ದೇಶಕ್ಕೂ ಮನಸ್ಸಿದೆ: ಇದು ಖಂಡಿತ ಕಲ್ಪನೆಯ ರೂಪಕವಲ್ಲ, ಒಂದು ರಾಷ್ಟ್ರದ ಏಕತೆಯನ್ನು ಸಾರುವ ಪ್ರಬಲಪ್ರಜ್ಞೆ; ಕಾಳಜಿ ಅಂಕಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೇಶಕ್ಕೂ ಮನಸ್ಸಿದೆ: ಇದು ಖಂಡಿತ ಕಲ್ಪನೆಯ ರೂಪಕವಲ್ಲ, ಒಂದು ರಾಷ್ಟ್ರದ ಏಕತೆಯನ್ನು ಸಾರುವ ಪ್ರಬಲಪ್ರಜ್ಞೆ; ಕಾಳಜಿ ಅಂಕಣ

ದೇಶಕ್ಕೂ ಮನಸ್ಸಿದೆ: ಇದು ಖಂಡಿತ ಕಲ್ಪನೆಯ ರೂಪಕವಲ್ಲ, ಒಂದು ರಾಷ್ಟ್ರದ ಏಕತೆಯನ್ನು ಸಾರುವ ಪ್ರಬಲಪ್ರಜ್ಞೆ; ಕಾಳಜಿ ಅಂಕಣ

ದೇಶದ ವಿಚಾರ ಎಂದು ಬಂದಾಗ ನಾವೆಲ್ಲರೂ ಒಂದಾಗುತ್ತೇವೆ. ದೇಶದ ನೋವು ನಮ್ಮ ನೋವಾಗುತ್ತದೆ. ದೇಶದ ಸಂಭ್ರಮ ನಮ್ಮ ಸಂಭ್ರಮವಾಗುತ್ತದೆ. ನಮ್ಮ ನಡುವೆ ಎಷ್ಟೇ ವೈಮನಸ್ಸಿದ್ದರೂ ನಮ್ಮ ದೇಶ ಎಂದು ಬಂದಾಗ ಅದನ್ನೆಲ್ಲಾ ಮರೆತು ಒಗ್ಗೂಡುತ್ತೇವೆ. ಹಾಗಾದರೆ ದೇಶಕ್ಕೂ ಮನಸಿದ್ಯಾ? ದೇಶದ ವಿಚಾರದಲ್ಲಿ ನಮ್ಮೆಲ್ಲರೂ ಮನಸ್ಸು ಒಂದಾಗೋಕೆ ಕಾರಣವೇನು? ಇಲ್ಲಿದೆ ಉತ್ತರ

ದೇಶಕ್ಕೂ ಮನಸ್ಸಿದೆ, ಇದು ಖಂಡಿತ ಕಲ್ಪನೆಯ ರೂಪಕವಲ್ಲ; ಒಂದು ರಾಷ್ಟ್ರದ ಏಕತೆಯನ್ನು ಸಾರುವ ಪ್ರಬಲಪ್ರಜ್ಞೆ; ಕಾಳಜಿ ಅಂಕಣ
ದೇಶಕ್ಕೂ ಮನಸ್ಸಿದೆ, ಇದು ಖಂಡಿತ ಕಲ್ಪನೆಯ ರೂಪಕವಲ್ಲ; ಒಂದು ರಾಷ್ಟ್ರದ ಏಕತೆಯನ್ನು ಸಾರುವ ಪ್ರಬಲಪ್ರಜ್ಞೆ; ಕಾಳಜಿ ಅಂಕಣ

ಪ್ರಶ್ನೆ: ಒಂದು ಇಡೀ ದೇಶಕ್ಕೆ ಒಂದು ಮನಸ್ಸು ಎಂಬುದು ಎಂದಾದರೂ ಇತ್ತೆ? ಇರಲು ಸಾಧ್ಯವೇ? ಗಡಿ ತಂಟೆ ಅಥವಾ ಯುದ್ಧಗಳಾದಾಗ ಒಂದು ದೇಶ ಮತ್ತೊಂದು ದೇಶದೊಡನೆ ಯುದ್ಧ ಮಾಡಿತು ಎನ್ನುತ್ತಾರೆ. ಆದರೆ ಯುದ್ಧ ಮಾಡುವುದು ಸೈನಿಕರಲ್ಲವೇ? ದೇಶ ಎಂದಾದರೂ ಯುದ್ಧ ಮಾಡುತ್ತದೆಯೇ? ಅದೇ ರೀತಿ ಉಕ್ರೇನ್‌ನಲ್ಲಿ ಭಾರತ ಮೂಲದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದಾಗ ನನಗೆ ಬೇಸರವಾಯಿತು. ಅದೇ ಉಕ್ರೇನ್‌ನಲ್ಲಿ ಬಾಂಗ್ಲಾ ಅಥವಾ ಶ್ರೀಲಂಕಾ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಗೊತ್ತಾದಾಗ ನನಗೆ ಅದೊಂದು ಸಹಜ ಸುದ್ದಿ ಎನಿಸಿತ್ತು. ನಿಜ ಹೇಳಿ ದೇಶಕ್ಕೆ ಒಂದು ಮನಸ್ಸಿದೆಯೇ? ಅದು ನನ್ನೊಳಗೂ ಬಂದಿದೆಯೇ? ಏನಿದು ದೇಶದ ಮನಸ್ಸು?

ಉತ್ತರ: ಸಾಮಾನ್ಯವಾಗಿ ಇಡೀ ದೇಶದಲ್ಲಿ ಯುದ್ಧ, ಭೂಕಂಪ ಅಥವಾ ಪ್ರವಾಹ‌ದಂತಹ ಬಿಕ್ಕಟ್ಟು ಉಂಟಾದಾಗ ನೋವು, ಬೇಸರ ಕಾಡುವುದು ಸಹಜ. ಹಾಗೆಯೇ ಕ್ರಿಕೆಟ್‌ನಲ್ಲಿ ಕಪ್‌ ಗೆಲ್ಲುವುದು, ಯಾವುದಾದರೂ ಕ್ಷೇತ್ರದಲ್ಲಿ ನಮ್ಮ ದೇಶದವರು ವಿಶೇಷ ಸಾಧನೆ ಮಾಡಿದಾಗ ಇಡೀ ದೇಶಕ್ಕೆ ದೇಶವೇ ಸಂಭ್ರಮಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಐಕ್ಯತೆಯ ಭಾವ ಉಕ್ಕಿ ಹರಿಯುತ್ತದೆ.

ಬೇರೆಲ್ಲಾ ಸಮಯದಲ್ಲಿ ದ್ವೇಷ ಮಾಡುವವರು ದೇಶ ಎಂದು ಬಂದಾಗ ಒಂದಾಗುತ್ತಾರೆ. ಈ ವಿದ್ಯಮಾನವು ಒಂದು ಜಿಜ್ಞಾಸೆಯ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಅದೇನೆಂದರೆ ಒಂದು ದೇಶವು ತನ್ನದೇ ಆದ ಮನಸ್ಸು ಹೊಂದಿದೆಯೇ ಎಂಬುದು.

ನಿಜ, ಇದೊಂದು ಒಂದೊಳ್ಳೆ ಪ್ರಶ್ನೆ. ಮನಸ್ಸನ್ನು ಹೊಂದಿರುವ ದೇಶದ ಕಲ್ಪನೆಯು ಕೇವಲ ರೂಪಕವೇ? ನೋಡೋಣ.

ಈ ಪರಿಕಲ್ಪನೆಗೆ ಹಾಗೂ ನಾವು ನಮ್ಮ ದೇಶದ ಜನರ ಬಗ್ಗೆ ಏಕೆ ತೀವ್ರವಾದ ಕಾಳಜಿ ವಹಿಸುತ್ತೇವೆ ಮತ್ತು ನಮ್ಮ ರಾಷ್ಟ್ರದೊಂದಿಗೆ ಆಳವಾದ ನಂಟನ್ನು ಹೇಗೆ ಹೊಂದಿರುತ್ತೇವೆ ಎಂಬ ಪ್ರಶ್ನೆಗೆ ಸಾಮಾಜಿಕ ಮನೋವಿಜ್ಞಾನದ ಸಿದ್ಧಾಂತಗಳ ಮೂಲಕ ಒಳನೋಟಗಳನ್ನು ಒದಗಿಸಲು ಪ್ರಯತ್ನಿಸುವೆ.

ಒಂದು ಕುಟುಂಬ, ಪ್ರದೇಶ, ದೇಶ ಅಥವಾ ಸಮೂಹ ತನ್ನ ಗುಂಪಿನ ಸಮಸ್ಯೆಗಳನ್ನು ಚಿಂತಿಸಲು ಅಥವಾ ಅವರ ಗೆಲುವಿನ ಕುರಿತು ಸಂಭ್ರಮಿಸಲು ಕಾರಣ ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ಅವರನ್ನು ನಮ್ಮವರು ಎಂದುಕೊಳ್ಳುವುದು. ಕೆಳಗಿನ ಸಿದ್ಧಾಂತಗಳನ್ನು ಒಂದೊಂದಾಗಿ ನೋಡೋಣ.

1. ಸಾಮಾಜಿಕ ಗುರುತಿನ ಸಿದ್ಧಾಂತ: (ಸೋಶಿಯಲ್ ಐಡೆಂಟಿಟಿ ಥಿಯರಿ)

ಗುಂಪು ಸದಸ್ಯತ್ವದ ಶಕ್ತಿ: ದೇಶದೊಂದಿಗೆ ನಾವು ಗುರುತಿಸಿಕೊಳ್ಳುವಿಕೆಯ ಕಾರಣದ ಕೇಂದ್ರದಲ್ಲಿ ಹೆನ್ರಿ ತಾಜ್ಫೆಲ್ ಮತ್ತು ಜಾನ್ ಟರ್ನರ್ ಅವರ ಸೋಶಿಯಲ್ ಐಡೆಂಟಿಟಿ ಥಿಯರಿ ನೆಲೆಸಿದೆ. ನಮ್ಮ ಸ್ವ-ಪರಿಕಲ್ಪನೆ ಅಂದರೆ ನಾವ್ಯಾರು, ನಮ್ಮ ಅಸ್ತಿತ್ವವೇನು ಎಂಬುದಕ್ಕೆ ನಮ್ಮ ರಾಷ್ಟ್ರೀಯತೆಯೂ ಸೇರಿದಂತೆ ಸಾಮಾಜಿಕ ಗುಂಪುಗಳಲ್ಲಿನ ನಮ್ಮ ಇರುವಿಕೆ ಕೊಡುಗೆ ನೀಡುತ್ತದೆ. ಅಂದರೆ ನಾನು ಭಾರತೀಯಳು, ಕರ್ನಾಟಕದವನು, ನಾನು ಕನ್ನಡ ಮಾತಾಡುವೆ, ನನ್ನ ಜಾತಿ, ಧರ್ಮ, ನನ್ನ ಸಂಸ್ಕೃತಿ, ನನ್ನ ಸಿದ್ಧಾಂತ, ನಾನು ಪತ್ರಕರ್ತ ಹೀಗೇ ಹಲವು ಗುಂಪುಗಳಲ್ಲಿ ಸೇರಿ ನಾನು ಎಂಬುದರ ವ್ಯಾಖ್ಯಾನ ಪಡೆಯುತ್ತೇವೆ. ಈ ವ್ಯಾಖ್ಯಾನ ಕೇವಲ ಹೆಸರಿಗಷ್ಟೇ ಅಲ್ಲ ಭಾವನಾತ್ಮಕವಾಗಿ ನಮಗೆ ಅಂಟಿರುತ್ತದೆ. ಅಂತೆಯೇ ಈ ಗುಂಪುಗಳಲ್ಲಿ ಯಾರಿಗೇ ಯಾವುದೇ ತೊಂದರೆ ಆದಾಗ ನಮಗಿರುವ ಭಾವನಾತ್ಮಕ ನಂಟಿನ ಪ್ರಮಾಣದಷ್ಟು ಆತಂಕ ವ್ಯಕ್ತಪಡಿಸುತ್ತೇವೆ.

ದೇಶದ ವಿಷಯ ಬಂದಾಗ: ನಾವು ನಮ್ಮ ದೇಶದೊಂದಿಗೆ ಗುರುತಿಸಿಕೊಂಡಾಗ, ಅದರ ಯಶಸ್ಸು ಮತ್ತು ಹೋರಾಟಗಳು ವೈಯಕ್ತಿಕವಾಗುತ್ತವೆ. ಈ ಗುರುತಿಸುವಿಕೆಯು ಇದಕ್ಕೆ ಸೇರಿರುವ ಮತ್ತು ಒಗ್ಗಟ್ಟಿನ ಪ್ರಜ್ಞೆಯನ್ನು ಬೆಳೆಸುತ್ತದೆ, ಹಾಗೇ ನಮ್ಮ ದೇಶವಾಸಿಗಳೊಂದಿಗೆ ಸಹಾನುಭೂತಿ ಮತ್ತು ಬೆಂಬಲ ನೀಡುವ ಪ್ರಕ್ರಿಯೆಯೂ ಉಂಟಾಗುತ್ತದೆ.

2. ಸಾಮೂಹಿಕ ಉತ್ಕರ್ಷ ಕಲೆಕ್ಟಿವ್ ಎಫರ್ವೆಸೆನ್ಸ್:

ಸಾಮೂಹಿಕ ಉತ್ಕರ್ಷ(collective effervescence)ವು ಜನರು ಒಂದು ಸಮಾನ ಮನಸ್ಕ ಉದ್ದೇಶದಲ್ಲಿ ತೊಡಗಿಸಿಕೊಂಡಾಗ ಅಲ್ಲಿ ಉಂಟಾಗುವ ಶಕ್ತಿ ಮತ್ತು ಸಾಮರಸ್ಯದ ಸಾಂಗ್ರಹಿಕ ಭಾವನೆ.

ಇದು ಪರಸ್ಪರ ಹಂಚಿಕೊಂಡ ಭಾವನಾತ್ಮಕ ಅನುಭವಗಳು ಸಾಮೂಹಿಕ ಚಟುವಟಿಕೆಗಳ (ಒಂದಿಡೀ ಸಮಸ್ಯೆ, ಸಾಮೂಹಿಕ ಗೆಲುವು) ಸಮಯದಲ್ಲಿ ಜನರು ಅನುಭವಿಸುವ ಸಮುದಾಯಿಕ ಶಕ್ತಿ ಮತ್ತು ಭಾವನಾತ್ಮಕ ಏಕತೆಯನ್ನು ವಿವರಿಸಲು ಎಮಿಲ್ ಡರ್ಖೈಮ್ ಅವರ ಸಾಮೂಹಿಕ ಉತ್ಕರ್ಷದ ಪರಿಕಲ್ಪನೆ ಉಪಯೋಗವಾಗುತ್ತದೆ.

ಒಬ್ಬ ಕ್ರಿಕೆಟರ್ ಗೆದ್ದಾಗ ಏಕಕಾಲದಲ್ಲಿ ಬರುವ ಚಪ್ಪಾಳೆಯಂತಹವುಗಳು. ಉರಿ ಚಲನಚಿತ್ರದ ಕೊನೆಗೆ ಚಿತ್ರಮಂದಿರಗಳಲ್ಲಿ ಬಂದ ಚಪ್ಪಾಳೆಗಳ ಬಗ್ಗೆ ಕೇಳೇ ಇರುತ್ತೀರೀ.

ಸ್ವಾತಂತ್ರ್ಯದ ಸಂಭ್ರಮದ ಆಚರಣೆಗಳು ಅಥವಾ ದುರಂತಗಳ ಸಮಯದಲ್ಲಿ ಅಥವಾ ಸಾಮೂಹಿಕ ಶೋಕಾಚರಣೆಯಂತಹ ರಾಷ್ಟ್ರೀಯ ಘಟನೆಗಳು ನಮ್ಮ ದೇಶದೊಂದಿಗೆ ನಮ್ಮ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ಪರಸ್ಪರ ಹಂಚಲ್ಪಟ್ಟ ಭಾವನಾತ್ಮಕ ಅನುಭವವು ಸಾಮಾಜಿಕ ಬಂಧಗಳನ್ನು ಬಲಪಡಿಸುತ್ತದೆ ಮತ್ತು ನಮ್ಮ ರಾಷ್ಟ್ರೀಯ ಐಡೆಂಟಿಟಿಯನ್ನು ಬಲಗೊಳಿಸುತ್ತದೆ.

3. ಎವಲ್ಯೂಷನರಿ ಸೈಕಾಲಜಿ: ದಿ ಟ್ರೈಬಲ್ ಇನ್‌ಸ್ಟಿಂಕ್ಟ್ ಬುಡಕಟ್ಟಿನ ಮನೋಭಾವ

ವಿಕಾಸದ ದೃಷ್ಟಿಕೋನದಿಂದ, ಮಾನವರು ಯಾವಾಗಲೂ ಉಳಿಯಲು ದೃಢವಾದ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಇದೇ ಬುಡಕಟ್ಟು ಮನೋಭಾವವೇ ರಾಷ್ಟ್ರಗಳಂತಹ ದೊಡ್ಡ ಘಟಕಗಳಿಗೂ ವಿಸ್ತರಿಸುತ್ತದೆ. ಗುಂಪಿನಲ್ಲಿರುವ ಸದಸ್ಯರಲ್ಲಿರುವ ಪರಸ್ಪರ ನಿಷ್ಠೆ ಮತ್ತು ಹಿತಚಿಂತನೆ ಗುಂಪಿನ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಜೊತೆಯಲ್ಲಿರುವವರನ್ನೂ ಒಳಗೊಂಡಂತೆ ತಮ್ಮ ಗುಂಪಿನ ಭಾಗವಾಗಿರುವವರಿಗೆ ಸಹಾಯ ಮಾಡುವ ಮನಸು ಇರುವುದು ಹಾಗೆಯೇ ಗುಂಪಿನ ಸದಸ್ಯರಲ್ಲಿ ಯಾರಿಗಾದರೂ ತೊಂದರೆ ಆದರೆ ನಮಗೇ‌ ಆದಂತೆ‌ ಮಿಡಿಯುವುದೂ ಇದೇ ಕಾರಣಕ್ಕೆ ಎಂದು ಅಧ್ಯಯನಗಳು ತೋರಿಸಿವೆ. ಇದರಿಂದಾಗಿ ಗುಂಪಿನಲ್ಲಿ ಒಗ್ಗಟ್ಟು ಮತ್ತು ತೊಂದರೆ ಉಂಟಾದರೂ ಮರಳಿ ಬೇಗ ಬೆಳೆಯುವಂತಹ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ಭಾರತದ ಪೈಲಟ್ ಒಬ್ಬರು ಪಾಕಿಸ್ತಾನದಲ್ಲಿ ಸಿಕ್ಕಿಹಾಕಿಕೊಂಡಾಗ ಅವರ ಬಿಡುಗಡೆಗೆ ಇಡೀ ಭಾರತಕ್ಕೆ ಭಾರತವೇ ಒಂದಾಗಿತ್ತು.

ದೇಶಕ್ಕೂ ಮನಸ್ಸಿದೆ, ಇದು ಖಂಡಿತ ಕಲ್ಪನೆಯ ರೂಪಕವಲ್ಲ: ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್
ದೇಶಕ್ಕೂ ಮನಸ್ಸಿದೆ, ಇದು ಖಂಡಿತ ಕಲ್ಪನೆಯ ರೂಪಕವಲ್ಲ: ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್

4 ಪರರಿಗೆ ಅನುಭೂತಿ ಮತ್ತು ಪರಹಿತಚಿಂತನೆ: ಭಾವನಾತ್ಮಕ ಸಂಪರ್ಕಗಳು: ಎಮೋಷನಲ್ ಕಂಟಾಜಿಯನ್.

ಸಹಾನುಭೂತಿ, ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಹಂಚಿಕೊಳ್ಳುವ ಸಾಮರ್ಥ್ಯವು ನಾವು ನಮ್ಮ ಗುಂಪಿನಲ್ಲಿರುವವರ ಬಗ್ಗೆ ಕಾಳಜಿ ವಹಿಸುವುದರ ಸಂಕೇತ.

ನಾವು ಸಮಾನ ಗುರುತನ್ನು ಹಂಚಿಕೊಂಡವರಲ್ಲಿ ನಾವು ಸಹಾನುಭೂತಿ ಹೊಂದುವ ಸಾಧ್ಯತೆ ಜಾಸ್ತಿ ಎಂದು ಸಂಶೋಧನೆ ಸೂಚಿಸುತ್ತದೆ.

ಈ ಎಮೋಷನಲ್ ಕಂಟಾಜಿಯನ್ ಸಾಮಾನ್ಯವಾಗಿ ಗುಂಪಿನ ಇತರರೆಡೆಗೆ ಸಹಾನುಭೂತಿ ವರ್ತನೆಗೆ ಕಾರಣವಾಗುತ್ತದೆ. ನಮ್ಮ ದೇಶದ ಯಾರೇ ಆಗಲಿ ಅವರು ಸ್ವದೇಶಿಯಾಗಿರಲಿ ಅಥವಾ ವಿದೇಶದಲ್ಲಿದ್ದರೂ ಅವರ ತಾಯಿ ದೇಶದವರು ಅವರನ್ನು ಬೆಂಬಲಿಸಲು ಪ್ರೇರೇಪಿಸುತ್ತದೆ.

5. ರಾಷ್ಟ್ರೀಯ ಬಾಂಧವ್ಯ ಮತ್ತು ದೇಶಭಕ್ತಿ

ರಾಷ್ಟ್ರೀಯ ಬಾಂಧವ್ಯ ಮತ್ತು ದೇಶಭಕ್ತಿಯು ದೇಶದ ಜೊತೆಗಾರರ ಬಗ್ಗೆ ನಮ್ಮ ಕಾಳಜಿಯನ್ನು ಗಮನಾರ್ಹವಾಗಿ ಪ್ರಭಾವಿಸುತ್ತದೆ. ಜರ್ನಲ್ ಪೊಲಿಟಿಕಲ್ ಸೈಕಾಲಜಿಯಲ್ಲಿನ ಅಧ್ಯಯನವು ಉನ್ನತ ಮಟ್ಟದ ರಾಷ್ಟ್ರೀಯ ಬಾಂಧವ್ಯ ಹಾಗೂ ದೇಶವಾಸಿಗಳ ಒಳಿತಿನ ಕಾಳಜಿಯೊಂದಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು ಹೇಳುತ್ತದೆ. ಈ ಬಾಂಧವ್ಯವು ಸಾಮಾನ್ಯವಾಗಿ ಒಬ್ಬರ ದೇಶಕ್ಕೆ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಭಾವನಾತ್ಮಕ ಸಂಬಂಧಗಳಿಂದ ಉಂಟಾಗುತ್ತದೆ. ಅದರ ಜನರ ಬಗ್ಗೆ ಆಳವಾದ ಜವಾಬ್ದಾರಿ ಮತ್ತು ಕಾಳಜಿಯನ್ನು ಬೆಳೆಸುತ್ತದೆ.

ಕಿತ್ತೂರು ರಾಣಿ ಚೆನ್ನಮ್ಮ ಕಪ್ಪ ನಿಮಗೇಕೆ ಕೊಡಬೇಕು ಕಪ್ಪ ಎಂಬ ಮಾತು ನಮ್ಮಲ್ಲಿ ಸೃಷ್ಟಿಸುವ ರೋಮಾಂಚನವನ್ನು ಮರೆಯಲು ಸಾಧ್ಯವೇ?

ಮೇಲಿನ ಎಲ್ಲ ಥಿಯರಿಗಳ ಪ್ರಕಾರ ನೋಡಿದರೆ, ಒಂದು ದೇಶವು ಮನಸ್ಸನ್ನು ಹೊಂದಿರುವ ಕಲ್ಪನೆಯು ಕೇವಲ ರೂಪಕವಲ್ಲ, ಇದು ದೇಶದ ನಾಗರೀಕರ ಒಂದಿಡೀ ಸಾಮೂಹಿಕ ವರ್ತನೆಗಳು ಮತ್ತು ಭಾವನೆಗಳಲ್ಲಿ ಏಕತೆಯ ಅಸ್ತಿತ್ವದ ಪ್ರಬಲ ಪ್ರಜ್ಞೆಯನ್ನು ಸೃಷ್ಟಿಸುತ್ತವೆ.

ಸಾಮಾಜಿಕ ಗುರುತಿನ ಸಿದ್ಧಾಂತ, ವಿಕಾಸ ಮನೋವಿಜ್ಞಾನ, ಸಾಮೂಹಿಕ ಉತ್ಕರ್ಷ, ಪರಾನುಭೂತಿ, ರಾಷ್ಟ್ರೀಯ ಬಾಂಧವ್ಯ ಈ ಕನ್ನಡಿಗಳ ಮೂಲಕ, ನಾವು ನಮ್ಮ ರಾಷ್ಟ್ರದೊಂದಿಗೆ ಅಪಾರವಾದ ಮಾನಸಿಕ ಸಂಪರ್ಕವನ್ನು ಅನುಭವಿಸುತ್ತೇವೆ ಮತ್ತು ನಮ್ಮ ದೇಶದ ನಾಗರೀಕರ ಬಗ್ಗೆ ತೀವ್ರ ಕಾಳಜಿ ವಹಿಸುತ್ತೇವೆ. ಈ ಸಾಮೂಹಿಕ ಗುರುತು ರಾಷ್ಟ್ರೀಯ ಐಕಮತ್ಯವನ್ನು ಬೆಳೆಸುವುದು ಮಾತ್ರವಲ್ಲದೆ ಸವಾಲುಗಳನ್ನು ಎದುರಿಸುವಲ್ಲಿ ನಮ್ಮ ಸಾಮೂಹಿಕ ಸ್ಥಿತಿಸ್ಥಾಪಕತ್ವ ಮತ್ತು ಭಾವನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಗಾಗಿ ನಿಮ್ಮ‌ ಪ್ರಶ್ನೆ ದೇಶಕ್ಕೆ ಮನಸಿದೆಯಾ ಎನ್ನುವುದು‌ ಪರಿಕಲ್ಪನೆಯ ಮಟ್ಟದಲ್ಲಿ ಸರಿಯಾಗಿಯೇ ಇದೆ.

ಒಂದು ಖೇದದ ಸಂಗತಿ ಅಂದರೆ ದೇಶದ ಮನಸು ಪಂಗಡಗಳಾಗಿ ವಿಂಗಡಣೆ ಆಗುತ್ತಿರುವುದು, ಒಂದು ದೇಶ ಭೌತಿಕವಾಗಿ ವಿಂಗಡಣೆ ಆಗುವುದು ಪ್ರಾದೇಶಿಕ ಮಟ್ಟದಲ್ಲಿ ಒಳ್ಳೆಯದೇ ಆದರೆ ಮಾನಸಿಕ ಮಟ್ಟದಲ್ಲಿ ವಿಂಗಡಣೆ ಆಗುವುದು ದೇಶದ ಐಕ್ಯತೆಗೆ ನಿಜಕ್ಕೂ ಒಳ್ಳೆಯದಲ್ಲ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.