ವಯಸ್ಸು ನಿರ್ಧರಿಸೋ ದಾಖಲೆ ಅಂತ ಆಧಾರ್ ಕಾರ್ಡ್ ಕೊಟ್ರೆ ಹೇಗೆ, ಅದು ಗುರುತಿನ ಚೀಟಿ: ಸುಪ್ರೀಂ ಕೋರ್ಟ್
ವಯಸ್ಸು ನಿರ್ಧರಿಸುವ ದಾಖಲೆ ಅಂತ ಆಧಾರ್ ಕಾರ್ಡ್ ಕೊಡಬೇಡಿ. ಅದು ವಯಸ್ಸು ನಿರ್ಧರಿಸುವ ದಾಖಲೆ ಅಲ್ಲ ಅದು ಗುರುತಿನ ಚೀಟಿ ಎಂಬುದನ್ನು ಸುಪ್ರೀಂ ಕೋರ್ಟ್ ಕೂಡ ಈಗ ಸ್ಪಷ್ಟಪಡಿಸಿದೆ. ಹೈಕೋರ್ಟ್ ನೀಡಿದ ತೀರ್ಪನ್ನೂ ಅದು ರದ್ದುಗೊಳಿಸಿದ್ದು, ಕುತೂಹಲಕಾರಿ ಪ್ರಕರಣದ ವಿವರ ಇಲ್ಲಿದೆ.
ನವದೆಹಲಿ: ವ್ಯಕ್ತಿಯ ವಯಸ್ಸು ನಿರ್ಧರಿಸುವ ದಾಖಲೆ ಕೊಡಿ ಅಂದ್ರೆ ಆಧಾರ್ ಕಾರ್ಡ್ ಕೊಡಬೇಡಿ. ಅದು ವಯಸ್ಸು ನಿರ್ಧರಿಸುವ ದಾಖಲೆ ಅಲ್ಲ. ವಯಸ್ಸು ನಿರ್ಧರಿಸುವ ದಾಖಲೆ ಎಸ್‌ಎಸ್‌ಎಲ್‌ಸಿ ಸರ್ಟಿಫಿಕೇಟ್ ಎಂಬ ಅಂಶ ದೇಶದ ಗಮನಸೆಳೆದಿದೆ. ಸುಪ್ರೀಂ ಕೋರ್ಟ್ ಗುರುವಾರ ನೀಡಿದ ತೀರ್ಪು ಇದಕ್ಕೆ ಕಾರಣ. ರಸ್ತೆ ಅಪಘಾತದ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ ಕೇಸ್‌ನಲ್ಲಿ ವಯಸ್ಸು ನಿರ್ಧರಿಸುವುದಕ್ಕೆ ಆಧಾರ್ ಕಾರ್ಡ್ ಅನ್ನು ದಾಖಲೆ ಎಂದು ಪರಿಗಣಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ವಯಸ್ಸು ದೃಢೀಕರಿಸುವಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರದ ಮಹತ್ವವನ್ನು ಎತ್ತಿಹಿಡಿದಿದೆ.
ಆಧಾರ್ ಕಾರ್ಡ್ ಗುರುತಿನ ಚೀಟಿ ಎಂದ ಸುಪ್ರೀಂ ಕೋರ್ಟ್
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಮೃತನ ವಯಸ್ಸು ನಿರ್ಧರಿಸಲು ಆತನ ಜನ್ಮ ದಿನಾಂಕ ಪರಿಶೀಲನೆಗೆ 2015ರ ಬಾಲಾಪರಾಧ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 94ರ ಪ್ರಕಾರ ಎಸ್‌ಎಸ್‌ಎಲ್‌ಸಿಯಲ್ಲಿ ನಮೂದಾಗಿರುವ ಜನ್ಮ ದಿನಾಂಕವನ್ನು ಪರಿಗಣಿಸಬೆಕು. ಇದಕ್ಕಾಗಿ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರವನ್ನು ದಾಖಲೆಯಾಗಿ ಪಡೆಯಬೇಕು ಎಂದು ನ್ಯಾಯಪೀಠ ಹೇಳಿದೆ.
“ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಅದರ 2023 ರ ಸುತ್ತೋಲೆ ಸಂಖ್ಯೆ 8 ರ ಮೂಲಕ, 2018ರ ಡಿಸೆಂಬರ್ 20 ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನೀಡಿದ ಕಚೇರಿ ಜ್ಞಾಪಕ ಪತ್ರವನ್ನು ಉಲ್ಲೇಖಿಸಿ, ಆಧಾರ್ ಕಾರ್ಡ್ ಗುರುತಿನ ಚೀಟಿಯಾಗಿ ಬಳಸಬಹುದು. ಅದು ಜನ್ಮದಿನಾಂಕದ ಪುರಾವೆ ಅಲ್ಲ ಎಂದು ಪ್ರಕಟಿಸಿತ್ತು” ಎಂಬುದನ್ನು ಪೀಠವು ತೀರ್ಪು ನೀಡುವಾಗ ಉಲ್ಲೇಖಿಸಿದೆ.
ವಯಸ್ಸನ್ನು ನಿರ್ಧರಿಸುವ ವಿಷಯಕ್ಕೆ ಸಂಬಂಧಿಸಿದ ದಾವೆಯಾದ ಕಾರಣ, ಹಕ್ಕುದಾರ-ಅಪೀಲುದಾರರ ವಾದವನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್, ವ್ಯಕ್ತಿಯ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರದ ಆಧಾರದ ಮೇಲೆ ಮೃತನ ವಯಸ್ಸನ್ನು ಲೆಕ್ಕಹಾಕಿದ ಮೋಟಾರು ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್ (MACT) ತೀರ್ಪನ್ನು ಎತ್ತಿಹಿಡಿಯಿತು.
ಏನಿದು ಪ್ರಕರಣ; ವಯಸ್ಸಿನ ಗೊಂದಲ ಏಕಾಯಿತು
2015ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿ ಸಲ್ಲಿದ್ದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ಅಂಶವನ್ನು ಎತ್ತಿಹಿಡಿಯಿತು.
ರೋಹ್ಟಕ್‌ನ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯೂನಲ್ ಮೃತನ ಸಂಬಂಧಿಗೆ 19.35 ಲಕ್ಷ ರೂ ಪರಿಹಾರ ನೀಡುವಂತೆ ತೀರ್ಪು ನೀಡಿತ್ತು. ಇದರ ವಿರುದ್ಧ ವಿಮಾ ಕಂಪನಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅಲ್ಲಿ ಪರಿಹಾರ ಮೊತ್ತ 9.22 ಲಕ್ಷ ರೂಪಾಯಿಗೆ ಇಳಿದಿತ್ತು. ವಿಚಾರಣೆ ವೇಳೆ ಮೃತ ವ್ಯಕ್ತಿಯ ವಯಸ್ಸು 45ರ ಬದಲು 47 ಎಂದು ಪರಿಗಣಿಸುವುದಕ್ಕೆ ಹೈಕೋರ್ಟ್ ಆಧಾರ್ ಕಾರ್ಡ್ ಅನ್ನು ವಯಸ್ಸಿನ ದಾಖಲೆ ಎಂದು ಪರಿಗಣಿಸಿತು. ಅದರಂತೆಯೇ ತೀರ್ಪು ಕೂಡ ನೀಡಿತು. ಇದರ ವಿರುದ್ಧ ಮೃತ ವ್ಯಕ್ತಿಯ ಸಂಬಂಧಿಕರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ವಯಸ್ಸಿನ ದಾಖಲೆಯಾಗಿ ಆಧಾರ್ ಮಾನ್ಯವಲ್ಲ, ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ ಮಾನ್ಯವಾಗಿರುವ ದಾಖಲೆ ಎಂದು ವಾದ ಮಂಡಿಸಲಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿತು.
ಯಾವುದೇ ಸಂದರ್ಭದಲ್ಲೂ ಆಧಾರ್ ಅನ್ನು ವಯಸ್ಸಿನ ದಾಖಲೆಯಾಗಿ ಸಲ್ಲಿಸಬಾರದು ಎಂಬದುನ್ನು ಯುಐಡಿಎಐ ಮತ್ತು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸುತ್ತೋಲೆಗಳ ಮೂಲಕ ಸ್ಪಷ್ಟಪಡಿಸಿದೆ. ಮಾಹಿತಿಗಾಗಿ ನೀವು ತೆಗೆದಿರಿಸಿಕೊಳ್ಳಲು ಬಯಸುವುದಾದರೆ ಅದರ ಪಿಡಿಎಫ್ ಪ್ರತಿ ಇಲ್ಲೇ ಕೆಳಗಿದೆ. ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಬಹುದು.
https://uidai.gov.in//images/clarifications_regarding_date_of_birth.pdf
ವಿಭಾಗ