ಮೊಬೈಲ್ ಬಳಕೆದಾರರಿಗೆ ಉಚಿತ ಇಂಟ್ರಾನೆಟ್ ಟಿವಿ ಲಾಂಚ್ ಮಾಡಿದ BSNL; ವೈಫೈ ರೋಮಿಂಗ್ ಜತೆಗೆ ಮತ್ತೊಂದು ಸೇವೆ, ಒಟಿಟಿ ಪ್ಲೇ ಸಾಥ್
ಪುದುಚೇರಿಯ ಮೊಬೈಲ್ ಬಳಕೆದಾರರಿಗೆ ಇಂಟ್ರಾನೆಟ್ ಟಿವಿಯನ್ನು ಬಿಎಸ್ಎನ್ಎಲ್ ಲಾಂಚ್ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಪ್ರೀಮಿಯಂ ಚಾನೆಲ್‌ಗಳು ಸೇರಿದಂತೆ 300ಕ್ಕೂ ಅಧಿಕ ಲೈವ್ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ನೋಡಬಹುದು.
ಬಿಎಸ್ಎನ್ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ) ಸಂಸ್ಥೆಯು ತನ್ನ ಲಕ್ಷಾಂತರ ಭಾರತೀಯ ಗ್ರಾಹಕರಿಗಾಗಿ ಭಾರಿ ಆಫರ್ ಪರಿಚಯಿಸಿದೆ. ಜನರ ಮನರಂಜನೆಯನ್ನು ಹೆಚ್ಚಿಸುವ ಉದ್ದೇಶದಿಂದ ಮೂರು ವಿಶೇಷ ಆಫರ್ ಘೋಷಿಸಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಪ್ರಾರಂಭಿಸಲಾದ ಈ ಗ್ರಾಹಕ ಕೇಂದ್ರಿತ ಸೇವೆಗಳು, ಜನರ ಡಿಜಿಟಲ್ ಖುಷಿಯನ್ನು ಹೆಚ್ಚಿಸಲಿದೆ ಎಂದು ಕಂಪನಿ ತಿಳಿಸಿದೆ. ಬಿಎಸ್ಎನ್ಎಲ್‌ನ ಇಂಟ್ರಾನೆಟ್ ಟಿವಿ (BiTV) ಪುದುಚೇರಿಯ ಮೊಬೈಲ್ ಬಳಕೆದಾರರಿಗೆ 300ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ. ಇದರಲ್ಲಿ ಪ್ರೀಮಿಯಂ ಚಾನೆಲ್‌ಗಳು ಕೂಡಾ ಸೇರಿವೆ ಎಂಬುದು ವಿಶೇಷ.
300ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಜನರು ಉಚಿತವಾಗಿ ಮೊಬೈಲ್‌ನಲ್ಲೇ ವೀಕ್ಷಿಸಬಹುದು. ಇದನ್ನು ಪ್ರತಿಷ್ಠಿತ ಒಟಿಟಿ ವೇದಿಕೆ ಒಟಿಟಿಪ್ಲೇ (OTTplay) ಸಹಭಾಗಿತ್ವದಲ್ಲಿ ಜನರಿಗೆ ನೀಡಲಾಗುತ್ತಿದೆ. ಪ್ರಾಯೋಗಿಕ ಸೇವೆಯಾಗಿ ಇದನ್ನು ಪುದುಚೇರಿಯಲ್ಲಿ ಪ್ರಾರಂಭಿಸಲಾಗಿದೆ.
ಕಂಪನಿ ನೀಡಿರುವ ಹೇಳಿಕೆ ಪ್ರಕಾರ, ಇದು ಜನರ ದೈನಂದಿನ ಜೀವನದಲ್ಲಿ ಅತ್ಯಾಧುನಿಕ ಮನರಂಜನೆಯನ್ನು ಸಂಯೋಜಿಸುವ ಬಿಎಸ್ಎನ್ಎಲ್‌ನ ಬದ್ಧತೆಯನ್ನು ತೋರಿಸುತ್ತದೆ. ಈ ಸೇವೆಯು ಉತ್ತಮ ಗುಣಮಟ್ಟದ ಮನರಂಜನೆಯ ಖಾತರಿ ನೀಡುತ್ತದೆ. ಬಿಎಸ್ಎನ್ಎಲ್ ಮೊಬೈಲ್ ಬಳಸುವ ಎಲ್ಲಾ ಬಳಕೆದಾರರಿಗೆ ಡಿಜಿಟಲ್ ಸೇವೆ ಸಿಗಲಿದೆ. ಗ್ರಾಹಕರ ಯೋಜನೆ (plans) ಯಾವುದೇ ಆಗಿದ್ದರೂ, ಅದನ್ನು ಲೆಕ್ಕಿಸದೆ ಪುದುಚೇರಿಯ ಎಲ್ಲಾ ಬಳಕೆದಾರರಿಗೂ ಈ ಪ್ರಯೋಜನ ಸಿಗಲಿದೆ. ಯಾವುದೇ ವೆಚ್ಚವಿಲ್ಲದೆ ಈ ಪ್ರಯೋಜನ ಪಡೆಯಬಹುದು.
BiTV ಏಕೆ ?
ಬಿಎಸ್‌ಎನ್‌ಎಲ್ ಬಿಟಿವಿಯನ್ನು ಆಯ್ಕೆ ಮಾಡಲು ಹಲವು ಕಾರಣಗಳಿವೆ, ಅವುಗಳೆಂದರೆ,
ಅನಿಯಮಿತ ಮನರಂಜನೆ: ಲೈವ್ ಟಿವಿ ಹೊರತುಪಡಿಸಿ, ಚಲನಚಿತ್ರಗಳು, ವೆಬ್ ಸೀರೀಸ್‌ಗಳು ಮತ್ತು ಅನೇಕ ಭಾಷೆಗಳಲ್ಲಿ ಸಾಕ್ಷ್ಯಚಿತ್ರಗಳನ್ನು ಆನಂದಿಸಬಹುದು. ಅದು ಕೂಡಾ ಯಾವುದೇ ವೆಚ್ಚವಿಲ್ಲದೆ.
ತಡೆರಹಿತ ಸ್ಟ್ರೀಮಿಂಗ್: ಬಿಎಸ್ಎನ್ಎಲ್‌ನ ಸುರಕ್ಷಿತ ಮೊಬೈಲ್ ಇಂಟ್ರಾನೆಟ್‌ನಿಂದ ಚಾಲಿತವಾಗಿರುವ ಬಿಟಿವಿ ಅಸಾಧಾರಣ ವೀಡಿಯೊ ಗುಣಮಟ್ಟದೊಂದಿಗೆ ತಡೆರಹಿತ ಸ್ಟ್ರೀಮಿಂಗ್ ಖಚಿತಪಡಿಸುತ್ತದೆ.
ಒಟಿಟಿಪ್ಲೇ ಸಹಭಾಗಿತ್ವದಲ್ಲಿ ಈ ಯೋಜನೆ ಲಾಂಚ್ ಆಗುತ್ತಿದೆ. ಒಟಿಟಿಪ್ಲೇ ಪ್ರೀಮಿಯಂ ಒಟಿಟಿ ಅಗ್ರಿಗೇಟರ್ ಆಗಿದ್ದು, 37 ಪ್ರೀಮಿಯರ್ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು 500ಕ್ಕೂ ಅಧಿಕ ಲೈವ್ ಟಿವಿ ಚಾನೆಲ್ ಕಂಟೆಂಟ್ ಒದಗಿಸುತ್ತದೆ. ಪ್ರತಿಯೊಬ್ಬ ಬಳಕೆದಾರರ ವಿಶಿಷ್ಟ ಆದ್ಯತೆ ಮೇಲೆ ಕಂಟೆಂಟ್ ನೀಡುತ್ತದೆ.
ಬಿಎಸ್ಎನ್ಎಲ್ ರಾಷ್ಟ್ರೀಯ ವೈ-ಫೈ ರೋಮಿಂಗ್ ಸೌಲಭ್ಯ
2024ರ ಅಕ್ಟೋಬರ್‌ನಲ್ಲಿಯೇ ದೇಶಾದ್ಯಂತ ಹೊಸ ವೈ-ಫೈ ರೋಮಿಂಗ್ ಸೌಲಭ್ಯವನ್ನು ಬಿಎಸ್ಎನ್ಎಲ್ ಪರಿಚಯಿಸಿತ್ತು. ಬಿಎಸ್ಎನ್ಎಲ್ ತನ್ನ ರಾಷ್ಟ್ರೀಯ ವೈ-ಫೈ ರೋಮಿಂಗ್ ಸೌಲಭ್ಯವನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಿದೆ. ಅದರಂತೆ ಮನಾಡಿಪಟ್ಟು ಸಂಪೂರ್ಣ ವೈ-ಫೈ ಸೌಲಭ್ಯ ನೀಡಲಾದ ಭಾರತದ ಎರಡನೇ ಗ್ರಾಮವಾಗಿದೆ. ಈ ಸೇವೆಯು ವೈ-ಫೈ ಹಾಟ್‌ಸ್ಪಾಟ್ ತಡೆರಹಿತ ನೆಟ್ವರ್ಕ್ ಮೂಲಕ ಬಿಎಸ್ಎನ್ಎಲ್ ಮತ್ತು ಬಿಎಸ್ಎನ್ಎಲ್ ಅಲ್ಲದ ಗ್ರಾಹಕರನ್ನು ಸಂಪರ್ಕಿಸುತ್ತದೆ.
ಐಎಫ್‌ಟಿವಿ ಬಿಡುಗಡೆ
ಬಿಎಸ್ಎನ್ಎಲ್‌ನ ಇಂಟ್ರಾನೆಟ್ ಫೈಬರ್ ಆಧಾರಿತ ಟಿವಿ (IFTV) 2024ರ ಅಕ್ಟೋಬರ್‌ನಲ್ಲಿ ದೇಶಾದ್ಯಂತ ಪ್ರಾರಂಭವಾಯಿತು. ಈಗ ಪುದುಚೇರಿಯ ಎಲ್ಲಾ ಎಫ್‌ಟಿಟಿಎಚ್ ಗ್ರಾಹಕರಿಗೆ ಈ ಸೇವೆ ಲಭ್ಯವಿದೆ. 500ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ನೀಡುವ ಈ ಸೇವೆಯು ಕೇಂದ್ರಾಡಳಿತ ಪ್ರದೇಶದ ಜನರಿಗೆ ಸಂಪೂರ್ಣವಾಗಿ ಉಚಿತವಾಗಿದೆ. ಎಲ್ಲಾ ಬಿಎಸ್ಎನ್ಎಲ್ ಎಫ್‌ಟಿಟಿಎಚ್ ಗ್ರಾಹಕರು ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು. ಸೇವೆಯನ್ನು ಸಕ್ರಿಯಗೊಳಿಸಲು ಗ್ರಾಹಕರು ತಮ್ಮ ಸಮ್ಮತಿಯನ್ನು ಕಳುಹಿಸಬೇಕಾಗುತ್ತದೆ.