World Television Day: ಟಿವಿಯನ್ನು ಸಂಭ್ರಮಿಸಲು ಒಂದು ದಿನವಿದೆ; ವಿಶ್ವ ದೂರದರ್ಶನ ದಿನದ ಇತಿಹಾಸ, ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  World Television Day: ಟಿವಿಯನ್ನು ಸಂಭ್ರಮಿಸಲು ಒಂದು ದಿನವಿದೆ; ವಿಶ್ವ ದೂರದರ್ಶನ ದಿನದ ಇತಿಹಾಸ, ಮಹತ್ವ ತಿಳಿಯಿರಿ

World Television Day: ಟಿವಿಯನ್ನು ಸಂಭ್ರಮಿಸಲು ಒಂದು ದಿನವಿದೆ; ವಿಶ್ವ ದೂರದರ್ಶನ ದಿನದ ಇತಿಹಾಸ, ಮಹತ್ವ ತಿಳಿಯಿರಿ

ಟಿವಿ ಇಂದು ನಮ್ಮಲ್ಲೆರ ಮನೆಯ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಟೆಲಿವಿಷನ್ ಎಂಬ ಯಂತ್ರ ಕಂಡುಹಿಡಿದಾಗಿನಿಂದ ಇಲ್ಲಿಯವರೆಗೆ ಹಲವು ಆವಿಷ್ಕಾರಗಳಾಗಿವೆ. ಬ್ಲ್ಯಾಕ್‌ ಅಂಡ್ ವೈಟ್ ಟಿವಿಯಿಂದ ಸ್ಮಾಟ್‌ ಟಿವಿವರೆಗೆ ಟೆಲಿವಿಷನ್ ಸಾಗಿ ಬಂದ ದಾರಿ ಮಹತ್ತರವಾದದ್ದು. ಮನರಂಜನೆ ಹಾಗೂ ಮಾಹಿತಿ ಮಾಧ್ಯಮವಾಗಿರುವ ಟಿವಿ ಸಲುವಾಗಿ ಒಂದು ದಿನವಿವೆ. ಅದುವೇ ವಿಶ್ವ ದೂರದರ್ಶನ ದಿನ.

ವಿಶ್ವ ದೂರದರ್ಶನ ದಿನ
ವಿಶ್ವ ದೂರದರ್ಶನ ದಿನ (PC: Canva)

ಪ್ರಪಂಚದಾದ್ಯಂತ ನವೆಂಬರ್ 21ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ. ಟಿವಿ ಎಂದರೆ ಬಹುತೇಕರಿಗೆ ಅದೊಂದು ಎಲೆಕ್ಟ್ರಾನಿಕ್ ಗ್ಯಾಜೆಟ್ ಖಂಡಿಲ್ಲ ಅಲ್ಲ. ಟಿವಿಯ ಜೊತೆ ಒಂದು ರೀತಿಯ ಬಾಂಧವ್ಯ ಹೊಂದಿರುವ ಹಲವರು ನಮ್ಮ ನಡುವೆ ಇದ್ದಾರೆ. ಅವರಿಗೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿಯವರೆಗೆ ಟಿವಿ ಸಂಗಾತಿಯಂತಿರುವುದು ಸುಳ್ಳಲ್ಲ. ಮನರಂಜನೆಯ ಜೊತೆಗೆ ಜಗತ್ತಿನ ಆಗುಹೋಗುಗಳ ಬಗ್ಗೆ ಚಿತ್ರ, ವಿಡಿಯೊ ಮೂಲಕ ಮಾಹಿತಿ ನೀಡುವ ಯಂತ್ರ ಟಿವಿ.

ಬ್ಲ್ಯಾಕ್‌ ಅಂಡ್ ವೈಟ್‌ನಲ್ಲಿ ಚಿಕ್ಕದ್ದಾಗಿ ಟೇಬಲ್ ಮೇಲೆ ಇರುತ್ತಿದ್ದ ಟಿವಿ ಈಗ ಗೋಡೆ ಗಾತ್ರಕ್ಕೆ ದೊಡ್ಡದಾಗಿ ಸ್ಮಾರ್ಟ್‌ಟಿವಿ ಹೆಸರಿನಲ್ಲಿ ಗೋಡೆಗೆ ಅಂಟಿಸುವ ಟಿವಿಯಾಗಿ ಬದಲಾಗಿದೆ. ಅದೇನೇ ಬದಲಾದರು ಟಿವಿಯ ಮೂಲ ಉದ್ದೇಶ ಮನರಂಜನೆ, ಮಾಹಿತಿ ನೀಡುವುದು ಎಂಬುದು ಬದಲಾಗಿಲ್ಲ. ಆ ಕಾರಣಕ್ಕೆ ಟಿವಿ ಎಲ್ಲರಿಗೂ ಅಚ್ಚುಮೆಚ್ಚು. ನಮ್ಮ, ನಿಮ್ಮೆಲ್ಲರ ಮನೆಯ ನೆಚ್ಚಿನ ಸಂಗಾತಿಯನ್ನ ದೂರದರ್ಶನ ದಿನ ಮೂಲಕ ಸಂಭ್ರಮಿಸಲಾಗುತ್ತದೆ. ಹಾಗಾದರೆ ವಿಶ್ವ ದೂರದರ್ಶನ ದಿನದ ಇತಿಹಾಸ, ಮಹತ್ವ, ಆಚರಣೆಯ ಉದ್ದೇಶ ತಿಳಿಯಿರಿ.

ವಿಶ್ವ ದೂರದರ್ಶನ ದಿನ

ಜನರು ಹಾಗೂ ಸಮಾಜದ ಮೇಲೆ ದೂರದರ್ಶನದ ಪ್ರಭಾವದ ಬಗ್ಗೆ ಗಮನ ಸೆಳೆಯುವ ಉದ್ದೇಶದಿಂದ ಪ್ರತಿ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ. 1996 ನವೆಂಬರ್ 21–22 ರಂದು ನಡೆದ ಮೊದಲ ವರ್ಲ್ಡ್ ಟೆಲಿವಿಷನ್ ಫೋರಂ ಗೌರವಾರ್ಥವಾಗಿ 1996ರ ಡಿಸೆಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಟೆಲಿವಿಷನ್ ದಿನದ ಆಚರಣೆಯ ಬಗ್ಗೆ ಪ್ರಸ್ತಾಪಿಸಲಾಯಿತು.

ವಿಶ್ವ ದೂರದರ್ಶನ ದಿನದ ಇತಿಹಾಸ, ಟಿವಿಯ ವಿಕಾಸ

ಟೆಲಿವಿಷನ್ ಆವಿಷ್ಕಾರವಾದಾಗಿನಿಂದ ಇಲ್ಲಿಯವರೆಗೆ ಹಲವಾರು ಬದಲಾವಣೆಗಳನ್ನು ಕಂಡಿದೆ. 20ನೇ ಶತಮಾನದಲ್ಲಿ ಬ್ಲ್ಯಾಕ್‌ ಅಂಡ್ ವೈಟ್ ಟಿವಿ ಮೂಲಕ ಇದರ ಪಯಣ ಆರಂಭವಾಯಿತು. ಆರಂಭದಲ್ಲಿ ಒಂದೆರಡು ಚಾನೆಲ್, ಕಾರ್ಯಕ್ರಮಗಳಿದ್ದ ಕಾಲ ಬದಲಾಗಿ ಈಗ ಯೂಟ್ಯೂಬ್ ಕೂಡ ಟಿವಿಯಲ್ಲೇ ನೋಡುವ ಕಾಲ ಬಂದಿದೆ.

ಫಿಲೋ ಫಾರ್ನ್ಸ್‌ವರ್ತ್ ಎನ್ನುವವರು ಟೆಲಿವಿಷನ್ ಅನ್ನು ಕಂಡುಹಿಡಿಯುತ್ತಾರೆ. 1927ರಲ್ಲಿ ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಯಿತು. B&W ದೂರದರ್ಶನ ಸೆಟ್‌ಗಳ ವಾಣಿಜ್ಯ ಉತ್ಪಾದನೆಯು 1930 ರ ದಶಕದ ಅಂತ್ಯದಲ್ಲಿ ಪ್ರಾರಂಭವಾಯಿತು. ಇದಾಗಿ ಸ್ವಲ್ಪ ದಿನಗಳಲ್ಲಿ ಎಂದರೆ 1950ರ ದಶಕದಲ್ಲಿ ಬಣ್ಣದ ಟಿವಿಯನ್ನೂ ಪರಿಚಯಿಸಲಾಯಿತು. ಬಣ್ಣದ ಟಿವಿ ಬಂದ ನಂತರ ವೀಕ್ಷಕರ ಅನುಭವ ಹಾಗೂ ಆಸಕ್ತಿಗಳು ಬದಲಾದವು. 1980ರ ದಶಕದಿಂದ ಕೇಬಲ್ ಚಾನೆಲ್‌ಗಳು ಹಾಗೂ ಭಿನ್ನ ಕಾರ್ಯಕ್ರಮಗಳು ಆರಂಭವಾದವು. ಆ ನಂತರ ಸ್ಯಾಟಲೈಟ್ ಟಿವಿಗಳು ಕಾರ್ಯ ನಿರ್ವಹಿಸಲು ಆರಂಭಿಸಿದವು. 1990 ಉತ್ತರಾರ್ಧದಲ್ಲಿ ಡಿಜಿಟಲ್ ಟಿವಿಗಳು ಆವಿಷ್ಕಾರವಾದರೆ 2000ದ ದಶಕದಲ್ಲಿ ಎಚ್‌ಡಿ ಟಿವಿಗಳು ಆವಿಷ್ಕಾರವಾದವು. ನಂತರ ಸ್ಮಾರ್ಟ್ ಟಿವಿ, ಇಂಟರ್ನೆಟ್‌ ಸಂಪರ್ಕ, ವಿವಿಧ ಆಪ್ಲಿಕೇಷನ್‌ನಗಳನ್ನು ಟಿವಿಗೆ ಅಳವಡಿಸುವುದು ಸಾಧ್ಯವಾಯಿತು. ಒಟ್ಟಾರೆ ಸುಧಾರಿತ ತಂತ್ರಜ್ಞಾನವು ಟಿವಿಯನ್ನು ಒಂದು ಸಾಧನ ಹಲವು ಮಾಧ್ಯಮವನ್ನಾಗಿ ಮಾಡಿದೆ.

ವಿಶ್ವ ದೂರದರ್ಶನ ದಿನದ ಮಹತ್ವ

ಮಾನವನ ಜೀವನದಲ್ಲಿ ಟೆಲಿವಿಷನ್‌ನ ಪ್ರಾಮಖ್ಯವನ್ನು ತಿಳಿಸುವ ಉದ್ದೇಶವನ್ನು ಈ ದಿನ ಹೊಂದಿದೆ. ಜೊತೆಗೆ ಟಿವಿಯ ಆವಿಷ್ಕಾರದ ಬಗ್ಗೆ ತಿಳಿಯಲು ಈ ದಿನ ಉತ್ತಮ. ಈ ದಿನದಂದು ಟಿವಿ ಪ್ರಸಾರ ಕಾರ್ಯಕ್ರಮಗಳ ಸುಧಾರಿಸುವ ಮಾರ್ಗಗಳ ಬಗ್ಗೆ ಹಾಗೂ ಟಿವಿಯ ಹೊಸ ಆವಿಷ್ಕಾರಗಳ ಬಗ್ಗೆ ಚರ್ಚಾಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲಾ ವಯೋಮಾನದವರನ್ನು ಸೆಳೆದು ತನ್ನೆದುರು ಕೂರಿಸಿಕೊಳ್ಳುವ ಸಾಮರ್ಥ್ಯ ಇರುವ ಟಿವಿ ನಮ್ಮ ಬದುಕಿನ ಅವಿಭಾಜ್ಯ ಅಂಗ ಎಂದರೂ ತಪ್ಪಲ್ಲ. ವಿಶ್ವ ಟೆಲಿವಿಷನ್‌ ದಿನದಂದು ಜನರು ದೂರದರ್ಶನದ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಚರ್ಚಿಸುತ್ತಾರೆ. ಟೆಲಿವಿಷನ್‌ ವೀಕ್ಷಣೆಯ ಪರಿಣಾಮ ಮತ್ತು ಪ್ರಯೋಜನಗಳ ಬಗ್ಗೆ ಪ್ರೇಕ್ಷಕರಿಗೆ ಅರಿವು ಮೂಡಿಸಲಾಗುತ್ತದೆ.

 

 

Whats_app_banner