Vedanta Share Price: ವೇದಾಂತ ಷೇರಿನ ಬೆಲೆ ಬಹುತೇಕ ಶೇಕಡ 3 ಇಳಿಕೆ; ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಜೆವಿಯಿಂದ ನಿರ್ಗಮನ ಕಾರಣ
Vedanta Share Price: ವೇದಾಂತದ ಜತೆಗೆ ತಮ್ಮ 19.5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸೆಮಿಕಂಡಕ್ಟರ್ ಜಂಟಿ ಉದ್ಯಮದಿಂದ ಫಾಕ್ಸ್‌ಕಾನ್ ಹೊರಬಂದ ನಂತರ ವೇದಾಂತದ ಷೇರುಗಳು ಸುಮಾರು 3 ಪ್ರತಿಶತದಷ್ಟು ಕುಸಿದವು. ಇತರ ಸಂಭಾವ್ಯ ಪಾಲುದಾರರನ್ನು ಜೋಡಿಸಲಾಗಿದ ಎಂದು ವೇದಾಂತ ಹೇಳಿದೆ.
ತೈವಾನ್ ಮೂಲದ ಸಂಸ್ಥೆ ಫಾಕ್ಸ್‌ಕಾನ್ (Foxconn) ಕಂಪನಿಯು ವೇದಾಂತ (Vedanta) ದ ಜತೆಗಿನ 19.5 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಸೆಮಿಕಂಡಕ್ಟರ್ ಜಂಟಿ ಉದ್ಯಮದಿಂದ (ಜೆವಿ) ಹಿಂದೆಗೆಯಲು ನಿರ್ಧರಿಸಿದೆ ಎಂದು ಹೇಳಿದ ಒಂದು ದಿನದ ನಂತರ ಮಂಗಳವಾರ ಬಿಎಸ್‌ಇಯಲ್ಲಿ ಬೆಳಗಿನ ವಹಿವಾಟಿನಲ್ಲಿ ವೇದಾಂತದ ಷೇರು ಬೆಲೆ (Vedanta share price) ಸುಮಾರು ಮೂರು ಪ್ರತಿಶತದಷ್ಟು ಕುಸಿದವು.
ಹಿಂದಿನ ಮುಕ್ತಾಯದ 282.25 ರೂಪಾಯಿ ವಿರುದ್ಧ ಇಂದು (ಜುಲೈ 11) ವಹಿವಾಟು ಆರಂಭದಲ್ಲಿ 275 ರೂಪಾಯಿಯಲ್ಲಿ ವಹಿವಾಟು ಪ್ರಾರಂಭ ಮಾಡಿತು. ಶೀಘ್ರದಲ್ಲೇ 274.90 ರೂಪಾಯಿಗೆ ಅಂದರೆ 2.6 ರಷ್ಟು ಕುಸಿಯಿತು. ಬೆಳಗ್ಗೆ 10:15ರ ಸುಮಾರಿಗೆ ಶೇ.1.26ರಷ್ಟು ಇಳಿಕೆಯಾಗಿ 278.70 ರೂಪಾಯಿಯಲ್ಲಿ ವಹಿವಾಟು ನಡೆಸಿತು ಎಂದು ಹಿಂದುಸ್ತಾನ್ ಟೈಮ್ಸ್ ಕನ್ನಡದ ಸೋದರ ಸಂಸ್ಥೆ ಲೈವ್ ಮಿಂಟ್ ವರದಿ ಮಾಡಿದೆ.
ಫಾಕ್ಸ್‌ಕಾನ್ ಎಂದು ಜನಪ್ರಿಯವಾಗಿರುವ ತೈವಾನ್ ಮೂಲದ ಹೊನ್ ಹೈ ಟೆಕ್ನಾಲಜಿ ಗ್ರೂಪ್ ಮತ್ತು ಭಾರತದ ಲೋಹಗಳು ಮತ್ತು ಗಣಿಗಾರಿಕೆ ಸಮೂಹ ವೇದಾಂತವು 2022 ರಲ್ಲಿ ಭಾರತದ ಗುಜರಾತ್‌ನಲ್ಲಿ ಅರೆವಾಹಕಗಳನ್ನು ತಯಾರಿಸಲು ಜಂಟಿ ಉದ್ಯಮವನ್ನು ಘೋಷಿಸಿತು. ಎರಡು ಕಂಪನಿಗಳ ನಡುವೆ ಸಹಿ ಹಾಕಲಾದ ಎಂಒಯು ಪ್ರಕಾರ, ವೇದಾಂತ ಕಂಪನಿಯು ಜೆವಿಯಲ್ಲಿ ಬಹುಪಾಲು ಪಾಲನ್ನು ಹೊಂದಿತ್ತು.
ಫಾಕ್ಸ್‌ಕಾನ್ ನಿನ್ನೆ (ಜುಲೈ 10) ಅಧಿಕೃತ ಘೋಷಣೆ
ಫಾಕ್ಸ್‌ಕಾನ್ ನಿನ್ನೆ (ಜುಲೈ 10) ನೀಡಿದ ಹೇಳಿಕೆಯಲ್ಲಿ, ಹೆಚ್ಚು ವೈವಿಧ್ಯಮಯ ಅಭಿವೃದ್ಧಿ ಅವಕಾಶಗಳನ್ನು ಅನ್ವೇಷಿಸುವ ಸಲುವಾಗಿ ವೇದಾಂತದೊಂದಿಗೆ ಜಂಟಿ ಉದ್ಯಮದಲ್ಲಿ ಮುಂದುವರಿಯದಿರಲು ನಿರ್ಧರಿಸಿದೆ. ಈಗ ವೇದಾಂತದ ಸಂಪೂರ್ಣ ಸ್ವಾಮ್ಯದ ಘಟಕದಿಂದ ಫಾಕ್ಸ್‌ಕಾನ್ ಹೆಸರನ್ನು ತೆಗೆದು ಹಾಕಲಿದೆ ಎಂದು ವಿವರಿಸಿತ್ತು.
ರಾಯಿಟರ್ಸ್ ವರದಿಯ ಪ್ರಕಾರ, "ಭಾರತದ ಸರ್ಕಾರದಿಂದ ಪ್ರೋತ್ಸಾಹಕ ಅನುಮೋದನೆ ವಿಳಂಬದ ಬಗ್ಗೆ ಕಳವಳಗಳು ವ್ಯಕ್ತವಾಗಿದೆ. ಇದು ಫಾಕ್ಸ್‌ಕಾನ್‌ನ ಸಾಹಸದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಕಾರಣವಾಗಿವೆ. ಸರ್ಕಾರದಿಂದ ಪ್ರೋತ್ಸಾಹವನ್ನು ಕೋರಲು ಒದಗಿಸಲಾದ ವೆಚ್ಚದ ಅಂದಾಜಿನ ಬಗ್ಗೆ ಕೇಂದ್ರ ಸರ್ಕಾರವು ಹಲವಾರು ಪ್ರಶ್ನೆಗಳನ್ನು ಎತ್ತಿದೆ" ಎಂದು ಮೂಲಗಳನ್ನು ಉಲ್ಲೇಖಿಸಿ ಹೇಳಲಾಗಿದೆ.
ವೇದಾಂತ ಕಂಪನಿಯ ಮುಂದಿನ ನಡೆ ಏನು
ಜೆವಿಯಿಂದ ಫಾಕ್ಸ್‌ಕಾನ್ ಹಿಂತೆಗೆದುಕೊಂಡ ನಂತರ, ಭಾರತದ ಮೊದಲ ಫೌಂಡ್ರಿಯನ್ನು ಸ್ಥಾಪಿಸಲು ಇತರ ಸಂಭಾವ್ಯ ಪಾಲುದಾರರನ್ನು ಜೋಡಿಸಿಕೊಂಡಿರುವುದಾಗಿ ವೇದಾಂತ ಹೇಳಿದೆ.
"ವೇದಾಂತವು ತನ್ನ ಸೆಮಿಕಂಡಕ್ಟರ್ ಫ್ಯಾಬ್ ಯೋಜನೆಗೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಪುನರುಚ್ಚರಿಸುತ್ತದೆ ಮತ್ತು ನಾವು ಭಾರತದ ಮೊದಲ ಫೌಂಡರಿಯನ್ನು ಸ್ಥಾಪಿಸಲು ಇತರ ಪಾಲುದಾರರನ್ನು ಸಾಲಾಗಿರಿಸಿದ್ದೇವೆ. ನಾವು ನಮ್ಮ ಸೆಮಿಕಂಡಕ್ಟರ್ ತಂಡವನ್ನು ಬೆಳೆಸುವುದನ್ನು ಮುಂದುವರಿಸುತ್ತೇವೆ ಮತ್ತು 40 nm ಗೆ ಉತ್ಪಾದನಾ-ದರ್ಜೆಯ ತಂತ್ರಜ್ಞಾನಕ್ಕೆ ನಾವು ಪರವಾನಗಿ ಹೊಂದಿದ್ದೇವೆ. ಒಂದು ಪ್ರಮುಖ ಇಂಟಿಗ್ರೇಟೆಡ್ ಡಿವೈಸ್ ಮ್ಯಾನುಫ್ಯಾಕ್ಚರರ್ (IDM)" ವೇದಾಂತ ಹೇಳಿದೆ.
ಈ ಹಿಂದೆ ವೇದಾಂತವು ಅರೆವಾಹಕ ಮತ್ತು ಡಿಸ್ಪ್ಲೇ ಘಟಕಗಳಲ್ಲಿ 100 ಪ್ರತಿಶತ ಪಾಲನ್ನು ಸೋದರ ಸಂಸ್ಥೆ ಟ್ವಿನ್ ಸ್ಟಾರ್ ಟೆಕ್ನಾಲಜೀಸ್, ಸಂಘಟಿತ ಸಂಸ್ಥೆಯಿಂದ ಪಡೆದುಕೊಳ್ಳುವುದಾಗಿ ಹೇಳಿದೆ. ಟ್ವಿನ್ ಸ್ಟಾರ್ ಟೆಕ್ನಾಲಜೀಸ್ ವೋಲ್ಕನ್ ಇನ್ವೆಸ್ಟ್‌ಮೆಂಟ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, ಇದು ವೇದಾಂತ ಲಿಮಿಟೆಡ್‌ನ ಅಂತಿಮ ಹಿಡುವಳಿ ಕಂಪನಿಯಾಗಿದೆ. ಹೊಸ ರಚನೆಯು ಇಂಟಿಗ್ರೇಟೆಡ್ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಫ್ಯಾಬ್ ಬ್ಯುಸಿನೆಸ್‌ನಲ್ಲಿ ವೇದಾಂತ ಭಾರತದ ಮೊದಲ ಕಂಪನಿಯಾಗಲಿದೆ.
ಗಮನ ಸೆಳೆದವು ಕೇಂದ್ರ ಸಚಿವರ ಟ್ವೀಟ್‌ಗಳು
ಏತನ್ಮಧ್ಯೆ, ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವಿಟರ್‌ನಲ್ಲಿ "ಫಾಕ್ಸ್‌ಕಾನ್ ಮತ್ತು ವೇದಾಂತ ಎರಡೂ ಕಂಪನಿಗಳು ಭಾರತದ ಸೆಮಿಕಂಡಕ್ಟರ್ ಮಿಷನ್ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಬದ್ಧವಾಗಿವೆ" ಎಂದು ಬರೆದುಕೊಂಡಿದ್ದಾರೆ.
“ವೇದಾಂತದೊಂದಿಗೆ ಫಾಕ್ಸ್‌ಕಾನ್ ಅನ್ನು ಅದರ ಜೆವಿಯಿಂದ ಹಿಂತೆಗೆದುಕೊಳ್ಳುವುದರಿಂದ ಭಾರತದ ಸೆಮಿಕಂಡಕ್ಟರ್ ಗುರಿಗಳ ಬಗ್ಗೆ ಏನೂ ಬದಲಾಗುವುದಿಲ್ಲ. ಇದು ಎರಡೂ ಕಂಪನಿಗಳಿಗೆ ಸ್ವತಂತ್ರವಾಗಿ ಭಾರತೀಯ ಸೆಮಿಕಂಡಕ್ಟರ್‌ಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಾಗಿ ತಮ್ಮ ತಂತ್ರಗಳನ್ನು ಅನುಸರಿಸಲು ಅನುವು ಮಾಡಿಕೊಡುತ್ತದೆ ಎಂದು ಉದ್ಯಮಶೀಲತೆ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟ್ಟರ್‌ನಲ್ಲಿ ಹೀಗೆ ಬರೆದಿದ್ದಾರೆ.
ವೇದಾಂತ ಷೇರುಗಳ ವರ್ಷದ ಸಾಧನೆಯ ಕಿರುನೋಟ
ಕಳೆದ ಒಂದು ವರ್ಷದಲ್ಲಿ ವೇದಾಂತ ಷೇರು ಬೆಂಚ್‌ಮಾರ್ಕ್ ಸೆನ್ಸೆಕ್ಸ್‌ನೊಂದಿಗೆ ಹೊಂದಿಕೊಂಡು ಹೋಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಇವೆರಡೂ ಸುಮಾರು 21 ಶೇ. ಷೇರುಗಳು ಜನವರಿ 20, 2023 ರಂದು 340.75 ರೂಪಾಯಿಗೇರಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು ಮತ್ತು ಜುಲೈ 11, 2022 ರಂದು 221.55 ರೂಪಾಯಿಗೆ ಇಳಿದು 52 ವಾರಗಳ ಕನಿಷ್ಠ ಮಟ್ಟಕ್ಕೆ ತಲುಪಿತು.