2 in 1 EV : ಮೂರೇ ಮೂರು ನಿಮಿಷಗಳಲ್ಲಿ ಈ ತ್ರಿಚಕ್ರ ವಾಹನ ಎಲೆಕ್ಟ್ರಿಕ್‌ ಸ್ಕೂಟರ್‌ ಆಗಿ ಬದಲಾಗುತ್ತೆ... ಹೀರೋ ಟೂ ಇನ್‌ ಒನ್‌ ಇವಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  2 In 1 Ev : ಮೂರೇ ಮೂರು ನಿಮಿಷಗಳಲ್ಲಿ ಈ ತ್ರಿಚಕ್ರ ವಾಹನ ಎಲೆಕ್ಟ್ರಿಕ್‌ ಸ್ಕೂಟರ್‌ ಆಗಿ ಬದಲಾಗುತ್ತೆ... ಹೀರೋ ಟೂ ಇನ್‌ ಒನ್‌ ಇವಿ

2 in 1 EV : ಮೂರೇ ಮೂರು ನಿಮಿಷಗಳಲ್ಲಿ ಈ ತ್ರಿಚಕ್ರ ವಾಹನ ಎಲೆಕ್ಟ್ರಿಕ್‌ ಸ್ಕೂಟರ್‌ ಆಗಿ ಬದಲಾಗುತ್ತೆ... ಹೀರೋ ಟೂ ಇನ್‌ ಒನ್‌ ಇವಿ

Hero surge s32 2 in 1 EV: ಹೀರೋ ಮೋಟೋಕಾರ್ಪ್‌ ಕಂಪನಿಯು ಇತ್ತೀಚೆಗೆ ಹೊಸ ಎಲೆಕ್ಟ್ರಿಕ್‌ ವಾಹನವನ್ನು ಪರಿಚಯಿಸಿದೆ. ಇದು ಮೂರು ಚಕ್ರ ಮತ್ತು ಎರಡು ಚಕ್ರದ ವಾಹನವಾಗಿ ಕಾರ್ಯನಿರ್ವಹಿಸುತ್ತದೆ. ಒಂದೇ ಇವಿಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರವಾಹನವಿದೆ. ಅಚ್ಚರಿಯಾಯಿತೇ? ಬನ್ನಿ ಇದರ ಹೆಚ್ಚಿನ ವಿವರ ತಿಳಿದುಕೊಳ್ಳೋಣ.

ಹೀರೋ ಸರ್ಜ್‌ ಎಲೆಕ್ಟ್ರಿಕ್‌ ಇವಿ
ಹೀರೋ ಸರ್ಜ್‌ ಎಲೆಕ್ಟ್ರಿಕ್‌ ಇವಿ

Hero surge s32 2 in 1 EV: ಹೀರೋ ಕಂಪನಿಯು ಹೊಸ ಅದ್ಭುತ ವಾಹನವೊಂದನ್ನು ಪರಿಚಯಿಸಿದೆ. ಈ ರೀತಿಯ ವಾಹನ ಇದೆಯೇ ಎಂದು ಹೇಳಿದರೆ ಸಾಕಷ್ಟು ಜನರು ಅಚ್ಚರಿ ಪಡಬಹುದು. ಹೀರೋ ಇತ್ತೀಚೆಗೆ ಪರಿಚಯಿಸಿದ ಎಲೆಕ್ಟ್ರಿಕ್‌ ವಾಹನವು ದ್ವಿಚಕ್ರವಾಹನವೂ ಹೌದು, ತ್ರಿಚಕ್ರವಾಹನವೂ ಹೌದು. ಕಂಪನಿಯು ಇದಕ್ಕೆ ಸರ್ಜ್‌ ಎಂಬ ನಾಮಕರಣ ಮಾಡಿದೆ. ಹೀರೋ ಸರ್ಜ್ S32 ಎಂಬ ವಾಹನ ವಿನ್ಯಾಸಕ್ಕೆ ಹಲವು ಪ್ರಶಸ್ತಿಗಳು ದೊರಕಿವೆ. ಕಂಪನಿಯು ಒಂದು ವರ್ಷದ ಬಳಿಕ ಈ ಇವಿಯ ಉತ್ಪಾದನೆ ಆರಂಭಿಸಲಿದೆ.

ವಾಣಿಜ್ಯ ವಾಹನ ಮತ್ತು ದ್ವಿಚಕ್ರ ವಾಹನ

ಇದು ಟು ಇನ್‌ ಒನ್‌ ವಾಹನ. ಇದನ್ನು ವಾಣಿಜ್ಯ ವಾಹನವಾಗಿಯೂ ಬಳಸಬಹುದು, ದ್ವಿಚಕ್ರ ವಾಹನವಾಗಿಯೂ ಬಳಸಬಹುದು. ಈ ಎರಡು ವಿಷಯಗಳನ್ನು ಒಂದೇ ವಾಹನದಲ್ಲಿ ನೀಡುವ ಪ್ರಯತ್ನವನ್ನು ಹೀರೋ ಮೋಟೊಕಾರ್ಪ್‌ ಮಾಡಿದೆ. ಕೆಲವು ವರ್ಷಗಳ ಹಿಂದೆ ಈಚರ್‌ ಕಂಪನಿಯು ಪೊಲರಿಸ್‌ ಮಲ್ಟ್ರಿಕ್ಸ್‌ ಮೂಲಕ ಇಂತಹ ಪ್ರಯತ್ನ ಮಾಡಿತ್ತು. ಇದೀಗ ಹೀರೋ ಮೊಟೊಕಾರ್ಪ್‌ ಕೂಡ ವಾಣಿಜ್ಯ ವಾಹನ ಮತ್ತು ಪ್ರಯಾಣಿಕ ವಾಹನವನ್ನು ಒಂದೇ ವಾಹನದಲ್ಲಿ ನೀಡಿದೆ.

ಕಂಪನಿಯು 2025ರ ಮಧ್ಯಭಾಗದಲ್ಲಿ ಇದರ ಉತ್ಪಾದನೆ ಆರಂಭಿಸುವ ಸೂಚನೆಯಿದೆ. ಬಳಿಕ ಹಲವು ತಿಂಗಳ ಬಳಿಕ ಇದು ಖರೀದಿಗೆ ಲಭ್ಯವಾಗಬಹುದು. ಇದನ್ನು ಅವಶ್ಯಕತೆ ಇದ್ದಾಗ ಸ್ಕೂಟರ್‌ ಆಗಿ ಬಳಸಬಹುದು. ಅಥವಾ ಪುಟ್ಟ ಕಾರ್ಗೊ ರಿಕ್ಷವಾಗಿ ಬಳಸಬಹುದು. ಕೇವಲ ಮೂರೇ ಮೂರು ನಿಮಿಷದಲ್ಲಿ ಈ ತ್ರಿಚಕ್ರವಾಹನದಿಂದ ದ್ವಿಚಕ್ರವಾಹನವನ್ನು ಹೊರಕ್ಕೆ ತೆಗೆಯಬಹುದು.

ಈ ಕಾರ್ಗೋ ಟ್ರೈಸಿಕಲ್ ಒಳಗೆ ದ್ವಿಚಕ್ರ ವಾಹನವನ್ನು ಮರೆಮಾಡಲಾಗಿದೆ. ಇದು ತ್ರಿಚಕ್ರ ವಾಹನವಾಗಿದ್ದು, ಮುಂದಿನ ಸೀಟಿನಲ್ಲಿ ಇಬ್ಬರು ಕುಳಿತುಕೊಳ್ಳಬಹುದು. ಮುಂಭಾಗದ ಕನ್ನಡಿ ಭಾಗವನ್ನು ಎತ್ತಿ ಸ್ಕೂಟರ್‌ ಅನ್ನು ಹೊರಕ್ಕೆ ಎಳೆದುಕೊಳ್ಳುವ ಅವಕಾಶ ನೀಡಲಾಗಿದೆ. ಕೆಲವು ಬಟನ್‌ ಕ್ಲಿಕ್‌ ಮಾಡುವ ಮೂಲಕ ಸ್ಕೂಟರ್‌ ಅನ್ನು ಹೊರಕ್ಕೆ ತೆಗೆಯಬಹುದು. ಕಂಪನಿಯು ಒಟ್ಟು ನಾಲ್ಕು ಬಗೆಯ ಈ ಇವಿ ವಾಹನವನ್ನು ವಿನ್ಯಾಸ ಮಾಡಿದೆ.

ಸ್ಕೂಟರ್‌ಗೆ ಕಾರ್ಗೊ ರಿಕ್ಷದಷ್ಟು ಸರಕು ಕೊಂಡೊಯ್ಯುವ ಸಾಮರ್ಥ ಇರಬಹುದೇ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಈ ಎರಡು ಬಗೆಯ ವಾಹನಗಳಿಗೆ ತಕ್ಕಂತೆ ಇದರ ಪವರ್‌ ಬದಲಾಗುತ್ತದೆ. ಮೂರು ಚಕ್ರ ಮತ್ತು ಎರಡು ಚಕ್ರದ ಕಾರ್ಯನಿರ್ವಹಣೆಗೆ ತಕ್ಕಂತೆ ಪವರ್‌ ಹೊಂದಾಣಿಕೆಯಾಗುತ್ತದೆ. ಇದು ತ್ರಿಚಕ್ರ ವಾಹನವಾಗಿದ್ದಾಗ 10 ಕಿಲೋವ್ಯಾಟ್ ಪವರ್ ಪಡೆಯುತ್ತದೆ. ಇದಕ್ಕಾಗಿ, ಇದು 11 ಕಿಲೋವ್ಯಾಟ್ ಬ್ಯಾಟರಿಗೆ ಸಂಪರ್ಕ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 50 ಕಿಲೋಮೀಟರ್ ಇರುತ್ತದೆ. 500 ಕೆಜಿ ತೂಕ ಕೊಂಡೊಯ್ಯಲು ಈ ವಾಹನ ಬಳಸಬಹುದು.

ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬಗ್ಗೆ ಹೇಳುವುದಾದರೆ.. ಇದು 3 ಕಿಲೋವ್ಯಾಟ್ ಪವರ್ ಪಡೆಯುತ್ತದೆ. ಇದು 3.5 ಕಿಲೋವ್ಯಾಟ್ ಬ್ಯಾಟರಿಗೆ ಸಂಪರ್ಕ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 60 ಕಿಲೋಮೀಟರ್ ಇರುತ್ತದೆ.

ಎಲೆಕ್ಟ್ರಿಕ್ ವಾಹನದ ಪ್ರಯೋಜನವೆಂದರೆ ಇದು ಒಂದೇ ಪ್ಯಾಕೇಜ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕಮ್ ಎಲೆಕ್ಟ್ರಿಕ್ 3 ವೀಲರ್ ಆಗಿ ಕಾರ್ಯನಿರ್ವಹಿಸುತ್ತದೆ. ಕಾರ್ಗೊ ರಿಕ್ಷಾವೂ ಬೇಕು, ವೈಯಕ್ತಿಕ ಬಳಿಕೆಗೆ ಸ್ಕೂಟರ್‌ ಬೇಕೂ ಎನ್ನುವವರಿಗೆ ಇದು ಸೂಕ್ತವಾಗಿದೆ. ಕೇವಲ ಮೂರೇ ಮೂರು ನಿಮಿಷಗಳಲ್ಲಿ ತ್ರಿಚಕ್ರವಾಹನವನ್ನು 2 ಚಕ್ರದ ವಾಹನವಾಗಿ ಬದಲಾಯಿಸಿಕೊಳ್ಳಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.