Election Commission: ರಾಜಕೀಯ ಪಕ್ಷ ಪಡೆಯುವ ದೇಣಿಗೆಗೆ ಚುನಾವಣಾ ಆಯೋಗದ ಮೂಗುದಾರ! ಹೊಸ ಪ್ರಸ್ತಾವನೆ ಹೇಳುವುದೇನು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Election Commission: ರಾಜಕೀಯ ಪಕ್ಷ ಪಡೆಯುವ ದೇಣಿಗೆಗೆ ಚುನಾವಣಾ ಆಯೋಗದ ಮೂಗುದಾರ! ಹೊಸ ಪ್ರಸ್ತಾವನೆ ಹೇಳುವುದೇನು?

Election Commission: ರಾಜಕೀಯ ಪಕ್ಷ ಪಡೆಯುವ ದೇಣಿಗೆಗೆ ಚುನಾವಣಾ ಆಯೋಗದ ಮೂಗುದಾರ! ಹೊಸ ಪ್ರಸ್ತಾವನೆ ಹೇಳುವುದೇನು?

ರಾಜಕೀಯ ಪಕ್ಷಗಳು 2,000 ರೂಪಾಯಿಗಿಂತ ಕಡಿಮೆ ದೇಣಿಗೆಯನ್ನು ಸ್ವೀಕರಿಸಿದರೆ, ಆ ಬಗ್ಗೆ ವರದಿ ಮಾಡುವ ಅಗತ್ಯವಿಲ್ಲ. ಪ್ರಸ್ತುತ ನಿಯಮಗಳ ಪ್ರಕಾರ, ರಾಜಕೀಯ ಪಕ್ಷಗಳು ಸ್ವೀಕರಿಸಿರುವ 20,000 ರೂಪಾಯಿಗಿಂತ ಹೆಚ್ಚಿನ ಎಲ್ಲಾ ದೇಣಿಗೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಕಾಂಟ್ರಿಬ್ಯೂಷನ್‌ ರಿಪೋರ್ಟ್‌ ಮೂಲಕ ಬಹಿರಂಗಪಡಿಸಬೇಕು.

<p>ಚುನಾವಣಾ ಆಯೋಗ</p>
ಚುನಾವಣಾ ಆಯೋಗ

ನವದೆಹಲಿ: ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಗಳ ಮೇಲೆ ಚುನಾವಣಾ ಆಯೋಗವು ಒಂದು ಕಣ್ಣಿಟ್ಟಿರುವಂತಿದೆ. ಪಕ್ಷಗಳು ಪಡೆಯುವ ಸಣ್ಣ ಮೊತ್ತದ ದೇಣಿಗೆಗಳ ಬಗ್ಗೆಯೂ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವಂತೆ ಪ್ರಸ್ತಾವನೆ ಹೊರಡಿಸಲಾಗಿದೆ. ಮತ್ತೊಂದೆಡೆ ನಗದು ರೂಪದ ದೇಣಿಗೆಗೂ ಮಿತಿ ಹೇರಲಾಗಿದೆ.

ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಯನ್ನು ಮಿತಿಗೊಳಿಸಲು ಪ್ರಸ್ತಾಪಿಸಿರುವ ಮುಖ್ಯ ಚುನಾವಣಾ ಆಯುಕ್ತ (CEC) ರಾಜೀವ್ ಕುಮಾರ್ ಅವರು, ಈ ಬಗ್ಗೆ ಸೋಮವಾರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಚುನಾವಣಾ ಆಯುಕ್ತ ಕುಮಾರ್ ಅವರು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಬರೆದ ಪತ್ರದಲ್ಲಿ ನಗದು ರೂಪದ ದೇಣಿಗೆಯು 20 ಪ್ರತಿಶತ ಅಥವಾ 20 ಕೋಟಿ ರೂಪಾಯಿ, ಇವುಗಳಲ್ಲಿ‌ ಯಾವುದು ಕಡಿಮೆಯೋ ಅಷ್ಟು ಮಿತಿಯನ್ನು ಪ್ರಸ್ತಾಪಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಚುನಾವಣಾ ನಿಧಿಯಿಂದ ಕಪ್ಪುಹಣವನ್ನು ಶೋಧಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು (EC) ಅನಾಮಧೇಯ ರಾಜಕೀಯ ದೇಣಿಗೆಯನ್ನು 20,000 ರೂಪಾಯಿಗಳಿಂದ 2,000 ರೂ.ಗೆ ಇಳಿಸಲು ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ಮುಖ್ಯ ಚುನಾವಣಾ ಆಯುಕ್ತರು ಪತ್ರದಲ್ಲಿ ಜನಪ್ರತಿನಿಧಿಗಳ (RP) ಕಾಯಿದೆಗೆ ಹಲವಾರು ತಿದ್ದುಪಡಿಗಳನ್ನು ಶಿಫಾರಸು ಮಾಡಿದ್ದಾರೆ.

ಈ ಪ್ರಸ್ತಾಪದ ಪ್ರಕಾರ, ರಾಜಕೀಯ ಪಕ್ಷಗಳು 2,000 ರೂಪಾಯಿಗಿಂತ ಕಡಿಮೆ ದೇಣಿಗೆಯನ್ನು ಸ್ವೀಕರಿಸಿದರೆ, ಆ ಬಗ್ಗೆ ವರದಿ ಮಾಡುವ ಅಗತ್ಯವಿಲ್ಲ. ಪ್ರಸ್ತುತ ನಿಯಮಗಳ ಪ್ರಕಾರ, ರಾಜಕೀಯ ಪಕ್ಷಗಳು ಸ್ವೀಕರಿಸಿರುವ 20,000 ರೂಪಾಯಿಗಿಂತ ಹೆಚ್ಚಿನ ಎಲ್ಲಾ ದೇಣಿಗೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಕಾಂಟ್ರಿಬ್ಯೂಷನ್‌ ರಿಪೋರ್ಟ್‌ ಮೂಲಕ ಬಹಿರಂಗಪಡಿಸಬೇಕು. ಆದರೆ. ಅದಕ್ಕಿಂತ ಕಡಿಮೆ ಮೊತ್ತದ ದೇಣಿಗೆ ಬಂದಿದ್ದರೆ, ಅದರ ಬಗ್ಗೆ ವರದಿ ಮಾಡಬೇಕೆಂದು ಇರಲಿಲ್ಲ. ಈಗ ಇದಕ್ಕೆ ಮಿತಿ ಹೇರುವ ಸಮಯ ಸನ್ನಿಹಿತವಾಗಿದೆ.

ನಗದು ದೇಣಿಗೆ ಬಗ್ಗೆ ಮಿತಿ ಹೇರಲಿರುವ ಚುನಾವಣಾ ಆಯೋಗವು, ಪಕ್ಷವು ಪಡೆದ ನಗದು ದೇಣಿಗೆಯು ಗರಿಷ್ಠ 20 ಕೋಟಿ ರೂಪಾಯಿ ಇರಬೇಕು. ಅಥವಾ ಪಕ್ಷ ಪಡೆದ ಒಟ್ಟು ದೇಣಿಗೆಯಲ್ಲಿ 20% ನಗದು ದೇಣಿಗೆಯಲ್ಲಿರಬೇಕು. ಇವುಗಳಲ್ಲಿ ಯಾವುದು ಕಡಿಮೆ ಪ್ರಮಾಣವೋ, ಅಷ್ಟು ಮಿತಿಯನ್ನು ನಗದು ದೇಣಿಗೆಯ ಮೇಲೆ ಹೇರಲಾಗುತ್ತದೆ.

ಚುನಾವಣಾ ಆಯೋಗವು ಇತ್ತೀಚೆಗಷ್ಟೇ 284 ಡೀಫಾಲ್ಟ್ ಮತ್ತು ನಾನ್-ಕಾಂಪ್ಲೈಂಟ್ ನೋಂದಾಯಿತ ಗುರುತಿಸದ ರಾಜಕೀಯ ಪಕ್ಷಗಳನ್ನು (RUPPs) ಪಟ್ಟಿಯಿಂದ ತೆಗೆದುಹಾಕಿತ್ತು. ಅದಾದ ಬಳಿಕ ಆಯೋಗದಿಂದ ಹೊಸ ಪ್ರಸ್ತಾವನೆ ಬಂದಿದೆ. ಪಟ್ಟಿಯಿಂದ ತೆಗೆದುಹಾಕಲಾದ ಪಕ್ಷಗಳಲ್ಲಿ 253ಕ್ಕೂ ಹೆಚ್ಚು ಪಕ್ಷಗಳು ನಿಷ್ಕ್ರಿಯಗೊಂಡಿವೆ ಎಂದು ಚುನಾವಣಾ ಆಯೋಗ ಘೋಷಿಸಿದೆ.

ಈ ತಿಂಗಳ ಆರಂಭದಲ್ಲಿ ಕೆಲವು ನೋಂದಾಯಿತ ಗುರುತಿಸಲ್ಪಡದ ರಾಜಕೀಯ ಪಕ್ಷಗಳ (RUPP) ವಿರುದ್ಧ ರಾಷ್ಟ್ರವ್ಯಾಪಿ ತೆರಿಗೆ ವಂಚನೆ ತನಿಖೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಅನೇಕ ರಾಜ್ಯಗಳಲ್ಲಿನ ಘಟಕಗಳ ಮೇಲೆ ದಾಳಿ ನಡೆಸಿತ್ತು. ಸಂಸ್ಥೆಯು ಅವರ ಸಂಶಯಾಸ್ಪದ ಹಣಕಾಸಿನ ವಹಿವಾಟುಗಳನ್ನು ಪರಿಶೀಲಿಸುತ್ತಿದೆ.

ಇನ್ನೊಂದೆಡೆ, ಚುನಾವಣಾ ಉದ್ದೇಶಕ್ಕಾಗಿ ಪ್ರತಿ ಅಭ್ಯರ್ಥಿಯು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಚುನಾವಣಾ ಸಂಸ್ಥೆ ಶಿಫಾರಸು ಮಾಡಿದೆ ಎಂದು ಈ ಬಗ್ಗೆ ಬಲ್ಲ ಮೂಲಗಳು ತಿಳಿಸಿವೆ. “ಒಬ್ಬ ಅಭ್ಯರ್ಥಿಯು ಮೊದಲು ಶಾಸಕರಾಗಿ ಸ್ಪರ್ಧಿಸಿ ನಂತರ ಸಂಸದರಾಗಿ ಸ್ಪರ್ಧಿಸಲು ನಿರ್ಧರಿಸಿದರೆ, ಪ್ರತಿ ಚುನಾವಣೆಗೆ ಎರಡು ಪ್ರತ್ಯೇಕ ಖಾತೆಗಳನ್ನು ತೆರೆಯಬೇಕಾಗುತ್ತದೆ. ಅಂದರೆ, ಸ್ಪರ್ಧಿಸಿದ ಪ್ರತಿ ಚುನಾವಣೆಗೂ ಅಭ್ಯರ್ಥಿಯು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಈ ರೀತಿಯಾಗಿ ಚುನಾವಣಾ ಆಯೋಗವು ಅಭ್ಯರ್ಥಿಗಳ ವೆಚ್ಚದ ಮಿತಿಗಳ ಮೇಲೆ ಒಂದು ಕಣ್ಣಿಡಬಹುದು ಮತ್ತು ವ್ಯವಸ್ಥೆಗೆ ಪಾರದರ್ಶಕತೆಯನ್ನು ತರಬಹುದು” ಎಂದು ಈ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಹಿಂದೂಸ್ತಾನ್‌ ಟೈಮ್ಸ್‌ಗೆ ತಿಳಿಸಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.