನಿಮ್ಮ ಮಾತು ಕೇಳುವಂತೆ ಮಾಡಲು ತಜ್ಞರ ಈ ಸಲಹೆ ನೋಡಿ
ಪತಿ ಹಟಮಾರಿ ಸ್ವಭಾವ ಅಥವಾ ಕೋಪದಿಂದ ನಿಮ್ಮ ಮಾತನ್ನು ಕೇಳದಿದ್ದರೆ, ಈ ಸಲಹೆಗಳು ನಿಮಗೆ ನೆರವಾಗುತ್ತವೆ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಬೇಕೆಂದರೆ ತಜ್ಞರ ಈ ಸಲಹೆಗಳನ್ನು ಪಾಲಿಸಿ.
ಪ್ರೇಮ ವಿವಾಹವಾಗಿರಲಿ ಅಥವಾ ಅರೇಜ್ ಮ್ಯಾರೇಜ್ ಆಗಿರಲಿ. ಮದುವೆಯಾದ ನಂತರ ಬಹುತೇಕ ಹೆಚ್ಚಿನ ಮಹಿಳೆಯರ ದೂರು ಒಂದೇ. ಗಂಡಂದಿರು ತನ್ನ ಮಾತನ್ನು ಕೇಳುವುದಿಲ್ಲ ಎಂಬುದು. ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ, ಹಿರಿಯರ ಈ ಮಾತನ್ನು ಪಾಲಿಸುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ದಾಂಪತ್ಯದ ನಡುವೆ ಬರುವ ಭಿನ್ನಾಭಿಪ್ರಾಯಗಳನ್ನು ಮರೆತು ಬದುಕುವುದೇ ಜೀವನ. ಆದರೆ ಕೆಲವು ಸಂದರ್ಭದಲ್ಲಿ ಪತಿ ತುಂಬಾ ಹಟಮಾರಿ ಸ್ವಭಾವದವರಾಗಿದ್ದು ಏನನ್ನೂ ಕೇಳಲು ಸಿದ್ಧರಿಲ್ಲದಿದ್ದಾಗ, ಹೆಂಡತಿಗೆ ಈ ವಿಷಯದಲ್ಲಿ ಬೇಜಾರಾಗುವುದು ಸಹಜ. ಕೆಲವೊಮ್ಮೆ ಗಂಡನ ಈ ಹಟಮಾರಿ ಸ್ವಭಾವದಿಂದಾಗಿ, ಸಂಬಂಧದಲ್ಲಿ ಬಿರುಕು ಬೀಳುವ ಸಾಧ್ಯತೆ ಹೆಚ್ಚು. ಪತ್ನಿ ಕೂಡಾ ಆ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು.
ನಿಮ್ಮ ದಾಂಪತ್ಯ ಜೀವನದಲ್ಲಿ ಪತಿಯ ಹಟಮಾರಿ ಸ್ವಭಾವದಿಂದಾಗಿ ನೀವು ಕೂಡಾ ಅಸಮಾಧಾನಗೊಂಡಿದ್ದರೆ, ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ತಜ್ಞರು ತಿಳಿಸಿಕೊಟ್ಟಿದ್ದಾರೆ. ಹಟಮಾರಿ ಸ್ವಭಾವದ ಗಂಡನನ್ನು ತ್ವರಿತವಾಗಿ ಮನವೊಲಿಸಲು ಸಹಾಯ ಮಾಡುವ ಕೆಲವು ತಂತ್ರಗಳು ಇಲ್ಲಿವೆ ನೋಡಿ.
ನಿಮ್ಮ ಪತಿ, ಏನನ್ನೂ ಹೇಳದೆ ನೀವಾಡುವ ಮಾತುಗಳನ್ನು ಒಪ್ಪಿಕೊಳ್ಳಬೇಕೆಂದು ನೀವು ಬಯಸಿದರೆ ಅದಕ್ಕೆ ಹೆಚ್ಚು ಪ್ರಯತ್ನ ಮಾಡಬೇಕಾಗಿಲ್ಲ. ಸರಿಯಾದ ಸಮಯದಲ್ಲಿ ನಿಮ್ಮ ಮಾತುಗಳನ್ನು ಗಂಡನ ಕಿವಿಗೆ ಬೀಳುವಂತೆ ಮಾಡಬೇಕು. ನಿಮ್ಮ ಯಾವುದೇ ಬೇಡಿಕೆಗಳನ್ನು ಅವರ ಮುಂದೆ ಇಡುವ ಮೊದಲು, ನಿಮ್ಮ ಗಂಡನ ಮನಸ್ಥಿತಿಯನ್ನು ಗಮನಿಸಿ. ಅವರು ಮಾನಸಿಕವಾಗಿ ಶಾಂತರಾಗಿರುವಾಗ ಮಾತ್ರ, ನಿಮ್ಮ ಅಂಶವನ್ನು ಅವರ ಮುಂದೆ ಇರಿಸಿ.
ಈ ಸಮಯದಲ್ಲೇ ಮಾತನಾಡಿ
ಕಚೇರಿ ಕೆಲಸದಲ್ಲಿ ನಿರತರಾಗಿರುವಾಗ ಅಥವಾ ಯಾವುದೇ ಉದ್ವೇಗದಲ್ಲಿದ್ದಾಗ, ನಿಮ್ಮ ಬೇಡಿಕೆಯನ್ನು ಅವರ ಮುಂದಿಡಬೇಡಿ. ಅಲ್ಲದೆ, ಪತಿ ಕಚೇರಿಯಿಂದ ದಣಿದು ಮನೆಗೆ ಬಂದಾಗ ಕೂಡಾ ಅವರಿಗೆ ಸ್ವಲ್ಪ ಹೊತ್ತು ವಿಶ್ರಾಂತಿ ಮಾಡಲು ಬಿಡಿ. ಈ ಎರಡೂ ಸಂದರ್ಭಗಳಲ್ಲಿ ಅವರು ಒತ್ತಡದ ಮಧ್ಯೆ ನಿಮ್ಮ ಮಾತನ್ನು ಕಿವಿಗೆ ಹಾಕಿಕೊಳ್ಳಲು ಆಗದಿರಬಹುದು. ಅವರು ಮಾನಸಿಕವಾಗಿ ಶಾಂತರಾಗಿರುವಾಗ ನೀವು ಹೇಳಬೇಕೆಂದಿರುವ ವಿಷಯದ ಬಗ್ಗೆ ಮಾತನಾಡಿ.
ಅವರ ಮಾತನ್ನು ನಿರ್ಲಕ್ಷಿಸಬೇಡಿ
ಪತಿ-ಪತ್ನಿ ಎಂಬ ಸಂಬಂಧ ತುಂಬಾ ವಿಶೇಷವಾದುದು. ಪರಸ್ಪರ ಗೌರವವಿದ್ದರೆ ಮಾತ್ರ ಬಂಧ ಗಟ್ಟಿಯಾಗುತ್ತದೆ. ಕೆಲವೊಮ್ಮೆ ಗಂಡಂದಿರು ತಮ್ಮ ಹೆಂಡತಿಯ ಮಾತನ್ನು ಕೇಳುವುದಿಲ್ಲ. ಇದಕ್ಕೆ ಅವರದ್ದೇ ಆದ ಕಾರಣಗಳೂ ಇರಬಹುದು. ಹೆಂಡತಿ ತನ್ನ ಭಾವನೆಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಅಥವಾ ತಮ್ಮ ಮಾತುಗಳನ್ನು ಗೌರವಿಸುವುದಿಲ್ಲ ಎಂದು ಅವರು ಭಾವಿಸಿರುತ್ತಾರೆ. ಇಂಥಾ ಪರಿಸ್ಥಿತಿಯನ್ನು ತಪ್ಪಿಸಲು, ಪತ್ನಿ ಕೂಡಾ ಗಂಡನ ಭಾವನೆಗಳನ್ನು ಗೌರವಿಸಬೇಕು. ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಭಿನ್ನಾಭಿಪ್ರಾಯಗಳು ಇದ್ದ ಮಾತ್ರಕ್ಕೆ ಅದನ್ನೇ ದೀರ್ಘಕಾಲ ಉಳಿಸುವುದು ತಪ್ಪು.
ದೃಷ್ಟಿಕೋನವನ್ನು ಗೌರವಿಸಿ
ಸಂಬಂಧದಲ್ಲಿ ಪರಸ್ಪರ ತಿಳುವಳಿಕೆ ಹೊಂದಿರುವುದು ಬಹಳ ಮುಖ್ಯ. ಗಂಡ ಹೆಂಡಿರ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಈ ಪರಿಸ್ಥಿತಿಯಲ್ಲಿ ಪರಸ್ಪರ ಜಗಳವಾಡುವ ಬದಲು, ಮಾತನಾಡುವ ಮೂಲಕ ಗೊಂದಲ ಪರಿಹರಿಸಲು ಪ್ರಯತ್ನಿಸಬೇಕು. ಕೆಲವೊಮ್ಮೆ ಪತಿ ತನ್ನ ವಿಷಯದಲ್ಲಿ ಹಟಮಾರಿಯಾಗಿರುವ ಸಂದರ್ಭಗಳಿವೆ. ಅಂತಹ ಸಂದರ್ಭದಲ್ಲಿ ಯಾರಾದರೂ ಒಬ್ಬರು ತುಸು ಬಾಗಬೇಕು. ಗಂಡನ ದೃಷ್ಟಿಕೋನವನ್ನು ಗೌರವಿಸಿ ಸ್ವಲ್ಪ ವಿಧೇಯರಾದರೆ ಒಳ್ಳೆಯದು. ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಬೇಕು. ಪತಿ ಪತ್ನಿಗೆ ಅಥವಾ ಪತ್ನಿ ಪತಿಯ ಮುಂದೆ ಬಾಗಿದರೆ ಸಣ್ಣವರಾಗುವುದಿಲ್ಲ. ಹಟಕ್ಕೆ ಬಿದ್ದು ಸಣ್ಣವರಾಗುವ ಬದಲು ವಿಧೇಯರಾಗಿ ದೊಡ್ಡತನ ತೋರಿಸುವುದೇ ಮೇಲು
ಗಂಡನನ್ನು ತೆಗಳುವುದು ಮಾತ್ರವಲ್ಲ, ಆಗಾಗ ಹೊಗಳಿ
ಆಗಾಗ ಪತಿಯ ಬಗ್ಗೆ ಕೊಂಕು ಮಾತನಾಡುವ ಹಲವರು, ಗಂಡನ ಸದ್ಗುಣಗಳನ್ನು ನಿರ್ಲಕ್ಷಿಸುತ್ತಾರೆ. ಪ್ರತಿ ಬಾರಿಯೂ ದೂರುವುದರಲ್ಲಿ ಅರ್ಥವಿರುವುದಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಕೆಲವು ಒಳ್ಳೆಯ ಮತ್ತು ಕೆಲವು ಕೆಟ್ಟ ಅಭ್ಯಾಸಗಳಿರುತ್ತವೆ. ಕೆಟ್ಟ ಅಭ್ಯಾಸ ಅಥವಾ ಗುಣಗಳ ಮೇಲೆ ಮಾತ್ರ ಕೇಂದ್ರೀಕರಿಸುವ ಬದಲು, ಅವರ ಉತ್ತಮ ಅಭ್ಯಾಸಗಳ ಮೇಲೂ ಗಮನ ಹರಿಸಬಹುದು. ಗಂಡನ ಹಟಮಾರಿ ಸ್ವಭಾವದ ಬಗ್ಗೆ ಪದೇ ಪದೇ ದೂರುವ ಬದಲು, ಅವನ ಒಳ್ಳೆಯತನವನ್ನು ಕೂಡಾ ಹೊಗಳಿ. ಸಂಬಂಧದಲ್ಲಿ ಸಕಾರಾತ್ಮಕ ಮನೋಭಾವವನ್ನು ತನ್ನಿ. ಇದು ನಿಮ್ಮ ಗಂಡನನ್ನು ಸುಲಭವಾಗಿ ಮನವೊಲಿಸಲು ನೆರವಾಗುತ್ತದೆ.
ಇನ್ನಷ್ಟು ರಿಲೇಷನ್ ಟಿಪ್ಸ್‌ಗೆ ಇಲ್ಲಿ ಕ್ಲಿಕ್ ಮಾಡಿ
ವಿಭಾಗ