Vladmir Putin: ರಷ್ಯಾದೊಂದಿಗೆ ನ್ಯಾಟೋ ಪಡೆಗಳ ನೇರ ಘರ್ಷಣೆ "ಜಾಗತಿಕ ದುರಂತ"ಕ್ಕೆ ಕಾರಣವಾಗಲಿದೆ: ಪುಟಿನ್ ಎಚ್ಚರಿಕೆ!
ಉಕ್ರೇನ್ ಪರವಾಗಿ ನ್ಯಾಟೋ ಪಡೆಗಳು ನೇರವಾಗಿ ಯುದ್ಧ ರಂಗಕ್ಕೆ ಇಳಿದರೆ, ಅದು "ಜಾಗತಿಕ ದುರಂತ"ಕ್ಕೆ ನಾಂದಿ ಹಾಡಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್ ಬೆಂಬಲಕ್ಕೆ ನಿಲ್ಲುವ ಭರದಲ್ಲಿ ರಷ್ಯಾದೊಂದಿಗೆ ನ್ಯಾಟೋ ಪಡೆಗಳು ನೇರ ಘರ್ಷಣೆಗೆ ಇಳಿಯಬಾರದು ಎಂದು ಹೇಳುವ ಮೂಲಕ, ಪುಟಿನ್ ಜಾಗತಿಕ ಯುದ್ಧದ ಎಚ್ಚರಿಕೆ ನೀಡಿದ್ದಾರೆ.
ಅಸ್ತಾನಾ: ಯುದ್ಧೋನ್ಮಾದದಿಂದ ಹೂಂಕರಿಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವ ಮೂಲಕ ಜಾಗತಿಕ ಆತಂಕಕ್ಕೆ ಕಾರಣರಾಗಿದ್ದಾರೆ. ಆದರೆ ಉಕ್ರೇನ್ ಮೇಲಿನ ಭೀಕರ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿರುವ ಪುಟಿನ್, ಉಕ್ರೇನ್‌ಗೆ ನ್ಯಾಟೋ ಪಡೆಗಳ ನೆರವು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್‌ಗೆ ನ್ಯಾಟೋ ಪಡೆಗಳು ಪರೋಕ್ಷ ಮಿಲಟರಿ ಸಹಾಯ ನೀಡುತ್ತಿವೆ. ಆದರೆ ಉಕ್ರೇನ್ ಪರವಾಗಿ ನ್ಯಾಟೋ ಪಡೆಗಳು ನೇರವಾಗಿ ಯುದ್ಧ ರಂಗಕ್ಕೆ ಇಳಿದರೆ, ಅದು "ಜಾಗತಿಕ ದುರಂತ"ಕ್ಕೆ ನಾಂದಿ ಹಾಡಲಿದೆ ಎಂದು ಪುಟಿನ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ಬೆಂಬಲಕ್ಕೆ ನಿಲ್ಲುವ ಭರದಲ್ಲಿ ರಷ್ಯಾದೊಂದಿಗೆ ನ್ಯಾಟೋ ಪಡೆಗಳು ನೇರ ಘರ್ಷಣೆಗೆ ಇಳಿದರೆ, ಅದು "ಜಾಗತಿಕ ದುರಂತ"ಕ್ಕೆ ಕಾರಣವಾಗಲಿದೆ. ನ್ಯಾಟೋ ಪಡೆಗಳ ಚಲನವಲನಗಳನ್ನು ಗಮನಿಸಿದರೆ, ಪಶ್ಚಿಮದ ರಾಷ್ಟ್ರಗಳು ಜಾಗತಿಕ ಯುದ್ಧಕ್ಕೆ ಕಾತರದಿಂದ ಕಾಯುತ್ತಿರುವಂತೆ ಕಾಣುತ್ತಿದೆ ಎಂದು ಪುಟಿನ್ ಅಭಿಪ್ರಾಯಪಟ್ಟಿದ್ದಾರೆ.
ಕಝಕ್ ರಾಜಧಾನಿ ಅಸ್ತಾನಾದಲ್ಲಿ ಮಾತನಾಡಿದ ಪುಟಿನ್, ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಮಾತುಕತೆ ನಡೆಸುವ ಅಗತ್ಯ ಕಂಡುಬರುತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮುಂದಿನ ತಿಂಗಳು ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ತಾವು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದೂ ರಷ್ಯಾ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಉಕ್ರೇನ್ ಸಂಘರ್ಷದ ಬಗ್ಗೆ ಪಶ್ಚಾತಾಪ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದ ಪುಟಿನ್, ರಷ್ಯಾ ತನ್ನ ಸಾರ್ವಭೌಮತೆಯ ರಕ್ಷಣೆಗಾಗಿ ಸರಿಯಾದ ಕೆಲಸವನ್ನು ಮಾಡುತ್ತಿದೆ ಎಂದು ಪುನರುಚ್ಛಿಸಿದ್ದಾರೆ. ಉಕ್ರೇನ್ ನಾಶ ರಷ್ಯಾದ ಉದ್ದೇಶವಲ್ಲ, ಬದಲಿಗೆ ತನ್ನ ಸಾರ್ವಭೌಮತೆಯ ರಕ್ಷಣೆ ಮಾಡುವುದು ನಮ್ಮ ಉದ್ದೇಶ ಎಂದು ಪುಟಿನ್ ಹೇಳಿದ್ದಾರೆ.
ಕಳೆದ ತಿಂಗಳು ಉಜ್ಬೇಕಿಸ್ತಾನ್‌ನಲ್ಲಿ ನಡೆದ ಶೃಂಗಸಭೆ ಸಂದರ್ಭದಲ್ಲಿ ಭಾರತ ಮತ್ತು ಚೀನಾ ದೇಶಗಳು, ರಷ್ಯಾ-ಉಕ್ರೇನ್ ಯುದ್ಧ ಕೊನೆಗಾಣಿಸಲು ಶಾಂತಿ ಮಾತುಕತೆಯನ್ನು ಬೆಂಬಲಿಸುವುದಾಗಿ ಹೇಳಿರುವುದು ಶ್ಲಾಘನೀಯ ಎಂದೂ ಪುಟಿನ್ ಹೇಳಿದ್ದಾರೆ. ಈ ಶೃಂಗಸಭೆಯ ಸಂದರ್ಭದಲ್ಲಿ ನಡೆದ ರಷ್ಯಾ-ಭಾರತ ದ್ವಿಪಕ್ಷೀಯ ಮಾತುಕತೆಯಲ್ಲಿ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ʼಇದು ಯುದ್ಧದ ಸಮಯವಲ್ಲʼ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೇರವಾಗಿ ಹೇಳಿದ್ದರು.
ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ಪಶ್ಚಿಮ ರಾಷ್ಟ್ರಗಳನ್ನು ಹೊಣೆಗಾರರನ್ನಾಗಿ ಮಾಡುತ್ತಿರುವ ಪುಟಿನ್, ಉಕ್ರೇನ್‌ಗೆ ನೆರವು ನೀಡುವ ಮೂಲಕ ಪಶ್ಚಿಮ ರಾಷ್ಟ್ರಗಳು ಯುದ್ಧ ಮುಂದುವರೆಯುವಂತೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ತಮ್ಮ ಭಾಷಣದಲ್ಲಿ ಆಗಾಗ ಪರಮಾಣು ದಾಳಿಯ ಎಚ್ಚರಿಕೆ ನೀಡುವ ಪುಟಿನ್, ಇಡೀ ಜಗತ್ತನ್ನು ಆತಂಕಕ್ಕೆ ದೂಡುತ್ತಿದ್ದಾರೆ.
ತನ್ನ ಸಾರ್ವಭೌಮತೆ ರಕ್ಷಣೆಗಾಗಿ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಕ್ಕೆ ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿರುವ ಪುಟಿನ್, ಪಶ್ಚಿಮದ ರಾಷ್ಟ್ರಗಳ ಗೊಡ್ಡು ಬೆದರಿಕೆಗಳಿಗೆ ರಷ್ಯಾ ಖಂತಿತವಾಗಿಯೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಉಕ್ರೇನ್ ಮೇಲೆ ನಿರಂತರವಾಗಿ ಕ್ಷಿಪಣಿ ದಾಳಿ ನಡೆಸುತ್ತಿರುವ ರಷ್ಯಾದ ನಡೆಯನ್ನು ಖಂಡಿಸಿರುವ ಜಿ-7 ರಾಷ್ಟ್ರಗಳು, ಉಕ್ರೇನ್ ಮೇಲೆ ಪರಮಾಣು ಶಸ್ತ್ರಗಳನ್ನು ಬಳಸಲು ಮುಂದಾದರೆ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನೇರವಾಗಿ ಎಚ್ಚರಿಸಿವೆ. ಅಲ್ಲದೇ ರಷ್ಯಾದ ಮೇಲೆ ಮತ್ತಷ್ಟು ಕಠಿಣ ದಿಗ್ಬಂಧನದ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಜಿ-7 ರಾಷ್ಟ್ರಗಳು ಗಂಭೀರ ಎಚ್ಚರಿಕೆ ನೀಡಿವೆ.
ಇಷ್ಟೆಲ್ಲಾ ಆದರೂ, ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮಾತ್ರ ಕೊನೆಯಾಗದಿರುವುದು ಜಾಗತಿಕ ಶಾಂತಿಪ್ರಿಯರ ಆತಂಕವನ್ನು ಹೆಚ್ಚಿಸಿದೆ ಎಂಬುದು ಸುಳ್ಳಲ್ಲ.