Skin Cancer: ಚರ್ಮದ ಕ್ಯಾನ್ಸರ್‌ ಗುಣಪಡಿಸುವ ಸೋಪ್‌ ಕಂಡುಹಿಡಿದ 14 ವರ್ಷದ ವಿದ್ಯಾರ್ಥಿ; ಈ ಸೋಪ್‌ ಬೆಲೆ ಕೇವಲ 831 ರೂ
ಕನ್ನಡ ಸುದ್ದಿ  /  ಜೀವನಶೈಲಿ  /  Skin Cancer: ಚರ್ಮದ ಕ್ಯಾನ್ಸರ್‌ ಗುಣಪಡಿಸುವ ಸೋಪ್‌ ಕಂಡುಹಿಡಿದ 14 ವರ್ಷದ ವಿದ್ಯಾರ್ಥಿ; ಈ ಸೋಪ್‌ ಬೆಲೆ ಕೇವಲ 831 ರೂ

Skin Cancer: ಚರ್ಮದ ಕ್ಯಾನ್ಸರ್‌ ಗುಣಪಡಿಸುವ ಸೋಪ್‌ ಕಂಡುಹಿಡಿದ 14 ವರ್ಷದ ವಿದ್ಯಾರ್ಥಿ; ಈ ಸೋಪ್‌ ಬೆಲೆ ಕೇವಲ 831 ರೂ

ಅಮೆರಿಕದ 14 ವರ್ಷದ ವಿದ್ಯಾರ್ಥಿಯೊಬ್ಬ ಚರ್ಮದ ಕ್ಯಾನ್ಸರ್‌ ಗುಣಪಡಿಸುವ ಸೋಪ್‌ವೊಂದನ್ನು ಕಂಡುಹಿಡಿದಿದ್ದಾನೆ. ಹೇಮನ್‌ ಬೆಕೆಲೆ ಎಂಬ ಹುಡುಗ ಕಂಡುಹಿಡಿದ ಈ ಸೋಪ್‌ ಬೆಲೆ ಕೇವಲ 831 ರೂ. ಏನಿದು ಸೋಪ್‌, ಇದರ ವೈಶಿಷ್ಟ್ಯವೇನು ಎಂಬ ವಿವರ ಇಲ್ಲಿದೆ.

ಹೇಮನ್‌ ಬೆಕೆಲೆ
ಹೇಮನ್‌ ಬೆಕೆಲೆ (DNA)

ಜಗತ್ತಿನಾದ್ಯಂತ ಮನುಷ್ಯರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಕ್ಯಾನ್ಸರ್‌ ಮೊದಲ ಸ್ಥಾನದಲ್ಲಿದೆ ಎನ್ನಬಹುದು. ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ದೇಹದ ಹಲವು ಭಾಗಗಳಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳಬಹುದು. ಅದರಲ್ಲಿ ಚರ್ಮದ ಕ್ಯಾನ್ಸರ್‌ ಕೂಡ ಒಂದು. ಸ್ಕಿನ್‌ ಕ್ಯಾನ್ಸರ್‌ ರೋಗಿಗಳಿಗೆ ಇಲ್ಲೊಂದು ಗುಡ್‌ನ್ಯೂಸ್‌ ಇದೆ. ಅದೇನೆಂದರೆ ಇಲ್ಲೊಬ್ಬ ಹುಡುಗ ಚರ್ಮದ ಕ್ಯಾನ್ಸರ್‌ ನಿವಾರಣೆಗೆ ಸೋಪ್‌ವೊಂದನ್ನು ಕಂಡುಹಿಡಿದಿದ್ದಾನೆ. ಇದರ ಬೆಲೆ ಕೇವಲ 10 ಡಾಲರ್‌ ಅಂದರೆ 831 ರೂ. ಇದೇನು ಸೋಪ್‌, ಆ ಹುಡುಗ ಸೋಪ್‌ ಕಂಡುಹಿಡಿದಿದ್ದು ಹೇಗೆ, ಯಾರು ಈ ಹುಡುಗ ಎಂಬೆಲ್ಲಾ ವಿಷಯಗಳು ತಿಳಿಯಲು ಮುಂದೆ ಓದಿ.

ಅಮೆರಿಕದ ಫೇರ್‌ಫ್ಯಾಕ್ಸ್‌ ಕೌಂಟಿಯ ಫ್ರಾಸ್ಟ್‌ ಮಿಡಲ್‌ ಸ್ಕೂಲ್‌ನ 14 ವರ್ಷ ವಿದ್ಯಾರ್ಥಿ ಹೇಮನ್‌ ಬೆಕೆಲೆ ಈ ವಿಶೇಷವಾದ ಸೋಪ್‌ ಅನ್ನು ಕಂಡು ಹಿಡಿದ ವಿದ್ಯಾರ್ಥಿ. ಈ ಹುಡುಗ ತಯಾರಿಸಿದ ಸೋಪ್‌ಗೆ ಕ್ಯಾನ್ಸರ್‌ ತಡೆಯುವ ಗುಣವಿದೆ ಎನ್ನಲಾಗುತ್ತಿದೆ.

2023 3M ಯಂಗ್‌ ಸೈಂಟಿಸ್ಟ್‌ ಚಾಲೆಂಜ್‌ನಲ್ಲಿ ಸ್ಪರ್ಧಿಸಿದ ನಂತರ ಈ ಹುಡುಗ ಅಮೆರಿಕ ಟಾಪ್‌ ಯಂಗ್‌ ಸೈಂಟಿಸ್ಟ್‌ ಕೀರಿಟವನ್ನು ಮುಡಿಗೇರಿಸಿಕೊಂಡಿದ್ದಾನೆ. ಇತರ 9 ಮಂದಿ ಈ ಸ್ಪರ್ಧೆಯಲ್ಲಿ ಬೆಕೆಲೆಗೆ ಪ್ರತಿಸ್ಪರ್ಧಿಗಳಾಗಿದ್ದರು.

ವಾಷಿಂಗ್ಟನ್‌ ಪೋಸ್ಟ್‌ ವರದಿಯ ಪ್ರಕಾರ ʼಈ ಹುಡುಗ 25,000 ಡಾಲರ್‌ ಗ್ರ್ಯಾಂಡ್‌ ಬಹುಮಾನವನ್ನು ಕೂಡ ಪಡೆದಿದ್ದಾರೆ. 9ನೇ ತರಗತಿಯ ಈ ಹುಡುಗ ತಯಾರಿಸಿದ ಸೋಪ್‌ ಕ್ಯಾನ್ಸರ್‌ ಕೋಶಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ. ಇದು ಪ್ರತಿಕ್ರಿಯಾತ್ಮಕ ಚರ್ಮಕೋಶಗಳನ್ನು ರಕ್ಷಿಸುವ ಅಂಶಗಳನ್ನು ಒಳಗೊಂಡಿದೆ. ಇದರ ಬೆಲೆ 10 ಡಾಲರ್‌ (831 ರೂ) ಗಿಂತಲೂ ಕಡಿಮೆʼ ಎನ್ನಲಾಗಿದೆ.

ಬೆಕೆಲೆ ಅವರ ಲಿಂಕ್ಡ್‌ಇನ್‌ ಬಯೋದಲ್ಲಿ ʼತಾವೊಬ್ಬ ಯಂಗ್‌ ಪ್ರೋಗ್ರಾಮರ್‌. ಪೈಥಾನ್‌, ಲುವಾ, ಜಾವಾಸ್ಕ್ರಿಪ್ಟ್‌ ಹಾಗೂ ಸಿ ಪ್ರೋಗ್ರಾಮಿಂಗ್‌ನಲ್ಲಿ ಪರಿಣತ. ಮೆಡಿಸಿನ್‌ ಬಗ್ಗೆ ಒಲವು. ಸಂಶೋಧನೆ ಮಾಡಲು ಆಸಕ್ತಿʼ ಎಂದೆಲ್ಲಾ ಬರೆದುಕೊಂಡಿದ್ದಾರೆ.

ʼನನ್ನೆಲ್ಲಾ ಪರಿಶ್ರಮಕ್ಕೂ ಕೊನೆಗೆ ಪ್ರತಿಫಲ ದೊರೆತಿದೆ. ಇದು ನಿಜವಾಗಿಯೂ ಅತಿವಾಸ್ತವಿಕ ಅನುಭವʼ ಎಂದು ಹೇಮನ್‌ ಬೆಕೆಲೆ ಔಟ್‌ಲೆಟ್‌ಗೆ ತಿಳಿಸಿದ್ದಾರೆ.

ʼಈ ಬಾರ್‌ ಸೋಪ್‌ ಅನ್ನು ಒಂದು ಬಾರಿ ಬಳಸುವುದರಿಂದ ಕ್ಯಾನ್ಸರ್‌ ಗುಣವಾಗುತ್ತದೆʼ ಎಂದು ತಮ್ಮ ಸಂಶೋಧನೆ ಸಲ್ಲಿಕೆ ವೇಳೆ ಅವರು ಬರೆದುಕೊಂಡಿದ್ದರು. ʼನಾನು ಯಾವಾಗಲೂ ಜೀವಶಾಸ್ತ್ರ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದೇನೆ. ಈ ಸವಾಲು ನನ್ನ ಆಲೋಚನೆಗಳನ್ನು ಪ್ರದರ್ಶಿಸಲು ಪರಿಪೂರ್ಣ ವೇದಿಕೆ ಒದಗಿಸಿದೆʼ ಎಂದು ಬೆಕೆಲೆ ಹೇಳಿದ್ದಾನೆ.

ಬೆಕೆಲೆ ಇಥಿಯೋಪಿಯಾದಲ್ಲಿ ವಾಸಿಸುತ್ತಿರುವಾಗ ಅವರಿಗೆ ಅಲ್ಲಿನ ಜನರ ಜೀವನ ಈ ಸೋಪ್‌ ತಯಾರಿಸಲು ಸ್ಫೂರ್ತಿಯಾಯಿತು ಎಂದಿದ್ದಾರೆ. ಅಲ್ಲಿನ ಜನರು ಕಡು ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ಬೆಕೆಲ್‌ ಗುರುತಿಸಿದ್ದರು. ಆದರೆ ಆಗ ಅದನ್ನು ಗಂಭೀರ ತೆಗೆದುಕೊಂಡಿರಲಿಲ್ಲ. ಆದರೆ ಈ ಯಂಗ್‌ ಸೆಂಟಿಸ್ಟ್‌ ಅವಾರ್ಡ್‌ ಬಗ್ಗೆ ಕೇಳಿದಾಗ ಬೆಕೆಲ್‌ ಸೋಪ್‌ ತಯಾರಿಸುವ ನಿರ್ಧಾರಕ್ಕೆ ಬಂದಿದ್ದರು. ಚರ್ಮದ ಕ್ಯಾನ್ಸರ್‌ ಮೇಲೆ ಸಂಶೋಧನೆಯನ್ನು ಕೇಂದ್ರೀಕರಿಸುವ ನಿರ್ಧಾರ ಮಾಡಿ, ಸೋಪ್‌ ಕಂಡು ಹಿಡಿದಿದ್ದಾನೆ.

ʼನನ್ನ ಕಲ್ಪನೆಯನ್ನು ವಿಜ್ಞಾನದ ವಿಷಯದಲ್ಲಿ ಅಳವಡಿಸಿಕೊಳ್ಳಲು ಮಾತ್ರವಲ್ಲ, ಸಾಧ್ಯವಾದಷ್ಟು ಜನರಿಗೆ ಅದನ್ನು ತಲುಪುವಂತೆ ಮಾಡಲು ಪ್ರಯತ್ನಿಸುತ್ತೇನೆ. ನಾನು ತಯಾರಿಸುವ ಉತ್ಪನ್ನ ಅತ್ಯಂತ ಅನುಕೂಲಕರ ಮತ್ತು ಅತ್ಯಂತ ವಿಶ್ವಾಸಾರ್ಹʼ ಎಂದು ಹೇಮನ್‌ ಬೆಕೆಲೆ ಹೇಳುತ್ತಾನೆ. ನಾನು ತಯಾರಿಸದ ವಸ್ತು ಜನರಿಗೆ ಸಾಧ್ಯವಾದಷ್ಟು ಬಳಕೆಗೆ ಅರ್ಹವಾಗಿರಬೇಕು ಎಂಬ ಮನದಾಸೆಯನ್ನೂ ಹಂಚಿಕೊಳ್ಳುತ್ತಾನೆ ಈ ಬಾಲಕ.

ಹೇಮನ್‌ ಟಾಪ್‌ 10ರ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. 3M ಪ್ರಾಡಕ್ಟ್‌ ಎಂಜಿನಿಯರಿಂಗ್‌ ಸ್ಪೆಷಲಿಸ್ಟ್‌ ಆಗಿರುವ ಮೆಂಟರ್‌ ಡೆಬೊರಾ ಇಸ್ಲಾಬೆಲ್ಲೆ ಅವರೊಂದಿಗೆ ಹೇಮನ್‌ ಜೋಡಿಯಾಗಿದ್ದರು.

ʼರಾಸಾಯನಿಕಗಳ ಸಂಯೋಜನೆಯೊಂದಿಗೆ ಕೆಲಸ ಮಾಡುವ ಮೂಲ ಮಾದರಿಯನ್ನು ರಚಿಸಲು ಹಲವಾರು ತಿಂಗಳುಗಳ ಪ್ರಯೋಗ ನಡೆಸಿದ್ದಾರೆ ಬೆಕೆಲ್‌. ಹೇಮನ್‌ ಈ ಸ್ಪರ್ಧೆಗೆ ಸಲ್ಲಿಸಲು ಯೋಜಿಸಿದ ಸೋಪ್‌ ಮಾದರಿ ವಿಧಾನವನ್ನು ನಿರ್ಧಾರ ಮಾಡಲು ಕಂಪ್ಯೂಟರ್‌ ಮಾಡೆಲಿಂಗ್‌ ಬಳಸಿದ್ದಾರೆ. ʼಸ್ಕಿನ್‌ ಕ್ಯಾನ್ಸರ್‌ ಟ್ರೀಟಿಂಗ್‌ ಸೋಪ್‌ʼ ಎಂದು ಸದ್ಯಕ್ಕೆ ಇದಕ್ಕೆ ಹೆಸರಿಡಲಾಗಿದೆ.

ಹಲವಾರು ಲೋಷನ್‌ಗಳು ಲಭ್ಯವಿದ್ದರೂ, ಕ್ಯಾನ್ಸರ್ ಚಿಕಿತ್ಸೆಯ ಸೋಪ್ ಅನ್ನು ಎಂದಿಗೂ ಪ್ರಯತ್ನಿಸಲಾಗಿಲ್ಲ ಎಂದು ಹೇಮನ್ ಗಮನಸೆಳೆದಿದ್ದಾರೆ.

ʼಈ ಸೋಪ್‌ ಭರವಸೆಯ ಸಂಕೇತ, ಈ ಸೋಪ್‌ನ ಉಪಯೋಗ ಜಗತ್ತಿನ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಎಂದು ಹೇಮನ್‌ ಪ್ಯಾನೆಲ್‌ ಚರ್ಚೆ ವೇಳೆ ತಮ್ಮ ಮನದಾಸೆ ತಿಳಿಸಿದ್ದಾರೆ.

Whats_app_banner