Kanchanjunga Accident: ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ, ಕನಿಷ್ಠ 5 ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kanchanjunga Accident: ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ, ಕನಿಷ್ಠ 5 ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

Kanchanjunga Accident: ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ, ಕನಿಷ್ಠ 5 ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

ಪಶ್ಚಿಮ ಬಂಗಾಳದ ನ್ಯೂ ಜಲ್‌ಪಾಯಿಗುರಿ ರೈಲ್ವೆ ನಿಲ್ಧಾಣದಿಂದ 7 ಕಿ.ಮೀ. ದೂರದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ ಸಂಭವಿಸಿದ್ದು, ಕನಿಷ್ಠ 5 ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ, ಕನಿಷ್ಠ 5 ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ ಆಗಿದೆ. (ಘಟನಾ ಸ್ಥಳದ ವಿಡಿಯೋ ಚಿತ್ರ)
ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ, ಕನಿಷ್ಠ 5 ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ ಆಗಿದೆ. (ಘಟನಾ ಸ್ಥಳದ ವಿಡಿಯೋ ಚಿತ್ರ)

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಸೋಮವಾರ ಬೆಳಗ್ಗೆ ಸರಕು ಸಾಗಣೆ ರೈಲು ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 5 ಪ್ರಯಾಣಿಕರು ಮೃತಪಟ್ಟಿದ್ದು, ಕನಿಷ್ಠ 30 ಪ್ರಯಾಣಿಕರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಸೀಲ್ಡಾಗೆ ಹೋಗುತ್ತಿದ್ದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಸರಕು ಸಾಗಣೆ ರೈಲು ಹಿಂಬದಿಯಿಂದ ಡಿಕ್ಕಿ ಹೊಡೆದು ಈ ರೈಲು ದುರಂತ ಸಂಭವಿಸಿತು. ಪಶ್ಚಿಮ ಬಂಗಾಳದ ರಂಗಪಾಣಿ ರೈಲ್ವೆ ನಿಲ್ದಾಣದ ಸಮೀಪ ಈ ಅಪಘಾತ ನಡೆಯಿತು. ರಂಗಪಾಣಿ ರೈಲ್ವೆ ನಿಲ್ಧಾಣ ಸಮೀಪದ ಈ ದುರಂತ ಸ್ಥಳ ನ್ಯೂ ಜಲಪಾಯಿಗುರಿ ರೈಲ್ವೆ ನಿಲ್ಧಾಣದಿಂದ 7 ಕಿ.ಮೀ. ದೂರದಲ್ಲಿದೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಸರಕು ಸಾಗಣೆ ರೈಲು ಡಿಕ್ಕಿ; ಹಳಿ ತಪ್ಪಿ ಉರುಳಿದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಬೋಗಿಗಳು

ಸರಕು ಸಾಗಣೆ ರೈಲು ಡಿಕ್ಕಿ ಹೊಡೆದ ಕಾರಣ, ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿ ಬಿದ್ದಿವೆ. ಪರಿಣಾಮ 5 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 30 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾಗಿ ವರದಿ ಹೇಳಿದೆ.

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 13174) ರೈಲಿನ ಹಿಂಬಂದಿಯ ಮೂರು ಬೋಗಿಗಳು ಹಳಿ ತಪ್ಪಿ ಉರುಳಿ ಬಿದ್ದಿವೆ. ಈ ರೈಲು ಅಗರ್ತಲಾದಿಂದ ಸೆಲ್ಡಾಗೆ ಹೋಗುತ್ತಿತ್ತು ಎಂದು ಉತ್ತರ ರೈಲ್ವೆಯ ಕತಿಹಾರ್ ವಿಭಾಗೀಯ ಡಿಆರ್‌ಎಂ ತಿಳಿಸಿದ್ದಾಗಿ ಪಿಟಿಐ ವರದಿ ಹೇಳಿದೆ.

ಸಿಗ್ನಲ್ ಗಮನಿಸದೆ ಮುನ್ನುಗ್ಗಿದ ಸರಕು ರೈಲು

"ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲಿನ ಹಿಂಬದಿಗೆ ಸರಕು ಸಾಗಣೆ ರೈಲು ತೀವ್ರ ವೇಗದಲ್ಲಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದರಲ್ಲಿ ಸಾವು ನೋವು ಮತ್ತು ಗಾಯಾಳುಗಳ ನಿಖರ ವಿವರವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್‌ ಟೈಮ್ಸ್‌ಗೆ ವರದಿ ಮಾಡಿದೆ.

"ಪ್ರಾಥಮಿಕ ತನಿಖೆಯ ಪ್ರಕಾರ ಗೂಡ್ಸ್ ರೈಲು ಚಾಲಕ ಸಿಗ್ನಲ್ ಅನ್ನು ಗಮನಿಸದೇ ರೈಲನ್ನು ಓಡಿಸಿದ ಕಾರಣ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ" ಎಂದು ಮತ್ತೊಬ್ಬ ಉನ್ನತ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಡಿಕ್ಕಿಯ ನಂತರ ಪ್ಯಾಸೆಂಜರ್ ರೈಲಿನ ಕನಿಷ್ಠ ಎರಡು ಬೋಗಿಗಳು ಹಳಿ ತಪ್ಪಿವೆ. ಪಶ್ಚಿಮ ಬಂಗಾಳದ ಸೀಲ್ಡಾ ಮತ್ತು ಅಸ್ಸಾಂನ ಸಿಲ್ಚಾರ್ ನಡುವೆ ಚಲಿಸುವ ಈ ರೈಲಿನಲ್ಲಿ ಪ್ರವಾಸಿ ಋತುವಾದ ಕಾರಣ ಪ್ರಯಾಣಿಕ ದಟ್ಟಣೆ ಹೆಚ್ಚೇ ಇರುತ್ತದೆ.ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ತ್ರಿಪುರಾದ ಅಗರ್ತಲಾದಿಂದ ಕೋಲ್ಕತ್ತಾದ ಸೀಲ್ಡಾ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಬೆಳಿಗ್ಗೆ 8 ಗಂಟೆ ಸುಮಾರಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ.

ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

"ಎನ್ಎಫ್ಆರ್ ವಲಯದಲ್ಲಿ ದುರದೃಷ್ಟಕರ ಅಪಘಾತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ರೈಲ್ವೆ, ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ" ಎಂದು ವೈಷ್ಣವ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ್ದು, "ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿಡೆವಾ ಪ್ರದೇಶದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದ ಬಗ್ಗೆ ತಿಳಿದು ಆಘಾತವಾಗಿದೆ. ವಿವರಗಳನ್ನು ನಿರೀಕ್ಷಿಸುತ್ತಿರುವಾಗ, ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಡಿಎಂ, ಎಸ್ಪಿ, ವೈದ್ಯರು, ಆಂಬ್ಯುಲೆನ್ಸ್ಗಳು ಮತ್ತು ವಿಪತ್ತು ತಂಡಗಳನ್ನು ರಕ್ಷಣೆಗಾಗಿ ಸ್ಥಳಕ್ಕೆ ರವಾನಿಸಲಾಗಿದೆ" ಎಂದು ಹೇಳಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.