ಹಲವು ಪ್ರಶಸ್ತಿ ವಿಜೇತ ಚಲನಚಿತ್ರಗಳ ನಿರ್ದೇಶಕ ಶ್ಯಾಮ್ ಬೆನೆಗಲ್ ನಿಧನ; ಮುಂಬೈ ಆಸ್ಪತ್ರೆಯಲ್ಲಿ ಕೊನೆಯುಸಿರು
ಅಂಕುರ್, ನಿಶಾಂತ್ ಮತ್ತು ಮಂಡಿಯಂತಹ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ಯಾಮ್ ಬೆನಗಲ್ ಅವರು ಡಿಸೆಂಬರ್ 14ರಂದು 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇಂದು ಸಂಜೆ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನರಾಗಿದ್ದಾರೆ. ದೀರ್ಘಕಾಲದ ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಡಿಸೆಂಬರ್ 23ರ ಸೋಮವಾರ ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ಸಂಜೆ 6:30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. 70 ಮತ್ತು 80ರ ದಶಕದ ಮಧ್ಯಭಾಗದಲ್ಲಿ ಇವರ ಹಲವು ಸಿನಿಮಾಗಳು ತೆರೆಕಂಡಿದ್ದವು. ಅಂಕುರ್, ಮಂಡಿ, ಮಂಥನ್ ಇವರ ಜನಪ್ರಿಯ ಚಿತ್ರಗಳು.
ಶ್ಯಾಮ್ ಬೆನಗಲ್ ನಿಧನದ ಸುದ್ದಿಯನ್ನು ಅವರ ಮಗಳು ಪಿಯಾ ಬೆನಗಲ್ ಅವರು ಹಿಂದೂಸ್ತಾನ್ ಟೈಮ್ಸ್‌ಗೆ ಖಚಿತಪಡಿಸಿದ್ದಾರೆ. “ಹೌದು, ಅವರು ನಿಧನರಾಗಿದ್ದಾರೆ. ನಮಗಾದ ನಷ್ಟ ತುಂಬಾ ದೊಡ್ಡದು. ಅವರು ಕೆಲವು ವರ್ಷಗಳಿಂದ ಅಸ್ವಸ್ಥರಾಗಿದ್ದರು. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇತ್ತು. ಅದು ತೀವ್ರವಾಯಿತು. ಇಂದು ಸಂಜೆ 6.38 ಕ್ಕೆ ವೊಕಾರ್ಡ್ ಹಾಸ್ಪಿಟಲ್ ಬಾಂಬೆ ಸೆಂಟ್ರಲ್‌ನಲ್ಲಿ ನಿಧನರಾದರು,” ಎಂದು ಅವರು ಹೇಳಿದರು.
ಹಿರಿಯ ನಿರ್ದೇಶಕ ಶ್ಯಾಮ್ ಬೆನೆಗಲ್, ಕೆಲವು ದಿನಗಳ ಹಿಂದಷ್ಟೇ ತಮ್ಮ 90ನೇ ಹುಟ್ಟುಹಬ್ಬವನ್ನು ಮುಂಬೈನಲ್ಲಿ ಆಚರಿಸಿದ್ದರು. ಈ ವೇಳೆ ಕುಟುಂಬ ಮತ್ತು ಉದ್ಯಮದ ಆಪ್ತರು ಭಾಗಿಯಾಗಿದ್ದರು.
ತಮ್ಮ ಸುದೀರ್ಘ ಸಿನಿಪಯಣದಲ್ಲಿ ಹಲವು ಗುಣಮಟ್ಟದ ಸಿನಿಮಾ ನೀಡಿದ ಹಿರಿಮೆ ಇವರದ್ದು. ನಿರ್ದೇಶಕನಾಗಿ ಮುಖ್ಯವಾಹಿನಿಯಲ್ಲಿದ್ದ ಸಿನಿಮಾ ಮಾನದಂಡಗಳಿಂದ ಹೊರಬಂದು, ಶ್ರೀಮಂತ ಸಿನಿ ಪರಂಪರೆ ಬೆಳೆಸಿದ ಖ್ಯಾತಿ ಇವರದ್ದು. ಅವರ ಚಲನಚಿತ್ರಗಳು ಸ್ವಲ್ಪಮಟ್ಟಿಗೆ ವಾಸ್ತವ ಮತ್ತು ಸಾಮಾಜಿಕ ವ್ಯಾಖ್ಯಾನದಿಂದ ಗುರುತಿಸಲ್ಪಟ್ಟವು. ಇವರ ಹಲವು ಸಿನಿಮಾಗಳು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿವೆ. ಭೂಮಿಕಾ: ದಿ ರೋಲ್ (1977), ಜುನೂನ್ (1978), ಆರೋಹನ್ (1982), ನೇತಾಜಿ ಸುಭಾಷ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೋ (2004), ಮಂಥನ್ (1976) ಮತ್ತು ವೆಲ್ ಡನ್ ಅಬ್ಬಾ (2010) ಸೇರಿದಂತೆ ಚಲನಚಿತ್ರಗಳಿಗಾಗಿ ಅವರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ನನಗೆ ಎಲ್ಲಾ ದಿನಗಳು ಒಂದೇ
ಇತ್ತೀಚೆಗೆ ತಮ್ಮ ಜನ್ಮದಿನದಂದು ಪಿಟಿಐ ಜೊತೆಗಿನ ಮಾತನಾಡಿದ್ದ ಅವರು, “ನಮಗೆಲ್ಲರಿಗೂ ವಯಸ್ಸಾಗುತ್ತದೆ. ಹುಟ್ಟುಹಬ್ಬದಂದು ದೊಡ್ಡ ಸಂಭ್ರಮವೇನೂ ಮಾಡುವುದಿಲ್ಲ. ಇದು ವಿಶೇಷ ದಿನವಾಗಿರಬಹುದು. ಆದರೆ ನಾನು ಈ ದಿನವನ್ನು ನಿರ್ದಿಷ್ಟವಾಗಿ ಆಚರಿಸುವುದಿಲ್ಲ. ನನ್ನ ತಂಡದೊಂದಿಗೆ ಕಚೇರಿಯಲ್ಲಿ ಕೇಕ್ ಕತ್ತರಿಸಿದೆ ಅಷ್ಟೇ. ನಾನು ಎರಡು ಮೂರು ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದ್ದೇನೆ. ಅವೆಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿವೆ” ಎಂದು ಹೇಳಿದರು.
ಈ ವರ್ಷದ ಆರಂಭದಲ್ಲಿ, ಇವರ ಜನಪ್ರಿಯ ಸಿನಿಮಾಗಳಲ್ಲಿ ಒಂದಾದ ಮಂಥನ್ ಅನ್ನು ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಭಾರತದ ಕ್ಷೀರ ಕ್ರಾಂತಿಯ ಹರಿಕಾರ ಡಾ.ವರ್ಗೀಸ್ ಕುರಿಯನ್ ಅವರ ಹಾಲು ಸಹಕಾರ ಚಳವಳಿಯಿಂದ ಸ್ಫೂರ್ತಿ ಪಡೆದ ಚಿತ್ರ ಇದಾಗಿದೆ. ಈ ಚಿತ್ರವು 1977ರಲ್ಲಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿತ್ತು.
ಇನ್ನಷ್ಟು ಸಿನಿಮಾ ಕುರಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ