ಮುಂಬಯಿ ವಾಯವ್ಯ ಕ್ಷೇತ್ರದ ಇವಿಎಂ ಅನ್‌ಲಾಕ್‌ ವಿವಾದ; ಸುಳ್ಳು ಸುದ್ದಿ, ಮಾನನಷ್ಟ ಪ್ರಕರಣ ದಾಖಲು, ಇದುವರೆಗಿನ 5 ವಿದ್ಯಮಾನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮುಂಬಯಿ ವಾಯವ್ಯ ಕ್ಷೇತ್ರದ ಇವಿಎಂ ಅನ್‌ಲಾಕ್‌ ವಿವಾದ; ಸುಳ್ಳು ಸುದ್ದಿ, ಮಾನನಷ್ಟ ಪ್ರಕರಣ ದಾಖಲು, ಇದುವರೆಗಿನ 5 ವಿದ್ಯಮಾನ

ಮುಂಬಯಿ ವಾಯವ್ಯ ಕ್ಷೇತ್ರದ ಇವಿಎಂ ಅನ್‌ಲಾಕ್‌ ವಿವಾದ; ಸುಳ್ಳು ಸುದ್ದಿ, ಮಾನನಷ್ಟ ಪ್ರಕರಣ ದಾಖಲು, ಇದುವರೆಗಿನ 5 ವಿದ್ಯಮಾನ

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಈ ನಡುವೆ, ವಾಯವ್ಯ ಮುಂಬಯಿ ಲೋಕಸಭಾ ಕ್ಷೇತ್ರದ ಇವಿಎಂ ಅನ್‌ಲಾಕ್‌ ವಿವಾದ ಗಮನಸೆಳೆದಿದೆ. ಸುಳ್ಳು ಸುದ್ದಿ, ಮಾನನಷ್ಟ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಇದುವರೆಗಿನ 5 ವಿದ್ಯಮಾನಗಳ ವಿವರ ಹೀಗಿದೆ.

ಮುಂಬಯಿ ವಾಯವ್ಯ ಕ್ಷೇತ್ರದ ಇವಿಎಂ ಅನ್‌ಲಾಕ್‌ ವಿವಾದ; ಸುಳ್ಳು ಸುದ್ದಿ, ಮಾನನಷ್ಟ ಪ್ರಕರಣ ದಾಖಲು, ಇದುವರೆಗಿನ 5 ವಿದ್ಯಮಾನ (ಸಾಂಕೇತಿಕ ಚಿತ್ರ)
ಮುಂಬಯಿ ವಾಯವ್ಯ ಕ್ಷೇತ್ರದ ಇವಿಎಂ ಅನ್‌ಲಾಕ್‌ ವಿವಾದ; ಸುಳ್ಳು ಸುದ್ದಿ, ಮಾನನಷ್ಟ ಪ್ರಕರಣ ದಾಖಲು, ಇದುವರೆಗಿನ 5 ವಿದ್ಯಮಾನ (ಸಾಂಕೇತಿಕ ಚಿತ್ರ) (Raju Shinde/HT Photo)

ನವದೆಹಲಿ: ವಾಯವ್ಯ ಮುಂಬಯಿ ಲೋಕಸಭಾ ಸ್ಥಾನಕ್ಕೆ ಸಂಬಂಧಿಸಿದಂತೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಹ್ಯಾಕಿಂಗ್ ವಿಚಾರ ಮತ್ತೆ ಚರ್ಚೆಯಲ್ಲಿದೆ. ರಾಜಕೀಯ ಚರ್ಚೆ, ಕೆಸರರೆಚಾಟ ಮುಂದುವರಿದಿದೆ. ಭಾರತದ ಇವಿಎಂ ಹ್ಯಾಕ್ ಮಾಡುವ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಎಕ್ಸ್‌ ಮಾಲೀಕ ಎಲಾನ್ ಮಸ್ಕ್‌ ಕೂಡ ಹೇಳಿಕೆ ನೀಡಿದ್ದಾರೆ.

ವಾಯವ್ಯ ಮುಂಬಯಿ ಲೋಕಸಭಾ ಕ್ಷೇತ್ರದಲ್ಲಿ ಶಿಂಧೆ ಬಣದ ಶಿವಸೇನಾ ಅಭ್ಯರ್ಥಿ ಮಂಗೇಶ್ ಪಂಡ್ಲಿಕರ್‌ ಅವರ ಅಲ್ಪ ಅಂತರದ (48 ಮತಗಳು) ಗೆಲುವಿನ ನಂತರ ಇದೆಲ್ಲ ಶುರುವಾಗಿದೆ. ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲು ಭಾರತೀಯ ಚುನಾವಣಾ ಆಯೋಗಕ್ಕೆ ಧೈರ್ಯವಿಲ್ಲ ಎಂದು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹೇಳಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಜೂನ್ 4 ರಂದು ವಿಜೇತ ಅಭ್ಯರ್ಥಿಯ ಸಂಬಂಧಿಯೊಬ್ಬರು ಮೊಬೈಲ್ ಬಳಸಿದ್ದಾರೆ ಎಂದು ವರದಿಗಳನ್ನು ಉಲ್ಲೇಖಿಸಿ ಆದಿತ್ಯ ಠಾಕ್ರೆ ಈ ಹೇಳಿಕೆ ನೀಡಿದ್ದರು.

ಮಂಗೇಶ್ ಪಂಡಿಲ್ಕರ್ ಅವರ ಸೋದರ ಸಂಬಂಧಿ ರವೀಂದ್ರ ವೈಕರ್‌ ಅವರು ಮತ ಎಣಿಕೆ ಕೇಂದಲ್ಲಿದ್ದಾಗ ಇವಿಎಂ ಅನ್ನು ಅನ್‌ಲಾಕ್ ಮಾಡಲು ಅವರ ಮೊಬೈಲ್ ಫೋನ್ ಬಳಸಲಾಗಿತ್ತು ಎಂದು ಮಾಧ್ಯಮ ವರದಿಗಳು ಹೇಳಿದ್ದವು. ಆದರೆ, ಚುನಾವಣಾಧಿಕಾರಿ ವಂದನಾ ಸೂರ್ಯವಂಶಿ ಮತ್ತು ಮುಂಬೈ ಪೊಲೀಸರು ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ವಾಯವ್ಯ ಮುಂಬಯಿನಲ್ಲಿ ಇವಿಎಂ ತೆರಯಲು ಮೊಬೈಲ್ ಬಳಕೆ ಆರೋಪ -ಏನಿದು ಪ್ರಕರಣ

1) ಮತ ಎಣಿಕೆ ಕೇಂದ್ರಗಳ ಒಳಗೆ ಮೊಬೈಲ್ ಫೋನ್‌ಗಳ ಮೇಲಿನ ಇಸಿ ನಿಷೇಧವನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿಯಲ್ಲಿ ಮಂಗೇಶ್ ಪಾಂಡಿಲ್ಕರ್ ಮತ್ತು ಚುನಾವಣಾ ಅಧಿಕಾರಿ ದಿನೇಶ್ ಗುರವ್ ವಿರುದ್ಧ ವನ್ರೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

2) ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಿ ಮತದಾನ ನಡೆಸಿದರೆ ಬಿಜೆಪಿ ಕೇವಲ 40 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತಿತ್ತು ಮತ್ತು 240 ಕ್ಷೇತ್ರಗಳನ್ನು ಗೆಲ್ಲುವುದು ಸಾಧ್ಯವಿರಲಿಲ್ಲ. ಸಿಸಿಟಿವಿ ದೃಶ್ಯ ಬಿಡುಗಡೆ ಮಾಡಲಿ ಎಂದು ಆದಿತ್ಯ ಠಾಕ್ರೆ ಟೀಕಿಸಿದ್ದಾರೆ.

3) ಸಕ್ಷಮ ನ್ಯಾಯಾಲಯದ ಆದೇಶದ ಮೇರೆಗೆ ಮಾತ್ರ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಬಹುದು ಎಂದು ಚುನಾವಣಾಧಿಕಾರಿ ಸೂರ್ಯವಂಶಿ ತಿಳಿಸಿದ್ದಾರೆ.

4) "ಇವಿಎಂ ಸ್ವತಂತ್ರ ವ್ಯವಸ್ಥೆಯಾಗಿದ್ದು, ಅದನ್ನು ಅನ್‌ಲಾಕ್ ಮಾಡಲು ಒಟಿಪಿ ಅಗತ್ಯವಿಲ್ಲ. ಇದು ಪ್ರೋಗ್ರಾಮೆಬಲ್ ಆಗಿಲ್ಲ ಮತ್ತು ವೈರ್‌ಲೆಸ್ ಸಂವಹನ ಸಾಮರ್ಥ್ಯಗಳನ್ನು ಹೊಂದಿಲ್ಲ ಎಂದು ಸೂರ್ಯವಂಶಿ ವಿವರಿಸಿದ್ದಾರೆ.

5) ಇದು ಪತ್ರಿಕೆಯೊಂದು ಸಂಪೂರ್ಣ ಸುಳ್ಳು ಸುದ್ದಿ ಪ್ರಕಟಿಸಿದೆ. ಹೀಗಾಗಿ, ಆ ಪತ್ರಿಕೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 505ರ ಪ್ರಕಾರ ಸುಳ್ಳು ಸುದ್ದಿಗಳನ್ನು ಹರಡುವುದಕ್ಕಾಗಿ ಮತ್ತು ಮಾನನಷ್ಟಕ್ಕೆ ಸಂಬಂಧಿಸಿದ ನೋಟಿಸ್ ನೀಡಲಾಗಿದೆ" ಸೂರ್ಯವಂಶಿ ಹೇಳಿದರು.

ಮಿಡ್-ಡೇ ಹೇಳಿದ್ದೇನು?

ಮಂಗೇಶ್ ಪಂಡಿಲ್ಕರ್ ಅವರ ಸೋದರ ಸಂಬಂಧಿ ರವೀಂದ್ರ ವೈಕರ್‌ ಅವರು ಮತ ಎಣಿಕೆ ಕೇಂದಲ್ಲಿದ್ದಾಗ ಇವಿಎಂ ಅನ್ನು ಅನ್‌ಲಾಕ್ ಮಾಡಲು ಅವರ ಮೊಬೈಲ್ ಫೋನ್ ಬಳಸಲಾಗಿತ್ತು ಎಂಬ ಅಂಶ ಮಿಡ್‌ ಡೇ ಪ್ರಕಟಿಸಿದ ವರದಿಯಲ್ಲಿತ್ತು. ಆದರೆ ಇದನ್ನು ಚುನಾವಣಾಧಿಕಾರಿ ವಂದನಾ ಸೂರ್ಯವಂಶಿ ಮತ್ತು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ.

ವಂದನಾ ಸೂರ್ಯವಂಶಿ ಅವರು ಭಾನುವಾರ ಸುದ್ದಿಗೋಷ್ಠಿ ನಡೆಸಿ, ಮಿಡ್ -ಡೇ ಮತ್ತು ಲೋಕಮತ್ ಪತ್ರಿಕೆಗಳಿಗೆ ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕಾಗಿ ಸೆಕ್ಷನ್ 499 ಮತ್ತು 505ರ ಪ್ರಕಾರ ನೋಟಿಸ್ ಜಾರಿಗೊಳಿಸಲಾಗಿದೆ. 24 ಗಂಟೆ ಒಳಗೆ ಅದಕ್ಕೆ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಆದಾಗ್ಯೂ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, ಜೋಗೇಶ್ವರಿ ವಿಧಾನಸಭಾ ಕ್ಷೇತ್ರದ ದಿನೇಶ್ ಗೌರವ್ ಎಂಬ ಡೇಟಾ ಎಂಟ್ರಿ ಆಪರೇಟರ್‌ ಅವರ ವೈಯಕ್ತಿಕ ಮೊಬೈಲ್‌ ಇನ್ನೊಬ್ಬನ ಕೈಯಲ್ಲಿ ಕಂಡುಬಂದಿತ್ತು. ಇದರ ವಿರುದ್ಧ ಕ್ರಮ ಜರುಗಿಸಲಾಗಿದೆ. ಡೇಟಾ ಎಂಟ್ರಿ ಮತ್ತು ಮತ ಎಣಿಕೆ ಎರಡೂ ಬೇರೆ ಬೇರೆ ಪ್ರಕ್ರಿಯೆಗಳು. ಎಆರ್‌ಒ ಅವರಿಗೆ ಡೇಟಾ ಎಂಟ್ರಿ ಮಾಡುವುದಕ್ಕೆ ಒಟಿಪಿ ಬರುತ್ತದೆಯೇ ಹೊರತು ಬೇರಾವುದಕ್ಕೂ ಅಲ್ಲ. ಇವಿಎಂಗಳು ಸುರಕ್ಷಿತ. ಅವುಗಳನ್ನು ಹ್ಯಾಕ್ ಮಾಡುವುದಕ್ಕೆ ಆಗುವುದಿಲ್ಲ ಎಂದು ವಂದನಾ ಸೂರ್ಯವಂಶಿ ಸ್ಪಷ್ಟಪಡಿಸಿದ್ದಾಗಿ ವರದಿ ಹೇಳಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.