GIFT Nifty: ಎಸ್‌ಜಿಎಕ್ಸ್ ನಿಫ್ಟಿಗೆ ಗುಡ್‌ಬೈ, ಸಿಂಗಾಪುರ ಬಿಟ್ಟು ಗುಜರಾತ್‌ನಲ್ಲಿ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ತೆರೆದ ಭಾರತ
GIFT Nifty NSE International Exchange: ಸಿಂಗಾಪುರದಲ್ಲಿ ಎಸ್‌ಜಿಎಕ್ಸ್ ನಿಫ್ಟಿ ಬಿಟ್ಟು ಭಾರತದ ಎನ್‌ಎಸ್‌ಇ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ಚಾಲನೆ ದೊರಕಿದೆ. ಸಿಂಗಾಪುರ ಷೇರುಪೇಟೆ ಬಿಟ್ಟು ಭಾರತದಲ್ಲಿ ಈ ಷೇರು ವಿನಿಮಯ ಕೇಂದ್ರ ತೆರೆಯಲು ಹಲವು ಕಾರಣಗಳಿವೆ.
ಭಾರತದ ಷೇರುಪೇಟೆಯ ಓಪನಿಂಗ್ ಬೆಲ್ ವರದಿ ಬರೆಯಲು ಹಿಂದೂಸ್ತಾನ್ ಟೈಮ್ಸ್ ಕನ್ನಡ ಮಾತ್ರವಲ್ಲದೆ ಭಾರತದ ಷೇರು ವರದಿಗಳಿಗೆ ಸಮರ್ಪಕ ಮುನ್ನೋಟ ದೊರಕುತ್ತಿದ್ದದ್ದು ಸಿಂಗಾಪುರ ಷೇರುಪೇಟೆಯಲ್ಲಿ (ಎಸ್‌ಜಿಎಕ್ಸ್) ಲಿಸ್ಟ್ ಆದ ನಿಫ್ಟಿ ಸ್ಟಾಕ್ ಫ್ಯೂಚರ್‌ನ ಏರಿಳಿತದಿಂದ. ಭಾರತದ ಷೇರುಪೇಟೆ ಬೆಳಗ್ಗೆ 9 ಗಂಟೆಗೆ ಬೆಲ್ ಹೊಡೆದರೂ ಷೇರು ಹೂಡಿಕೆದಾರರಿಗೆ ಇಂದಿನ ಆರಂಭ ಗ್ರೀನ್ ಅಥವಾ ರೆಡ್ ಎಂಬ ಮಾಹಿತಿಯನ್ನು ಎಸ್‌ಜಿಎಕ್ಸ್ ನಿಫ್ಟಿ ನೀಡುತ್ತಿತ್ತು. ಅಂದರೆ, ಸಿಂಗಾಪುರ ಷೇರುಪೇಟೆಯಲ್ಲಿ ಲಿಸ್ಟ್ ಆದ ನಿಫ್ಟಿ ಫ್ಯೂಚರ್‌ನಿಂದ ಒಂದು ಸ್ಪಷ್ಟವಾದ ಅಂದಾಜು ದೊರಕುತ್ತಿತ್ತು.
ಸಿಂಗಾಪುರ ಷೇರುಪೇಟೆಯಲ್ಲಿ ಭಾರತದ ಹೊರಗಿನ ಷೇರು ಹೂಡಿಕೆದಾರರು ನಿಫ್ಟಿ ಷೇರುಗಳನ್ನು ಖರೀದಿಸುವ ಪ್ರಕ್ರಿಯೆಗೆ ಎಸ್‌ಜಿಎಕ್ಸ್ ನಿಪ್ಟಿ ಎಂದು ಹೆಸರು. ಸಿಂಗಾಪುರವು ಪ್ರಮುಖ ಹಣಕಾಸು ಹಬ್. ವಿದೇಶಿ ಹೂಡಿಕೆದಾರರು ಭಾರತದ ಷೇರು ಖರೀದಿಸುವಂತಹ ಅವಕಾಶ ಇಲ್ಲಿ ದೊರಕಿತ್ತು. ಇದೇ ಕಾರಣಕ್ಕೆ ಇದು ಜನಪ್ರಿಯವೂ ಆಯಿತು. ಹೂಡಿಕೆದಾರರು ತಮ್ಮ ಡಾಲರ್ ಮೂಲಕ ರೂಪಾಯಿ ಜತೆ ಹೂಡಿಕೆ ಮಾಡುತ್ತಿದ್ದರು. ಹೂಡಿಕೆ ಜಗತ್ತಿನಲ್ಲಿ ಭಾರತದ ಸ್ಟೇಟಸ್ ಹೆಚ್ಚಿಸಲು ಎನ್‌ಜಿಎಕ್ಸ್ ನಿಫ್ಟಿ ಕಾರಣವಾಯಿತು. ಎನ್‌ಜಿಎಕ್ಸ್ ನಿಫ್ಟಿ ಫ್ಯೂಚರ್ ತುಂಬಾ ಜನಪ್ರಿಯವಾಯಿತು. ಬಿಲಿಯನ್ ಡಾಲರ್ ಮೌಲ್ಯದ ನಿಫ್ಟಿ ಲಿಂಕ್ ಆಗಿರುವ ಫ್ಯೂಚರ್‌ಗಳು ಸಿಂಗಾಪುರದಲ್ಲಿಯೇ ಬೃಹತ್ ವಹಿವಾಟು ನಡೆಸತೊಡಗಿತು.
ಭಾರತದ ಷೇರುಪೇಟೆಗೆ ಮುನ್ನೋಟ
ಸಿಂಗಾಪುರ ಮತ್ತು ಭಾರತದ ಸಮಯದ ವ್ಯತ್ಯಾಸವು ಭಾರತದ ಷೇರು ಹೂಡಿಕೆದಾರರಿಗೆ ನೆರವಾಗಿದೆ. ಭಾರತದಲ್ಲಿ ಬೆಳಗ್ಗೆ 6.30 ಗಂಟೆಯಾಗುವಾಗ ಸಿಂಗಾಪುರದ ಎನ್‌ಜಿಎಕ್ಸ್ ನಿಫ್ಟಿಯು ವಹಿವಾಟು ಆರಂಭಿಸುತ್ತದೆ. ಭಾರತದ ಷೇರುಪೇಟೆ 9 ಗಂಟೆಗೆ ಬಾಗಿಲು ತೆರೆದಾಗ ಅಥವಾ ಬೆಲ್ ಹೊಡೆದಾಗ ಭಾರತದ ಹೂಡಿಕೆದಾರರಿಗೆ ಓಪನಿಂಗ್ ಬೆಲ್‌ನ ಸ್ಪಷ್ಟವಾದ ಸೂಚನೆ ದೊರಕುತ್ತಿತ್ತು. ಸಿಂಗಾಪುರದಲ್ಲಿ ವಹಿವಾಟು ಕೆಂಪು ಆಗಿದ್ದರೆ, ಹಳದಿಯಾಗಿದ್ದರೆ ಇಲ್ಲೂ ಅದರ ಪ್ರತಿಫಲನವಾಗುತ್ತಿತ್ತು. ಇದು ಭಾರತದ ಷೇರುಪೇಟೆಯ ಭಾವನೆ ಮೇಲೆ ಪ್ರಭಾವ ಬೀರುತ್ತಿತ್ತು.
ಈಗ ಏನಾಯಿತು?
ಇದರ ಜನಪ್ರಿಯತೆ ನಿಫ್ಟಿಗೆ ಖುಷಿಯೇನು ತರಲಿಲ್ಲ. ಎಸ್‌ಜಿಎಕ್ಸ್ ನಿಫ್ಟಿಯು ಭಾರತದ ನಿಫ್ಟಿಗಿಂತ ಐದು ಪಟ್ಟು ಹೆಚ್ಚು ಟ್ರೇಡ್ ಆಗುತ್ತಿತ್ತು. ಇದರಿಂದ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಹೊರಕ್ಕೆ ಹೋಗುತ್ತದೆ ಎಂದು ಎನ್‌ಎಸ್‌ಇ ಭಾವಿಸಿತು. ವಿದೇಶಿ ಹೂಡಿಕೆದಾರರು ತಮ್ಮ ಡಾಲರ್ ಅನ್ನು ಸಿಂಗಾಪುರದಲ್ಲಿಯೇ ಹೂಡಿಕೆ ಮಾಡುತ್ತಿದ್ದರು. ಭಾರತದ ಷೇರುಪೇಟೆಯ ಪ್ರಗತಿಗೆ ಇದು ತೊಡಕು ಉಂಟುಮಾಡುತ್ತಿತ್ತು. ಇದೇ ಸಮಯದಲ್ಲಿ ಎನ್‌ಜಿಎಕ್ಸ್ ವೈಯಕ್ತಿಕ ಷೇರುಗಳನ್ನು ಪರಿಚಯಿಸಲು ಸಿಂಗಾಪುರ ಷೇರುಪೇಟೆ ಬಯಸಿತ್ತು, ಅಂದರೆ, ಕೇವಲ ನಿಫ್ಟಿ 50 ಇಂಡೆಕ್ಸ್ ಮಾತ್ರವಲ್ಲದೆ ಪ್ರತಿಯೊಂದು ಷೇರು ಪರಿಚಯಿಸಲು ಬಯಸಿತ್ತು. ಇದು ಎನ್‌ಎಸ್‌ಇಗೆ ಕೋಪ ತರಿಸಿತು. ಇನ್ನು ಮುಂದೆ ಎನ್‌ಜಿಎಕ್ಸ್‌ಗೆ ಡೇಟಾ ಹಂಚಿಕೊಳ್ಳೋದಿಲ್ಲ ಎಂದು ಹೇಳಿತು. ಈ ವಿಷಯ ಕೋರ್ಟ್‌ಗೆ ಹೋಯ್ತು. ಸಂಬಂಧ ಕೊಂಚ ಹಾಳಾಯ್ತು. ಏನಾಗುತ್ತಿದೆ ಎಂದು ಹೂಡಿಕೆದಾರರಿಗೂ ತಿಳಿಯಲಿಲ್ಲ.
ಕತ್ತಲಾದ ಬಳಿಕ ಬೆಳಕು ಆಗಲೇಬೇಕು. ಇದೇ ರೀತಿ ಹೂಡಿಕೆದಾರರಿಗೂ ಒಂದು ಆಶಾ ಕಿರಣವಾಗಿ ಜಿಐಎಫ್‌ಟಿ ಕಾಣಿಸಿದೆ. ಭಾರತವು ಹಣಕಾಸು ವಿಷಯಕ್ಕಾಗಿ ಗುಜರಾತ್ ಇಂಟರ್‌ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿ ಅಥವಾ ಜಿಫ್ಟ್ ಸಿಟಿಯನ್ನು ನಿರ್ಮಿಸಿದೆ. ಇದು ಸುಮಾರು 900 ಎಕರೆಯ ಕ್ಯಾಂಪಸ್. ಗಾಂಧಿನಗರ ಮತ್ತು ಅಹಮಾದಬಾದ್ ನಡುವೆ ಇದೆ. ಇದು ಭಾರತೀಯ ರೂಪಾಯಿ ಅನ್ವಯವಾಗದೆ ಇರುವ ಫ್ರೀ ಟ್ರೇಡ್ ಝೋನ್. ಹತ್ತು ವರ್ಷದ ತೆರಿಗೆ ರಜೆ ಇತ್ಯಾದಿ ಆಫರ್‌ಗಳನ್ನು ಇಲ್ಲಿ ನೀಡಲಾಗುತ್ತದೆ. ಈ ಮೂಲಕ ವಿದೇಶಿ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನವನ್ನು ಭಾರತ ಮಾಡಿದೆ. ಇದಕ್ಕಾಗಿ ಭಾರತವು ಇಂಟರ್‌ನ್ಯಾಷನಲ್ ಫೈನಾನ್ಸಿಯಲ್ ಸರ್ವೀಸ್ ಸೆಂಟರ್ ಅಥಾರಿಟಿ ರಚಿಸಿದೆ. ಈ ಮೂಲಕ ನಮ್ಮ ಹಣ ವಿದೇಶಕ್ಕೆ ಹೋಗುವ ಬದಲು ಭಾರತದಲ್ಲಿಯೇ ಉಳಿಯುವಂತೆ ಮಾಡಲಾಗಿದೆ.
ಅಂದಹಾಗೆ, ಈಗ ಅಂದರೆ ಈ ಜುಲೈ 3ರಿಂದ ಎಸ್‌ಜಿಎಕ್ಸ್ ನಿಫ್ಟಿ ಇಲ್ಲ. ಇನ್ನು ಏನಿದ್ದರೂ ಜಿಐಎಫ್‌ಟಿ ನಿಫ್ಟಿ ಹವಾ.