History of PFI: 16 ವರ್ಷಗಳ ಪಿಎಫ್‌ಐ ಇತಿಹಾಸ ಹೀಗಿದೆ ನೋಡಿ; ಪಿಎಫ್‌ಐ ಹುಟ್ಟಿಗೆ ಇದೆ 2 ಸ್ಪಷ್ಟ ಕಾರಣ; ಇಲ್ಲಿದೆ ವಿವರ
A 16-year-long history PFI: ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಮೇಲೆ ಸರ್ಕಾರ ನಿಷೇಧ ಹೇರಿದ ಐದು ವರ್ಷಗಳ ಬಳಿಕ ನಡೆದ ಬೆಳವಣಿಗೆ ಇದು. ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ ಆಫ್ ಕೇರಳ, ದ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಎಂಬ ಮೂರು ಸಂಘಟನೆಗಳು ವಿಲೀನಗೊಂಡು ಪಿಎಫ್‌ಐ ರಚನೆ ಆಗಿದೆ.
ನವದೆಹಲಿ: ಸದ್ಯ ಸುದ್ದಿಯ ಕೇಂದ್ರ ಬಿಂದುವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕೇರಳದಲ್ಲಿ 2006ರಲ್ಲಿ ಸ್ಥಾಪನೆಯಾಯಿತು. ಅಷ್ಟೇ ಅಲ್ಲ, ಅಲ್ಪ ಅವಧಿಯಲ್ಲಿ ದೇಶಕ್ಕೆ ಘಾತಕವೆನಿಸುವ ಬೆಳವಣಿಗೆಯನ್ನು ದಾಖಲಿಸಿದೆ. 22 ರಾಜ್ಯಗಳಲ್ಲಿ ತನ್ನ ಸಂಘಟನೆ ಬಲಪಡಿಸಿದ ಪಿಎಫ್‌ಐ, ಚುನಾವಣಾ ರಾಜಕೀಯಕ್ಕೂ ಕೈ ಹಾಕಿದೆ. ಎಸ್‌ಡಿಪಿಐ ಮೂಲಕ ರಾಜಕೀಯ ಚಟುವಟಿಕೆ ನಡೆಸುತ್ತಿರುವ ಪಿಎಫ್‌ಐ, ಒಂದೂವರೆ ದಶಕದಲ್ಲಿ ಅನೇಕ ಹಿಂಸಾಚಾರ, ಉಗ್ರಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದೆ.
ಎಸ್‌ಡಿಪಿಐ ಬೆಂಬಲದ ಅಂದಿನ ಕೇರಳ ಸರ್ಕಾರವು, 2012 ರಲ್ಲಿ ಹೈಕೋರ್ಟ್‌ಗೆ ಅಫಿಡವಿಟ್‌ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಎಂಬುದು ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ)ಯ ಪುನುರತ್ಥಾನದ ರೂಪವೇ ಹೊರತು ಬೇರೇನೂ ಅಲ್ಲ ಎಂದು ತಿಳಿಸಿತ್ತು.
ಪಿಎಫ್‌ಐ ಹುಟ್ಟಿಗೆ ಎರಡು ಸ್ಪಷ್ಟ ಕಾರಣ
PFI ರಚನೆಗೆ ಕಾರಣವಾದ ಎರಡು ಸ್ಪಷ್ಟ ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ.
- ಬಾಬರಿ ಮಸೀದಿಯ ಧ್ವಂಸ (1992ರಲ್ಲಿ)ವು ಭಾರತದಲ್ಲಿ ಕೋಮು ಅಶಾಂತಿಯ ಅಲೆಗೆ ಕಾರಣವಾಯಿತು.
- ನಂತರದ ಬೆಳವಣಿಗೆಯ ಬಳಿಕ 2001 ರ ಆರಂಭದಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಮೇಲೆ ನಿಷೇಧ ಹೇರಿಕೆ.
2006ರಲ್ಲಿ ಪಿಎಫ್‌ಐ ಹುಟ್ಟಿದ್ದು ಹೀಗೆ
ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಮೇಲೆ ಸರ್ಕಾರ ನಿಷೇಧ ಹೇರಿದ ಐದು ವರ್ಷಗಳ ಬಳಿಕ ನಡೆದ ಬೆಳವಣಿಗೆ ಇದು. ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ ಆಫ್ ಕೇರಳ, ದ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಎಂಬ ಮೂರು ಸಂಘಟನೆಗಳು ವಿಲೀನಗೊಂಡು ಪಿಎಫ್‌ಐ ರಚನೆ ಆಗಿದೆ. ಇವರೆಲ್ಲರೂ ಈ ಹಿಂದಿನ SIMIಯ ಸದಸ್ಯರು ಎಂಬುದು ಗಮನಾರ್ಹ.
ಪಿಎಫ್‌ಐ ಜನ್ಮದಾತರು ಇವರು..
ಕೋಝಿಕೋಡ್‌ನ ನಿವೃತ್ತ ಇಂಗ್ಲಿಷ್ ಬೋಧಕ ಪ್ರೊಫೆಸರ್ ಪಿ.ಕೋಯಾ (68) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಪಿಎಫ್‌ಐ ಸಿದ್ಧಾಂತ ರೂಪಿಸಿದವರು ಇದೇ ಕೋಯಾ. ಕಳೆದ ಗುರುವಾರ ಕೇರಳದಲ್ಲಿ ಬಂಧಿತ 22 ಮಂದಿಯಲ್ಲಿ ಕೋಯಾ ಕೂಡ ಸೇರಿದ್ದಾರೆ.
ಹಿಂದುಸ್ತಾನ್ ಟೈಮ್ಸ್‌ಗೆ ಸಂದರ್ಶನ ನೀಡಿದ್ದ ಕೋಯಾ, "ದೇಶದಲ್ಲಿ ಬೆಳೆಯುತ್ತಿರುವ ಅಸಮಾನತೆ ಮತ್ತು ಸಮುದಾಯದ ಶೋಷಣೆಯು ತನ್ನಂತಹ ಜನರನ್ನು ತನ್ನ ಹೆಮ್ಮೆಯನ್ನು ಮರಳಿ ಪಡೆಯಲು ಈ ಪಿಎಫ್‌ಐ ಹುಟ್ಟುಹಾಕಿದೆ" ಎಂದು ಹೇಳಿದ್ದರು.
ಕೋಯಾ, ವಾಸ್ತವವಾಗಿ, PFI ನ ಪರಮೋಚ್ಛ ನಾಯಕರಲ್ಲಿ ಒಬ್ಬರು. ಪಿಎಫ್‌ಐನ ಮುಖವಾಣಿ ತೇಜಸ್‌ನ ಸಂಪಾದಕರು. ಇವರಲ್ಲದೆ, ಇಎಮ್ ಅಬ್ದುಲ್ ರಹಿಮಾನ್ (ಸಿಮಿಯ ಮಾಜಿ ಪ್ರಧಾನ ಕಾರ್ಯದರ್ಶಿ), ಇ ಅಬೂಬಕರ್ (ಸಿಮಿಯ ಕೇರಳ ರಾಜ್ಯಾಧ್ಯಕ್ಷರು) ಪಿಎಫ್‌ಐನ ಸ್ಥಾಪಕ ಸದಸ್ಯರು. ಹೀಗೆ ಅನೇಕರು ನಿಷೇಧಿತ ಸಿಮಿ ನಾಯಕರಾಗಿದ್ದವರು. SIMI ಮತ್ತು ನಂತರ NDF ಅನ್ನು ಸ್ಥಾಪಿಸಿದ 19 ಸದಸ್ಯರಲ್ಲಿ ಕೋಯಾ ಕೂಡ ಒಬ್ಬರಾಗಿದ್ದರು.
ಮತಾಂತರಕ್ಕೆ ಪಿಎಫ್‌ಐ ಉತ್ತೇಜನ
ಕೇರಳ ಸರ್ಕಾರವು ಪಿಎಫ್‌ಐ ಸಿಮಿಯ ಪುನರುತ್ಥಾನವಾಗಿದೆ ಎಂದು ಹೈಕೋರ್ಟ್‌ಗೆ ತಿಳಿಸಿದ ಎರಡು ವರ್ಷಗಳ ನಂತರ, ಅಂದರೆ 2014 ರಲ್ಲಿ ಸಲ್ಲಿಸಿದ ಅಫಿಡವಿಟ್ ಅನ್ನೂ ಗಮನಿಸಬೇಕು. ಅದರಲ್ಲಿ, ಪಿಎಫ್‌ಐ "ಮತಾಂತರವನ್ನು ಉತ್ತೇಜಿಸುವ ಮೂಲಕ ಸಮಾಜದ ಇಸ್ಲಾಮೀಕರಣ, ಸಮಸ್ಯೆಗಳ ಕೋಮುವಾದೀಕರಣವನ್ನು ಬಯಸುತ್ತದೆ" ಎಂದು ನ್ಯಾಯಾಲಯಕ್ಕೆ ಸರ್ಕಾರ ಮತ್ತೆ ಹೇಳಿದೆ.
ಅವರ ಗ್ರಹಿಕೆಯಲ್ಲಿ ಇಸ್ಲಾಮಿನ ಶತ್ರುಗಳಾಗಿರುವ ವ್ಯಕ್ತಿಗಳ ಆಯ್ದ ನಿರ್ಮೂಲನೆ ಸೇರಿ ಕ್ರಮಗಳನ್ನು ಕೈಗೊಳ್ಳಲು ಇಸ್ಲಾಂ, ನೇಮಕಾತಿ ಮತ್ತು ಸೈದ್ಧಾಂತಿಕವಾಗಿ ಬದ್ಧವಾದ ಉಪದೇಶಿತ ಮುಸ್ಲಿಂ ಯುವಕರ ನಿರ್ವಹಣೆಯನ್ನು ಪಿಎಫ್‌ಐ ಮಾಡುತ್ತಿದೆ.
22 ರಾಜ್ಯಗಳಲ್ಲಿ ಪಿಎಫ್‌ಐ ಕಚೇರಿ, ದೆಹಲಿಯಲ್ಲಿ ಕೇಂದ್ರ ಕಚೇರಿ!
ಕೇರಳದಲ್ಲಿ ಸೈದ್ಧಾಂತಿಕ ಹುಟ್ಟು ಕಂಡ ಪಿಎಫ್‌ಐ ನಂತರ, ಮೊದಲು ಇತರ ದಕ್ಷಿಣದ ರಾಜ್ಯಗಳಿಗೆ ವಿಸ್ತರಿಸಲು ಪ್ರಾರಂಭಿಸಿತು. ಇಂದು, ಸಂಘಟನೆಯು ದೆಹಲಿಯ ಪ್ರಧಾನ ಕಚೇರಿ ಸೇರಿ 22 ರಾಜ್ಯಗಳಲ್ಲಿ ಕಚೇರಿಗಳನ್ನು ಹೊಂದಿದೆ ಮತ್ತು ಈಶಾನ್ಯದಲ್ಲಿ ಮಣಿಪುರದವರೆಗೂ ವಿಸ್ತರಿಸಿದೆ. ಇವೆಲ್ಲ ಸ್ಥಳಗಳ ಮೇಲೂ ಎನ್‌ಐಎ ದಾಳಿ ನಡೆಸಿತ್ತು.
ಪಿಎಫ್‌ಐ ತನ್ನ ಕಾರ್ಯಕರ್ತರಿಗೆ ಸಮವಸ್ತ್ರವನ್ನು ಹೊಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕವಾಯತುಗಳನ್ನು, ಪಥಸಂಚಲನವನ್ನು ನಡೆಸುತ್ತದೆ. ಕೇರಳದ ಜಿಲ್ಲಾ ಕೇಂದ್ರಗಳಲ್ಲಿ ಆಗಾಗ್ಗೆ "ಏಕತೆ" ಮೆರವಣಿಗೆ ಹೆಸರಿನಲ್ಲಿ ಶಕ್ತಿ ಪ್ರದರ್ಶನಗಳನ್ನು ನಡೆಸುತ್ತದೆ. 2013 ರಲ್ಲಿ ಕೇರಳ ಸರ್ಕಾರವು ಈ ಮೆರವಣಿಗೆಯನ್ನು ನಿಷೇಧಿಸಿತು. ಇದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಸರ್ಕಾರ ಪ್ರತಿಪಾದಿಸಿತ್ತು.