Summer Skincare: ಬಿಸಿಲಿನ ಬೇಗೆಯಲ್ಲೂ ಅರಳಲಿ ಸೌಂದರ್ಯ; ಇಲ್ಲಿದೆ ಸನ್‌ಟ್ಯಾನ್ ನಿವಾರಿಸುವ ಸುಲಭ ಮನೆಮದ್ದು
ಬೇಸಿಗೆಯಲ್ಲಿ ಸೌಂದರ್ಯ ಕಾಪಾಡಿಕೊಳ್ಳುವುದು ಸವಾಲೇ ಸರಿ. ಸನ್‌ಟ್ಯಾನ್, ಮೊಡವೆ, ಎಣ್ಣೆ ಚರ್ಮದ ಕಾರಣದಿಂದ ಅಂದ ಕೆಡುವುದು ಸಹಜ. ಹಾಗಂತ ತಲೆ ಕೆಡಿಸಿಕೊಳ್ಳಬೇಕಿಲ್ಲ. ಮನೆಯಲ್ಲೇ ಸಿಗುವ ಸರಳ ಮನೆಮದ್ದುಗಳು ಸನ್‌ಟ್ಯಾನ್ ನಿವಾರಿಸುವ ಜೊತೆಗೆ ತ್ವಚೆಯ ಅಂದವನ್ನೂ ಹೆಚ್ಚಿಸುತ್ತವೆ. ಅಂತಹ ಕೆಲವು ಸರಳ, ಸುಲಭ ಮನೆಮದ್ದು ಇಲ್ಲಿದೆ ನೋಡಿ.
ಹೊಳಪಿನ, ಕಾಂತಿಯುತ, ಅಂದದ ತ್ವಚೆ ನಮ್ಮದಾಗಿರಬೇಕು ಎಂದು ಪ್ರತಿದಿನ ಮನಸ್ಸು ಬಯಸುವುದು ಸಹಜ. ಆದರೆ ದಿನನಿತ್ಯದ ಕೆಲಸಗಳಿಂದ ಸೂರ್ಯನ ಬಿಸಿಲಿನಿಂದ ತಪ್ಪಿಸಿಕೊಂಡು ಓಡಾಡುವುದು ಕಷ್ಟಸಾಧ್ಯವೇ ಸರಿ. ಬಿಸಿಲಿನಲ್ಲಿ ಓಡಾಟದ ಪರಿಣಾಮವಾಗಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಂತ ಇದಕ್ಕೆ ಚಿಂತೆ ಮಾಡುವುದು ಬೇಡ. ಸುಲಭ ಮನೆಮದ್ದುಗಳ ಸಹಾಯದಿಂದ ಸೂರ್ಯನ ಹಾನಿಗೊಳಗಾದ ಚರ್ಮವನ್ನು ಪುನರ್ಯೌವನಗೊಳಿಸಬಹುದು. ಈ ಕೆಲವು ಪರಿಣಾಮಕಾರಿ ಮನೆಮದ್ದುಗಳು ಸನ್‌ಟ್ಯಾನ್ ನಿವಾರಿಸುವುದು ಮಾತ್ರ, ಮಂದ, ಕಳೆಗುಂದಿದ ಚರ್ಮದ ನಿವಾರಣೆಗೂ ಸಹಕಾರಿ.
ನಿಂಬೆರಸ ಮತ್ತು ಜೇನುತುಪ್ಪ
ನಿಂಬೆರಸವು ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ ಮಾಡುತ್ತದೆ. ಅಲ್ಲದೆ ಸನ್‌ಟ್ಯಾನ್ ನಿವಾರಣೆಗೂ ಇದು ಸಹಕಾರಿ. ತಾಜಾ ನಿಂಬೆರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಇದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ, ಚರ್ಮಕ್ಕೆ ಸ್ಕ್ರಬ್ ಮಾಡಿ. ಇದರಿಂದ ಚರ್ಮದ ನಿರ್ಜೀವ ಕೋಶಗಳು ಸ್ವಚ್ಛವಾಗುತ್ತವೆ. ಇದನ್ನು 20 ರಿಂದ 30 ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಕಡಲೆಹಿಟ್ಟು, ಅರಿಸಿನ ಹಾಗೂ ಮೊಸರು
ಕಡಲೆಹಿಟ್ಟು ಚರ್ಮದ ಟೋನ್ ಹೆಚ್ಚಲು ಸಹಾಯ ಮಾಡುತ್ತದೆ, ಹಾಗೆ ಅರಿಸಿನವು ಚರ್ಮದ ಹೊಳಪು ಹೆಚ್ಚಿಸುವ ಏಜೆಂಟ್ ಆಗಿದೆ. ಮೊಸರಿನಲ್ಲಿನ ಲ್ಯಾಕ್ಟಿಕ್ ಆಸಿಡ್ ಚರ್ಮವನ್ನು ಮೃದುಗೊಳಿಸುತ್ತದೆ.
ಕಡಲೆಹಿಟ್ಟು, ಮೊಸರು ಹಾಗೂ ಅರಿಸಿನ ಸೇರಿಸಿ ಪೇಸ್ಟ್ ತಯಾರಿಸಿ, ಅದನ್ನು ಮುಖಕ್ಕೆ ಹಚ್ಚಿ. 15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಪಪ್ಪಾಯ, ಟೊಮೆಟೊ, ಕಲ್ಲಂಗಡಿಲ, ಆಲೂಗೆಡ್ಡೆ ಹಾಗೂ ಸೌತೆಕಾಯಿ
ಪಪ್ಪಾಯದಲ್ಲಿ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡುವ ಅಂಶವಿದೆ. ಅಲ್ಲದೆ ಇದರಲ್ಲಿ ನೈಸರ್ಗಿಕ ಕಿಣ್ವಗಳಿವೆ. ಇದು ಉತ್ತಮ ನೈಸರ್ಗಿಕ ಬ್ಲೀಚ್ ಕೂಡ ಹೌದು. ಆಲೂಗೆಡ್ಡೆ ರಸ ಕೇವಲ ಉತ್ತಮ ಬ್ಲೀಚಿಂಗ್ ಮಾತ್ರವಲ್ಲ ಇದು ಕಣ್ಣುಗಳ ಸುತ್ತಲಿನ ಕಲೆಯನ್ನೂ ನಿವಾರಿಸುತ್ತದೆ. ಟೊಮೆಟೊದಲ್ಲಿ ಆಂಟಿಆಕ್ಸಿಡೆಂಟ್ ಅಂಶ ಅಧಿಕವಿದೆ, ಜೊತೆಗೆ ಇದು ಚರ್ಮದ ಹೊಳಪನ್ನೂ ಹೆಚ್ಚಿಸುತ್ತದೆ. ಸೌತೆಕಾಯಿ ಚರ್ಮದ ಉರಿಯನ್ನು ಕಡಿಮೆ ಮಾಡಿ ತಂಪಾಗಿಸುತ್ತದೆ. ಅಲ್ಲದೆ ಟ್ಯಾನ್ ನಿವಾರಿಸಲು ಇದು ಉತ್ತಮ.
ಪಪ್ಪಾಯ, ಕಲ್ಲಂಗಡಿ ಆಲೂಗೆಡ್ಡೆ, ಟೊಮೆಟೊ ಹಾಗೂ ಸೌತೆಕಾಯಿಯಿಯನ್ನ ತರಿತರಿಯಾಗಿ ರುಬ್ಬಿ. ಇದನ್ನು 15 ನಿಮಿಷಗಳ ಕಾಲ ಫ್ರಿಜ್‌ನಲ್ಲಿರಿಸಿ. ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ, ಉಜ್ಜಿ. ಇದರಿಂದ ಹೊಳಪಿನ ಕಾಂತಿಯುವ ಚರ್ಮ ನಿಮ್ಮದಾಗುತ್ತದೆ.
ಹೆಸರುಬೇಳೆ, ಅರಿಸಿನ ಹಾಗೂ ಹಾಲು
ಹೆಸರುಬೇಳೆಯನ್ನು ಹಸಿಹಾಲಿನಲ್ಲಿ ರಾತ್ರಿ ನೆನೆಸಿಡಿ. ಇದನ್ನು ಅರಿಸಿನ ಸೇರಿಸಿ ರುಬ್ಬಿ ಪೇಸ್ಟ್ ತಯಾರಿಸಿ. ಮುಖಕ್ಕೆ ಹಚ್ಚಿ, ಒಣಗಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಕಾಫಿ, ತೆಂಗಿನೆಣ್ಣೆ ಮತ್ತು ಸಕ್ಕರೆ
ಕಾಫಿಯಲ್ಲಿರುವ ಕೆಫಿನ್ ಅಂಶವು ಆರೋಗ್ಯಕ್ಕೆ ಕೆಟ್ಟದ್ದಾದರೂ ಚರ್ಮದ ಆರೋಗ್ಯಕ್ಕೆ ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ಟ್ಯಾನ್ ನಿವಾರಿಸುತ್ತದೆ. ಅಲ್ಲದೆ ಮೊಡವೆ, ಕಲೆಗಳ ನಿವಾರಣೆಗೂ ಸಹಕಾರಿ. ಮುಖದ ನೆರಿಗೆಗಳನ್ನೂ ನಿವಾರಿಸುತ್ತದೆ. ತೆಂಗಿನೆಣ್ಣೆ ಚರ್ಮಕ್ಕೆ ತೇವಾಂಶ ಒದಗಿಸುತ್ತದೆ. ಕಾಫಿಪುಡಿ, ತೆಂಗಿನೆಣ್ಣೆ ಹಾಗೂ ಸಕ್ಕರೆ ಸೇರಿಸಿ ಪೇಸ್ಟ್ ತಯಾರಿಸಿ, ಇದನ್ನು ಸ್ಕ್ರಬ್ ರೀತಿ ಮುಖಕ್ಕೆ ಉಜ್ಜಿ. 10 ನಿಮಿಷ ಬಿಟ್ಟು ತೊಳೆಯಿರಿ.
ಇದನ್ನೂ ಓದಿ
Summer Food: ಮಜ್ಜಿಗೆ, ಲಸ್ಸಿ; ಬೇಸಿಗೆಯ ದಾಹ ನೀಗಿಸುವ ಪಾನೀಯಗಳಲ್ಲಿ ಯಾವುದು ಉತ್ತಮ; ಇಲ್ಲಿದೆ ತಜ್ಞರ ಅಭಿಪ್ರಾಯ
ಬಿರು ಬೇಸಿಗೆಯಲ್ಲಿ ದೇಹ ತಣಿಸುವ ಪಾನೀಯಗಳನ್ನು ಕುಡಿಯುವುದರಿಂದ ಮನಸ್ಸಿಗೆ ಹಾಯ್ ಎನ್ನಿಸುವುದು ಸಹಜ. ಬಿಸಿಲಿನ ತಾಪ ನೀಗಿಸಲು ಲಸ್ಸಿ ಹಾಗೂ ಮಜ್ಜಿಗೆ ಕುಡಿಯುತ್ತೇವೆ. ಆದರೆ ಈ ಎರಡರಲ್ಲಿ ಯಾವುದು ಉತ್ತಮ ಎನ್ನುವ ಅನುಮಾನವಿದೆಯೇ? ಇದಕ್ಕೆ ಇಲ್ಲಿದೆ ತಜ್ಞರ ಅಭಿಪ್ರಾಯ.ʼ