Badruddin Ajmal: ಜನಸಂಖ್ಯೆ ನಿಯಂತ್ರಣಕ್ಕೆ ಹಿಂದೂಗಳು 'ಮುಸ್ಲಿಂ ಫಾರ್ಮುಲಾ' ಅನುಸರಿಸಬೇಕು: ನಾಲಿಗೆ ಹರಿಬಿಟ್ಟ ಮುಸ್ಲಿಂ ಮುಖಂಡ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Badruddin Ajmal: ಜನಸಂಖ್ಯೆ ನಿಯಂತ್ರಣಕ್ಕೆ ಹಿಂದೂಗಳು 'ಮುಸ್ಲಿಂ ಫಾರ್ಮುಲಾ' ಅನುಸರಿಸಬೇಕು: ನಾಲಿಗೆ ಹರಿಬಿಟ್ಟ ಮುಸ್ಲಿಂ ಮುಖಂಡ!

Badruddin Ajmal: ಜನಸಂಖ್ಯೆ ನಿಯಂತ್ರಣಕ್ಕೆ ಹಿಂದೂಗಳು 'ಮುಸ್ಲಿಂ ಫಾರ್ಮುಲಾ' ಅನುಸರಿಸಬೇಕು: ನಾಲಿಗೆ ಹರಿಬಿಟ್ಟ ಮುಸ್ಲಿಂ ಮುಖಂಡ!

ಹಿಂದೂಗಳು ಜನಸಂಖ್ಯೆ ನಿಯಂತ್ರಣಕ್ಕಾಗಿ 'ಮುಸ್ಲಿಮರ ಸೂತ್ರ'ವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿರುವ ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಡಿಯುಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್, ಹಿಂದೂಗಳು ತಮ್ಮ ಮಕ್ಕಳಿಗೆ ಬೇಗ ಮದುವೆ ಮಾಡಿಸಬೇಕು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಅಲ್ಲದೇ ಲವ್‌ ಜಿಹಾದ್‌ ಎಂಬುದು ಬಲಪಂಥೀಯರ ಸುಳ್ಳು ಸೃಷ್ಟಿ ಎಂದೂ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.

ಬದ್ರುದ್ದೀನ್‌ ಅಜ್ಮಲ್‌ (ಸಂಗ್ರಹ ಚಿತ್ರ)
ಬದ್ರುದ್ದೀನ್‌ ಅಜ್ಮಲ್‌ (ಸಂಗ್ರಹ ಚಿತ್ರ) (HT)

ಕರೀಂಗಂಜ್: ಜನಸಂಖ್ಯೆ ನಿಯಂತ್ರಣಕ್ಕೆ ಎಲ್ಲರಿಗೂ ಅನ್ವಯವಾಗುವ ಏಕರೂಪ ಕಾನೂನು ಜಾರಿಗೆ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ, ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಡಿಯುಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಹಿಂದೂಗಳು ಜನಸಂಖ್ಯೆ ನಿಯಂತ್ರಣಕ್ಕಾಗಿ 'ಮುಸ್ಲಿಮರ ಸೂತ್ರ'ವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿರುವ ಬದ್ರುದ್ದೀನ್ ಅಜ್ಮಲ್, ಹಿಂದೂಗಳು ತಮ್ಮ ಮಕ್ಕಳಿಗೆ ಬೇಗ ಮದುವೆ ಮಾಡಿಸಬೇಕು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

"ಮುಸ್ಲಿಂ ಪುರುಷರು 20-22ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಅದರಂತೆ ಮುಸ್ಲಿಂ ಮಹಿಳೆಯರು ಕೂಡ ಸರ್ಕಾರವು ಅನುಮತಿಸುವ ವಯಸ್ಸಿನ ನಂತರ ಅಂದರೆ 18ನೇ ವಯಸ್ಸಿನಲ್ಲಿಯೇ ಮದುವೆಯಾಗುತ್ತಾರೆ. ಆದರೆ ಹಿಂದೂಗಳು ಮದುವೆಗೆ ಮುಂಚೆ ಒಂದು, ಎರಡು ಅಥವಾ ಮೂರು ಅಕ್ರಮ ಹೆಂಡತಿಯರನ್ನು ಇಟ್ಟುಕೊಳ್ಳುತ್ತಾರೆ. ಶಿಶುಗಳಿಗೆ ಜನ್ಮ ನೀಡಿ, ಲೌಕಿಕ ಆನಂದವನ್ನು ಅನುಭವಿಸುತ್ತಾರೆ.." ಎಂದು ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಸ್ಲಿಂ ಜನಸಂಖ್ಯೆಯ ಹೆಚ್ಚಳದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬದ್ರುದ್ದೀನ್‌ ಅಜ್ಮಲ್‌, ಇದು ಮುಸ್ಲಿಮರ ಮೇಲೆ ಬಲಪಂಥೀಯರು ನಡೆಸುತ್ತಿರುವ ಆಕ್ರಮಣದ ಭಾಗ ಎಂದು ಅಭಿಪ್ರಾಯಪಟ್ಟರು.

"ಹಿಂದೂಗಳು 40 ವರ್ಷ ವಯಸ್ಸಿನ ನಂತರ ಅವರು ಪೋಷಕರ ಒತ್ತಡಕ್ಕೆ ಮಣಿದು ಮದುವೆಯಾಗುತ್ತಾರೆ. ಹೀಗಾದರೆ ಅವರು ಮಕ್ಕಳನ್ನು ಹೆರುತ್ತಾರೆ ಎಂದು ನಿರೀಕ್ಷಿಸುವುದಾದರೂ ಹೇಗೆ? ನೀವು ಫಲವತ್ತಾದ ಭೂಮಿಯಲ್ಲಿ ಬಿತ್ತಿದರೆ ಮಾತ್ರ ನೀವು ಉತ್ತಮ ಬೆಳೆಗಳನ್ನು ಪಡೆಯಬಹುದು.." ಎಂದು ಬದ್ರುದ್ದೀನ್‌ ಅಜ್ಮಲ್‌ ನಾಲಿಗೆ ಹರಿಬಿಟ್ಟಿದ್ದಾರೆ.

ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಬದ್ರುದ್ದೀನ್‌ ಅಜ್ಮಲ್‌, ಹಿಂದೂಗಳು ಕೂಡ ಮುಸ್ಲಿಂ ಹೆಣ್ಣುಮಕ್ಕಳನ್ನು ಪುಸಲಾಯಿಸಿ "ಲವ್ ಜಿಹಾದ್" ಮಾಡುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ. ಲವ್‌ ಜಿಹಾದ್‌ ಬಗ್ಗೆ ಮಾತನಾಡುವ ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ, ಈ ಕುರಿತು ಕಾನೂನು ಜಾರಿ ಮಾಡುವ ತಾಕತ್ತು ಪ್ರದರ್ಶಿಸಲಿ ಎಂದೂ ಬದ್ರುದ್ದೀನ್‌ ಅಜ್ಮಲ್‌ ಸವಾಲೆಸೆದಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ಈಗ ರಾಷ್ಟ್ರ ರಾಜಕಾರಣದಲ್ಲಿ ಮಿಂಚುತ್ತಿರುವ ಪ್ರಬಲ ನಾಯಕರಾಗಿದ್ದು, ಅವರಿಗೆ ತಾಕತ್ತಿದ್ದರೆ ಲವ್‌ ಜಿಹಾದ್‌ ವಿರುದ್ಧ ಕಾನೂನು ಜಾರಿಗೊಳಿಸಲಿ. ನಾವೂ ಕೂಡ ಇದನ್ನು ಸ್ವಾಗತಿಸುತ್ತೇವೆ. ಆದರೆ ಸುಖಾಸುಮ್ಮನೆ ಮುಸ್ಲಿಮರ ವಿರುದ್ಧ ಆರೋಪ ಮಾಡುವುದನ್ನು ಸಹಿಸುವುದಿಲ್ಲ ಎಂದು ಬದ್ರುದ್ದೀನ್‌ ಅಜ್ಮಲ್‌ ಹರಿಹಾಯ್ದಿದ್ದಾರೆ.

ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಓಲೈಸಿ ಮತಾಂತರಕ್ಕೆ ಒತ್ತಾಯಿಸುತ್ತಾರೆ ಎಂಬುದು, ಬಲಪಂಥೀಯರ ಪಿತೂರಿ ಸಿದ್ಧಾಂತದ ಭಾಗ ಎಂದೂ ಬದ್ರುದ್ದೀನ್‌ ಅಜ್ಮಲ್‌ ಗಂಭೀರ ಆರೋಪ ಮಾಡಿದರು. ಜನಸಂಖ್ಯೆ ಹೆಚ್ಚಳಕ್ಕೆ ಹೆಚ್ಚು ಮಕ್ಕಳನ್ನು ಹೊಂದುವುದು ಕಾರಣವಲ್ಲ, ಬದಲಿಗೆ ಸರಿಯಾದ ಸಮಯಕ್ಕೆ ಮದುವೆಯಾಗದೇ ಅಕ್ರಮವಾಗಿ ಮಕ್ಕಳನ್ನು ಹೊಂದುವುದು ಎಂದು ಬದ್ರುದ್ದೀನ್‌ ಅಜ್ಮಲ್‌ ಪರೋಕ್ಷವಾಗಿ ಹಿಂದೂ ಸಮುದಾಯದ ಮೇಲೆ ಬೆರಳು ತೋರಿದ್ದಾರೆ.

'ಲವ್ ಜಿಹಾದ್' ಕೊನೆಗೊಳಿಸಲು ಕರೆ ನೀಡಿರವ ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ, ಭಾರತಕ್ಕೆ ನರೇಂದ್ರ ಮೋದಿ ಅವರಂತಹ ಯಂತಹ ಪ್ರಬಲ ಪ್ರಧಾನಿಯ ಅಗತ್ಯವಿದೆ. ಇಲ್ಲದಿದ್ದರೆ ಪ್ರತಿಯೊಂದು ನಗರದಲ್ಲೂ ಅಫ್ತಾಬ್‌ನಂತಹ ದುರುಳರು ಹುಟ್ಟುತ್ತಾರೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕ್ಷಮೆ ಕೋರಿದ ಅಜ್ಮಲ್:‌

ಇನ್ನು ತಮ್ಮ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿರುವುದನ್ನು ಅರಿತ ಬದ್ರುದ್ದೀನ್ ಅಜ್ಮಲ್, ಈ ಕುರಿತು ಕ್ಷಮೆ ಕೋರಿದ್ದಾರೆ. 'ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಯಾರ ಭಾವನೆಗಳಿಗೂ ಧಕ್ಕೆ ಮಾಡುವ ಉದ್ದೇಶ ನನಗಿರಲಿಲ್ಲ..' ಎಂದು ಬದ್ರುದ್ದೀನ್ ಅಜ್ಮಲ್ ಸ್ಪಷ್ಟಪಡಿಸಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.