RBI Updates: 2000 ರೂಪಾಯಿ ನೋಟು ಬದಲಾಯಿಸುವ ಗಡುವು ವಿಸ್ತರಣೆ, ಅಕ್ಟೋಬರ್ 7ರ ತನಕ ವಿನಿಮಯಕ್ಕೆ ಅವಕಾಶ ನೀಡಿದ ಆರ್‌ಬಿಐ
ದೇಶದ ಅರ್ಥವ್ಯವಸ್ಥೆಯಲ್ಲಿ ಚಾಲ್ತಿಯಲ್ಲಿರುವ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಿಂಪಡೆಯುತ್ತಿದೆ. ಈ ನೋಟುಗಳ ವಿನಿಮಯಕ್ಕೆ ಇಂದು (ಸೆ.30) ಕೊನೆಯ ದಿನ ಎಂದು ಆರ್‌ಬಿಐ ಹೇಳಿತ್ತಾದರೂ, ಈಗ ಈ ಅವಧಿಯನ್ನು ಇನ್ನೂ ಒಂದು ವಾರ ವಿಸ್ತರಣೆ ಮಾಡಿದೆ.
ನವದೆಹಲಿ: ದೇಶದಲ್ಲಿ ಚಾಲ್ತಿಯಲ್ಲಿರುವ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳುವುದಕ್ಕೆ ಇರುವ ಅವಧಿಯನ್ನು ಅಕ್ಟೋಬರ್ 7 ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಶನಿವಾರ (ಸೆ.30) ತಿಳಿಸಿದೆ.
ಈ ಹಿಂದೆ 2,000 ರೂಪಾಯಿ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30 ಕೊನೇ ದಿನ ಎಂದು ಆರ್‌ಬಿಐ ಗಡುವು ನಿಗದಿ ಮಾಡಿತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಧಿಸೂಚನೆಯಲ್ಲಿ, "ಹಿಂಪಡೆಯುವ ಪ್ರಕ್ರಿಯೆಗೆ ನಿರ್ದಿಷ್ಟಪಡಿಸಿದ ಅವಧಿಯು ಅಂತ್ಯಗೊಂಡಿರುವುದರಿಂದ ಮತ್ತು ಪರಿಶೀಲನೆಯ ಆಧಾರದ ಮೇಲೆ, 2000 ರೂಪಾಯಿಗಳ ನೋಟುಗಳ ಠೇವಣಿ/ವಿನಿಮಯದ ಅವಧಿಯಲ್ಲಿ ಪ್ರಸ್ತುತ ಅಕ್ಟೋಬರ್ 07 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ" ಎಂಬ ಉಲ್ಲೇಖವಿದೆ.
2000 ರೂಪಾಯಿ ನೋಟುಗಳ ವಿನಿಮಯ ಅವಧಿ ವಿಸ್ತರಣೆ ನಿರೀಕ್ಷೆ ಇತ್ತು
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಕ್ಟೋಬರ್ ಅಂತ್ಯದವರೆಗೆ ರೂ 2000 ನೋಟುಗಳನ್ನು ಹಿಂದಿರುಗಿಸಲು ಸೆಪ್ಟೆಂಬರ್ 30 ರ ಗಡುವನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ವಿದ್ಯಮಾನದ ಅರಿವು ಹೊಂದಿರುವ ಹಿರಿಯ ಅಧಿಕಾರಿಯೊಬ್ಬರು ಮನಿಕಂಟ್ರೋಲ್ ತಿಳಿಸಿದ್ದು ಗಮನಸೆಳೆದಿತ್ತು.
"ಆರ್‌ಬಿಐ 2,000 ರೂ. ನೋಟುಗಳ ಠೇವಣಿ ಮತ್ತು ವಿನಿಮಯದ ದಿನಾಂಕವನ್ನು ಕನಿಷ್ಠ ಒಂದು ತಿಂಗಳ ಕಾಲ ವಿಸ್ತರಿಸಬಹುದು ಎಂದು ತೋರುತ್ತಿದೆ. ಏಕೆಂದರೆ ಇದು ಅನಿವಾಸಿ ಭಾರತೀಯರು ಮತ್ತು ವಿದೇಶದಲ್ಲಿ ವಾಸಿಸುವ ಇತರರನ್ನು ಪರಿಗಣಿಸುತ್ತದೆ" ಎಂದು ಹಿರಿಯ ಅಧಿಕಾರಿ ಹೇಳಿದ್ದರು.
2000 ರೂಪಾಯಿ ನೋಟುಗಳನ್ನು ಹಿಂಪಡೆಯುವ ಆದೇಶ ನೀಡಿದ್ದು 2023ರ ಮೇ 19ರಂದು
- ಭಾರತೀಯ ರಿಸರ್ವ್ ಬ್ಯಾಂಕ್ ಮೇ 19 ರಂದು 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಿತು. 2000 ರೂಪಾಯಿ ಮೌಲ್ಯದ ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು 4 ತಿಂಗಳ ಕಾಲಾವಕಾಶವನ್ನೂ ನೀಡಿತು.
- ಇದರಂತೆ 2000 ರೂಪಾಯಿ ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಮಾಡಲು ಆರ್‌ಬಿಐ ನಿಗದಿ ಮಾಡಿದ್ದ ಕೊನೆಯ ದಿನಾಂಕ ಸೆಪ್ಟೆಂಬರ್ 30 ಆಗಿತ್ತು.
- ಆರ್‌ಬಿಐ 2023ರ ಮೇ 19ರಂದು ನೀಡಿದ್ದ ಪತ್ರಿಕಾ ಪ್ರಕಟಣೆ ಪ್ರಕಾರ, "2000 ರೂಪಾಯಿ ನೋಟುಗಳ ಠೇವಣಿ ಮತ್ತು/ಅಥವಾ ವಿನಿಮಯದ ಸೌಲಭ್ಯವು ಸಾರ್ವಜನಿಕರಿಗೆ ಸೆಪ್ಟೆಂಬರ್ 30 ರ ಗಡುವು ನಿಗದಿಯಾಗಿತ್ತು.
- 2000 ರೂಪಾಯಿ ನೋಟುಗಳ ವಿನಿಮಯದ ಸೌಲಭ್ಯವನ್ನು ಎಲ್ಲಾ ಬ್ಯಾಂಕುಗಳು ತಮ್ಮ ಶಾಖೆಗಳ ಮೂಲಕ ಸಾರ್ವಜನಿಕರಿಗೆ ಒದಗಿಸುತ್ತವೆ ಎಂದು ಆರ್‌ಬಿಐ ಹೇಳಿತ್ತು.
ಚಲಾವಣೆಯಲ್ಲಿದ್ದ 2000 ರೂಪಾಯಿ ನೋಟುಗಳೆಷ್ಟು, ಮರಳಿ ಸಂಗ್ರಹವಾದವು ಎಷ್ಟು
- ನೋಟು ಹಿಂಪಡೆಯುವ ಪ್ರಕಟಣೆಯ ಬಳಿಕ, ಮೇ 19 ರಂದು ಚಲಾವಣೆಯಲ್ಲಿದ್ದ 2000 ರೂಪಾಯಿ ನೋಟುಗಳ ಪೈಕಿ 93 ಪ್ರತಿಶತದಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಹಿಂತಿರುಗಿಸಲ್ಪಟ್ಟಿವೆ ಎಂದು ಸೆಪ್ಟೆಂಬರ್ 2 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿತ್ತು.
- ಪ್ರಮುಖ ಬ್ಯಾಂಕ್‌ಗಳಿಂದ ಸಂಗ್ರಹಿಸಿದ ಮಾಹಿತಿಯು ಚಲಾವಣೆಯಿಂದ ಮರಳಿ ಪಡೆದ 2000 ರೂ ಮುಖಬೆಲೆಯ ಒಟ್ಟು ನೋಟುಗಳಲ್ಲಿ ಸುಮಾರು 87 ಪ್ರತಿಶತದಷ್ಟು ಠೇವಣಿ ರೂಪದಲ್ಲಿದೆ ಮತ್ತು ಉಳಿದ ಸುಮಾರು 13 ಪ್ರತಿಶತವು ಇತರ ಮುಖಬೆಲೆಯ ಬ್ಯಾಂಕ್‌ನೋಟುಗಳಿಗೆ ವಿನಿಮಯವಾಗಿದೆ ಎಂದು ಆರ್‌ಬಿಐ ಹೇಳಿತ್ತು.
ಈಗ ಚಲಾವಣೆಯಲ್ಲಿ ಇರುವ 2000 ರೂಪಾಯಿ ನೋಟುಗಳ ಸಂಖ್ಯೆ ಎಷ್ಟು
ಬ್ಲೂಮ್‌ಬರ್ಗ್ ಇತ್ತೀಚೆಗೆ ಪ್ರಕಟಿಸಿದ್ದ ವರದಿ ಪ್ರಕಾರ, ಇನ್ನೂ ಸುಮಾರು 240 ಶತಕೋಟಿ ರೂಪಾಯಿಗಳು ಅಥವಾ $2.9 ಶತಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ. 3.56 ಟ್ರಿಲಿಯನ್ ರೂಪಾಯಿ ಪೈಕಿ ಬಹುಪಾಲು ಠೇವಣಿ/ಹಿಂದಕ್ಕೆ ಸಲ್ಲಿಕೆಯಾಗಿದ್ದರೂ, ಸೆಪ್ಟೆಂಬರ್ 1 ರವರೆಗೆ ಶೇಕಡಾ 7 ರಷ್ಟು ನೋಟುಗಳು ಚಲಾವಣೆಯಲ್ಲಿದ್ದವು.
ಎನ್‌ಡಿಟಿವಿ ವರದಿ ಪ್ರಕಾರ, ಮೇ 19ರವರೆಗೆ ಚಲಾವಣೆಯಲ್ಲಿದ್ದ ಒಟ್ಟು 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳ ಪೈಕಿ 3.42 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳನ್ನು ಸ್ವೀಕರಿಸಲಾಗಿದೆದೆ ಎಂದು ಆರ್‌ಬಿಐ ಹೇಳಿದೆ. ಈ ಲೆಕ್ಕಾಚಾರ ಪ್ರಕಾರ, ಸೆಪ್ಟೆಂಬರ್ 29 ರವರೆಗೆ 0.14 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಉಳಿದಿವೆ.