ಆಸೀಸ್ ವಿರುದ್ಧದ ಕೊನೆಯ 2 ಟೆಸ್ಟ್‌ಗೆ ಆಯ್ಕೆಯಾದ ತನುಷ್ ಕೋಟ್ಯಾನ್ ಯಾರು? ಉಡುಪಿ ಮೂಲದ ಯುವಕನಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ
ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ 2 ಪಂದ್ಯಗಳಿಗೆ ಭಾರತ ತಂಡಕ್ಕೆ ಅನ್‌ಕ್ಯಾಪ್ಡ್ ಸ್ಪಿನ್ನರ್ ತನುಷ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಮೂಲದ ಯುವಕ ಮುಂಬೈನಲ್ಲಿ ನೆಲೆಸಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಇವರ ಕುರಿತ ಇನ್ನಷ್ಟು ಮಾಹಿತಿ
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಹೊಸ ಮುಖವೊಂದನ್ನು ಆಯ್ಕೆ ಮಾಡಲಾಗಿದೆ. ಗಬ್ಬಾ ಟೆಸ್ಟ್ ಪಂದ್ಯದ ಬಳಿಕ ಅನುಭವಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದರು. ಹೀಗಾಗಿ 26ರ ಹರೆಯದ ಯುವ ಆಲ್‌ರೌಂಡರ್, ತನುಷ್ ಕೋಟ್ಯಾನ್ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗಿದೆ. ದೇಶೀಯ ಕ್ರಿಕೆಟ್‌ಲ್ಲಿ ಮುಂಬೈ ತಂಡದ ಪರ ಆಡುವ ಕರ್ನಾಟಕ ಕರಾವಳಿ ಮೂಲದ ಹುಡುಗನಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಿಕ್ಕಿದೆ. ಹಾಗಿದ್ದರೆ, ಈ ತನುಷ್ ಕೋಟ್ಯಾನ್ ಯಾರು ಎಂಬುದನ್ನು ನೋಡೋಣ.
ಅಶ್ವಿನ್ ನಿವೃತ್ತಿಯ ನಂತರ, ಭಾರತ ತಂಡದಲ್ಲಿ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಮಾತ್ರವೇ ಸ್ಪಿನ್ ಬೌಲಿಂಗ್ ಆಯ್ಕೆಗಳಾಗಿದ್ದರು. ಹೀಗಾಗಿ ಹೆಚ್ಚುವರಿ ಆಲ್‌ರೌಂಡರ್ ಆಯ್ಕೆಯ ಅಗತ್ಯವಿತ್ತು. ಅದರಂತೆಯೇ ಕೋಟ್ಯಾನ್ ಅವರನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಈವರೆಗೆ ನಡೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ಮೂರು ವಿಭಿನ್ನ ಸ್ಪಿನ್ನರ್‌ಗಳನ್ನು ಆಡಿಸಿದೆ. ಇದೀಗ ಮತ್ತೊಬ್ಬ ಸ್ಪಿನ್ನರ್ ಎಂಟ್ರಿಕೊಟ್ಟಿದ್ದಾರೆ.
ಸದ್ಯ ಆಫ್ ಸ್ಪಿನ್ ಆಲ್‌ರೌಂಡರ್ ತನುಷ್ ಕೋಟ್ಯಾನ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡದ ಭಾಗವಾಗಿದ್ದಾರೆ. ಅಹಮದಾಬಾದ್‌ನಲ್ಲಿರುವ ಕನ್ನಡಿಗ, ಮುಂಬೈಗೆ ಮರಳಿ ಅಲ್ಲಿಂದ ಮಂಗಳವಾರ ಮೆಲ್ಬೋರ್ನ್ ವಿಮಾನ ಏರಲಿದ್ದಾರೆ. “ತನುಷ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ಮಂಗಳವಾರ ಮೆಲ್ಬೋರ್ನ್‌ಗೆ ತೆರಳಲಿದ್ದಾರೆ,” ಎಂದು ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿವೆ.
ಉಡುಪಿಯ ಹುಡುಗ
ಭಾರತ ತಂಡಕ್ಕೆ ಆಯ್ಕೆಯಾದ ತನುಷ್ ಮುಂಬೈ ಪರ ಆಡುತ್ತಿದ್ದರೂ ಅವರು ಕರ್ನಾಟಕದವರು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಕರಾವಳಿಯ ಉಡುಪಿ ಜಿಲ್ಲೆಯ ಪಾಂಗಾಳ ಮೂಲದವರು ತನುಶ್. ಇವರ ತಂದೆ ಕರುಣಾಕರ ಕೋಟ್ಯಾನ್ ಹಾಗೂ ತಾಯಿ ಮಲ್ಲಿಕಾ. ತಂದೆ-ತಾಯಿ ತುಳುನಾಡು ಭಾಗದವರಾದರೂ, ತನುಷ್ ಹುಟ್ಟಿ ಬೆಳೆದಿದ್ದು ವಾಣಿಜ್ಯ ನಗರಿ ಮುಂಬೈನಲ್ಲೇ. ಆಗಾಗ ಉಡುಪಿಗೆ ಬಂದು ಹೋಗುವ ತನುಷ್ ಅವರಿಗೆ, ಇಲ್ಲಿನ ದೈವ ದೇವರುಗಳ ಮೇಳೆ ಭಾರಿ ನಂಬಿಕೆ ಇದೆ.
ದೇಶೀಯ ಕ್ರಿಕೆಟ್‌ನಲ್ಲಿ ಸಾಧನೆ
26 ವರ್ಷದ ತನುಷ್ ಕೋಟ್ಯಾನ್, ಕಳೆದ ಋತುವಿನಲ್ಲಿ ಮುಂಬೈ ರಣಜಿ ಟ್ರೋಫಿ ಗೆದ್ದ ತಂಡದ ಭಾಗವಾಗಿದ್ದರು. ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಎ ವಿರುದ್ಧದ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಭಾರತ ಎ ತಂಡದ ಭಾಗವಾಗಿದ್ದ ಅವರು ಎರಡನೇ ಪಂದ್ಯದಲ್ಲಿ ಆಡಿದರು. ಒಂದು ವಿಕೆಟ್ ಜೊತೆಗೆ 44 ರನ್ ಗಳಿಸಿದ್ದರು.
ತನುಷ್ ಕೋಟ್ಯಾನ್ ಈವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 41.21ರ ಸರಾಸರಿಯಲ್ಲಿ 1525 ರನ್ ಗಳಿಸಿದ್ದಾರೆ. ಇದೇ ವೇಳೆ 25.70ರ ಸರಾಸರಿಯಲ್ಲಿ 101 ವಿಕೆಟ್ ಕಬಳಿಸಿದ್ದಾರೆ. ಕೋಟ್ಯಾನ್ ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಎರಡು ಶತಕಗಳು ಮತ್ತು 13 ಅರ್ಧಶತಕಗಳು ಸೇರಿವೆ. 2023-24ರಲ್ಲಿ ಮುಂಬೈನ ರಣಜಿ ಟ್ರೋಫಿ ಗೆದ್ದಾಗ ಅವರು ಸರಣಿ ಶ್ರೇಷ್ಠರಾಗಿದ್ದರು. ಈ ಋತುವಿನ ಇರಾನಿ ಕಪ್‌ನಲ್ಲಿ ಅಬ್ಬರಿಸಿದ್ದ ಕೋಟ್ಯಾನ್, ಮುಂಬೈ ತಂಡ ಪ್ರಶಸ್ತಿಗೆಲ್ಲಲು ಸಹಾಯ ಮಾಡಿದರು. ಆ ನಂತರ ಅವರು ದುಲೀಪ್ ಟ್ರೋಫಿಯಲ್ಲಿಯೂ ಸ್ಥಾನ ಪಡೆದರು.