ಪ್ರೀತಿಯ ಸಂಕೇತವಷ್ಟೇ ಅಲ್ಲ, ಅಪ್ಪುಗೆಯಲ್ಲಿದೆ ಮಾಂತ್ರಿಕ ಶಕ್ತಿ, ಅಪ್ಪಿಕೊಳ್ಳುವುದರಿಂದ ಮಾನಸಿಕ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ
ನಮ್ಮ ಆತ್ಮೀಯರನ್ನು ಅಪ್ಪಿಕೊಂಡಾಗ ಮನಸ್ಸಿಗೆ ಏನೋ ಒಂಥರಾ ಖುಷಿ ಸಿಗುವುದು ಸುಳ್ಳಲ್ಲ. ಅದಕ್ಕೆ ಕಾರಣ ಲವ್ ಹಾರ್ಮೋನ್ ಆಕ್ಸಿಟೋಸಿನ್. ಹಾಗಂತ ಅಪ್ಪುಗೆ ಕೇವಲ ಪ್ರೀತಿಯ ಸಂಕೇತವಷ್ಟೇ ಅಲ್ಲ, ಇದರಿಂದ ಒತ್ತಡ ಕಡಿಮೆಯಾಗುವ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ ಎಂದರೆ ನೀವು ನಂಬಲೇಬೇಕು. ಅಪ್ಪಿಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
ನಮ್ಮ ಮನಸ್ಸಿಗೆ ಬೇಸರವಾದಾಗ ಅಥವಾ ಅತಿಯಾಗಿ ಖುಷಿಯಾದಾಗ ಅಥವಾ ಯಾರಾದರೂ ಆತ್ಮೀಯರು ಅಪರೂಪಕ್ಕೆ ಸಿಕ್ಕಾಗ ಅಪ್ಪಿಕೊಂಡು ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತೇವೆ. ಅಪ್ಪಿಕೊಳ್ಳುವುದು ಕೇವಲ ಒಂದು ದೈಹಿಕ ಸಂಕೇತವಷ್ಟೇ ಅಲ್ಲ, ಅಪ್ಪುಗೆಯಿಂದ ಅದನ್ನೂ ಮೀರಿದ ಹಲವು ಪ್ರಯೋಜನಗಳಿವೆ ಎನ್ನುತ್ತಾರೆ ಮನಶಾಸ್ತ್ರಜ್ಞರು.
ತಬ್ಬಿಕೊಳ್ಳುವುದು ಅಥವಾ ಹಗ್ ಮಾಡುವುದರಿಂದ ದೇಹವು ಆಕ್ಸಿಟೋಸಿನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ, ಈ ಆಕ್ಸಿಟೋಸಿನ್ ಅನ್ನು ಸಾಮಾನ್ಯವಾಗಿ ‘ಲವ್ ಹಾರ್ಮೋನ್‘ ಎಂದು ಕರೆಯಲಾಗುತ್ತದೆ. ಇದು ಭಾವನಾತ್ಮಕ ಯೋಗಕ್ಷೇಮ ಮತ್ತು ಒತ್ತಡವನ್ನು ಕಡಿಮೆ ಮಾಡಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.ಅಪ್ಪಿಕೊಳ್ಳುವುದು ಒಂದು ಸಹಜ ಕ್ರಿಯೆಯಾದರೂ ಕೂಡ ಇದು ನಮ್ಮ ಯೋಗಕ್ಷೇಮ ಅವಶ್ಯ ಎಂಬುದನ್ನು ಮನಃಶಾಸ್ತ್ರಜ್ಞರು ಒಪ್ಪಿಕೊಳ್ಳುತ್ತಾರೆ.
ಅಪ್ಪುಗೆಯ ಪ್ರಾಮುಖ್ಯ
ನಮ್ಮ ಉಳಿವಿಗಾಗಿ 4 ಅಪ್ಪುಗೆ, ಬದುಕಿನ ನಿರ್ವಹಣೆಗೆ 8 ಹಗ್ ಹಾಗೂ ನಮ್ಮ ಬೆಳವಣಿಗೆಗೆ 12 ಅಪ್ಪುಗೆ ಅವಶ್ಯ ಎಂಬ ಮಾತೊಂದಿದೆ. ಈ ಜನಪ್ರಿಯ ಕಲ್ಪನೆಯು ನಮ್ಮ ಭಾವನಾತ್ಮಕ ಆರೋಗ್ಯದಲ್ಲಿ ದೈಹಿಕ ಸ್ಪರ್ಶದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಈ ರೀತಿ 4, 8, 12 ಹಗ್‌ಗಳ ಬಗ್ಗೆ ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದರೂ ತಬ್ಬಿಕೊಳ್ಳುವುದರಿಂದ ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದು ಮಾತ್ರ ಸುಳ್ಳಲ್ಲ. ಪ್ರೀತಿಯ ಸ್ಪರ್ಶವು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಸಂತೋಷವನ್ನು ಹೆಚ್ಚಿಸಲು ಸಹಕಾರಿ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಆಪ್ತಸಮಾಲೋಚಕಿ ಸಾಂಚಿ ಶರ್ಮಾ.
ಸಾಂಚಿ ಅವರ ಪ್ರಕಾರ ಅಪ್ಪುಗೆಯ ಅವಧಿಯು ಕೂಡ ಗಮನಾರ್ಹ ಪರಿಣಾಮ ಬೀರುತ್ತದೆ. ಆಕ್ಸಿಟೋಸಿನ್ ಬಿಡುಗಡೆಯನ್ನು ಪ್ರಚೋದಿಸಲು ಮತ್ತು ಭಾವನಾತ್ಮಕ ಬಂಧಗಳನ್ನು ಗಾಢವಾಗಿಸುವಲ್ಲಿ 20 ಸೆಕೆಂಡ್‌ಗಳಿಗಿಂತ ಹೆಚ್ಚು ಅವಧಿಯ ಅಪ್ಪುಗೆಗಳು ಅತ್ಯಂತ ಪರಿಣಾಮಕಾರಿ. ಸಣ್ಣ ಅಪ್ಪುಗೆಯು ಪ್ರಯೋಜನ ನೀಡುತ್ತದೆಯಾದರೂ ದೀರ್ಘವಾದ ಅಪ್ಪುಗೆಗಳು ಮಾನಸಿಕ ವಿಶ್ರಾಂತಿ ನೀಡಿ, ಸಂಬಂಧವನ್ನು ಗಾಢವಾಗಿಸುತ್ತದೆ.
ಯಾರಿಗೆ ಅಪ್ಪುಗೆಯ ಅಗತ್ಯ ಹೆಚ್ಚು?
ವಿಶೇಷವಾಗಿ ಶಿಶುಗಳು, ಮಕ್ಕಳು ಮತ್ತು ವೃದ್ಧರು ದೈಹಿಕ ಸ್ಪರ್ಶದಿಂದ ಇನ್ನಷ್ಟು ಪ್ರಯೋಜನ ಪಡೆಯುತ್ತಾರೆ. ಅಪ್ಪುಗೆಗಳು ಶಿಶುಗಳಲ್ಲಿ ಭಾವನಾತ್ಮಕ ಮತ್ತು ದೈಹಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಮಕ್ಕಳಿಗೆ ಪ್ರೀತಿ ಮತ್ತು ಭದ್ರತೆಯ ಭಾವವನ್ನು ನೀಡುತ್ತದೆ ಮತ್ತು ವಯಸ್ಸಾದವರಲ್ಲಿ ಒಂಟಿತನ ಮತ್ತು ಖಿನ್ನತೆಯ ಭಾವನೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಮನೋಶಾಸ್ತ್ರಜ್ಞರು ಹೇಳುತ್ತಾರೆ.
ಅಪ್ಪುಗೆ vs ಸ್ವರ್ಶದ ಇತರ ರೂಪಗಳು
ಹಸ್ತಲಾಘವ ಅಥವಾ ಬೆನ್ನಿನ ಮೇಲೆ ತಟ್ಟುವುದು ಸಾಮಾಜಿಕ ಸಂಪರ್ಕಗಳನ್ನು ನಿರ್ಮಿಸಬಹುದಾದರೂ, ಅಪ್ಪುಗೆಯ ಶಕ್ತಿಯೇ ಅನನ್ಯ ಎಂದು ಸಾಂಚಿ ಹೇಳುತ್ತಾರೆ. ಒಂದು ದೀರ್ಘವಾದ ಬೆಚ್ಚನೆಯ ಅಪ್ಪುಗೆಯು ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಬಲವಾದ ಭಾವನಾತ್ಮಕ ಸಂಬಂಧಗಳಿಗೆ ಕಾರಣವಾಗುತ್ತದೆ. ಅಪ್ಪುಗೆಗಳು ಅನ್ಯೋನ್ಯತೆ ಮತ್ತು ಬೆಂಬಲವನ್ನು ತಿಳಿಸುವಲ್ಲಿ ಹೆಚ್ಚು ಪರಿಣಾಮಕಾರಿ.
ಅಪ್ಪುಗೆ ಖಂಡಿತ ಪ್ರೀತಿಯ ಸೂಚಕವಷ್ಟೇ ಅಲ್ಲ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ಸಂಬಂಧಗಳನ್ನು ಬಲಪಡಿಸಲು ಪ್ರಬಲ ಸಾಧನವಾಗಿದೆ. ಹಾಗಾಗಿ ನಿಮ್ಮ ಆತ್ಮೀಯರಿಂದ ಆಗಾಗ ಅಪ್ಪುಗೆ ಪಡೆಯಿರಿ.
ವಿಭಾಗ