Constitution Day Speach: ಸಂವಿಧಾನ ದಿನದಂದು ಶಾಲಾಕಾಲೇಜುಗಳಲ್ಲಿ ಭಾಷಣ ಮಾಡುವಿರಾ? ಇಲ್ಲಿದೆ ಕನ್ನಡ ಭಾಷಣ
ಸಂವಿಧಾನ ದಿನದಂದು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ಅರಿವು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ. ಸಂವಿಧಾನ ದಿನದಂದು ಶಾಲಾಕಾಲೇಜುಗಳಲ್ಲಿ ಭಾಷಣ ಮಾಡಲು ಇಲ್ಲೊಂದು ಸ್ಯಾಂಪಲ್ ಭಾಷಣ ನೀಡಲಾಗಿದೆ.
ನವೆಂಬರ್ 26ರಂದು ಭಾರತದಲ್ಲಿ ಸಂವಿಧಾನ ದಿನವನ್ನು ಹಲವು ರೀತಿಯಲ್ಲಿ ಆಚರಿಸಲಾಗುತ್ತದೆ. ವಿಶೇಷವಾಗಿ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ಅರಿವು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ. ಸಂವಿಧಾನ ದಿನದಂದು ಶಾಲಾಕಾಲೇಜುಗಳಲ್ಲಿ ಭಾಷಣ ಮಾಡಲು ಇಲ್ಲೊಂದು ಸ್ಯಾಂಪಲ್ ಭಾಷಣ ನೀಡಲಾಗಿದೆ. ಈ ಭಾಷಣವನ್ನು ಯಥಾವತ್ತಾಗಿ ಉರು ಹೊಡೆಯಬಹುದು ಅಥವಾ ಈ ಭಾಷಣವನ್ನು ನಿಮ್ಮ ಶೈಲಿ, ಹಾವಭಾವಕ್ಕೆ ತಕ್ಕಂತೆ ಬದಲಾಯಿಸಿ ಭಾಷಣ ಮಾಡಬಹುದು.
ಸಂವಿಧಾನ ದಿನದ ಭಾಷಣ
ಸನ್ಮಾನ್ಯ ಸಭಾಧ್ಯಕ್ಷರೇ, ವೇದಿಕೆಯಲ್ಲಿ ಕುಳಿತಿರುವ ಮಹನಿಯರೇ, ವೇದಿಕೆಯ ಮುಂದಿರುವ ಸಭಿಕರೇ, ನನ್ನ ಸಹಪಾಠಿಗಳೇ. ಇಂದು ಭಾರತದ ಸಂವಿಧಾನ ದಿನ. ನಾವೆಲ್ಲರೂ ಹೆಮ್ಮೆಯಿಂದ ಸ್ಮರಿಸಬೇಕಾದ ದಿನವಿದು. 1949 ರಲ್ಲಿ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಇಂದು ಸಂವಿಧಾನ ದಿನ ಆಚರಿಸಲಾಗುತ್ತಿದೆ. ಇದನ್ನು ಸಂವಿಧಾನ್ ದಿವಸ್ ಎಂದೂ ಕರೆಯಲಾಗುತ್ತದೆ.
ಸ್ನೇಹಿತರೇ, ಸಂವಿಧಾನ ದಿನ ಎಂದ ತಕ್ಷಣ ನೆನಪಾಗುವುದು ಡಾ. ಬಿ. ಆರ್. ಅಂಬೇಡ್ಕರ್. ಭಾರತ ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಹೊಂದಿದರೂ ಆಡಳಿತ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಪಡೆಯಲು ಕೆಲ ಕಾಲ ಕಾಯ ಬೇಕಾಯಿತು. 1946 ರಲ್ಲಿ ಕ್ಯಾಬಿನೆಟ್ ಮಿಷನ್ ಭಾರತಕ್ಕೆ ಬಂದಾಗ ಸಂವಿಧಾನ ಸಭೆಯನ್ನು ರಚಿಸಲು ಒಪ್ಪಿಗೆ ದೊರೆಯಿತು. ಅದರಂತೆ ಪ್ರಾದೇಶಿಕ ವಿಧಾನಸಭೆಗಳಿಗೆ ಚುನಾವಣೆ ನಡೆದು 389 ಸದಸ್ಯರು ಚುನಾಯಿತರಾದರು. ಇದರಲ್ಲಿ ರಾಜ-ಮಹಾರಾಜರ ಆಳ್ವಿಕೆಯ 93 ಸದಸ್ಯರೂ ಸೇರಿದ್ದರು. ಇದರ ಮೊದಲ ಸಭೆ 1946 ರ ಡಿ. 9 ರಂದು ಹೊಸದಿಲ್ಲಿಯಲ್ಲಿ ನಡೆಯಿತು. ಈ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ. ಅಂಬೇಡ್ಕರ್ ಇದ್ದರು. ಸಂವಿಧಾನ ಸಭೆಗೆ ರಾಜೇಂದ್ರ ಪ್ರಸಾದರು ಅಧ್ಯಕ್ಷರಾಗಿದ್ದರು.
ಸಹಪಾಠಿಗಳೇ, ಸಂವಿಧಾನ ಎಂದಾಗ ಸಂವಿಧಾನವು ನಮಗೆ ನೀಡಿರುವ ಕೆಲವು ಮೂಲತತ್ತ್ವಗಳು, ಹಕ್ಕುಗಳ ಕುರಿತು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಭಾರತವು ಸ್ವತಂತ್ರ, ಸಾರ್ವಭೌಮ, ಗಣರಾಜ್ಯ. ಕಾನೂನಿಗೆ ಎಲ್ಲರೂ ಸಮಾನರು ಹಾಗು ಯಾವುದೇ ಲಿಂಗ, ಧರ್ಮ, ಜನಾಂಗ, ಹುಟ್ಟಿದ ಸ್ಥಳ ಇವುಗಳ ಆಧಾರದಿಂದ ಯಾರಿಗೂ ನೌಕರಿಯಲ್ಲಿ ಸಮಾನತೆಯ ಅವಕಾಶದಿಂದ ವಂಚಿತರನ್ನಾಗಿಸುವ ಅಧಿಕಾರವಿಲ್ಲ. ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ನಮ್ಮ ಸಂವಿಧಾನ ನೀಡಿದೆ.
ನಮ್ಮ ಸಂವಿಧಾನವು ಹಲವು ದೇಶಗಳ ಸಂವಿಧಾನಗಳ ಉತ್ತಮ ಅಂಶಗಳಿಂದ ರೂಪಿತವಾಗಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ. ಪಂಚ ವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ , ರಾಜ್ಯ ನಿರ್ದೇಶನ ತತ್ತ್ವಗಳನ್ನು ಐರ್ಲೆಂಡ್ ಸಂವಿಧಾನದಿಂದ, ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್‌ನಿಂದ ಎರವಲು ಪಡೆಯಲಾಗಿದೆ. ಹೀಗೆ, ಹಲವು ದೇಶಗಳ ಸಂವಿಧಾನಗಳನ್ನು ಅಳವಡಿಸಿಕೊಂಡು ಉತ್ತಮವಾದ, ಉದ್ದವಾದ ಸಂವಿಧಾನವಾಗಿದೆ.
ಸ್ನೇಹಿತರೇ, ನಮ್ಮ ಸಂವಿಧಾನವನ್ನು ಟೈಪ್ ಮಾಡಿಲ್ಲ. ಮುದ್ರಿಸಲಾಗಿಲ್ಲ. ಅದನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಕೈಯಲ್ಲಿ ಬರೆಯಲಾಗಿದೆ. ಮೂಲ ಪ್ರತಿಗಳನ್ನು ಹೀಲಿಯಂ ಕವಚವನ್ನು ಸಂರಕ್ಷಿಸಲಾಗಿದೆ. ಗೆಳೆಯರೇ, ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ.
ಸಂವಿಧಾನದ ಪ್ರಕಾರ ನಾವೆಲ್ಲರೂ ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಭಾರತೀಯರಾದವರು ಗೌರವಿಸಬೇಕಾದ್ದು ಅದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಮ್ಮಿಕೊಂಡ ಆದರ್ಶ, ಧ್ಯೇಯಗಳನ್ನು ಮರೆಯದೆ ಗೌರವಿಸಬೇಕು. ಭಾರತದ ಸಾರ್ವಬೌಮತ್ವ - ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯುವುದು ಹಾಗೂ ಅದರ ರಕ್ಷ ಣೆಗಾಗಿ ಸಿದ್ದರಾಗಿರುವುದು. ಅವಶ್ಯಕತೆ ಬಂದರೆ ರಾಷ್ಟ್ರ ರಕ್ಷ ಣೆಗೆ ಹಾಗೂ ಸೇವೆಗೆ ಸಿದ್ದರಾಗಿ ಸೇವೆಸಲ್ಲಿಸುವುದು.
ಗೆಳೆಯರೇ, ಭಾರತೀಯರೆಲ್ಲರೂ ಸಮಾನರೆಂಬ ಭ್ರಾತೃತ್ವ ಭಾವವನ್ನು ಬೆಳೆಸುವುದು ಹಾಗೂ ಸ್ತ್ರೀಯರಿಗೆ ಅಗೌರವವಾಗುವಂತಹ ಪದ್ಧತಿಗಳನ್ನು ಆಚರಣೆಗೆ ತರಬಾರದು. ವಿಭಿನ್ನ ಸಂಸ್ಕೃತಿಗಳನ್ನು ರಕ್ಷಿಸುವುದೂ ನಮ್ಮ ಕರ್ತವ್ಯವಾಗಿದೆ. ಪರಿಸರ, ವನ್ಯಜೀವಿ ರಕ್ಷಣೆಯೂ ನಮ್ಮೆಲ್ಲರ ಕರ್ತವ್ಯ. ಗೆಳೆಯರೇ, ಸಂವಿಧಾನದ ದಿನದಂದು ನಾವೆಲ್ಲರೂ ನಮ್ಮ ಸಂವಿಧಾನದ ಆಶಯಗಳಿಗೆ ತಕ್ಕಂತೆ ದೇಶದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುವ ಕುರಿತು ಪಣತೊಡೋಣ.