Flipkart Price Lock: ಹಬ್ಬ ಸೀಸನ್‌ನ ಶುಭ ಸುದ್ದಿ ಫ್ಲಿಪ್‌ಕಾರ್ಟ್ ಪ್ರೈಸ್ ಲಾಕ್, ಏನದು ವಿವರ ಇಲ್ಲಿದೆ
ಸಾಲು ಸಾಲು ಹಬ್ಬಗಳು ಎದುರಾಗಿವೆ. ಎಲ್ಲದರ ಬೆಲೆ ಹೆಚ್ಚಾಗಲಿದೆ ಅಥವಾ ಎಲ್ಲವೂ ಸೋಲ್ಡ್ ಔಟ್ ಆಗಿದೆ ಎಂದು ಚಿಂತೆಗೀಡಾಗಬೇಕಾದ್ದಿಲ್ಲ. ಫೆಸ್ಟಿವ್ ಸೀಸನ್‌ಗಾಗಿ ಪ್ರೈಸ್ ಲಾಕ್ ಫೀಚರ್ ಅನ್ನು ಫ್ಲಿಪ್‌ಕಾರ್ಟ್ ಪರಿಚಯಿಸುತ್ತಿದೆ. ಏನಿದು ಪ್ರೈಸ್ ಲಾಕ್ ಫೀಚರ್ ಇಲ್ಲಿದೆ ವಿವರಣೆ.
ಹಬ್ಬದ ಸೀಸನ್ ಶುರುವಾಗಿದೆ. ಮುಂಬರುವ ಹಬ್ಬಗಳಿಗಾಗಿ “ಪ್ರೈಸ್ ಲಾಕ್” ಎಂಬ ಫೀಚರ್ ಅನ್ನು ಪರಿಚಯಿಸುವುದಕ್ಕೆ ಫ್ಲಿಪ್‌ಕಾರ್ಟ್ ಸಿದ್ಧತೆ ನಡೆಸಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಈ ಪ್ರೈಸ್ ಲಾಕ್ ಫೀಚರ್, ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರಂನಲ್ಲಿ ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳನ್ನು/ ಸರಕುಗಳನ್ನು ಲಾಕ್ ಮಾಡಿಟ್ಟುಕೊಳ್ಳುವುದಕ್ಕೆ ಅನುಕುಲ ಮಾಡಿಕೊಡುತ್ತದೆ ಎಂದು ಅವರು ವಿವರಿಸಿದ್ದಾರೆ.
ಹಬ್ಬದ ಸೀಸನ್‌ನಲ್ಲಿ ಪ್ರಾಡಕ್ಟ್‌ಗಳು ಬಹುಬೇಗ ಮಾರಾಟವಾಗಿಬಿಡುತ್ತವೆ. ಅಥವಾ ಕೆಲವೇ ನಿಮಿಷಗಳಲ್ಲಿ ಔಟ್ ಆಫ್ ಸ್ಟಾಕ್ ಆಗಿಬಿಡುತ್ತವೆ ಎಂಬ ಹಿಮ್ಮಾಹಿತಿ ಲಭ್ಯವಾಗಿದೆ. ಈ ಸಮಸ್ಯೆ ನೀಗಿಸುವುದಕ್ಕಾಗಿ ಒಂದಷ್ಟು ಸಂಶೋಧನೆ ನಡೆಸಿದ ಬಳಿಕ, ಗ್ರಾಹಕರಿಗೆ ಪ್ರೈಸ್ ಲಾಕ್ ಫೀಚರ್ ಪರಿಚಯಿಸುವುದಕ್ಕೆ ಕಂಪನಿ ಮುಂದಾಗಿದೆ ಎಂದು ಕಂಪನಿಯ ಚೀಫ್ ಪ್ರಾಡಕ್ಟ್ ಆಂಡ್ ಟೆಕ್ನಾಲಜಿ ಆಫೀಸರ್ ಜಯೇಂದ್ರನ್ ವೇಣುಗೋಪಾಲ್ ಹೇಳಿರುವುದಾಗಿ ಮನಿಕಂಟ್ರೋಲ್ ವರದಿ ಮಾಡಿದೆ.
ಆದಾಗ್ಯೂ, ಈ ಸೇವೆ ಗ್ರಾಹಕರಿಗೆ ಯಾವಾಗ ಲಭ್ಯವಾಗುವುದೆಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ. ವೇಣುಗೋಪಾಲ್ ಅವರು ವಾಲ್‌ಮಾರ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈ ವಿಚಾರ ತಿಳಿಸಿದರು. ವಾಲ್‌ಮಾರ್ಟ್ ಕಂಪನಿಯಿ 2018ರ ಮೇ ತಿಂಗಳಲ್ಲಿ ಫ್ಲಿಪ್‌ಕಾರ್ಟ್‌ನ ಶೇಕಡ 77 ಷೇರುಗಳನ್ನು ತನ್ನದಾಗಿಸಿಕೊಂಡಿದೆ.
ಫ್ಲಿಪ್‌ಕಾರ್ಟ್‌ನ ಪ್ರಸ್ತಾವಿತ ಪ್ರೈಸ್ ಲಾಕ್ ಫೀಚರ್
ಫ್ಲಿಪ್‌ಕಾರ್ಟ್‌ನ ಪ್ರಸ್ತಾವಿತ ಪ್ರೈಸ್ ಲಾಕ್ ಫೀಚರ್‌ನಲ್ಲಿ, ಗ್ರಾಹಕರಿಗೆ ಸಣ್ಣ ಠೇವಣಿಯನ್ನು ಪಾವತಿಸುವಂತೆ ಕೇಳಲಾಗುತ್ತದೆ. ನಿರ್ದಿಷ್ಟ ಬೆಲೆಯನ್ನು ಹೊಂದಿರುವ ನಿರ್ದಿಷ್ಟ ಉತ್ಪನ್ನವು ನಂತರದಲ್ಲಿ ಅವರಿಗೆ ಲಭ್ಯವಿರುವುದನ್ನು ಇದು ಖಚಿತಪಡಿಸುತ್ತದೆ.
ಹಾಗೆ, ಈ ಲಾಕ್ ಸೌಲಭ್ಯವು ಉತ್ಪನ್ನದ ದರ ಏರಿಳಿತ ಮತ್ತು ಔಟ್ ಆಫ್ ಸ್ಟಾಕ್ ಆಗುವ ಸಮಸ್ಯೆಯಿಂದ ಪಾರಾಗಲು ಗ್ರಾಹಕರಿಗೆ ಪರಿಹಾರ ಒದಗಿಸುತ್ತದೆ. ವಿಶೇಷವಾಗಿ ಇದು ಫೆಸ್ಟಿವಲ್ ಸೇಲ್ ಸಂದರ್ಭದಲ್ಲಿ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ.
ಇ ಕಾಮರ್ಸ್ ಫರ್ಮ್‌ಗಳ ಒಟ್ಟು ಮಾರಾಟದಲ್ಲಿ ಫೆಸ್ಟಿವಲ್ ಸೇಲ್ಸ್‌ನ ಪಾಲು ಶೇಕಡ 50 ಇರುತ್ತದೆ ಎಂದು ಮನಿ ಕಂಟ್ರೋಲ್ ವರದಿ ವಿವರಿಸಿದೆ.
‘ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಗಾರರ ಜಾಲವೃದ್ಧಿ'
ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಗಾರರ ಜಾಲವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಳವಾಗಿದೆ. ಕಳೆದ ವರ್ಷ 11 ಲಕ್ಷ ಇದ್ದ ಸೆಲ್ಲರ್ ಬೇಸ್, ಈ ವರ್ಷ 14 ಲಕ್ಷಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪನಿಯು ಗ್ರಾಹಕರ ಸೇವೆಗಳಾದ ಟ್ರಯಲ್ ರೂಮ್‌ಗಳು, ಗ್ರಾಹಕ-ನಿರ್ದಿಷ್ಟ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ (ಬಿಪಿಸಿ) ಮಾರ್ಗದರ್ಶನ, ಇತರವುಗಳ ಮೇಲೆ ತನ್ನ ಗಮನವನ್ನು ಹೆಚ್ಚಿಸ ತೊಡಗಿದೆ.