Tooth Powder: ಟೂತ್‌ಪೇಸ್ಟ್‌ಗಳ ಹಾವಳಿ ನಡುವೆ ಈಗಲೂ ಅಸ್ತಿತ್ವ ಉಳಿಸಿಕೊಂಡಿರುವ ನಂಜನಗೂಡು ಹಲ್ಲುಪುಡಿ ಹುಟ್ಟಿದ ಕಥೆ
ಕನ್ನಡ ಸುದ್ದಿ  /  ಜೀವನಶೈಲಿ  /  Tooth Powder: ಟೂತ್‌ಪೇಸ್ಟ್‌ಗಳ ಹಾವಳಿ ನಡುವೆ ಈಗಲೂ ಅಸ್ತಿತ್ವ ಉಳಿಸಿಕೊಂಡಿರುವ ನಂಜನಗೂಡು ಹಲ್ಲುಪುಡಿ ಹುಟ್ಟಿದ ಕಥೆ

Tooth Powder: ಟೂತ್‌ಪೇಸ್ಟ್‌ಗಳ ಹಾವಳಿ ನಡುವೆ ಈಗಲೂ ಅಸ್ತಿತ್ವ ಉಳಿಸಿಕೊಂಡಿರುವ ನಂಜನಗೂಡು ಹಲ್ಲುಪುಡಿ ಹುಟ್ಟಿದ ಕಥೆ

Nanjangud Tooth Powder: ಶತಮಾನಗಳ ಇತಿಹಾಸ ಹೊಂದಿರುವ ನಂಜನಗೂಡು ಹಲ್ಲುಪುಡಿ ಟೂತ್‌ ಪೇಸ್ಟ್‌ ಹಾವಳಿ ನಡುವೆಯೂ ಅಸ್ತಿತ್ವ ಉಳಿಸಿಕೊಂಡಿದೆ. ಈಗಲೂ ಕೆಲವೆಡೆ 3 ರೂ.ಗೆ ದೊರೆಯುತ್ತಿದ್ದು, ಈ ಫೇಮಸ್‌ ಹಲ್ಲುಪುಡಿ ತಯಾರಾದ ಕಥೆ ಹೀಗಿದೆ.

ಬಿಪಿ ಪಂಡಿತರ ನಂಜನಗೂಡು ಹಲ್ಲುಪುಡಿ ಹುಟ್ಟಿದ ಕಥೆ
ಬಿಪಿ ಪಂಡಿತರ ನಂಜನಗೂಡು ಹಲ್ಲುಪುಡಿ ಹುಟ್ಟಿದ ಕಥೆ (PC: @RekhaBasavaraju, ಕನ್ನಡ ಸಂಪದ)

Nanjangud Tooth Powder: ಹಲ್ಲು ಉಜ್ಜಲು ಈಗಂತೂ ಮಾರುಕಟ್ಟೆಯಲ್ಲಿ ನಾನಾ ರೀತಿಯ ಪೇಸ್ಟ್‌ಗಳು ಬಂದಿವೆ. ಕಂಪನಿಗಳು ತಾ ಮುಂದು ನಾ ಮುಂದು ಎಂಬಂತೆ ವಿವಿಧ ರೀತಿಯ ಟೂತ್‌ ಪೇಸ್ಟ್‌, ಮೌತ್‌ ವಾಶ್‌, ಟೂತ್‌ ಪೌಟರ್‌ಗಳನ್ನು ತಯಾರಿಸುತ್ತಿವೆ. ಅವುಗಳನ್ನು ಕೆಲವೇ ಕೆಲವು ಮಾತ್ರ ಖ್ಯಾತಿ ಗಳಿಸಿವೆ. ಆದರೆ ಈ ಟೂತ್‌ಪೇಸ್ಟ್‌ ಬರುವ ಮುನ್ನ ಜನರು ಹಲ್ಲುಪುಡಿಯನ್ನು ಬಳಸುತ್ತಿದ್ದೇ ಹೆಚ್ಚು.

110 ವರ್ಷದ ಇತಿಹಾಸ ಹೊಂದಿರುವ ಹಲ್ಲುಪುಡಿ

ಹಲ್ಲು ಪುಡಿ ಎಂದರೆ ತಕ್ಷಣ ನೆನಪಾಗುವುದು ನಂಜನಗೂಡು ಹಲ್ಲುಪುಡಿ. ಇದನ್ನು ಹಲ್ಲು ಉಜ್ಜಲು ಬಳಸಿದವರಿಗಿಂತ ತಿಂದವರೇ ಹೆಚ್ಚು ಎನ್ನಬಹುದು. ಏಕೆಂದರೆ ಇದರ ರುಚಿಯೇ ಆ ರೀತಿ. ಟೂತ್‌ಪೇಸ್ಟ್‌ಗಳ ಹಾವಳಿಯ ನಡುವೆಯೂ ನಂಜನಗೂಡು ಹಲ್ಲುಪುಡಿ ಇಂದಿಗೂ ಕೆಲವೆಡೆ ಮಾರಾಟವಾಗುತ್ತಿದೆ. ಆದರೆ ಮೊದಲೆಲ್ಲಾ ಪ್ರತಿ ತಿಂಗಳು 10 ಲಕ್ಷ ಪ್ಯಾಕೆಟ್‌ಗಳನ್ನು ತಯಾರಿಸುತ್ತಿದ್ದ ಕಂಪನಿಯು ಉತ್ಪಾದನೆಯನ್ನು 1 ಲಕ್ಷಕ್ಕೆ ಇಳಿಸಿದೆ. 2013 ಡಿಸೆಂಬರ್‌ನಲ್ಲಿ ನಂಜನಗೂಡು ಹಲ್ಲುಪುಡಿ ಕಂಪನಿ ತನ್ನ ಬ್ರಾಂಡ್‌ ಬಳಸಿಕೊಂಡು ಶತಮಾನೋತ್ಸವದ ನೆನಪಿಗಾಗಿ ಟೂತ್‌ಪೇಸ್ಟ್‌ ಬಿಡುಗಡೆ ಮಾಡಿತ್ತು. 2024 ಫೆಬ್ರವರಿಗೆ ನಂಜನಗೂಡು ಹಲ್ಲುಪುಡಿ ಪ್ರಾರಂಭವಾಗಿ 110 ವರ್ಷಗಳು ತುಂಬುತ್ತಿವೆ. ಈ ಹಿನ್ನೆಲೆ ಈ ಪ್ರತಿಷ್ಠಿತ, ಜನ ಮೆಚ್ಚಿದ ಹಲ್ಲು ಪುಡಿ ಬ್ರಾಂಡ್‌ ಬಗ್ಗೆ ಕೆಲವು ವರ್ಷದ ಹಿಂದೆ ಗಣೇಶ ಅಮೀನಘಡ ಅವರ ಪ್ರಜಾವಾಣಿ ಬರಹವನ್ನು ಪರಿಸರ ಪರಿವಾರ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಒಂದಾಣೆ ಹಲ್ಲುಪುಡಿ ಎಂದೇ ಖ್ಯಾತವಾಗಿದ್ದದ್ದು ಬಿವಿ ಪಂಡಿತರ ನಂಜನಗೂಡಿನ ಹಲ್ಲಿನಪುಡಿ. ಇದು 1913ರಲ್ಲಿ ಪ್ರಾರಂಭ ಆಗಿದ್ದು. ಹಳೆ ಮೈಸೂರು ಭಾಗದಲ್ಲಿ ಈಗಲೂ ಜನಪ್ರಿಯವಾಗಿರುವ ನಂಜನಗೂಡಿನ ಹಲ್ಲಿನಪುಡಿ ಸದ್ಯಕ್ಕೆ 3 ರೂಪಾಯಿಗೆ ಮಾರಾಟವಾಗುತ್ತಿದೆ. ಮೈಸೂರಿನ ಆಯುರ್ವೇದ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿಯಾಗಿದ್ದ ಬಿವಿ ಪಂಡಿತರು ನಂಜನಗೂಡಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹೋಮ ನಡೆದ ನಂತರ ಅದರ ಬೂದಿಯನ್ನು ಕಂಡು ಹಲ್ಲುಪುಡಿಯಾಗಿ ತಯಾರಿಸಬಹುದು ಎಂದು ನಿರ್ಧರಿಸಿದರು. ನಂತರ ಭತ್ತದ ಹೊಟ್ಟನ್ನು ತರಿಸಿ ಅದನ್ನು ಬೂದಿ ಮಾಡಿದ ನಂತರ ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಹಲ್ಲಿನಪುಡಿ ಸಿದ್ಧಗೊಳಿಸಿದರು. ಹೀಗೆ 1913ರ ಫೆಬ್ರವರಿ ತಿಂಗಳಲ್ಲಿ ನಂಜನಗೂಡಿನ ನಾರಾಯಣ ಅಗ್ರಹಾರದಲ್ಲಿಯ ತಮ್ಮ ಮನೆಯಲ್ಲಿ ಹಲ್ಲಿನಪುಡಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಇದು ರಾಜ್ಯಾದ್ಯಂತ ಮಾತ್ರವಲ್ಲದೆ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಪ್ರಸಿದ್ಧವಾಯಿತು.

ಸದ್ವೈದ್ಯ ಶಾಲಾ ಪ್ರೈವೇಟ್ ಲಿಮಿಟೆಡ್ ಕಂಪೆನಿ

ಬಿವಿ ಪಂಡಿತರ ಜತೆಗೆ ಅವರ ಪುತ್ರರಾದ ಬಿವಿ ನಂಜುಂಡಸ್ವಾಮಿ, ಬಿವಿ ರಾಮಸ್ವಾಮಿ, ಬಿವಿ ಬಾಲಸುಬ್ರಹ್ಮಣ್ಯ ಹಾಗೂ ಬಿವಿ ವೆಂಕಟೇಶಮೂರ್ತಿ ಅವರು ಹಲ್ಲಿನಪುಡಿ ತಯಾರಿಕೆ ಹಾಗೂ ಮಾರುಕಟ್ಟೆ ವ್ಯವಸ್ಥೆ ನೋಡಿಕೊಂಡರು. ಇವರಲ್ಲಿ ನಂಜುಂಡಸ್ವಾಮಿ ಹಾಗೂ ವೆಂಕಟೇಶಮೂರ್ತಿ ಆಯುರ್ವೇದ ವೈದ್ಯರು. ಇದರೊಂದಿಗೆ ಸದ್ವೈದ್ಯ ಶಾಲಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ಎಂದು ಕಟ್ಟಿಕೊಂಡು ಆಯುರ್ವೇದ ಔಷಧಿ ತಯಾರಿಕೆ ಹಾಗೂ ಮಾರಾಟ ಆರಂಭಿಸಿದರು.

1975ರಲ್ಲಿ ಬಿವಿ ಪಂಡಿತರು ವಿಧಿವಶರಾದ ನಂತರ ಅವರ ಪುತ್ರರು ಹಲ್ಲಿನಪುಡಿ ವಹಿವಾಟು ಮುಂದುವರಿಸಿದರು. ಎಂಬತ್ತರ ದಶಕದವರೆಗೆ ಪ್ರಸಿದ್ಧವಾಗಿದ್ದ ಹಲ್ಲಿನಪುಡಿ, ಟೂತ್ ಪೇಸ್ಟ್‌ಗಳು ಮಾರುಕಟ್ಟೆಗೆ ಬಂದ ಪರಿಣಾಮ ಬೇಡಿಕೆ ಕುಸಿಯಿತು. ಆದರೆ ಈಗಲೂ ಮಾರುಕಟ್ಟೆಯಲ್ಲಿ ಲಭ್ಯ. ಸದ್ಯ ಮೂರನೇ ತಲೆಮಾರಿನ ಬಿಎಸ್‌ ಜಯಂತ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಅವರ ಸೋದರರಾದ ರಾಜೇಶ್ ಹಾಗೂ ರಾಮಗೋಪಾಲ್ ಕಂಪೆನಿಯ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.

ಭತ್ತದ ಹೊಟ್ಟಿನಿಂದ ತಯಾರಿಸಲಾಗುವ ಹಲ್ಲುಪುಡಿ

"ಈಗಲೂ ಭತ್ತದ ಹೊಟ್ಟಿನ ಬೂದಿಯಿಂದಲೇ ಹಲ್ಲಿನಪುಡಿಯನ್ನು ತಯಾರಿಸಲಾಗುತ್ತಿದೆ. ಕೈಬೆರಳಿನಿಂದ ತಿಕ್ಕುವುದರಿಂದ ಹಲ್ಲುಗಳು ಸ್ವಚ್ಛಗೊಳ್ಳುತ್ತವೆ" ಎನ್ನುತ್ತಾರೆ ಸಂಸ್ಥೆಯ ನಿರ್ವಾಹಕರಲ್ಲೊಬ್ಬರಾದ ರಾಮಗೋಪಾಲ್. "ಪುಡಿಯಲ್ಲಿ ಗಿಡಮೂಲಿಕೆಗಳ ಮಿಶ್ರಣ ಇರುವುದರಿಂದ ಒಸಡಿನ ನೋವು ನಿವಾರಣೆಯಾಗುತ್ತದೆ. ಎಲೆ-ಅಡಿಕೆ, ತಂಬಾಕು ಸೇವನೆಯಿಂದ ಹಲ್ಲಿನ ಮೇಲೆ ಉಂಟಾಗುವ ಕೆಂಪು ಬಣ್ಣ ಕೂಡಾ ಹೋಗುತ್ತದೆ. ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಉಜ್ಜುವುದರಿಂದ ಹಲ್ಲುಗಳು ಸುರಕ್ಷಿತವಾಗಿರುತ್ತವೆ. ಮುಖ್ಯವಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲ" ಎಂದು ಅವರು ಸ್ಪಷ್ಟಪಡಿಸುತ್ತಾರೆ.

1887ರಲ್ಲಿ ಜನಿಸಿದ್ದ ಬಿವಿ ಪಂಡಿತರ ಜನ್ಮಶತಮಾನೋತ್ಸವವನ್ನು 1988ರಲ್ಲಿ ಆಚರಿಸಲಾಗಿತ್ತು.

ಮಾಹಿತಿ ಕೃಪೆ: ಕೆಲವು ವರ್ಷದ ಹಿಂದೆ ಗಣೇಶ ಅಮೀನಘಡ ಅವರ ಪ್ರಜಾವಾಣಿ ಬರಹ

Whats_app_banner