Income Tax Regime: ಯಾವ ಆದಾಯ ತೆರಿಗೆ ಪದ್ಧತಿ ಆರಿಸಿಕೊಂಡರೆ ಹೆಚ್ಚು ಉಳಿತಾಯ; ಹಳೆಯದು ಹೊಸದರ ನಡುವೆ ಯಾವುದು ಒಳಿತು ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Income Tax Regime: ಯಾವ ಆದಾಯ ತೆರಿಗೆ ಪದ್ಧತಿ ಆರಿಸಿಕೊಂಡರೆ ಹೆಚ್ಚು ಉಳಿತಾಯ; ಹಳೆಯದು ಹೊಸದರ ನಡುವೆ ಯಾವುದು ಒಳಿತು ಇಲ್ಲಿದೆ ಮಾಹಿತಿ

Income Tax Regime: ಯಾವ ಆದಾಯ ತೆರಿಗೆ ಪದ್ಧತಿ ಆರಿಸಿಕೊಂಡರೆ ಹೆಚ್ಚು ಉಳಿತಾಯ; ಹಳೆಯದು ಹೊಸದರ ನಡುವೆ ಯಾವುದು ಒಳಿತು ಇಲ್ಲಿದೆ ಮಾಹಿತಿ

Income tax regime: ʻಹಳೆ ತೆರಿಗೆ ಪದ್ಧತಿ (old tax regime) ಯಲ್ಲೇ ಉಳಿಯುತ್ತೀರಾ ಅಥವಾ ಹೊಸ ತೆರಿಗೆ ಪದ್ಧತಿ (new tax regime) ಗೆ ಶಿಫ್ಟ್‌ ಆಗ್ತೀರಾ? ಯಾವುದನ್ನೂ ಇಂಥ ದಿನಾಂಕದೊಳಗೆ ತಿಳಿಸಿʼ - ಹೀಗೊಂದು ಸಂದೇಶವನ್ನು ಬಹುತೇಕ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಈಗಾಗಲೇ ಕಳುಹಿಸಿರುತ್ತಾರೆ. ಈ ವಿಚಾರದಲ್ಲಿ ಗೊಂದಲವೇ? ಇಲ್ಲಿವೆ ಕೆಲ ಗಮನಾರ್ಹ ಅಂಶಗಳು.

ಯಾವ ಆದಾಯ ತೆರಿಗೆ ಪದ್ಧತಿ ಆರಿಸಿಕೊಂಡರೆ ಹೆಚ್ಚು ಉಳಿತಾಯ; ಹಳೆಯದು ಹೊಸದರ ನಡುವೆ ಯಾವುದು ಒಳಿತು (ಸಾಂಕೇತಿಕ ಚಿತ್ರ)
ಯಾವ ಆದಾಯ ತೆರಿಗೆ ಪದ್ಧತಿ ಆರಿಸಿಕೊಂಡರೆ ಹೆಚ್ಚು ಉಳಿತಾಯ; ಹಳೆಯದು ಹೊಸದರ ನಡುವೆ ಯಾವುದು ಒಳಿತು (ಸಾಂಕೇತಿಕ ಚಿತ್ರ) (Live Mint)

ಆದಾಯ ತೆರಿಗೆ ಪದ್ಧತಿ (Income tax regime) ಯಾವುದು ಎಂಬುದನ್ನು ಆಯ್ಕೆ ಮಾಡಿ ಉದ್ಯೋಗದಾತರಿಗೆ ತಿಳಿಸುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದಾಗ್ಯೂ, ಉದ್ಯೋಗಿಗಳಲ್ಲಿ ಅನೇಕರಿಗೆ ಹೊಸ ತೆರಿಗೆ ಪದ್ಧತಿ (New Tax Regime) ಮತ್ತು ಹಳೆಯ ತೆರಿಗೆ ಪದ್ಧತಿ (Old Tax Regime) ಯ ಕುರಿತಾದ ಗೊಂದಲ ಇನ್ನೂ ಬಗೆಹರಿದಿಲ್ಲ. ಅವುಗಳ ವ್ಯತ್ಯಾಸವೂ ಅರ್ಥವಾಗುತ್ತಿಲ್ಲ. ಹೀಗಾಗಿ ಆಯ್ಕೆ ವಿಚಾರದಲ್ಲಿ ಅವರಿಗೆ ಹಿನ್ನಡೆ ಆಗಿರುವುದು ಖಚಿತ. ಅಂತಹ ಗೊಂದಲ ಪರಿಹರಿಸುವುದಕ್ಕಾಗಿ ಗಮನಿಸಬೇಕಾದ ಪ್ರಮುಖ ಅಂಶ (key things to look at )ಗಳನ್ನು HT ಕನ್ನಡದ ಸೋದರ ತಾಣ ಲೈವ್‌ ಮಿಂಟ್‌ನ ಸಂಗೀತಾ ಓಜಾ ಅವರು ತಜ್ಞರನ್ನು ಮಾತನಾಡಿಸಿ ವಿವರಿಸಿದ್ದಾರೆ.

“ಪ್ರತಿಯೊಬ್ಬ ಉದ್ಯೋಗಿಯು ತಮ್ಮ ಉದ್ಯೋಗದಾತರಿಗೆ ಈ ಹಣಕಾಸು ವರ್ಷಕ್ಕೆ, ಅಂದರೆ 2023-2024ಕ್ಕೆ ಅನ್ವಯಿಸುವಂತೆ ಅವರು ಆಯ್ಕೆ ಮಾಡಿದ ತೆರಿಗೆ ಪದ್ಧತಿಯನ್ನು ಮುಂಚಿತವಾಗಿ ತಿಳಿಸುವುದು ಕಡ್ಡಾಯವಾಗಿದೆ. ತೆರಿಗೆ ಪದ್ಧತಿಯ ಆಯ್ಕೆಯನ್ನು ಅವಲಂಬಿಸಿ, ಸರಿಯಾದ ಪ್ರಮಾಣದ ತೆರಿಗೆಯನ್ನು ಉದ್ಯೋಗಿಗಳ ವೇತನದಲ್ಲಿ ಕಡಿತಗೊಳಿಸಲಾಗುತ್ತದೆ. ಅಲ್ಲದೆ, ಸಂಬಳಕ್ಕೆ ಅಗತ್ಯವಾದ ಹೊಂದಾಣಿಕೆಗಳನ್ನು ಮಾಡಲಾಗುತ್ತದೆ. ಮಿತಿಮೀರಿದ ಕಡಿತಗಳನ್ನು ತಪ್ಪಿಸಲು ಈ ನಿರ್ಧಾರವನ್ನು ಅತ್ಯಂತ ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಅತ್ಯಗತ್ಯ'' ಎಂದು Tax2win ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಇಒ ಅಭಿಷೇಕ್ ಸೋನಿ ಸಲಹೆ ನೀಡಿದ್ದಾರೆ.

ತೆರಿಗೆ ಪದ್ಧತಿಯನ್ನು ಆಯ್ಕೆಮಾಡುವ ಮೊದಲು, ಪರಿಗಣಿಸಬೇಕಾದ ಕೆಲವು ವಿಷಯಗಳು ಹೀಗಿವೆ -

ಆದಾಯದ ಮಟ್ಟ (Level of income)

ವ್ಯಕ್ತಿಯು ತನ್ನ ಒಟ್ಟಾರೆ ಆದಾಯವನ್ನು ಪರಿಶೀಲಿಸುವ ಅಗತ್ಯವಿದೆ. ಅವರು ಮಾಡಿದ ತೆರಿಗೆ ಉಳಿತಾಯದ ಹೂಡಿಕೆಯ ಮೊತ್ತದ ಮೌಲ್ಯಮಾಪನ ಮಾಡಬೇಕು.

ಎಚ್‌ಆರ್‌ಎ ವಿನಾಯಿತಿ (HRA exemption)

ಆದಾಯ ತೆರಿಗೆ ಪದ್ಧತಿಯನ್ನು ಆಯ್ಕೆಮಾಡುವ ಮೊದಲು, ಎಚ್‌ಆರ್‌ಎ ಅನುಕೂಲಗಳು ಮತ್ತು ಕ್ಯಾರಿಓವರ್ ನಷ್ಟಗಳ ಲಭ್ಯತೆಯನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು.

ಕ್ಲಿಯರ್‌ನ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಅವರ ಪ್ರಕಾರ, ಎಚ್‌ಆರ್‌ಎ ಮತ್ತು ಇತರ ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡುವವರು ಹಳೆಯ ತೆರಿಗೆ ಪದ್ಧತಿಯಲ್ಲಿರುವುದರಿಂದ ಪ್ರಯೋಜನ ಪಡೆಯಬಹುದು.

ಮೈಫಂಡ್‌ಬಜಾರ್‌ನ ಸಿಇಒ ಮತ್ತು ಸಂಸ್ಥಾಪಕ ವಿನಿತ್ ಖಂಡಾರೆ ಅವರ ಪ್ರಕಾರ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 115 ಬಿಎಸಿ ಅಡಿಯಲ್ಲಿ ರಚಿಸಲಾದ ಹೊಸದನ್ನು ಒಳಗೊಂಡ ತೆರಿಗೆ ವ್ಯವಸ್ಥೆಯು ಅನುಕೂಲ ಮತ್ತು ಅನಾನುಕೂಲಗಳನ್ನು ಹೊಂದಿದೆ.

ಈ ತೆರಿಗೆ ಪದ್ಧತಿಗಳಲ್ಲಿ ಒಂದನ್ನು ಆಯ್ಕೆ ಮಾಡುವ ತೆರಿಗೆದಾರರ ನಿರ್ಧಾರವು ಹೂಡಿಕೆ ಗುರಿಗಳು ಮತ್ತು ಉದ್ದೇಶಗಳು, ಆದಾಯದ ಮಟ್ಟಗಳು, ಅನ್ವಯವಾಗುವ ತೆರಿಗೆ ದರಗಳು, ವಿನಾಯಿತಿಗಳು ಮತ್ತು ಲಭ್ಯವಿರುವ ಕಡಿತಗಳು ಇತ್ಯಾದಿ ಸೇರಿ ಹಲವಾರು ಅಸ್ಥಿರ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಆದ್ದರಿಂದ, ಎರಡು ತೆರಿಗೆ ಪದ್ಧತಿಗಳ ನಡುವೆ ಆಯ್ಕೆ ಮಾಡುವ ಮೊದಲು, ಸಂಪೂರ್ಣ ತುಲನೆ ಮತ್ತು ತುಲನಾತ್ಮಕ ಮೌಲ್ಯಮಾಪನವನ್ನು ಮಾಡಬೇಕು ಎಂಬುದು ಖಂಡಾರೆ ಅವರ ಅಭಿಪ್ರಾಯ.

ತೆರಿಗೆ ಪದ್ಧತಿ ಆಯ್ಕೆಗೆ ಬಳಸಿ ಆದಾಯ ತೆರಿಗೆ ಕ್ಯಾಲ್ಕುಲೇಟರ್ (Income tax calculator)

ಆದಾಯ ಮಟ್ಟ, ಅನ್ವಯವಾಗುವ ತೆರಿಗೆ ದರಗಳು ಮತ್ತು ಮಾಡಿದ ತೆರಿಗೆ-ಉಳಿತಾಯ ಹೂಡಿಕೆಗಳಂತಹ ವಿವಿಧ ಅಂಶಗಳನ್ನು ಪರಿಗಣಿಸಿದ ನಂತರ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಬೇಕು. ಎರಡೂ ಪದ್ಧತಿಗಳ ವಿವರ ತುಲನೆ ಮತ್ತು ಅಧ್ಯಯನವೂ ಸಹ ಅಗತ್ಯ. ಆದಾಯ ತೆರಿಗೆ ಕ್ಯಾಲ್ಕುಲೇಟರ್ ತಿಳಿವಳಿಕೆಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಆದಾಯ ಮತ್ತು ಕಡಿತಗಳ ಆಧಾರದ ಮೇಲೆ ಹೆಚ್ಚು ಸೂಕ್ತ ತೆರಿಗೆ ಪದ್ಧತಿಯನ್ನು ನಿರ್ಧರಿಸಲು ಉಪಯುಕ್ತ ಸಾಧನ ಎಂದು ಅಭಿಷೇಕ್ ಸೋನಿ ಹೇಳಿದ್ದಾರೆ.

ಹೊಸ ತೆರಿಗೆ ಪದ್ಧತಿಯಿಂದ ಯಾರಿಗೆ ಲಾಭ?

ಕ್ಲಿಯರ್ ಫೌಂಡರ್ ಅರ್ಚಿತ್ ಗುಪ್ತಾ ಅವರ ಪ್ರಕಾರ, 7.5 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರು (ವಿನಾಯಿತಿ ಕಾರಣ, 7.5 ಲಕ್ಷ ರೂಪಾಯಿವರೆಗಿನ ಒಟ್ಟು ಆದಾಯದೊಂದಿಗೆ ಸಂಬಳ ಪಡೆದವರು ಯಾವುದೇ ತೆರಿಗೆಯನ್ನು ಪಾವತಿಸ ಬೇಕಾಗುವುದಿಲ್ಲ) ಅಥವಾ 5 ಕೋಟಿ ರೂಪಾಯಿಗಿಂತ ಅಧಿಕ ಆದಾಯದ ಬ್ರಾಕೆಟ್ ಜತೆಗೆ (ಸರ್ಚಾರ್ಜ್‌ನಲ್ಲಿ ಕಡಿತದಿಂದಾಗಿ 37 ಪ್ರತಿಶತದಿಂದ 25 ಪ್ರತಿಶತ), ಹೊಸ ತೆರಿಗೆ ಪದ್ಧತಿಯಲ್ಲಿರುವುದರಿಂದ ಪ್ರಯೋಜನ ಪಡೆಯಬಹುದು.

ಹೊಸ ತೆರಿಗೆ ಪದ್ಧತಿ ಹೆಚ್ಚುವರಿ ಸವಕಳಿ (additional depreciation) ಯನ್ನು ಅನುಮತಿಸುವುದಿಲ್ಲ. ಆದ್ದರಿಂದ, ಹೊಸ ತೆರಿಗೆ ಪದ್ಧತಿಯೊಂದಿಗೆ ಮುಂದುವರಿಯಲು ಅಥವಾ ಹಳೆಯದನ್ನು ಆಯ್ಕೆಮಾಡಲು ನಿರ್ಧರಿಸುವ ಮೊದಲು ನೀವು ಎರಡೂ ತೆರಿಗೆ ಆಡಳಿತದ ಸಾಧಕ-ಬಾಧಕಗಳ ಮೌಲ್ಯಮಾಪನ ಮಾಡಬೇಕಾದ್ದು ಅವಶ್ಯ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.